ಶಾಹು ಮಹಾರಾಜ್ ಬರೆದ ಹೀಗೊಂದು ಪತ್ರ
ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೊಳಿಸಿ ಭಾರತದಲ್ಲಿನ ಸರಕಾರವೊಂದು ಮೊದಲ ಆದೇಶವನ್ನು ಹೊರಡಿಸಿ 120 ವರ್ಷ ಸಂದಿದೆ. ಈ ಆದೇಶ ಹೊರಡಿಸಿದ ಕೊಲ್ಲಾಪುರದ ಶಾಹು ಮಹಾರಾಜ್ ಬಾಂಬೆ ಪ್ರಾಂತದ ಗವರ್ನರ್ ಲಾರ್ಡ್ ಸೈಡನ್‌ಹ್ಯಾಮ್‌ಗೆ ಒಂದು ಮಹತ್ವದ ಪತ್ರವನ್ನು ಬರೆದಿದ್ದರು. ಸರಕಾರಿ ಉದ್ಯೋಗದಲ್ಲಿ ಜಾತಿಯಾಧಾರಿತ ಮೀಸಲಾತಿ ಯಾಕೆ ಅತ್ಯಂತ ಅಗತ್ಯ ಎನ್ನುವುದನ್ನು ತನ್ನ ಪತ್ರದಲ್ಲಿ ಶಾಹು ಮಹಾರಾಜ್ ವಿವರಿಸಿದ್ದಾರೆ.ಪತ್ರದ ಸಂಕ್ಷಿಪ್ತ ಪಾಠ ಇಲ್ಲಿದೆ
ಕೊಲ್ಲಾಪುರ
ಸೆಪ್ಟಂಬರ್ 1918
ನನ್ನ ಪ್ರೀತಿಯ ಲಾರ್ಡ್ ಸೈಡನ್‌ಹ್ಯಾಮ್,
ಭಾರತದ ಕೋಟ್ಯಂತರ ಶೋಷಿತರ ಪರವಾಗಿ ಕೆಲಸ ಮಾಡುತ್ತಿರುವುದಕ್ಕಾಗಿ ನಾನು ತಮಗೆ ಆಭಾರಿಯಾಗಿದ್ದೇನೆ. ಬಾಂಬೆಯು ದೇಶದ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದೆ. ನೀವು ಭಾರತವನ್ನು, ಅದರಲ್ಲೂ ಮುಖ್ಯವಾಗಿ ಬಾಂಬೆ ಪ್ರಾಂತವನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ. ಹಾಗಾಗಿ, ಇಲ್ಲಿನ ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕೆ ತಮಗೆ ಸಾಧ್ಯವಾಗಿದೆ. ಪುರೋಹಿತಶಾಹಿ ಮತ್ತು ಜಾತಿ ತಾರತಮ್ಯದಿಂದ ನರಳುತ್ತಿರುವ ಭಾರತದಲ್ಲಿ ಕೋಟ್ಯಂತರ ನಿರಕ್ಷರಿಗಳು ಇದ್ದಾರೆ. ಹಾಗಾಗಿ, ಸಮಾನತೆಯ ಪಾಶ್ಚಿಮಾತ್ಯ ತತ್ವಗಳನ್ನು ಇಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎನ್ನುವುದನ್ನು ತಾವು ಅರಿತುಕೊಂಡಿದ್ದೀರಿ. ದಕ್ಷಿಣ ಭಾರತವು ಶತಮಾನಗಳಿಂದ ಬ್ರಾಹ್ಮಣ ಪುರೋಹಿತರ ದಬ್ಬಾಳಿಕೆಗೆ ಒಳಗಾಗಿದೆ. ಅವರು ಧರ್ಮ ಹಾಗೂ ರಾಜಕೀಯ, ವಾಣಿಜ್ಯ, ಶಿಕ್ಷಣ, ಬ್ಯಾಂಕಿಂಗ್ ಮುಂತಾದ ಧರ್ಮಕ್ಕೆ ಹೊರತಾದ ಇತರ ಕ್ಷೇತ್ರಗಳಲ್ಲೂ ತಮ್ಮ ನಿಯಂತ್ರಣವನ್ನು ಸಾಧಿಸಿದ್ದಾರೆ. ಹಾಗಾಗಿ, ದೇಶದ ಅಗಾಧ ಸಂಖ್ಯೆಯ ಸಾಮಾನ್ಯ ಜನರು ಮುಕ್ತ ಮನೋಸ್ಥಿತಿಯನ್ನು ಹೊಂದಿಲ್ಲ. ಅವರ ಹಿತಾಸಕ್ತಿಗಳನ್ನು ಕಾಪಾಡಲು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅವರು ತಮ್ಮ ಬ್ರಾಹ್ಮಣ ಒಡೆಯರ ನಿರಂಕುಶತೆಗೆ ಸುಲಭವಾಗಿ ಬಲಿಬೀಳುತ್ತಾರೆ. ಪ್ರಾಂತೀಯ ಮತ್ತು ಇಂಪೀರಿಯಲ್ ಕೌನ್ಸಿಲ್‌ಗಳಲ್ಲಿ ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಜಾತಿವಾರು ಪ್ರಾತಿನಿಧ್ಯವೊಂದೇ ಮಾರ್ಗ. ಇದರ ಅಗತ್ಯ ಮರಾಠರಿಗೆ ಯಾಕೆ ಇದೆ ಎನ್ನುವುದಕ್ಕೆ ನಾನು ಕೆಲವು ಕಾರಣಗಳನ್ನು ಕೊಡಲು ಬಯಸುತ್ತೇನೆ.
ಮೊದಲನೆಯದಾಗಿ, ಬ್ರಿಟಿಷರು ಈ ದೇಶದ ಆಡಳಿತಗಾರರಾದರೂ, ನಿಜವಾದ ಅಧಿಕಾರ ಇರುವುದು ಬ್ರಾಹ್ಮಣ ಅಧಿಕಾರಿಗಳಲ್ಲಿ. ಕೆಳಮಟ್ಟದ ಗುಮಾಸ್ತ ಮತ್ತು ಗ್ರಾಮ ಕರಣಿಕ ಕುಲಕರ್ಣಿಯಿಂದ ಹಿಡಿದು ಉನ್ನತಾಧಿಕಾರದ ಹುದ್ದೆಗಳವರೆಗೆ ಎಲ್ಲೆಲ್ಲೂ ಅವರೇ ತುಂಬಿದ್ದಾರೆ. ಅದೂ ಅಲ್ಲದೆ, ಶಾಸನಸಭೆಗಳಲ್ಲೂ ಪ್ರಾಬಲ್ಯ ಹೊಂದಿದ್ದಾರೆ. ಇತರ ಸಮುದಾಯಗಳು ಈ ಬ್ರಾಹ್ಮಣ ಅಧಿಕಾರಶಾಹಿ ಮತ್ತು ಅವರ ನಿರಂಕುಶತೆಗೆ ತಲೆಬಾಗಬೇಕಾಗಿದೆ. ಬ್ರಾಹ್ಮಣೇತರ ಸಮುದಾಯಗಳ ದುಮ್ಮಾನಗಳು ಬ್ರಿಟಿಷ್ ಅಧಿಕಾರಿಗಳನ್ನು ತಲುಪುವುದೇ ಇಲ್ಲ. ಒಂದು ವೇಳೆ ತಲುಪಿದರೂ, ಅವರ ಕೈಕೆಳಗಿನ ಬ್ರಾಹ್ಮಣ ಅಧಿಕಾರಿಗಳು ದೂರುದಾರನ ವಿರುದ್ಧವೇ ಬ್ರಿಟಿಷ್ ಅಧಿಕಾರಿಯ ತಲೆತಿರುಗಿಸಿ ಬಿಡುತ್ತಾರೆ. ಬ್ರಾಹ್ಮಣರ ಇಂಥ ಅಧಿಕಾರಶಾಹಿ ಆಡಳಿತದಲ್ಲಿ, ವಿಸ್ತೃತ ಶಾಸನಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವ ಅವಕಾಶವನ್ನೇ ಮರಾಠರು ಮತ್ತು ಇತರ ಹಿಂದುಳಿದ ಸಮುದಾಯಗಳು ಕಳೆದುಕೊಂಡಿವೆ. ಬ್ರಾಹ್ಮಣೇತರ ಮತದಾರರು ಬ್ರಾಹ್ಮಣ ಅಭ್ಯರ್ಥಿಗಳ ಪರವಾಗಿಯೇ ಮತ ಹಾಕಬೇಕಾಗುತ್ತದೆ. ಹಿಂದುಳಿದ ವರ್ಗದವರನ್ನು ಬೆದರಿಸುವ, ಪುಸಲಾಯಿಸುವ ಅಥವಾ ಸಂತೈಸುವ ಎಲ್ಲಾ ತಂತ್ರಗಳು ಬ್ರಾಹ್ಮಣ ಅಭ್ಯರ್ಥಿಗಳ ಜಾತಿ ಬಾಂಧವರಿಗೆ ಚೆನ್ನಾಗಿಯೇ ತಿಳಿದಿವೆ. ಕನಿಷ್ಠ ಸೀಮಿತ ಸಂಖ್ಯೆಯ ವರ್ಷಗಳವರೆಗಾದರೂ ಜಾತಿವಾರು ಪ್ರಾತಿನಿಧ್ಯ ನೀಡುವುದಲ್ಲದೆ ಬೇರೆ ಪರಿಹಾರವಿಲ್ಲ. ಶಾಸನ ಸಭೆಗಳು, ಮುನಿಸಿಪಾಲಿಟಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳೇ ಇದಕ್ಕೆ ಉತ್ತಮ ಉದಾಹರಣೆಯಾಗಿವೆ. ಈ ಚುನಾವಣೆಗಳಲ್ಲಿ ಮರಾಠರು ಗೆಲ್ಲುವುದು ತೀರಾ ಅಪರೂಪ.
ಎರಡನೆಯದಾಗಿ, ಕಾಂಗ್ರೆಸ್‌ನ ಚಳವಳಿಯ ಫಲಿತಾಂಶವಾಗಿ, ಮಾರ್ಲೆ-ಮಿಂಟೊ ಕಾರ್ಯಕ್ರಮದಡಿ ಶಾಸನಸಭೆಗಳನ್ನು ವಿಸ್ತರಿಸುವ ಅನಿವಾರ್ಯತೆಗೆ ಸರಕಾರ ಒಳಗಾಗಿದೆ. ಕಾಂಗ್ರೆಸ್ ಈವರೆಗೆ, ಬ್ರಾಹ್ಮಣ ಅಧಿಕಾರಶಾಹಿಯನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ತನ್ನೆಲ್ಲಾ ಶಕ್ತಿಯನ್ನು ಮೀಸಲಾಗಿಟ್ಟಿದೆ ಹಾಗೂ ಬ್ರಿಟಿಷ್ ಸರಕಾರವು ಇದರ ಅರಿವಿಲ್ಲದೆ ಅವರು ಹೇಳಿದಂತೆ ಮಾಡುತ್ತಿದೆ. ಕಾಂಗ್ರೆಸ್ ಶೋಷಿತ ವರ್ಗಗಳ ಅಗತ್ಯಗಳಿಗೆ ಕುರುಡಾಗಿದೆ ಹಾಗೂ ಅವರಿಗಾಗಿ ಏನೂ ಮಾಡಿಲ್ಲ. ತಮ್ಮ ಸಮುದಾಯದ ಅಧಿಕಾರಶಾಹಿ ಆಡಳಿತವನ್ನು ಖಾಯಂಗೊಳಿಸುವುದಕ್ಕಾಗಿ ಜನಸಮೂಹವನ್ನು ತುಳಿಯುವುದನ್ನೇ ಕಾಂಗ್ರೆಸ್‌ನ ನಾಯಕರು ತಮ್ಮ ಉದ್ದೇಶವಾಗಿಸಿಕೊಂಡಿದ್ದಾರೆ. ತಿಲಕರ ಸಂಘಟನೆ ಕೇಸರಿಯು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಖಂಡಿಸುತ್ತಿದೆ ಮತ್ತು ದರ್ಭಾಂಗದ ಮಹಾರಾಜರು ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ಬಿಹಾರ ಶಾಸನ ಸಭೆಯಲ್ಲಿ ಖಂಡತುಂಡವಾಗಿ ವಿರೋಧಿಸುತ್ತಿದ್ದಾರೆ. ತಮ್ಮ ಸಮುದಾಯದ ನಿರಂಕುಶತೆಯನ್ನು ಕಾಪಾಡಿಕೊಳ್ಳುವುದಲ್ಲದೆ ಬೇರೆ ಯಾವ ಉದ್ದೇಶವೂ ಇದಕ್ಕಿಲ್ಲ. ಜಾತಿವಾರು ಪ್ರಾತಿನಿಧ್ಯವನ್ನು ತಿರಸ್ಕರಿಸುವುದನ್ನು ಸರಕಾರ ಮುಂದುವರಿಸಿದರೆ, ಅದರ ಫಲಿತಾಂಶವಾಗಿ ಬ್ರಾಹ್ಮಣರು ಸಾಲಾಗಿ ಶಾಸನಸಭೆಗಳಿಗೆ ಹೋಗುತ್ತಾರೆ. ಅವರು ತಮ್ಮ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಮಾತ್ರ ಉತ್ಸುಕರಾಗಿದ್ದಾರೆ; ಇತರ ಸಮುದಾಯಗಳ ಹಿತಾಸಕ್ತಿ ರಕ್ಷಣೆಯನ್ನು ಅವರು ವಿರೋಧಿಸುತ್ತಾರೆ. ಇದು ಬ್ರಾಹ್ಮಣೇತರರ ಪರಿಸ್ಥಿತಿಯನ್ನು ದುರ್ಬಲಗೊಳಿಸುತ್ತಾ ಸಾಗುತ್ತದೆ. ಹಾಗಾಗಿ, ಇಂತಹ ಪ್ರವೃತ್ತಿಗಳನ್ನು ತಡೆಯಲು ಜಾತಿವಾರು ಪ್ರಾತಿನಿಧ್ಯವು ಅಗತ್ಯವಾಗಿದೆ.
ಮೂರನೆಯದಾಗಿ, ಮರಾಠಾ ಮತ್ತು ಇತರ ಹಿಂದುಳಿದ ಸಮುದಾಯಗಳ ಸದಸ್ಯರು ಚುನಾವಣೆಯಲ್ಲಿ ಸೋತರೆ ಅವರನ್ನು ಸರಕಾರ ನಾಮಕರಣಗೊಳಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಆದರೆ, ಈ ಕ್ರಮವು ಹೆಚ್ಚು ಉಪಯುಕ್ತ ಎಂದು ನನಗನಿಸುವುದಿಲ್ಲ. ಹೀಗೆ ನಾಮಕರಣಗೊಂಡ ಸದಸ್ಯರಲ್ಲಿ ಚುನಾವಣೆಯಲ್ಲಿ ಗೆದ್ದ ಆತ್ಮವಿಶ್ವಾಸ ಸಾಮಾನ್ಯವಾಗಿ ಇರುವುದಿಲ್ಲ. ಅದೂ ಅಲ್ಲದೆ, ಅವರು ಚುನಾವಣೆಯಲ್ಲಿ ಗೆದ್ದವರು ಹೇಳಿದಂತೆ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಎಲ್ಲಕ್ಕಿಂತಲೂ ಹೆಚ್ಚು, ಅವರು ಬಲಿಷ್ಠ ಪುರೋಹಿತಶಾಹಿ ಅಧಿಕಾರಶಾಹಿಯ ತಾಳಕ್ಕೆ ತಕ್ಕಂತೆ ಕುಣಿಯುವ ಸಾಧ್ಯತೆಯೂ ಇರುತ್ತದೆ. ಅವರಿಗೆ ತಮ್ಮನ್ನು ಆಯ್ಕೆ ಮಾಡದ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ಆಸಕ್ತಿಯೂ ಇರಲಾರದು. ಎಲ್ಲಕ್ಕಿಂತ ಹೆಚ್ಚಾಗಿ, ತಾನೋರ್ವ ಸರಕಾರಿ ನಾಮನಿರ್ದೇಶಿತ ಎನ್ನುವ ಭಾವನೆಯು ಅವರ ವಾದದ ಮೇಲೂ ಪರಿಣಾಮ ಬೀರಬಹುದು. ನಾಮನಿರ್ದೇಶಿತ ಸದಸ್ಯರು ಪಕ್ಷಪಾತಿಗಳು ಮತ್ತು ಸರಕಾರದ ಗುಲಾಮರು ಎಂಬ ಆರೋಪಗಳನ್ನು ಮಾಡುವ ಚಾಳಿಯನ್ನು ಬ್ರಾಹ್ಮಣ ಅಧಿಕಾರಿಗಳು ಹೊಂದಿದ್ದಾರೆ. ಹಾಗೂ ಆ ಮೂಲಕ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೆ. ಸೀಮಿತ ಸಮುದಾಯದ ಮತದಾರರ ಮೂಲಕ ಆಯ್ಕೆಯಾದರೆ, ಕೌನ್ಸಿಲರ್‌ಗಳಲ್ಲಿ ಆತ್ಮವಿಶ್ವಾಸ ಇರುತ್ತದೆ ಹಾಗೂ ಅವರು ಹೆಚ್ಚೆಚ್ಚು ಸ್ವಾವಲಂಬಿಯಾಗುತ್ತಾರೆ. ಇದು ಬ್ರಾಹ್ಮಣರಿಗೆ ಬೇಕಾಗಿಲ್ಲ. ಈ ಹೆದರಿಕೆಯಿಂದಲೇ ಅವರು ಜಾತಿವಾರು ಪ್ರಾತಿನಿಧ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.
ನಾಲ್ಕನೆಯದಾಗಿ, ಬ್ರಾಹ್ಮಣ ಅಧಿಕಾರಶಾಹಿಯು ಆತ್ಮಾಭಿಮಾನವನ್ನು ಹೇಗೆ ಕೊಲ್ಲುತ್ತದೆ ಎನ್ನುವುದನ್ನು ನಾನೊಂದು ಉದಾಹರಣೆ ನೀಡುತ್ತೇನೆ. ಮರಾಠಾ ಸಮುದಾಯದ ಬಾಗಲ್ ಎಂಬವರು ಎಲ್‌ಎಲ್‌ಬಿ ಪದವೀಧರರು. ಅವರು ಇಲ್ಲಿ ಮಾಮ್ಲತ್‌ದಾರ್ ಆಗಿದ್ದರು. ಆ ಸಮಯದಲ್ಲಿ ಅವರು ಸಾಮಾನ್ಯ ಜನಸಮೂಹದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು ಮತ್ತು ಬ್ರಾಹ್ಮಣ ಶ್ರೇಷ್ಠತೆಗೆ ವಿರುದ್ಧವಾಗಿದ್ದರು. ಆದರೆ ಅವರು ಇಲ್ಲಿನ ಕೆಲಸವನ್ನು ಬಿಟ್ಟು ನ್ಯಾಯವಾದಿಯಾಗಿ ಕೆಲಸ ಆರಂಭಿಸಿದಾಗ, ಬ್ರಾಹ್ಮಣ ನ್ಯಾಯಾಧೀಶರು ಮತ್ತು ಮ್ಯಾಜಿಸ್ಟ್ರೇಟ್‌ಗಳ ಕಟಾಕ್ಷವನ್ನು ಗಳಿಸುವುದಕ್ಕಾಗಿ ತನ್ನ ನಿಲುವನ್ನು ಬದಲಿಸುವುದು ಅಗತ್ಯ ಎನ್ನುವುದನ್ನು ಕಂಡುಕೊಂಡರು. ಈಗ ಅವರು ಸಾರ್ವಜನಿಕವಾಗಿ ಪ್ರಖರ ಬ್ರಾಹ್ಮಣ ಶ್ರೇಷ್ಠತಾವಾದಿಯಾಗಿದ್ದಾರೆ. ಅವರು ತನ್ನ ನಿಜವಾದ ಭಾವನೆಗಳನ್ನು ಹೇಳಿಕೊಳ್ಳಲು ಹೆದರುತ್ತಾರೆ. ಲ್ಯಾತ್ ಎಂಬವರೂ, ವಕೀಲ ವೃತ್ತಿ ಆರಂಭಿಸಿದ ಬಳಿಕ, ಬ್ರಾಹ್ಮಣರ ವಿರುದ್ಧದ ತನ್ನ ವಾಗ್ದಾಳಿಯನ್ನು ಮೃದುಗೊಳಿಸಿದ್ದಾರೆ. ಅವರು ಮೊದಲು, ಬ್ರಾಹ್ಮಣೇತರರ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು.
ಬ್ರಾಹ್ಮಣ ಅಧಿಕಾರಶಾಹಿಯ ಹಿತಾಸಕ್ತಿಗೆ ವಿರುದ್ಧವಾಗಿರುವ ಆದೇಶಗಳು ತಡೆಹಿಡಿಯಲ್ಪಟ್ಟಿರುವುದನ್ನು ಅಥವಾ ಆದೇಶ ಬಿಡುಗಡೆಯ ಹಂತದಲ್ಲೇ ದುರ್ಬಲಗೊಳಿಸಲ್ಪಟ್ಟು ನಿರುಪಯುಕ್ತವಾಗಿರುವುದನ್ನು ನಾನು ಹಲವು ಬಾರಿ ನೋಡಿದ್ದೇನೆ. ದಾಖಲೆಗಳು ಬ್ರಾಹ್ಮಣರ ವಶದಲ್ಲಿ ಇರುವುದು ಇದಕ್ಕೆ ಕಾರಣ. ಈ ದಾಖಲೆಗಳನ್ನು ಬಳಸಿಕೊಂಡು ಅವರು ಬ್ರಾಹ್ಮಣರ ವಾದಗಳನ್ನು ಬೆಂಬಲಿಸಲು ಪೂರ್ವನಿದರ್ಶನವನ್ನೂ ಕೊಡಬಲ್ಲರು, ಹಾಗೂ ಬ್ರಾಹ್ಮಣರಿಗೆ ವಿರುದ್ಧವಾಗುವುದಾದರೆ ಪೂರ್ವನಿದರ್ಶನಗಳನ್ನು ಹತ್ತಿಕ್ಕಬಲ್ಲರು.
ಉನ್ನತ ಬ್ರಿಟಿಷ್ ಅಧಿಕಾರಿಗಳು ಮತ್ತು ಬ್ರಾಹ್ಮಣೇತರ ಸರಕಾರಗಳೂ ಬ್ರಾಹ್ಮಣ ಅಧಿಕಾರಶಾಹಿಯ ಎದುರು ಅಸಹಾಯಕವಾಗಿರುವುದನ್ನು ನೋಡಿದ್ದೇವೆ. ಬ್ರಾಹ್ಮಣರ ವಿರುದ್ಧ ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಮಾಡುವುದಿಲ್ಲ. ಹಾಗೇನಾದರೂ ಮಾಡಿದರೆ, ಬ್ರಾಹ್ಮಣ ಪತ್ರಿಕೆಗಳು ಅವರ ವಿರುದ್ಧ ಮುಗಿಬೀಳುತ್ತವೆ. ಈ ಬ್ರಿಟಿಷ್ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಹೆದರುತ್ತಾರೆ. ಈ ಉನ್ನತ ಅಧಿಕಾರಿಗಳ ಬ್ರಾಹ್ಮಣ ಸಹಾಯಕರು, ಹೊಸ ನಿರ್ಧಾರಗಳ ವಿರುದ್ಧ ತಮ್ಮ ಅಧಿಕಾರಿಗಳ ಕಿವಿಯೂದುತ್ತಾರೆ. ಇದು ಅಂತಿಮವಾಗಿ ಏನಾಗುತ್ತದೆಯೆಂದರೆ, ಬ್ರಾಹ್ಮಣರ ವಿರುದ್ಧ ಹೋಗುವ ಧೈರ್ಯ ಮಾಡಿದ ಬ್ರಿಟಿಷ್ ಅಧಿಕಾರಿ ಅಥವಾ ಸರಕಾರವನ್ನು ಮೂರ್ಖರು ಅಥವಾ ವಿವೇಚನಾರಹಿತರು ಎಂಬುದಾಗಿ ಜನರು ಭಾವಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಅಧಿಕಾರಿಗಳ ಕೈಕೆಳಗಿನ ಬ್ರಾಹ್ಮಣ ಅಧಿಕಾರಿಗಳು ಅವರ ಶತ್ರುಗಳ ವಿರುದ್ಧ ಕೈಜೋಡಿಸಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ.
ಐದನೆಯದಾಗಿ, ಬಹುಸಂಖ್ಯಾತರಿಗೆ ಪ್ರತ್ಯೇಕ ಪ್ರಾತಿನಿಧ್ಯದ ಅಗತ್ಯವಿಲ್ಲ ಎನ್ನುವ ತತ್ವವು, ಸ್ವಾರ್ಥಿ ಅಲ್ಪಸಂಖ್ಯಾತರು ಅಧಿಕಾರ ಪಡೆಯುವ ಸಾಧ್ಯತೆಯಿರುವ ಪ್ರಾಂತಗಳಿಗೆ ಅನ್ವಯಿಸುವುದಿಲ್ಲ. ಅವರು ಬಹುಸಂಖ್ಯಾತರನ್ನು ಶಾಶ್ವತವಾಗಿ ಗುಲಾಮಗಿರಿಗೆ ತಳ್ಳಲು ಈ ಅಧಿಕಾರವನ್ನು ಬಳಸುತ್ತಾರೆ. ಮಧ್ಯ ಭಾಗದಲ್ಲಿ ಮರಾಠಾ ಸಮುದಾಯವು ಸಂಖ್ಯೆಯಲ್ಲಿ ತುಂಬಾ ಪ್ರಬಲವಾಗಿದೆ. ಆದರೆ, ಸ್ವತಂತ್ರವಾಗಿ ಆಲೋಚಿಸುವ ಜನರ ಸಂಖ್ಯೆ ತುಂಬಾ ಕಡಿಮೆಯಾಗಿರುವುದರಿಂದ ಅವರು ದುರ್ಬಲರಾಗಿದ್ದಾರೆ. ಅವರಲ್ಲಿ ವಕೀಲಿ ವೃತ್ತಿ ನಡೆಸುವವರ ಸಂಖ್ಯೆಯೂ ತುಂಬಾ ಕಡಿಮೆಯಿದೆ. ಈಗ ವಕೀಲಿ ವೃತ್ತಿ ನಡೆಸುತ್ತಿರುವ ಕೆಲವರೂ ಕೂಡ, ತಾವು ಬ್ರಾಹ್ಮಣರಿಗೆ ವಿರುದ್ಧವಾದ ದಿಕ್ಕಿನಲ್ಲಿ ಹೋದರೆ ಇಡೀ ಬ್ರಾಹ್ಮಣ ಅಧಿಕಾರಶಾಹಿಯು ತಮ್ಮ ಮೇಲೆ ಮುಗಿಬೀಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ, ಯುವಕರು ವಕೀಲಿ ವೃತ್ತಿ ನಡೆಸಲು ಹಿಂಜರಿಯುತ್ತಿದ್ದಾರೆ. ಇಡೀ ಬಾಂಬೆ ಪ್ರಾಂತದಲ್ಲಿ ಒಬ್ಬನೇ ಒಬ್ಬ ಮರಾಠಾ ಸರಕಾರಿ ವಕೀಲನಿಲ್ಲ. ಮುಂದೆಯೂ ಅಥವಾ ಕನಿಷ್ಠ ನನ್ನ ಜೀವಮಾನದಲ್ಲಿ ಯಾರಾದರೂ ಆಗುವ ಸಾಧ್ಯತೆಯೂ ಇಲ್ಲ. ಸಂಖ್ಯೆಯಲ್ಲಿ ಹೆಚ್ಚಿರುವ ಮರಾಠಾ ಸಮುದಾಯಕ್ಕೆ ತಮ್ಮ ದುಮ್ಮಾನಗಳನ್ನು ಹೇಳಿಕೊಳ್ಳುವುದಕ್ಕಾಗಿ ಸರಿಯಾದ ಪ್ರಾತಿನಿಧ್ಯ ನೀಡಲು ಕೆಲವೊಂದು ವಿಶೇಷ ಅವಕಾಶಗಳನ್ನು ಒದಗಿಸುವುದು ಅಗತ್ಯ ಎನ್ನುವುದನ್ನು ಇದು ತೋರಿಸುತ್ತದೆ.
ಲಕ್ಷಾಂತರ ಮರಾಠರ ಮೇಲೆ ಮಾಡಲಾಗುತ್ತಿರುವ ದೌರ್ಜನ್ಯವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಹಳ್ಳಿಗಳಲ್ಲಿ, ಕುಲಕರ್ಣಿ ಅಥವಾ ಗ್ರಾಮ ಲೆಕ್ಕಿಗನದೇ ಪಾರುಪತ್ಯ. ಅವರ ವಿರುದ್ಧ ಯಾರೂ ಚಕಾರ ಎತ್ತುವಂತಿಲ್ಲ. ಗ್ರಾಮದ ಪುರೋಹಿತ, ಜ್ಯೋತಿಷಿ ಮತ್ತು ಅವರ ಜಾತಿಯ ಜನರನ್ನು ದೇವರು ಎಂಬಂತೆ ನೋಡಲಾಗುತ್ತಿದೆ. ಗ್ರಾಮಸ್ಥರು ಅವರಿಗೆ ಶುಭ ಮತ್ತು ದುಃಖ- ಎರಡೂ ಸಂದರ್ಭಗಳಲ್ಲಿ ಅವರಿಗೆ ಭೋಜನ ಮತ್ತು ದಕ್ಷಿಣೆ ನೀಡಬೇಕು. ಧಾರ್ಮಿಕ ಮತ್ತು ಧಾರ್ಮಿಕೇತರ ಸಂಗತಿಗಳೆಲ್ಲವನ್ನೂ ಬ್ರಾಹ್ಮಣರೇ ತೀರ್ಮಾನಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಓರ್ವ ಮರಾಠನು ತನ್ನ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ ಹಾಗೂ ತನಗಾಗಿ ಕೆಲಸ ಮಾಡುವುದು ಇನ್ನೂ ಕಡಿಮೆ. ಮರಾಠರು ಬ್ರಿಟಿಷ್ ಸಾಮ್ರಾಜ್ಯಕ್ಕೆ ನಿಷ್ಠೆ ಹೊಂದಿದ್ದಾರೆ. ಬ್ರಿಟಿಷರಿಗಾಗಿ ಅವರು ಮೂರು ಖಂಡಗಳಲ್ಲಿ ಯುದ್ಧ ಮಾಡಿ ರಕ್ತ ಹರಿಸಿದ್ದಾರೆ. ಹಾಗಾಗಿ, ಈ ನಂಬಿಗಸ್ಥ ಜನರಿಗೆ ಜಾತಿ ಆಧಾರಿತ ಪ್ರಾತಿನಿಧ್ಯವನ್ನು ನಿರಾಕರಿಸುವುದೆಂದರೆ, ಅವರನ್ನು ಈವರೆಗಿನ ಅವರ ಶೋಷಕರ ಮರ್ಜಿಗೆ ಬಿಟ್ಟುಕೊಟ್ಟಂತೆ. ಶಾಸನಸಭೆಗಳಲ್ಲಿ ಬ್ರಾಹ್ಮಣರೇ ತುಂಬುತ್ತಾರೆ. ತಮಗೆ ವಹಿಸಿದ ಇಲಾಖೆಗಳ ವ್ಯವಹಾರಗಳಲ್ಲಿ ಅವರು ಪ್ರಾಬಲ್ಯ ಸಾಧಿಸುತ್ತಾರೆ. ಬ್ರಾಹ್ಮಣ ಸಮುದಾಯದ ಹಿತಾಸಕ್ತಿಗಳಿಗೆ ಪೂರಕವಾಗಿ ಮತ್ತು ಸರಕಾರದ ನೈಜ ಬೆಂಬಲಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಈ ಎಲ್ಲಾ ಇಲಾಖೆಗಳನ್ನು ರೂಪಿಸಲಾಗುತ್ತದೆ. ಬ್ರಾಹ್ಮಣೇತರರು ಅಂತಿಮವಾಗಿ ಬ್ರಾಹ್ಮಣರ ಪ್ರಭಾವಕ್ಕೆ ಮಣಿಯಲೇಬೇಕಾಗುತ್ತದೆ ಹಾಗೂ ತಮ್ಮ ನಿಷ್ಠೆಯನ್ನು ತ್ಯಾಗ ಮಾಡಲೇಬೇಕಾಗುತ್ತದೆ.
ನಾನು ನನ್ನ ಪ್ರಜೆಗಳಿಗೆ ನನ್ನಿಂದ ಆಗುವಷ್ಟು ಸೇವೆಯನ್ನು ಮಾಡಿದ್ದೇನೆ. ಅವರನ್ನು ಗ್ರಾಮ ಕುಲಕರ್ಣಿಗಳು, ಭಟ್ (ಪುರೋಹಿತ) ಮತ್ತು ಜೋಶಿ (ವಂಶಪಾರಂಪರ್ಯ ಗ್ರಾಮ ಜ್ಯೋತಿಷಿ)ಗಳ ಹಿಡಿತದಿಂದ ಮುಕ್ತಗೊಳಿಸಿದ್ದೇನೆ. ಕುಲಕರ್ಣಿಯವರ ಸೇವೆಗಳನ್ನು ಬದಲಾಯಿಸಲಾಗಿದೆ. ಅವರ ಕೆಲಸವನ್ನು ಏಜನ್ಸಿಯೊಂದಕ್ಕೆ ವಹಿಸಲಾಗಿದೆ. ಮುಖ್ಯವಾಗಿ ಬ್ರಾಹ್ಮಣೇತರ ಜಾತಿಗಳಿಂದ ಬಂದವರನ್ನು ಈ ಏಜನ್ಸಿಗೆ ನೇಮಿಸಲಾಗಿದೆ. ಅವರಿಗೆ ಈ ಕೆಲಸಕ್ಕಾಗಿ ಸೂಕ್ತ ತರಬೇತಿ ನೀಡಲಾಗಿದೆ. ಜನರು ಗ್ರಾಮ ಪುರೋಹಿತರು ಅಥವಾ ಗ್ರಾಮ ಜ್ಯೋತಿಷಿಗಳ ಸೇವೆಯನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯವಿಲ್ಲ ಎಂಬ ಆದೇಶವೊಂದನ್ನು ಹೊರಡಿಸಲಾಗಿದೆ. ತಮ್ಮ ಸೇವೆಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ಜನರನ್ನು ಒತ್ತಾಯಿಸಲು ಗ್ರಾಮ ಪುರೋಹಿತ ಮತ್ತು ಜ್ಯೋತಿಷಿಗಳಿಗೆ ಯಾವುದೇ ಅಧಿಕಾರವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಜನರಿಗೆ ಪ್ರಜ್ಞೆಯ ಸ್ವಾತಂತ್ರವನ್ನು ನೀಡಲಾಗಿದೆ. ಅದೇ ರೀತಿ, ಯಾವ ಕುಲಕಸುಬುದಾರರ ಕಳಪೆ ಕೆಲಸಕ್ಕೆ ಭಾರೀ ಬೆಲೆಯನ್ನು ತೆರಲಾಗಿದೆಯೋ, ಅಂಥವರ ವಂಶಪಾರಂಪರ್ಯ ಹಕ್ಕುಗಳನ್ನು ರದ್ದುಪಡಿಸುವ ಮೂಲಕವೂ ಜನರಿಗೆ ಸ್ವಾತಂತ್ರವನ್ನು ನೀಡಲಾಗಿದೆ.
ಮಹಾರ್‌ಗಳು, ಮಾಂಗ್‌ಗಳು ಮತ್ತು ರಮೋಶಿಗಳು ಎಂದು ಕರೆಯಲ್ಪಡುವ ಬುಡಕಟ್ಟು ಸಮುದಾಯಗಳನ್ನು ‘ಅಪರಾಧ ಪಂಗಡ’ಗಳು ಎಂಬುದಾಗಿ ಕರೆಯಲಾಗುತ್ತಿದೆ. ಆ ಸಮುದಾಯಗಳ ವಿರುದ್ಧವಾಗಿದ್ದ ನಿಯಮಗಳನ್ನೂ ನಾನು ರದ್ದುಪಡಿಸಿದ್ದೇನೆ. ಅವರ ಚಲನವಲನಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳ ಹಿನ್ನೆಲೆಯಲ್ಲಿ ಅವರು ಯಾವುದೇ ವ್ಯಾಪಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಸಮುದಾಯದ ಕೆಲವು ಸದಸ್ಯರು ವಂಚನೆ ಮತ್ತು ಹಿಂಸಾಚಾರಕ್ಕೆ ಇಳಿಯುವ ಬಲವಂತಕ್ಕೆ ಒಳಗಾಗಿದ್ದರು.
ಬ್ರಾಹ್ಮಣ ಅಧಿಕಾರಶಾಹಿಯ ಪ್ರಭಾವವನ್ನು ಕೆಲವರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಸರಕಾರದ ಸೇವೆಗಳ ಪ್ರತಿಯೊಂದು ವಿಭಾಗದಲ್ಲಿಯೂ ಬ್ರಾಹ್ಮಣ ಅಧಿಕಾರಶಾಹಿ ಬಲಿಷ್ಠವಾಗಿದ್ದು, ಇತರ ಸಮುದಾಯಗಳನ್ನು ತುಳಿಯಲು ಬೇಕಾದ ವಿಧಾನಗಳು ಮತ್ತು ಸಂಪನ್ಮೂಲಗಳನ್ನು ಹೊಂದಿದೆ.
ಕೊಲ್ಲಾಪುರದ ಓರ್ವ ವ್ಯಾಪಾರಿಗೆ ಬ್ರಾಹ್ಮಣ ವಕೀಲನೊಬ್ಬ ಮೋಸ ಮಾಡಿದನು. ಆ ವಕೀಲನ ವಿರುದ್ಧ ಮೊಕದ್ದಮೆ ಹೂಡುವಂತೆ ಕೇಳಿದಾಗ, ವರ್ತಕ ಹೀಗೆ ಹೇಳಿದರು: ‘‘ಮೊಕದ್ದಮೆಯಲ್ಲಿ ಗೆಲ್ಲುವ ಯಾವ ಸಾಧ್ಯತೆಯೂ ನನಗೆ ಕಾಣುತ್ತಿಲ್ಲ. ನ್ಯಾಯಾಧೀಶರು ಬ್ರಾಹ್ಮಣರು, ಪೊಲೀಸರು ಬ್ರಾಹ್ಮಣರು, ಗುಮಾಸ್ತರು ಬ್ರಾಹ್ಮಣರು. ನನಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಸಿಗುವ ಬದಲು, ನನ್ನನ್ನು ಗುರುತಿಸಲಾಗುತ್ತದೆ ಮತ್ತು ನಾನು ಬ್ರಾಹ್ಮಣರ ಪ್ರತೀಕಾರಕ್ಕೆ ಒಳಗಾಗಬೇಕಾಗುತ್ತದೆ’’.
ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಸಮುದಾಯಗಳಿಗೆ ಜಾತಿವಾರು ಪ್ರಾತಿನಿಧ್ಯ ಲಭಿಸದಿದ್ದರೆ, ಈ ಎಲ್ಲಾ ರಾಜಕೀಯ ಸುಧಾರಣೆಗಳು ಬ್ರಾಹ್ಮಣ ಅಧಿಕಾರಶಾಹಿಯನ್ನಷ್ಟೇ ಬಲಪಡಿಸುತ್ತದೆ ಹಾಗೂ ಅದಕ್ಕೆ ಸರಕಾರದ ನಿಷ್ಠ ಹಾಗೂ ನಂಬಿಗಸ್ಥ ಪ್ರಜೆಗಳು ಬೆಲೆ ತೆರಬೇಕಾಗುತ್ತದೆ.
ಕೊಲ್ಲಾಪುರದ ಶಂಕರಾಚಾರ್ಯರು (ಡಾ. ಕುರ್ತಕೋಟಿ) ವಿದ್ವಾಂಸರು. ಆದರೆ, ಒಳಗೆ ಅವರು ಬ್ರಾಹ್ಮಣರಲ್ಲಿ ಬ್ರಾಹ್ಮಣ ಎಂಬುದಾಗಿ ನಾನು ಹೇಳಬೇಕಾಗಿದೆ. ಕುಲಕರ್ಣಿಗಳನ್ನು ಸೇವೆಯಿಂದ ತೆರವುಗೊಳಿಸುವುದಕ್ಕೆ ಸಂಬಂಧಿಸಿ ದರ್ಬಾರ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಅನುಮೋದನೆ ನೀಡಲು ಮೊನ್ನೆ ಅವರ ಅಧ್ಯಕ್ಷತೆಯಲ್ಲಿ ಸಭೆಯೊಂದು ನಡೆಯಿತು. ಕುಲಕರ್ಣಿಗಳ ವರ್ತನೆಯ ಬಗ್ಗೆ ತನಿಖೆ ನಡೆಸಲು ಮತ್ತು ಅವರಿಂದ ಸಂಕಷ್ಟಕ್ಕೆ ಒಳಗಾಗುವ ಜನರಿಗೆ ಪರಿಹಾರ ನೀಡಲು ದರ್ಬಾರ್‌ಗೆ ಮನವಿ ಮಾಡುವ ನಿರ್ಣಯವೊಂದನ್ನು ಆ ಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ, ಅವರು ನನಗೆ ಈ ವಿಷಯದಲ್ಲಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ಈಗ ಅವರು ಬಹಿರಂಗವಾಗಿ ತೀವ್ರವಾದಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಓರ್ವ ಧಾರ್ಮಿಕ ಮುಖಂಡನಾಗಿ ಅವರು ರಾಜಕೀಯದಲ್ಲಿ ತಲೆಹಾಕಬಾರದು. ಆದರೆ, ಬ್ರಾಹ್ಮಣ ಆಶೆಬುರುಕ, ಎಲ್ಲ್ಲೆಡೆಯೂ ತಾನು ಶ್ರೇಷ್ಠನಾಗಿರಬೇಕು ಎಂದು ಬಯಸುತ್ತಾನೆ.
ನಾನು ಈ ವಿಷಯಗಳನ್ನು ತಮ್ಮಂದಿಗೆ ನೇರವಾಗಿ ಚರ್ಚಿಸಲು ಉತ್ಸುಕನಾಗಿದ್ದೇನೆ. ಆದರೆ, ಪಾಟಿಯಾಲದ ಮಹಾರಾಜರು ನನ್ನನ್ನು ಕಳುಹಿಸಿದರೆ ಮಾತ್ರ ನನಗೆ ಈ ಅವಕಾಶ ಒದಗುತ್ತದೆ.
ಈ ಪತ್ರ ತುಂಬಾ ಉದ್ದವಾಯಿತು. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ವಿಷಯದ ಗಂಭೀರತೆ ಮತ್ತು ತುರ್ತುವಿನಿಂದಾಗಿ ಇಷ್ಟು ಉದ್ದದ ಪತ್ರವನ್ನು ನಾನು ಬರೆಯಬೇಕಾಯಿತು.