ಕೆಲವರಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಕುತ್ತು: ಉಡುಪಿಯ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮಂಜುನಾಥ್ ಭಂಡಾರಿ

Update: 2022-08-06 12:22 GMT

ಉಡುಪಿ, ಆ.6: ಇಂದು ನಮ್ಮ ದೇಶದ ತ್ರಿವರ್ಣ ಧ್ವಜ, ಸಂವಿಧಾನ ಹಾಗೂ  ಪ್ರಜಾಪ್ರಭುತ್ವಕ್ಕೆ ಕುತ್ತು ತರುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ ನಾವೆಲ್ಲರು ನಮ್ಮ ಸಂವಿಧಾನವನ್ನು ರಕ್ಷಣೆ ಮಾಡಬೇಕು. ಮುಂದಿನ ಪೀಳಿಗೆಗಾಗಿ ವಿವಿಧ ಜಾತಿ, ಧರ್ಮದವರು ಸಹೋದರತ್ವದೊಂದಿಗೆ ನ್ಯಾಯಯುತ ಬದುಕು ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ದೇಶದ 75ನೇ ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಹಯೋಗದೊಂದಿಗೆ ಕಿನ್ನಿಮೂಲ್ಕಿ ಕನ್ನರ್ಪಾಡಿಯಿಂದ ಇಂದ್ರಾಳಿ ವರೆಗೆ ಶನಿವಾರ ಹಮ್ಮಿಕೊಳ್ಳಲಾದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ನಮಗೆ ಯಾರಿಗೂ ಸಮಾನತೆ ಇರಲಿಲ್ಲ. ಮಾತನಾ ಡುವ ಹಕ್ಕು ಇರಲಿಲ್ಲ. ನ್ಯಾಯ ಕೇಳುವಾಗೆ ಇರಲಿಲ್ಲ. ಸ್ವಾತಂತ್ರ್ಯ ಸಿಕ್ಕ ಬಳಿಕ ನಾವು ಸಂವಿಧಾನವನ್ನು ರಚನೆ ಮಾಡಿಕೊಂಡಿದ್ದು, ಆ ಸಂವಿಧಾನದಡಿ ನಮ್ಮ ಪ್ರಜಾಪ್ರಭುತ್ವ ದೇಶ ನಿಂತಿದೆ. ಈ ಸಂವಿಧಾನದಿಂದಾಗಿ ನಾವು ಮಾತನಾಡುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ನ್ಯಾಯ ಪಡೆಯುವ ಹಕ್ಕನ್ನು ಪಡೆದುಕೊಂಡಿದ್ದೇವೆ. ಹೀಗೆ ಸಂವಿಧಾನವು ನಮಗೆ ಎಲ್ಲವನ್ನು ನೀಡಿದೆ ಎಂದರು.

ಕೆಲವರು ಸ್ವಾತಂತ್ರ್ಯಕ್ಕಾಗಿ ಏನು ಮಾಡದೆ ಆ ಹೋರಾಟದ ಸಮಯದಲ್ಲಿ ಬಾವುಟ ಕೂಡ ಹಿಡಿಯದೆ ಅಗೌರವ ತೋರಿಸಿದ್ದರು. ಈಗ ಅವರು ಮನೆಮನೆ ಯಲ್ಲಿ ಬಾವುಟ ಹಾರಿಸುವಂತೆ ಉಪದೇಶ ನೀಡುತ್ತಿದ್ದಾರೆ. ತ್ರೀವರ್ಣ ಧ್ವಜ ನಮ್ಮ ಮನೆಗಳಲ್ಲಿ ಹಾಕುವುದು ನಮ್ಮ ಹಕ್ಕು. ಅದನ್ನು ಯಾರೋ ಹೇಳಿದರೆಂದು ಹಾಕುವುದಲ್ಲ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರು ಮಾತನಾಡಿ ದರು. ಕನ್ನರ್ಪಾಡಿಯಿಂದ  ಹೊರಟ ಪಾದಯಾತ್ರೆಯು ಕಿನ್ನಿಮೂಲ್ಕಿ, ಜೋಡು ಕಟ್ಟೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಕಡಿಯಾಳಿ ಮಾರ್ಗವಾಗಿ ಇಂದ್ರಾಳಿಯಲ್ಲಿ ಸಮಾಪ್ತಿಗೊಂಡಿತು.

ಪಾದಯಾತ್ರೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಮಿಥುನ್ ರೈ, ವರೋನಿಕಾ ಕರ್ನೆಲಿಯೋ, ಪ್ರಖ್ಯಾತ್ ಶೆಟ್ಟಿ, ದಿನೇಶ್ ಪುತ್ರನ್, ಮುರಳೀ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಲೂಯಿಸ್ ಲೋಬೊ, ಕೀರ್ತಿ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ದೀಪಕ್ ಕೋಟ್ಯಾನ್, ಅಣ್ಣಯ್ಯ ಶೇರಿಗಾರ್, ದಿನಕರ ಹೇರೂರು, ಗಣೇಶ್ ನೆರ್ಗಿ, ಹರೀಶ್ ಶೆಟ್ಟಿ ಪಾಂಗಳ, ಶಶಿಧರ್ ಶೆಟ್ಟಿ ಎರ್ಮಾಳ್, ಶಬ್ಬೀರ್ ಉಡುಪಿ, ಕುಶಲ್ ಶೆಟ್ಟಿ, ತಾರನಾಥ್  ಕೋಟ್ಯಾನ್, ಸುಕನ್ಯ ಪೂಜಾರಿ, ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News