ಹೆಚ್ಚುತ್ತಿರುವ ಆಹಾರ ಸಾಮಗ್ರಿಗಳ ಬೆಲೆಗಳಿಗೆ ನಿಯಂತ್ರಣವೇ ಇಲ್ಲ: ಕಾರಣವೇನು?

Update: 2022-08-07 15:28 GMT

ಅಂಕಿಅಂಶಗಳು ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯದಿಂದ ಲಭ್ಯ ಇತ್ತೀಚಿನ ಮಾಹಿತಿಯಂತೆ ಜೂನ್ ಅಂತ್ಯದಲ್ಲಿ ಹಣದುಬ್ಬರವು ನಂಬಲಸಾಧ್ಯವಾದ ಶೇ.10ರ ಮಟ್ಟದಲ್ಲಿದ್ದು,ಇದರೊಂದಿಗೆ ಗೋದಿ ಮತ್ತು ಹಿಟ್ಟುಗಳ ಬೆಲೆಗಳು ಮುಗಿಲು ಮುಟ್ಟಿದ್ದವು. ಅಂದರೆ ಬೆಲೆಗಳು ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಶೇ.10ರಷ್ಟು ಏರಿಕೆಯಾಗಿದ್ದವು. ಕೇವಲ ಆರು ತಿಂಗಳ ಹಿಂದೆ ಜನವರಿಯಲ್ಲಿ ಗೋದಿಗೆ ಹಣದುಬ್ಬರ ದರ ಶೇ.5.1ರಷ್ಟಿತ್ತು. ಇದು ಸಮಾಧಾನಕರವಾಗಿರಲಿಲ್ಲ ನಿಜ, ಆದರೆ ಮಾರಕವಾಗಿರಲಿಲ್ಲ. ಪ್ರಮುಖ ಧಾನ್ಯಗಳ ಈ ವಿನಾಶಕಾರಿ ಬೆಲೆ ಏರಿಕೆಗೆ ಮತ್ತು ರಫ್ತುಗಳಿಗೆ ಒತ್ತು ನೀಡಿದ್ದ ಹಿಂದಿನ ಅಧ್ವಾನಕಾರಿ ನೀತಿಯು ಕಾರಣವಾಗಿದೆ ಎನ್ನಬಹುದು. ಈ ನೀತಿಯಿಂದಾಗಿ ಆಹಾರ ಧಾನ್ಯಗಳ ಸಂಗ್ರಹ ಕುಸಿದಿತ್ತು ಮತ್ತು ಪರಿಸ್ಥಿತಿ ತಿರುವುಮುರುವಾಗಿತ್ತು.

ಆದರೆ ಅಗತ್ಯ ಆಹಾರ ಸಾಮಗ್ರಿಗಳ ಬೆಲೆಗಳಲ್ಲಿ ನಿರಂತರ ಏರಿಕೆ ಕೇವಲ ಗೋದಿಗೆ ಸೀಮಿತವಾಗಿಲ್ಲ. ಈ ವರ್ಷದ ಆರಂಭದಲ್ಲಿ ಶೇ.5ರಷ್ಟಿದ್ದ ತರಕಾರಿಗಳ ಹಣದುಬ್ಬರ ದರ ಜೂನ್‌ನಲ್ಲಿ ಶೇ.17.4ಕ್ಕೆ ಏರಿಕೆಯಾಗಿದೆ. ತರಕಾರಿಗಳ ಬೆಲೆಗಳ ಈ ಏರಿಕೆಗೆ ಅಧಿಕ ಇಂಧನ ದರಗಳಿಂದಾಗಿ ಹೆಚ್ಚಿರುವ ಸಾಗಾಣಿಕೆ ವೆಚ್ಚ ಪ್ರಮುಖ ಕಾರಣವಾಗಿದೆ. ಉಷ್ಣ ಮಾರುತವೂ ತರಕಾರಿ ಬೆಲೆಗಳಲ್ಲಿ ಅಸಾಧಾರಣ ಏರಿಕೆಗೆ ಕೊಡುಗೆಯನ್ನು ನೀಡಿದೆ. ಹಲವಾರು ಇತರ ಆಹಾರ ಸಾಮಗ್ರಿಗಳ ಬೆಲೆಗಳೂ ಕಳೆದ ಕೆಲವು ತಿಂಗಳುಗಳಿಂದ ಹೆಚ್ಚುತ್ತಲೇ ಇವೆ.
 
ಜಾಗತಿಕ ಮಾರುಕಟ್ಟೆಯಲ್ಲಿ ತಾಳೆಎಣ್ಣೆ ಬೆಲೆಗಳು ಏರಿಕೆಯಾಗಿದ್ದರಿಂದ ಕಳೆದ ವರ್ಷದ ಹೆಚ್ಚಿನ ಅವಧಿಯಲ್ಲಿ ಖಾದ್ಯ ತೈಲಗಳ ಬೆಲೆಗಳು ಗಗನಚುಂಬಿಯಾಗಿದ್ದವು. ಈ ಪ್ರಮುಖ ಆಹಾರ ಸಾಮಗ್ರಿಯ ಹಣದುಬ್ಬರದಲ್ಲಿ ಕೊಂಚ ಇಳಿಕೆಯಾಗಿದ್ದರೆ,ಕಳೆದ ಆರು ತಿಂಗಳುಗಳಲ್ಲಿ ಹಣದುಬ್ಬರವು ಸುಮಾರು ಶೇ.19ರಿಂದ ಶೇ.9.4ಕ್ಕೆ ತಗ್ಗಿದೆ ಎನ್ನುವುದನ್ನು ಗಮನಿಸಬೇಕು. ತಿಂಗಳುಗಳ ಕಾಲ ಎರಡಂಕಿಗಳಲ್ಲಿಯೇ ಉಳಿದುಕೊಂಡಿದ್ದ ವಾರ್ಷಿಕ ಹಣದುಬ್ಬರ ದರವು ಈಗ ಶೇ.10ಕ್ಕೆ ತಗ್ಗಿದೆಯಾದರೂ ಖಂಡಿತವಾಗಿಯೂ ಅದು ಪರಿಹಾರವಲ್ಲ. 

ಭಾರತೀಯ ಅಡಿಗೆಯಲ್ಲಿ ಖಾದ್ಯತೈಲವು ಅತ್ಯಗತ್ಯವಾಗಿರುವುದರಿಂದ ಕೌಟುಂಬಿಕ ಬಜೆಟ್‌ಗಳು ಭಾರೀ ಹೊಡೆತವನ್ನು ಅನುಭವಿಸುತ್ತಿವೆ. ಇತರ ಸಾಮಗ್ರಿಗಳ ಬೆಲೆಗಳೂ ಅಧಿಕವಾಗಿರುವಾಗ ಇದು ಇನ್ನಷ್ಟು ನೋವನ್ನುಂಟು ಮಾಡುತ್ತದೆ.

ಸಂಬಾರ ಪದಾರ್ಥಗಳ ಬೆಲೆಗಳಲ್ಲಿಯೂ ತೀವ್ರ ಏರಿಕೆಯಾಗಿದೆ. ಜನವರಿಯಲ್ಲಿ ಶೇ.4.7ರಷ್ಟಿದ್ದ ಬೆಲೆ ಹಣದುಬ್ಬರವು ಜೂನ್ ವೇಳೆಗೆ ಶೇ.11ಕ್ಕೆ ಹೆಚ್ಚಿದೆ. ಸಂಬಾರ ಪದಾರ್ಥಗಳು ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದರೂ ಈ ಬೆಲೆಏರಿಕೆ ಈಗಲೂ ಕುಟುಂಬಗಳ ಪಾಲಿಗೆ ದುಬಾರಿಯಾಗಿದೆ.

ಪ್ರೋಟಿನ್‌ನ ಪ್ರಮುಖ ಮೂಲಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಮಾಂಸ ಮತ್ತು ಮೀನು ದುಬಾರಿಯಾಗಿವೆ. ಜನವರಿಯಲ್ಲಿ ಶೇ.5.5ರಷ್ಟಿದ್ದ ಮಾಂಸ ಮತ್ತು ಮೀನಿನ ಬೆಲೆಗಳ ಹಣದುಬ್ಬರ ಜೂನ್ ಅಂತ್ಯಕ್ಕೆ ಶೇ.8.6ಕ್ಕೆ ಏರಿಕೆಯಾಗಿದ್ದರೆ,ಹಾಲು ಮತ್ತು ಹಾಲಿನ ಉತ್ಪನ್ನಗಳ ಹಣದುಬ್ಬರ ದರ ಈ ಅವಧಿಯಲ್ಲಿ ಶೆ.4.1ರಿಂದ ಶೇ.6.1ಕ್ಕೆ ಹೆಚ್ಚಳವಾಗಿದೆ.
 
ಮುಖ್ಯವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಒಳಗೊಂಡಿರುವ ಸರಕುಗಳ ಗುಂಪು ಅತ್ಯಂತ ಹೆಚ್ಚಿನ ಹಣದುಬ್ಬರವನ್ನು ತೋರಿಸುತ್ತಿರುವ ಇನ್ನೊಂದು ವರ್ಗವಾಗಿದೆ. ಅದು ಈ ಆರು ತಿಂಗಳ ಅವಧಿಯಲ್ಲಿ ಶೇ.9.3ರಿಂದ ಶೇ.10.4ಕ್ಕೆ ಏರಿಕೆಯಾಗಿದೆ. ಈಗಾಗಲೇ ಉಲ್ಲೇಖಿಸಿರುವಂತೆ ಇದು ಇತರ ಸರಕುಗಳ,ವಿಶೇಷವಾಗಿ ಬೇಗನೆ ಕೊಳೆಯುವ ಸಾಮಗ್ರಿಗಳ ಬೆಲೆಗಳ ಏರಿಕೆಗೆ ಮುಖ್ಯ ಕಾರಣವಾಗಿದೆ.
              
ಸರಕಾರವೇನು ಮಾಡಬಹುದು?

ನರೇಂದ್ರ ಮೋದಿ ಸರಕಾರವು ಬೆಲೆಏರಿಕೆಯನ್ನು ನಿಯಂತ್ರಿಸುವುದನ್ನು ಹೆಚ್ಚುಕಡಿಮೆ ಕೈಬಿಟ್ಟಿದೆ. ಬೆಲೆ ನಿಯಂತ್ರಣ ಕ್ರಮಗಳಿಗೆ ಚಾಲನೆ ನೀಡುವ ಯಾವುದೇ ಮಹತ್ವದ ನೀತಿಯನ್ನು ಪ್ರಕಟಿಸಲಾಗಿಲ್ಲ. ಗೋದಿ ಮತ್ತು ನಂತರ ಗೋದಿಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿರುವುದು ಏಕೈಕ ಪ್ರಕಟಿತ ಕ್ರಮವಾಗಿದೆ,ಆದಾಗ್ಯೂ ವಿವಿಧ ವಿನಾಯಿತಿಗಳಡಿ ಗೋದಿ ಹಿಟ್ಟಿನ ರಫ್ತು ಮುಂದುವರಿದಿದೆ ಎನ್ನುವುದನ್ನು ವರದಿಗಳು ಸೂಚಿಸುತ್ತಿವೆ.

ಬೆಲೆಏರಿಕೆಯು ಯಾವುದೇ ದೇಶದ ನಿಯಂತ್ರಣವನ್ನು ಮೀರಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ತನ್ಮೂಲಕ ಅವರು ಈ ನಿಷ್ಕ್ರಿಯತೆಯನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇತರ ವಿವಿಧ ದೇಶಗಳಲ್ಲಿ ಹಣದುಬ್ಬರವು ಇನ್ನೂ ಹೆಚ್ಚಿದೆ ಎಂದು ಬೆಟ್ಟು ಮಾಡುವ ಮೂಲಕ ಬಹುಶಃ ಅವರು ಭಾರತೀಯರು ಈ ಬಗ್ಗೆ ಸಂತೋಷ ಪಡಬೇಕು ಎನ್ನುವುದನ್ನು ಧ್ವನಿಸಿದ್ದಾರೆ.
 
ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್)ಯಲ್ಲಿ ಲಭ್ಯವಿರುವ ಆಹಾರ ಸಾಮಗ್ರಿಗಳ ಸಂಖ್ಯೆಯನ್ನು ಹೆಚ್ಚಿಸುವುದು,ಹೊರಗುಳಿದಿರುವ ಹೆಚ್ಚಿನ ಕುಟುಂಬಗಳ ಸೇರ್ಪಡೆಗಾಗಿ ಪಿಡಿಎಸ್ ವ್ಯಾಪ್ತಿಯನ್ನು ವಿಸ್ತರಿಸುವುದು, ಇಂಧನ ಬೆಲೆಗಳನ್ನು ತಗ್ಗಿಸುವುದು,ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಈಗಲೂ ಕೋವಿಡ್ ಪರಿಣಾಮಗಳಿಂದ ನರಳುತ್ತಿರುವ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವುದು ಸೇರಿದಂತೆ ಬೆಲೆಏರಿಕೆಯನ್ನು ನಿಯಂತ್ರಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳಲು ಸರಕಾರದ ನಿರಾಕರಣೆಯನ್ನು ವಿಧಿವಾದದ ಈ ಮಾರಕ ಹೇಳಿಕೆಯು ಬಚ್ಚಿಡುತ್ತಿದೆ. ಈ ತಕ್ಷಣದ ಕ್ರಮಗಳ ಜೊತೆಗೆ ಎಣ್ಣೆಬೀಜಗಳು ಮತ್ತು ಇತರ ಕೃಷಿ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ಕಾರ್ಯಸಾಧ್ಯ ಕ್ರಮಗಳನ್ನು ಸರಕಾರವು ಆರಂಭಿಸಬಹುದು.

ಈ ನಿಟ್ಟಿನಲ್ಲಿ ಯೋಚಿಸುವ ಬದಲು ಮೊಸರು, ಲಸ್ಸಿ, ಪನೀರ್,ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಗೋದಿ, ಅಕ್ಕಿ, ಹಿಟ್ಟು ಇತ್ಯಾದಿಗಳಂತಹ ದಿನಬಳಕೆಯ ಹಲವಾರು ಸಾಮಗ್ರಿಗಳ ಮೇಲಿನ ಜಿಎಸ್‌ಟಿ ವಿನಾಯಿತಿಯನ್ನು ಹಿಂದೆಗೆದುಕೊಂಡ ಇತ್ತೀಚಿನ ನಿರ್ಧಾರವು ಸರಕಾರದ ಧೋರಣೆಯನ್ನು ಬಯಲುಗೊಳಿಸಿದೆ. ಈ ವಿನಾಯಿತಿ ಹಿಂದೆಗೆದುಕೊಳ್ಳುವಿಕೆಯು ಈಗಾಗಲೇ ದುಬಾರಿಯಾಗಿರುವ ಈ ಆಹಾರ ಸಾಮಗ್ರಿಗಳ ಬೆಲೆಗಳನ್ನು ಇನ್ನೂ ಶೇ.5ರಷ್ಟು ಹೆಚ್ಚಿಸಲಿದೆ.

ಕೃಪೆ: Newsclick.in

Writer - ಸುಬೋಧ್ ವರ್ಮಾ (newsclick.in)

contributor

Editor - ಸುಬೋಧ್ ವರ್ಮಾ (newsclick.in)

contributor

Similar News