ಆರೋಪಿಯನ್ನು ಗಲ್ಲಿಗೇರಿಸುವ ಕಾನೂನಿನ ಬಳಿಕ ಅತ್ಯಾಚಾರದ ನಂತರ ಹತ್ಯೆಗಳು ಹೆಚ್ಚುತ್ತಿವೆ: ರಾಜಸ್ಥಾನ ಸಿಎಂ

Update: 2022-08-07 17:42 GMT

ಹೊಸದಿಲ್ಲಿ, ಆ.7: ಆರೋಪಿಯನ್ನು ಗಲ್ಲಿಗೇರಿಸುವ ಕಾನೂನು ಜಾರಿಗೊಂಡ ಬಳಿಕ ದೇಶಾದ್ಯಂತ ಅತ್ಯಾಚಾರದ ನಂತರ ಹತ್ಯೆಗಳ ಘಟನೆಗಳು ಹೆಚ್ಚುತ್ತಿವೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ದಿಲ್ಲಿಯಲ್ಲಿ ಶುಕ್ರವಾರ ಬೆಲೆ ಏರಿಕೆ ಮತ್ತು ನಿರುದ್ಯೋಗದ ಕುರಿತು ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಗೆಹ್ಲೋಟ್,ನಿರ್ಭಯಾ ಪ್ರಕರಣದ ಬಳಿಕ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂಬ ಬೇಡಿಕೆಯು ಬಲವನ್ನು ಪಡೆದುಕೊಂಡಿತ್ತು ಮತ್ತು ಬಳಿಕ ಆ ಬಗ್ಗೆ ಕಾನೂನು ಬಂದಿದೆ. ಆಗಿನಿಂದ ಅತ್ಯಾಚಾರದ ಬಳಿಕ ಸಂತ್ರಸ್ತೆಯನ್ನು ಕೊಲ್ಲುವ ಪ್ರಕರಣಗಳು ಹೆಚ್ಚಾಗಿವೆ. ಇದು ದೇಶದಲ್ಲಿ ಕಂಡು ಬರುತ್ತಿರುವ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಹೇಳಿದರು.
ಸಂತ್ರಸ್ತೆಯು ತನ್ನ ವಿರುದ್ಧ ಸಾಕ್ಷಿಯಾಗುತ್ತಾಳೆ ಎಂದು ಆರೋಪಿಯು ಭಾವಿಸುತ್ತಾನೆ. ಇಂತಹ ಸ್ಥಿತಿಯಲ್ಲಿ ಸಂತ್ರಸ್ತೆಯನ್ನು ಕೊಲ್ಲುವುದೇ ಸರಿ ಎಂದು ಆತ ನಿರ್ಧರಿಸುತ್ತಾನೆ. ದೇಶಾದ್ಯಂತದಿಂದ ಬರುತ್ತಿರುವ ವರದಿಗಳು ಅಪಾಯಕಾರಿ ಪ್ರವೃತ್ತಿಯನ್ನು ತೋರಿಸುತ್ತಿವೆ. ಈ ಸ್ಥಿತಿಯು ದೇಶಕ್ಕೆ ಒಳ್ಳೆಯದಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News