​ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ: ಜಾಮೀನು ಬಾಂಡ್ ಸಲ್ಲಿಸದೆ ನ್ಯಾಯಾಲಯದಿಂದ ಉ.ಪ್ರ. ಸಚಿವ ನಾಪತ್ತೆ

Update: 2022-08-07 18:05 GMT
ರಾಕೇಶ್ ಸಚನ್

ಕಾನ್ಪುರ, ಆ. 7: ಮೂರು ದಶಕಗಳ ಹಳೆಯ ಶಸಸ್ತ್ರ ಕಾಯ್ದೆ ಪ್ರಕರಣದಲ್ಲಿ ಉತ್ತರಪ್ರದೇಶದ ಸಚಿವ ರಾಕೇಶ್ ಸಚನ್ ದೋಷಿ ಎಂದು ಇಲ್ಲಿನ ನ್ಯಾಯಾಲಯ ಆಗಸ್ಟ್ 6ರಂದು ಪರಿಗಣಿಸಿದ ಬಳಿಕ ಸಚಿವರು ಜಾಮೀನು ಬಾಂಡ್ ಸಲ್ಲಿಸದೆ ನ್ಯಾಯಾಲಯದಿಂದ ನಾಪತ್ತೆಯಾಗಿದ್ದಾರೆ. ಆದರೆ, ನಾಪತ್ತೆ ಆರೋಪವನ್ನು ನಿರಾಕರಿಸಿರುವ ಸಚನ್, ತನ್ನ ಪ್ರಕರಣ ‘‘ಅಂತಿಮ ತೀರ್ಪಿಗಾಗಿ ಪಟ್ಟಿ ಮಾಡಿಲ್ಲ’’ ಎಂದು ಪ್ರತಿಪಾದಿಸಿದ್ದಾರೆ.

ದೋಷಿ ಎಂದು ಪರಿಗಣಿಸಿ ಬಳಿಕ ನ್ಯಾಯಾಲಯ ಶಿಕ್ಷೆಯ ಪ್ರಮಾಣದ ಕುರಿತು ವಾದ ಮಂಡಿಸುವಂತೆ ಪ್ರತಿವಾದಿ ಪರ ವಕೀಲರಿಗೆ ಸೂಚಿಸಿದ ಕೂಡಲೇ ಸಚನ್ ನಾಪತ್ತೆಯಾಗಿದ್ದಾರೆ ಎಂದು ಪ್ರಾಸಿಕ್ಯೂಷನ್ ಅಧಿಕಾರಿ (ಪಿಒ) ರಿಚಾ ಗುಪ್ತಾ ಹೇಳಿದ್ದಾರೆ.

ಸಚನ್ ಅವರು ಜಾಮೀನು ಬಾಂಡ್ ಸಲ್ಲಿಸದೆ ತೆರಳಿದ್ದಾರೆ. ಇದಕ್ಕೆ ಸಂಬಂಧಿಸಿ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗುವುದು ಎಂದು ಗುಪ್ತಾ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನ್ಪುರದ ಪೊಲೀಸ್ ಆಯುಕ್ತ ಬಿ.ಪಿ. ಜೋಗ್ದಾಂದ ಅವರು ಸಚನ್ ವಿರುದ್ಧ ಲಿಖಿತ ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದ್ದಾರೆ. ಆದರೆ, ದೂರಿನ ಅಂಶದ ಬಗ್ಗೆ ವಿವಿರ ನೀಡಿಲ್ಲ.

ಹಿರಿಯ ನ್ಯಾಯಾಂಗ ಅಧಿಕಾರಿಗಳೊಂದಿಗೆ ಮ್ಯಾರಥಾನ್ ಸಭೆ ನಡೆಸಿದ ಬಳಿಕ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ಬಿಡುವುದರಿಂದ ನಿರ್ವಹಣಾಧಿಕಾರಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News