ಸಮರಾಭ್ಯಾಸ ಸ್ಥಗಿತ: ಚೀನಾಕ್ಕೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಆಗ್ರಹ

Update: 2022-08-07 18:18 GMT

ವಾಷಿಂಗ್ಟನ್, ಆ.7: ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದ ಬಳಿಕ ಆ ದೇಶದ ಬಳಿ ಚೀನಾ ನಡೆಸುತ್ತಿರುವ ಸಮರಾಭ್ಯಾಸವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಆಗ್ರಹಿಸಿದೆ. 

ಚೀನಾದ ತೀವ್ರ ಆಕ್ಷೇಪ, ಬೆದರಿಕೆಯ ಮಧ್ಯೆಯೂ ಪೆಲೋಸಿ ಆಗಸ್ಟ್ 2ರಂದು ತೈವಾನ್ಗೆ ಭೇಟಿ ನೀಡಿದ್ದರು. ಪೆಲೋಸಿ ಭೇಟಿಯಿಂದ ಕೆರಳಿದ್ದ ಚೀನಾ, ತೈವಾನ್ ಸುತ್ತಮುತ್ತ ಸಮುದ್ರದಲ್ಲಿ ಮತ್ತು ಆಗಸದಲ್ಲಿ ಸಮರಾಭ್ಯಾಸಕ್ಕೆ ಚಾಲನೆ ನೀಡಿತ್ತು. ಈ ವೇಳೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ ಉಡಾಯಿಸಿದ್ದು ಕೆಲವು ಕ್ಷಿಪಣಿಗಳು ತೈವಾನ್ ಮೇಲಿಂದ ಹಾದುಹೋಗಿವೆ ಎಂದು ವರದಿಯಾಗಿತ್ತು. 

ತೈವಾನ್ ಸುತ್ತಮುತ್ತ ಚೀನಾ ನಡೆಸುತ್ತಿರುವ ಅಸ್ಥಿರಗೊಳಿಸುವ ಮತ್ತು ಅಪಾಯಕಾರಿ ಕ್ರಮಗಳಿಂದ ಅಮೆರಿಕ ಮತ್ತದರ ಮಿತ್ರರು ತೀವ್ರ ಆತಂಕಿತರಾಗಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಶನಿವಾರ ಹೇಳಿದ್ದಾರೆ. ತೈವಾನ್ ಜಲಸಂಧಿಯುದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ತೈವಾನ್ ಜಲಸಂಧಿಯಲ್ಲಿ ನಡೆಯುವ ಘಟನೆಗಳು ಸಂಪೂರ್ಣ ವಲಯದ ಮೇಲೆ ಪರಿಣಾಮ ಬೀರುತ್ತವೆ. ಹಲವು ರೀತಿಯಲ್ಲಿ ಇದು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ, ಯಾಕೆಂದರೆ ದಕ್ಷಿಣ ಚೀನಾ ಸಮುದ್ರದ ರೀತಿ ತೈವಾನ್ ಜಲಸಂಧಿಯೂ ಪ್ರಮುಖ ಜಲಮಾರ್ಗವಾಗಿದೆ. ಈ ಜಲಮಾರ್ಗದ ಮೂಲಕ ಪ್ರತೀ ವರ್ಷ ವಿಶ್ವದ 90% ಬೃಹತ್ ಹಡಗುಗಳು ಸಂಚರಿಸುತ್ತವೆ ಎಂದು ವರ್ಚುವಲ್ ವೇದಿಕೆಯಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಬ್ಲಿಂಕೆನ್ ಹೇಳಿದ್ದಾರೆ. 

ಕ್ಷಿಪಣಿ ಉಡಾಯಿಸುವ ಮೂಲಕ ಚೀನಾ ಮತ್ತೊಂದು ಬೇಜವಾಬ್ದಾರಿ ಕೃತ್ಯ ಎಸಗಿದ್ದು ಉಭಯ ದೇಶಗಳು(ಅಮೆರಿಕ-ಚೀನಾ) ಜತೆಯಾಗಿ ಕಾರ್ಯನಿರ್ವಹಿಸುವ 8 ವಿಭಿನ್ನ ಕ್ಷೇತ್ರಗಳನ್ನು ಈ ಕೃತ್ಯ ಮುಚ್ಚಿಬಿಟ್ಟಿದೆ. ಅವುಗಳಲ್ಲಿ ತಪ್ಪು ಗ್ರಹಿಕೆ ಮತ್ತು ಬಿಕ್ಕಟ್ಟನ್ನು ನಿವಾರಿಸುವ ಮಿಲಿಟರಿಯಿಂದ ಮಿಲಿಟರಿಗೆ ನಡೆಯುವ ಸಂವಹನಗಳು, ಅಪರಾಧ ನಿಗ್ರಹ ಮತ್ತು ಮಾದಕವಸ್ತು ಸಾಗಣೆ ನಿಗ್ರಹಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಸಹಕಾರ ಸೇರಿದೆ ಎಂದವರು ಹೇಳಿದ್ದಾರೆ.

ರಕ್ಷಣಾ ಸಭೆಗಳು ಮತ್ತು ನಿರ್ಣಾಯಕ ಹವಾಮಾನ ಸಹಕಾರ ಒಪ್ಪಂದಕ್ಕೆ ಸಂಬಂಧಿಸಿ ಅಮೆರಿಕದ ಜತೆ ಸಂಪರ್ಕ ಕಡಿದುಕೊಳ್ಳುವ ಚೀನಾದ ನಿರ್ಧಾರದ ಬಗ್ಗೆ ಉಲ್ಲೇಖಿಸಿದ ಬ್ಲಿಂಕೆನ್, ವಿಶ್ವದ ಅತೀ ಹೆಚ್ಚಿನ ಇಂಗಾಲ ಹೊರಸೂಸುವ ದೇಶ ಈಗ ಹವಾಮಾನ ಬಿಕ್ಕಟ್ಟಿನ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುತ್ತಿದೆ.

ಹವಾಮಾನ ಸಹಕಾರ ಸಂಬಂಧವನ್ನು ರದ್ದುಗೊಳಿಸುವುದು ಅಮೆರಿಕವನ್ನು ಶಿಕ್ಷಿಸಿದಂತೆ ಆಗುವುದಿಲ್ಲ, ಇದು ಇಡೀ ವಿಶ್ವವನ್ನು, ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳನ್ನು ಶಿಕ್ಷಿಸುತ್ತದೆ ಎಂದ ಬ್ಲಿಂಕೆನ್, ತಪ್ಪು ಮಾಹಿತಿ ಮತ್ತು ತಪ್ಪು ತಿಳುವಳಿಕೆಯಿಂದ ಉಂಟಾಗುವ ಉಲ್ಬಣವನ್ನು ತಪ್ಪಿಸಲು ಅಮೆರಿಕವು ಚೀನಾದೊಂದಿಗಿನ ಸಂವಹನ ಮಾರ್ಗವನ್ನು ಮುಕ್ತವಾಗಿಸಿದೆ. ಇದೇ ವೇಳೆ ತೈವಾನ್ಗೆ ಬೆಂಬಲ ಮುಂದುವರಿಸಯವ ಜತೆಗೆ ಜಲಸಂಧಿಯುದ್ದಕ್ಕೂ ಶಾಂತಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News