ಗಾಝಾ ಹಿಂಸಾಚಾರ : 6 ಮಕ್ಕಳ ಸಹಿತ 24 ಮಂದಿ ಸಾವು: ವರದಿ

Update: 2022-08-07 18:30 GMT

ಗಾಝಾ, ಆ.7: ಆಕ್ರಮಿತ ಪಶ್ಚಿಮ ದಂಡೆಯ ಗಾಝಾ ಪಟ್ಟಿಯಲ್ಲಿ ಪೆಲೆಸ್ತೀನ್ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೇರಿದ್ದು, ಇದರಲ್ಲಿ 6 ಮಕ್ಕಳೂ ಸೇರಿದ್ದಾರೆ ಎಂದು ಪೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. 

ಶುಕ್ರವಾರ ಆರಂಭಗೊಂಡಿರುವ ವಾಯುದಾಳಿಯಲ್ಲಿ ಇದುವರೆಗೆ 24 ಮಂದಿ ಮೃತಪಟ್ಟಿದ್ದು 204 ಮಂದಿ ಗಾಯಗೊಂಡಿದ್ದಾರೆ ಎಂದು ಪೆಲೆಸ್ತೀನ್ನ ಆರೋಗ್ಯ ಇಲಾಖೆ ದೃಢಪಡಿಸಿದೆ. ಆದರೆ ಉತ್ತರ ಗಾಝಾದ ಜಬಾಲಿಯಾ ನಗರದಲ್ಲಿ ಹಲವು ಮಕ್ಕಳು ಸಾವನ್ನಪ್ಪಲು ಇಸ್ಲಾಮಿಕ್ ಜಿಹಾದಿ ಉಗ್ರರು ನಡೆಸಿದ ರಾಕೆಟ್ ದಾಳಿ ಕಾರಣ ಎಂಬುದಕ್ಕೆ ತನ್ನ ಬಳಿ ಬಲವಾದ ಪುರಾವೆಗಳಿವೆ ಎಂದು ಇಸ್ರೇಲ್ ಹೇಳಿದೆ.

ಈ ಕಾರ್ಯಾಚರಣೆ ಒಂದು ವಾರ ಮುಂದುವರಿಯಬಹುದು ಎಂದು ಇಸ್ರೇಲ್ ಸೇನೆ ಘೋಷಿಸಿದೆ. ಈ ಮಧ್ಯೆ, ಹಿಂಸಾಚಾರ ಅಂತ್ಯದ ನಿಟ್ಟಿನಲ್ಲಿ ಉಭಯ ಪಡೆಯ ಜತೆ ನಿರಂತರ ಮಾತುಕತೆ ನಡೆಸುತ್ತಿರುವುದಾಗಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾ ಅಲ್ಸಿಸಿ ಹೇಳಿದ್ದಾರೆ. ಇಸ್ರೇಲ್ನ ವಾಯುದಾಳಿಯಿಂದ ರಕ್ಷಣೆ ಪಡೆಯಲು ನಾಗರಿಕರು ವಾಯುದಾಳಿ ಶೆಲ್ಟರ್ಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಇಸ್ರೇಲ್ ಗಡು ದಾಟುವನ್ನು ಮುಚ್ಚಿರುವುದರಿಂದ ಗಾಝಾ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಕ್ಕೆ ಇಂಧನದ ಕೊರತೆಯಾಗಿದ್ದು ಕಾರ್ಯಸ್ಥಗಿತಗೊಂಡಿದೆ. ಆದ್ದರಿಂದ ಮುಂದಿನ ಕೆಲ ದಿನ ಪ್ರಮುಖ ಸೇವೆ ಸ್ಥಗಿತಗೊಳ್ಳಲಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಗಾಝಾ ನಗರದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News