50ನೇ ವರ್ಷದಲ್ಲಿ ಹಾವನೂರು ಆಯೋಗ

Update: 2022-08-08 05:26 GMT

ಹಾವನೂರು ಆಯೋಗ ರಚನೆಯಾಗಿ, 50 ವರ್ಷವೇ ಕಳೆದಿದ್ದರೂ,ಅದರ ವರದಿ ಉಂಟು ಮಾಡಿದ ಸಂಚಲನ ಹಾಗೂ ಪರಿಣಾಮದ ಕಾರಣ, ಅದು ಕರ್ನಾಟಕದ ಜನಮಾನಸದಲ್ಲಿ ಇಂದಿಗೂ ಉಳಿದಿದೆ!

‘‘ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವಂತಹ ಅವಕಾಶ ಸಂವಿಧಾನದಲ್ಲಿ ಇಲ್ಲ. ಕದಾಚಿತ್ ಈ ವ್ಯವಸ್ಥೆಯನ್ನು ನಿರ್ಮೂಲ ಮಾಡಿದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇನ್ನಿತರ ಕಾನೂನುಗಳು ಈಗಿರುವುದಕ್ಕಿಂತ ಅರ್ಧಭಾಗದಷ್ಟು ಕಡಿಮೆಯಾಗುತ್ತವೆ’’.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ಸ್ವತಃ ಜಾತಿ ವ್ಯವಸ್ಥೆಯ ಕಹಿಯನ್ನು ಅನುಭವಿಸಿದ್ದ ಎಲ್.ಜಿ.ಹಾವನೂರು ತಾವು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮೇಲಿನ ಮಾತುಗಳನ್ನು ದಾಖಲಿಸಿ ಜಾತಿ ವ್ಯವಸ್ಥೆಗೆ ಕನ್ನಡಿ ಹಿಡಿದಿರುವರು.

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಪರಿಣಾಮ ತಳಸಮುದಾಯಗಳು ಅನುಭವಿಸುತ್ತಿರುವ ನೋವು-ಯಾತನೆ, ಅಸಮಾನತೆ, ತರತಮ ಭಾವಗಳನ್ನು ನಿರ್ಮೂಲ ಮಾಡುವ ದಿಸೆಯಲ್ಲಿ ನಿವಾರಣಾ ಕ್ರಮಗಳನ್ನು ಸಂವಿಧಾನದಲ್ಲಿ ಬಾಬಾಸಾಹೇಬರು ಅಳವಡಿಸಿರುವರು. ಆದರೆ ಜಾತಿ ವ್ಯವಸ್ಥೆಯನ್ನು ಅವುಗಳಿಂದ ಮೂಲೋತ್ಪಾಟನೆ ಮಾಡಲು ಅವಕಾಶವಿಲ್ಲ! ಹಾಗೊಂದು ವೇಳೆ, ಜಾತಿ ವ್ಯವಸ್ಥೆ ನಿರ್ಮೂಲ ಆದಲ್ಲಿ, ಅಂತಹ ವ್ಯವಸ್ಥೆಯ ದುಷ್ಪರಿಣಾಮದಿಂದ ಉಂಟಾಗಿರುವ ಅಸಮತೋಲನವನ್ನು ಪರಿಹರಿಸಲು, ಈಗಿರುವ ಅರ್ಧದಷ್ಟು ಕಾನೂನುಗಳು ಅಂತ್ಯಗೊಳ್ಳುತ್ತವೆ ಎಂಬುದೇ ಆ ಮಾತುಗಳಲ್ಲಿರುವ ಧ್ವನಿ ಮತ್ತು ಸಾರಾಂಶ.ಅಷ್ಟೇ ಅಲ್ಲದೆ ಅವು ದಾರ್ಶನಿಕ ಸ್ವರೂಪವನ್ನೂ ಪಡೆದುಕೊಂಡಿವೆ.

(adequate) ಸ್ವತಂತ್ರ ಭಾರತದಲ್ಲಿ ಸಂವಿಧಾನ ಅನುಷ್ಠಾನಗೊಂಡ ನಂತರ, ಉದ್ಯೋಗದಲ್ಲಿ ಸಾಕಷ್ಟು ಪ್ರಾತಿನಿಧ್ಯ ಅನುಚ್ಛೇದ 16(4) ಪಡೆಯದ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗುವ ಪರಿಭಾಷೆ ಎಂಬುದು ಇರಲಿಲ್ಲ.1951ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ 15(4) 29(2) ವಿಧಿಗಳನ್ನು ಸೇರ್ಪಡೆ ಮಾಡಲಾಯಿತು. ತಿದ್ದುಪಡಿ ಅನ್ವಯ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರನ್ನು ‘ಹಿಂದುಳಿದ ವರ್ಗ’ ಎಂದು ಹೆಸರಿಸಲಾಯಿತು.

ಹಿಂದುಳಿದ ವರ್ಗಗಳನ್ನು ಗುರುತಿಸುವ ದಿಸೆಯಲ್ಲಿ ಕರ್ನಾಟಕದ ಅಂದಿನ ಸರಕಾರಗಳು, ಸಂವಿಧಾನ ಜಾರಿ ನಂತರದ ಮೊದಲ ಹತ್ತು ವರ್ಷಗಳಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಎಂಬುದು ನಿಜ. ಆದರೆ, ಪುನರ್ವಿಂಗಡಣೆಗೆ ಮುನ್ನ ಕರ್ನಾಟಕ ಐದು ಭಾಗಗಳಾಗಿ ಹಂಚಿಹೋಗಿತ್ತು. ಹಾಗಾಗಿ ಈ ದಿಸೆಯಲ್ಲಿ ಸರಕಾರ ಕ್ರಮ ತೆಗೆದುಕೊಳ್ಳದಿರಬಹುದು. 1960 ರಲ್ಲಿ ರಚಿತವಾದ ಡಾ.ನಾಗನಗೌಡ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಜಾರಿಗೊಳಿಸಿದ ಮೀಸಲಾತಿ ಆದೇಶವನ್ನು, ಸರ್ವೋಚ್ಚ ನ್ಯಾಯಾಲಯ, ಜಾತಿಯು ಸಮಾಜದೊಡನೆ ಅದು ಹೊಂದಿರುವ ಬಾಧ್ಯ ಸ್ಥಾನವನ್ನಷ್ಟೇ ಮಾನದಂಡವನ್ನಾಗಿರಿಸಿಕೊಂಡು ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲಾಗಿದೆ ಎಂದು ಅಸಿಂಧುಗೊಳಿಸಿತು.ಹಾಗೂ ಇದೇ ಸಂದರ್ಭದಲ್ಲಿ ಮೀಸಲಾತಿಯ ಗರಿಷ್ಠ ಕೋಟಾ ಮಿತಿಯನ್ನೂ ಕೂಡ ನ್ಯಾಯಾಲಯ ನಿಗದಿಗೊಳಿಸಿತು( ಎಂ. ಆರ್. ಬಾಲಾಜಿ - ಮೈಸೂರು ರಾಜ್ಯ).ಆ ನಂತರ ಹತ್ತು ವರ್ಷಗಳ ಕಾಲ ಯಾವುದೇ ಕ್ರಮ ಕೈಗೊಳ್ಳದೆ ಸರಕಾರ ದಿವ್ಯ ಮೌನಕ್ಕೆ ಶರಣಾಗಿದ್ದು ಕೂಡಾ ಗಮನಿಸಬೇಕಾದ ವಿಷಯವೇ.

1972 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ, ಸಾಮಾಜಿಕ ನ್ಯಾಯ ತತ್ವಕ್ಕೆ ಬದ್ಧರಾಗಿದ್ದ ಡಿ.ದೇವರಾಜ ಅರಸು, ಅದೇ ವರ್ಷ ಆಗಸ್ಟ್ 8ರಂದು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಮೊದಲನೇ ಹಿಂದುಳಿದ ವರ್ಗಗಳ ಆಯೋಗ ರಚಿಸಿ,ಅದರ ಅಧ್ಯಕ್ಷರನ್ನಾಗಿ ಹೆಸರಾಂತ ವಕೀಲ ಮತ್ತು ಹಿಂದುಳಿದ ವರ್ಗಗಳ ಪರ ಹೋರಾಟದಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿದ್ದ ಎಲ್.ಜಿ.ಹಾವನೂರ್ ಅವರನ್ನು ನೇಮಕ ಮಾಡಿದರು.ಸುಮಾರು ಮೂರು ವರ್ಷಗಳ ಕಾಲ ಶ್ರಮಿಸಿ ಅನೇಕ ಶಿಫಾರಸು ಗಳನ್ನೊಳಗೊಂಡ ವರದಿಯನ್ನು ಹಾವನೂರು ಸರಕಾರಕ್ಕೆ ಸಲ್ಲಿಸಿದರು.

ವರದಿ ಸಿದ್ಧಪಡಿಸುವಲ್ಲಿ ಆಯೋಗವು, ಮೊದಲನೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ( ಕಾಕಾ ಕಾಲೇಲ್ಕರ್ )ದ ವರದಿ ಹಾಗೂ ಕರ್ನಾಟಕದ ಡಾ. ನಾಗನಗೌಡ ಸಮಿತಿಯ ಶಿಫಾರಸುಗಳನ್ನು ಆಧರಿಸಿದ ಮೀಸಲಾತಿಯ ಸರಕಾರದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಅಸಿಂಧುಗೊಳಿಸಿ ಹೊರಡಿಸಿದ ತೀರ್ಪನ್ನು ಕೂಲಂಕಶವಾಗಿ ಅಧ್ಯಯನ ಕೈಗೊಂಡಿದೆ.ಹಾಗೆಯೇ ಕಾಲಕಾಲಕ್ಕೆ ಬಂದ ನ್ಯಾಯಾಲಯಗಳ ತೀರ್ಪುಗಳು ಮತ್ತು ಸಂವಿಧಾನದ ತಿದ್ದುಪಡಿಗಳು ಇವೇ ಮುಂತಾದ ಪ್ರಮುಖ ವಿಷಯಗಳನ್ನು ಆಯೋಗ ಪರಿಶೀಲನಾತ್ಮಕ ಅಧ್ಯಯನ ಮಾಡಿರುವುದನ್ನೂ ಕಾಣಬಹುದು.ಇವೆಲ್ಲದರ ಪರಿಣಾಮವಾಗಿ ಆಯೋಗ ನಾಗರಿಕರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಹಲವು ನಿಯತಾಂಕ- ಕ್ರಮಗಳನ್ನು ಅಳವಡಿಸಿಕೊಂಡಿದೆ. ಅವುಗಳಲ್ಲಿ ಮುಖ್ಯವಾದವು ಎಂದರೆ - ಹಿಂದುಳಿದ ವರ್ಗಗಳ ನಾಗರಿಕರಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅಂಶಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನೂ ಆಧರಿಸಿ,ಧರ್ಮ ಮತ್ತು ಸಾಮಾಜಿಕ ನ್ಯೂನತೆ, ಆರ್ಥಿಕ ಪರಿಸ್ಥಿತಿ,ಶಿಕ್ಷಣ, ವೃತ್ತಿ,ರಾಜಕೀಯ ಸ್ಥಾನ-ಮಾನ, ವಸತಿ, ಕಲೆ-ಸಂಸ್ಕೃತಿ ಇವೇ ಮುಂತಾದ ವಿಷಯಗಳನ್ನೊಳಗೊಂಡ ಪ್ರಶ್ನಾವಳಿಗಳನ್ನು ರೂಪಿಸಿ,783 ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಂಘ-ಸಂಸ್ಥೆಗಳಿಂದ ಉತ್ತರಗಳನ್ನು ಆಯೋಗ ಪಡೆದುಕೊಂಡಿದೆ.

ಆಯೋಗ, ಪ್ರತೀ ತಾಲೂಕಿಗೆ ಕನಿಷ್ಠ ಒಂದರಂತೆ,193 ಗ್ರಾಮಗಳು ಮತ್ತು ನಗರ / ಪಟ್ಟಣ/ ಪುರಸಭಾ ವ್ಯಾಪ್ತಿಯಲ್ಲಿ 204 ಬ್ಲಾಕುಗಳನ್ನು ಆಯ್ಕೆ ಮಾಡಿಕೊಂಡು,ಒಟ್ಟು 3,55,000 ಜನಸಂಖ್ಯೆಯನ್ನೊಳಗೊಂಡ 63,650 ಕುಟುಂಬಗಳನ್ನು ಸಮೀಕ್ಷೆ ಮಾಡಿದೆ. ಸಮೀಕ್ಷೆಯಲ್ಲಿ 171 ಜಾತಿ - ಬುಡಕಟ್ಟು ಮತ್ತು ಕೋಮುಗಳು ಗುರುತಾಗಿವೆ. ಇಂಥ ಸಮೀಕ್ಷೆಗೆ ಜಾಗತಿಕವಾಗಿ ಗೊತ್ತುಪಡಿಸಿರುವ ಗರಿಷ್ಠ, ಮಿತಿ ಶೇ,1ರಷ್ಟಿದ್ದರೆ,ಆಯೋಗ ಶೇ.1.18 ರಷ್ಟನ್ನು ಸಮೀಕ್ಷೆಗೆ ಒಳಪಡಿಸಿರುವುದು ಗಮನಿಸಬೇಕಾದ ವಿಷಯ.

 ಮುಂದುವರಿದು ಆಯೋಗ ಲೋಕಸಭೆ,ರಾಜ್ಯಸಭೆ ವಿಧಾನಸಭೆಗಳ ಸದಸ್ಯರು,ತಾಲೂಕು ಅಭಿವೃದ್ಧಿ ಮಂಡಳಿ,ಗ್ರಾಮ ಪಂಚಾಯತ್ ಪುರಸಭೆ / ನಗರಸಭೆಗಳ ಅಧ್ಯಕ್ಷರು ಮತ್ತು ಸದಸ್ಯರು,ವಕೀಲರು, ವೈದ್ಯರು,ಸಮಾಜ ಸೇವಾ ಕಾರ್ಯಕರ್ತರು, ಮಾಜಿ ಮಂತ್ರಿಗಳು, ಮಾಜಿ ಶಾಸಕರುಗಳ ಮಾಹಿತಿಗಳನ್ನು ಸಂಗ್ರಹಿಸಿದೆ.ಹಾಗೇ, ರಾಜ್ಯದಲ್ಲಿ ವ್ಯಾಪಕವಾಗಿ ಆಯೋಗ ಪ್ರವಾಸ ಕೈಗೊಂಡು ಜಾತಿ-ಕೋಮುಗಳಿಗೆ ಸಂಬಂಧಿಸಿದ ಸಂಘ-ಸಂಸ್ಥೆಗಳನ್ನೂ ಭೇಟಿ ಮಾಡಿ ಅವುಗಳ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳನ್ನು ಅರಿತು ಕೊಂಡಿದೆ. ಅದೂ ಅಲ್ಲದೆ, 365 ಗಣ್ಯರ ಹೇಳಿಕೆಗಳನ್ನೂ ದಾಖಲು ಮಾಡಿಕೊಂಡಿರುವುದೂ ವಿಶೇಷ ಮತ್ತು ಅಗತ್ಯವಾಗಿ ಬೇಕಾದ ಅಂಶ ಕೂಡಾ.

1972,ಮಾರ್ಚ್ 31ಕ್ಕೆ ಅನ್ವಯಿಸುವಂತೆ ಸರಿ ಸುಮಾರು 98 ಇಲಾಖೆ, ಸಂಸ್ಥೆ, ನಿಗಮ-ಮಂಡಳಿಗಳಿಂದ ಸೇವಾ ವಿವರಗಳನ್ನು ಆಯೋಗ ಸಂಗ್ರಹಿಸಿದೆ.ಜಾತಿಗಳ ಶೇಕಡಾವಾರು ಅಂದಾಜು ಜನಸಂಖ್ಯೆ ಮತ್ತು ಅವು ಹೊಂದಿರುವ ಶೇಕಡಾವಾರು ಪ್ರಾತಿನಿಧ್ಯವನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ ಜಾತಿ-ಕೋಮುಗಳು ಶೇಕಡಾವಾರು ಸಾಕಷ್ಟು ಪ್ರಾತಿನಿಧ್ಯ ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಆಯೋಗ ಖಚಿತ ಪಡಿಸಿಕೊಂಡಿದೆ. ಈ ಅಂಕಗಣಿತ ಕ್ರಮದಿಂದ 89 ಜಾತಿ -ಕೋಮುಗಳಲ್ಲಿ 21 ಜಾತಿ -ಕೋಮುಗಳು ಸಾಕಷ್ಟು ಪ್ರಾತಿನಿಧ್ಯ ಪಡೆದು ಕೊಂಡಿವೆ. ಬಂಟ, ಬ್ರಾಹ್ಮಣ, ಕೊಡವ, ಕ್ಷತ್ರಿಯ,ಲಿಂಗಾಯತ, ರಜಪೂತ್, ವೈಶ್ಯ, ಕ್ರೈಸ್ತ, ಜೈನ ಮುಂತಾದವುಗಳು ಅವು.

ಮತ್ತೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯೋಗವು 1972 ರ ಮಾರ್ಚ್ ತಿಂಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಆಗಿರುವ ವಿವರಗಳನ್ನು ಸುಮಾರು1,869 ಪ್ರೌಢಶಾಲೆಗಳಿಂದ ಸಂಗ್ರಹಿಸಿದೆ.ಆ ವರ್ಷ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ರಾಜ್ಯ ಸರಾಸರಿ ಸಂಖ್ಯೆ ಪ್ರತಿ1000ಕ್ಕೆ 1.69 ಇರುತ್ತದೆ. ಅದೇ ವರ್ಷದಲ್ಲಿ ಯಾವುದೇ ಜಾತಿ ಮತ್ತು ಕೋಮುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ರಾಜ್ಯ ಸರಾಸರಿಗಿಂತ ಕೆಳ ಮಟ್ಟದಲ್ಲಿ ಇದ್ದಲ್ಲಿ, ಅಂಥ ಜಾತಿ-ಕೋಮುಗಳನ್ನು ‘ಶೈಕ್ಷಣಿಕವಾಗಿ ಹಿಂದುಳಿದವು’ ಎಂದು ಆಯೋಗ ತೀರ್ಮಾನಿಸಿದೆ. ಈ ಪರೀಕ್ಷಾ ವಿಧಾನದಲ್ಲಿ18 ಜಾತಿ-ಕೋಮುಗಳು ರಾಜ್ಯ ಸರಾಸರಿಗಿಂತ ಮೇಲ್ಮಟ್ಟದಲ್ಲಿವೆ ಎಂದು ಆಯೋಗ ಕಂಡು ಕೊಂಡಿದೆ.ಅವುಗಳಲ್ಲಿ ಮುಖ್ಯವಾದವು - ಬ್ರಾಹ್ಮಣ,ಬಂಟ,ಕೊಡವ, ಕ್ಷತ್ರಿಯ, ಲಿಂಗಾಯತ, ಮರಾಠಾ, ಮೊದಲಿಯಾರ್, ವೈಶ್ಯ, ಕ್ರೈಸ್ತ, ಸಿಖ್ ಮುಂತಾದವು.

ಸಂವಿಧಾನದಲ್ಲಿ ‘ಸಾಮಾಜಿಕ ಹಿಂದುಳಿದಿರುವಿಕೆ’ಯನ್ನು ಗುರುತಿಸಲು ಯಾವುದೇ ಅರ್ಥ ವಿವರಣೆ ಇಲ್ಲ. ಸಾಮಾಜಿಕ ಹಿಂದುಳಿದಿರುವಿಕೆಯನ್ನು,ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಜಾತಿ,ಅದು ಹೊಂದಿರುವ ಅಂತಸ್ತಿನ ಮೇಲೆ ನಿರ್ಧರಿಸುವುದಾಗಿದೆ. ಹಾಗಾಗಿ ಆಯೋಗವೇ ಪರೀಕ್ಷಾರ್ಥ ಮಾನದಂಡಗಳನ್ನು ಆ ನಿಟ್ಟಿನಲ್ಲಿ ರೂಪಿಸಿಕೊಂಡಿದೆ.ಆಯೋಗವು ಆ ಮಾನದಂಡಗಳನ್ನು ಅನುಸರಿಸಿ ಹಿಂದುಳಿದ ಜಾತಿ ಮತ್ತು ಕೋಮುಗಳನ್ನು ಗುರುತಿಸಿದೆ.ವಾಸಿಸುವ ಸ್ಥಳ,ದುರ್ಬಲ ಆರ್ಥಿಕ ಪರಿಸ್ಥಿತಿಯಿಂದ ಭೂಮಿ ಅಥವಾ ವಾಸದ ಮನೆಗಳನ್ನು ಹೊಂದಲು ಕಷ್ಟಸಾಧ್ಯವಾದ ಪರಿಸ್ಥಿತಿ, ಕಾಯಕ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದು, ಕಸುಬುಗಳನ್ನು ಅಶುಚಿ ಮತ್ತು ಕೀಳುಮಟ್ಟದವು ಎಂದು ಪರಿಗಣಿಸಿರುವುದು,ಮೇಲ್ವರ್ಗಗಳು ಪೂರ್ವಗ್ರಹ ಪೀಡಿತವಾಗಿ ಕೆಳವರ್ಗಗಳನ್ನು ಕೀಳಾಗಿ ನಡೆಸಿ ಕೊಳ್ಳುವುದು,ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮೇಲ್ವರ್ಗ ಗಳೊಡನೆ ಒಡನಾಟ ಇಲ್ಲದಿರುವುದು,ಸಾಮಾಜಿಕ ನಿಷಿದ್ಧತೆಯಿಂದಾಗಿ ಮೇಲ್ವರ್ಗದ ಜನರೊಡನೆ ಸಹಪಂಕ್ತಿ ಭೋಜನ ಮತ್ತು ಅಂತರ್ವಿವಾಹ ಸಂಬಂಧ ಇಲ್ಲದಿರುವುದು,ಇವೇ ಮುಂತಾದ ಸಾಮಾಜಿಕ ಕಳಂಕಗಳೇ ಆ ಮಾನದಂಡಗಳಿಗೆ ಅಡಿಪಾಯವಾಗಿವೆ.

ನಾಗರಿಕರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಬಹು ಅಂಶಗಳ ಪರೀಕ್ಷೆ ( ಟಣಠಿಟ ಣಣ) ಗಳನ್ನು ಪ್ರಯೋಗಿಸಿದ ನಂತರ ತೃಪ್ತಿಗೊಂಡ ಆಯೋಗ,ಜಾತಿ ಮತ್ತು ಕೋಮುಗಳನ್ನು1.ಹಿಂದುಳಿದ ಕೋಮುಗಳು 2. ಹಿಂದುಳಿದ ಜಾತಿಗಳು 3.ಹಿಂದುಳಿದ ಪಂಗಡಗಳು ಎಂಬುದಾಗಿ ಮೂರು ಭಾಗಗಳಲ್ಲಿ ವಿಂಗಡಿಸಿದೆ.ವಿಧಿ 15(4)ಮತ್ತು ವಿಧಿ16(4) ರ ಅನುಸಾರ ಪ್ರತ್ಯೇಕ ಪಟ್ಟಿಗಳನ್ನೂ ಮಾಡಿದೆ. ಶೇ.32ರಷ್ಟು ಮೀಸಲಾತಿ ಕೋಟಾವನ್ನು ನಿಗದಿಪಡಿಸಿ, ಹಿಂದುಳಿದ ಕೋಮುಗಳಿಗೆ- ಶೇ.16ಮತ್ತು ಹಿಂದುಳಿದ ಜಾತಿಗಳಿಗೆ-ಶೇ.10 ಹಾಗೂ ಹಿಂದುಳಿದ ಪಂಗಡಗಳಿಗೆ -ಶೇ.6 ರಷ್ಟು ಕೋಟಾವನ್ನು ಆಯೋಗ ಹಂಚಿಕೆ ಮಾಡಿದೆ.

ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮಟ್ಟಿಗೆ ಸಂವಿಧಾನದ ಭಾಷೆ ಸರಳವೂ ಮತ್ತು ಸಂದಿಗ್ಧವೂ ಆಗಿದೆ.ಆದರೆ ಸಂವಿಧಾನದ ಆಶಯಗಳನ್ನು ವ್ಯಾಖ್ಯಾನಿಸುವ ನ್ಯಾಯಾಂಗದ ಭಾಷೆ ತೀರಾ ಸಂದಿಗ್ಧವೂ ತೊಡಕಿನದೂ ಆಗಿದೆ...ಮೀಸಲಾತಿಯ ವ್ಯಾಪ್ತಿಯನ್ನು ಶೇ.50ರಷ್ಟಕ್ಕೆ ಮಿತಿಗೊಳಿಸುವುದರಿಂದ ಸಂವಿಧಾನದ ವಿಧಿಗಳಾದ 15(4)ಮತ್ತು16 (4) ರ ಭಾಷೆಯನ್ನೂ ಮೀರಿ ನ್ಯಾಯಾಂಗ ಮುಂದೆ ಹೋಗಿದೆ; ಹೀಗಾದುದರಿಂದ ‘ಹಿಂದುಳಿದ ವರ್ಗಗಳು’ ಎಂದು ಗುರುತಿಸುವ ಭಾರೀ ಜನಸಂಖ್ಯೆಯ ಜನಸಮುದಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಲು ಸರಕಾರವನ್ನು ತಡೆಗಟ್ಟಿದೆ.ಮೀಸಲಾತಿ ಕೋಟಾ ಮಿತಿಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು( ಎಂ. ಆರ್. ಬಾಲಾಜಿ - ಮೈಸೂರು) ಗಮನದಲ್ಲಿರಿಸಿಕೊಂಡು ಹಾವನೂರು ಹೇಳಿರುವ ಮಾತುಗಳು ಮೇಲಿನವು.ಇಷ್ಟಾದರೂ ಹಾವನೂರ್ ಆಯೋಗವು ನ್ಯಾಯಾಲಯದ ಆಜ್ಞೆಯನ್ನು ಪರಿಪಾಲಿಸಿದೆ ಎಂಬುದೇ ವಿಶೇಷ( ಪ.ಜಾ. -15,ಪ.ಪಂ. -3, ಹಿಂ.ಕೋ -16,ಹಿಂ.ಜಾ -10 ಮತ್ತು ಹಿಂ.ಪಂ -6 = ಒಟ್ಟು -50).

 ಆಯೋಗದ ಕಠಿಣ ನಿರ್ಧಾರಕ್ಕೆ ಸಾಕ್ಷಿಯಾಗುವಂತೆ ಕೆಲವು ವರ್ಗಗಳನ್ನು, ಅವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಸೇವೆಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದಿವೆ ಎಂದು ವಿಧಿ 16(4) ಕ್ಕೆ ಅನುಗುಣವಾಗಿ ಮೀಸಲಾತಿ ಪಟ್ಟಿಯಿಂದ ಅವನ್ನು ಆಯೋಗ ಹೊರಗುಳಿಸಿದೆ.ಅವೆಂದರೆ - ಅರಸು,ಬಲಿಜ,ದೇವಾಡಿಗ,ಗಾಣಿಗ,ನಾಯಿಂದ ರಜಪೂತ್, ಸತಾನಿ ಮುಂತಾದವು.ಆದರೆ,ಆ ವರ್ಗಗಳು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಲು ಸಾಧ್ಯವೇ ಎಂಬ ಪ್ರಶ್ನೆ ಮಾತ್ರ ಉದ್ಭವಿಸದಿರದು.

ಆಯೋಗವು ಮುಸ್ಲಿಮ್ ಸಮುದಾಯವನ್ನು ಒಟ್ಟಾರೆ ಹಿಂದುಳಿದ ವರ್ಗವೆಂದು ಪರಿಗಣಿಸಿಲ್ಲ. ಮುಸ್ಲಿಮ್ ಸಮುದಾಯ, ಒಂದು ಧಾರ್ಮಿಕ ಅಲ್ಪಸಂಖ್ಯಾತ ವರ್ಗ ವಾಗಿರುವುದರಿಂದ, ಒಂದು ವಿಶೇಷ ಗುಂಪು ಎಂದು ಅದನ್ನು ಪರಿಗಣಿಸಿ ಮೀಸಲಾತಿ ನೀಡಬಹುದು ಎಂದು ಆಯೋಗ ಸರಕಾರಕ್ಕೆ ಸಲಹೆ ಮಾಡಿತ್ತು.

 ಕೇಂದ್ರ ಸರಕಾರವು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳದೆ ತನ್ನ ಮೂಲಭೂತ ಕರ್ತವ್ಯದಿಂದ ವಿಫಲವಾಗಿದೆ.ಹಾಗೂ ಜಾತಿಯಾಧಾರಿತ ದತ್ತಾಂಶಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ, ದಶವಾರ್ಷಿಕ ‘ಜನಗಣತಿ’ ಕಾರ್ಯ ಕೈಗೊಳ್ಳುವ ಅಧಿಕಾರವನ್ನು ಒಕ್ಕೂಟದ ಪಟ್ಟಿಯಿಂದ ರಾಜ್ಯ ಪಟ್ಟಿಗೆ ವರ್ಗಾಯಿಸಲು ಸಂಸದರು ಒತ್ತಾಯಿಸಬೇಕೆಂಬ ಅತಿಮುಖ್ಯ ಸಲಹೆಯನ್ನೂ ಆಯೋಗ ನೀಡಿದೆ. ಹೀಗೆಯೇ, ಇನ್ನೂ ಹಲವು ಶಿಫಾರಸುಗಳನ್ನು,ಹಿಂದುಳಿದ ವರ್ಗಗಳ ಏಳಿಗೆಯ ದೃಷ್ಟಿಯಿಂದ ಆಯೋಗ ಮಾಡಿದೆ.

ಆಯೋಗವು ಮೂರು ವರ್ಷಕ್ಕೂ ಹೆಚ್ಚು ಕಾಲ ವ್ಯಯಿಸಿ,ಸಮ ಸಮಾಜ ನಿರ್ಮಾಣದ ಕನಸು ಸಾಕಾರವಾಗುವ ದಿಸೆಯಲ್ಲಿ,ಚಾರಿತ್ರಿಕ ಎನ್ನುವ ಒಂದು ವಿಸ್ತೃತ ವರದಿಯನ್ನು ಸರಕಾರಕ್ಕೆ ನವೆಂಬರ್19,1975 ಯಲ್ಲಿ ಸಲ್ಲಿಸಿತು.

ಹಿಂದುಳಿದ ವರ್ಗ ಎಂದು ಪರಿಗಣಿತವಾಗದ ಕೆಲವು ಸಮುದಾಯಗಳು, ವರದಿಯನ್ನು ವಿರೋಧಿಸಿ ಹೋರಾಟಕ್ಕಿಳಿದವು.ಅವುಗಳಲ್ಲಿ ಪ್ರಮುಖವಾಗಿ ಲಿಂಗಾಯತ ಸಮುದಾಯವೂ ಒಂದು . ಆದರೆ, ಆ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟಾಗಲೀ ಅಥವಾ ವಸ್ತುನಿಷ್ಠ ಅಂಶಗಳ ಹಿನ್ನೆಲೆಯಾಗಲೀ ಇರಲಿಲ್ಲ.ಅದು ಕೇವಲ ರಾಜಕೀಯ ಸ್ವರೂಪದ ಆರ್ಭಟವಾಗಿತ್ತಷ್ಟೇ.ಆ ಸಂದರ್ಭದಲ್ಲಿ ವರದಿಯ ಪರ-ವಿರೋಧಿಗಳ ನಡುವೆ ಮುಖಾಮುಖಿ ಚರ್ಚೆ ಮಾತ್ರ ನಡೆಯಲಿಲ್ಲ ಎಂಬುದು ಉಲ್ಲೇಖನೀಯ. ಹಾವನೂರು ಅವರು ವರದಿಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಹೇಳಿರುವ ಈ ಕೆಳಗಿನ ಮಾತುಗಳನ್ನು ಗಮನಿಸೋಣ. ಅವು ಮನನೀಯ ಹಾಗೂ ಮಾನವೀಯ ವೆನಿಸಿವೆ..... ಕೆಳಜಾತಿಗಳವರಿಗೆ ತಾರತಮ್ಯದಿಂದ ರಕ್ಷಣೆ ನೀಡುವ ಪರಿಹಾರ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಅವರ ಅಭಿವೃದ್ಧಿ ಸಾಧ್ಯವಿಲ್ಲ.ಇಂತಹ ರಕ್ಷಣಾತ್ಮಕ ಪರಿಹಾರ ಸೌಕರ್ಯಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಅಸಮತೆಯನ್ನು ಮುಂದುವರಿಸಿಕೊಂಡು ಹೋಗುವ ಮನೋವೃತ್ತಿಗೆ ನಿದರ್ಶನ. ಎಂಥಾದರೂ ಇರಲಿ, ವರದಿ ಮಾತ್ರ ಹೊಸ ದಿಕ್ಕಿನ ಚರ್ಚೆಗೆ ವಸ್ತುವಾಗಿ ಕರ್ನಾಟಕದಲ್ಲಿ ಮನೆಮಾತಾಗಿದ್ದಂತೂ ನಿಜ .ಸಾಮಾಜಿಕ ಬದ್ಧತೆಗೆ ಒಳಗಾಗಿದ್ದ ಬುದ್ಧಿಜೀವಿಗಳು ವರದಿಯ ಒಳ ತಿರುಳುಗಳನ್ನು ಪರಾಮರ್ಶಿಸಿ ಅದರ ಮಹತ್ವವನ್ನು ಹೆಚ್ಚಿಸಿದ್ದರು.

 ವರದಿ ಸ್ವೀಕರಿಸಿದ ತಕ್ಷಣದಲ್ಲೇ ಸರಕಾರ, ಅದನ್ನನುಸರಿಸಿ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೂ ಶಾಸಕಾಂಗದ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶವಿತ್ತು, ಸಮಯ ನೋಡಿ, ಫೆಬ್ರವರಿ 22,1977ರಂದು ಮೀಸಲಾತಿ ಆದೇಶ ಹೊರಡಿಸಿತು.

ವರದಿಯಲ್ಲಿರುವ ಶಿಫಾರಸಿನಂತೆ ಹಿಂದುಳಿದ ಕೋಮು ಮತ್ತು ಹಿಂದುಳಿದ ಜಾತಿ ಹಾಗೂ ಹಿಂದುಳಿದ ಪಂಗಡಗಳೇ ಅಲ್ಲದೆ ಹೊಸದಾಗಿ ’ಹಿಂದುಳಿದ ವಿಶೇಷ ವರ್ಗ’ವೊಂದನ್ನು ಸೃಜಿಸುವುದರ ಜೊತೆಗೆ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಕೋಮಿನಡಿಯಲ್ಲಿ ಸೇರಿಸಿ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನೂ ಒಳಗೊಂಡಂತೆ,ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ.58ಕ್ಕೆ ಏರಿಸಿ ಸರಕಾರ ಆದೇಶ ಜಾರಿಗೊಳಿಸಿತು ಸರಿ.ಆದರೆ,ಉಚ್ಚ ನ್ಯಾಯಾಲಯದಲ್ಲಿ ಸರಕಾರದ ಆದೇಶವನ್ನು ಪ್ರಶ್ನಿಸಲಾಯಿತು.ಉಚ್ಚ ನ್ಯಾಯಾಲಯ ಸರಕಾರದ ಆದೇಶವನ್ನು ಊರ್ಜಿತಗೊಳಿಸಿತು.ಆದರೆ, ಸರಕಾರ ತಾನಾಗಿಯೇ ಪಟ್ಟಿಯಲ್ಲಿ ಸೇರಿಸಿದ್ದ ಕೆಲವು ಜಾತಿಗಳನ್ನು ಪಟ್ಟಿಯಿಂದ ಹೊರಗಿಡಲು ನ್ಯಾಯಾಲಯ ಆದೇಶಿಸಿತು( ಎಸ್.ಸಿ. ಸೋಮಶೇಖರಪ್ಪ, ಕರ್ನಾಟಕ).ಅದರಂತೆ ಪರಿಷ್ಕೃತ ಆದೇಶವನ್ನೂ ಸರಕಾರ ಮೇ 1,1979 ರಲ್ಲಿ ಹೊರಡಿಸಿತು.

ಆ ನಂತರ,ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರುತ್ತದೆ( ಕೆ.ಸಿ.ವಸಂತ್ ಕುಮಾರ್ - ಕರ್ನಾಟಕ).ನ್ಯಾಯಾಲಯದಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಆಯೋಗ ಅಳವಡಿಸಿರುವ ಮಾನದಂಡಗಳ ಕುರಿತು ವಾದ-ಪ್ರತಿ ವಾದ ನಡೆಯುವ ಸಂದರ್ಭದಲ್ಲಿ,ಕರ್ನಾಟಕ ಸರಕಾರ ಹೊಸ ಆಯೋಗವೊಂದನ್ನು ರಚಿಸುವುದಾಗಿ, ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸುವುದರೊಂದಿಗೆ ಪ್ರಕರಣ ಅಂತ್ಯ ಕಂಡಂತಾಗಿದೆ.

 ಅಂದಿನ ರಾಮಕೃಷ್ಣ ಹೆಗಡೆ ಸರಕಾರ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಎಪ್ರಿಲ್ 18, 1983ರಂದು ಟಿ. ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರಚಿಸಿತು. ಆಯೋಗ ಮಾರ್ಚ್ 31,1986 ರಂದು ಸರಕಾರಕ್ಕೆ ವರದಿ ಸಲ್ಲಿಸುವುದು.ವರದಿ ವ್ಯಾಪಕ ಟೀಕೆ ಮತ್ತು ಪ್ರತಿಭಟನೆಗೆ ಒಳಗಾಗುವುದು.ವ್ಯಾಕುಲಗೊಂಡ ಸರಕಾರ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಹಾಗೂ ಸರಕಾರವೇ ಹೊಸದಾಗಿ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಿ ಅಕ್ಟೋಬರ್ 13,1986 ರಲ್ಲಿ ಜಾರಿಗೊಳಿಸಿತು. ಅದರೊಂದಿಗೆ ಸಂವಿಧಾನದ ಪರಿವಿಡಿ ಹಾಗೂ ನ್ಯಾಯಾಲಯಗಳ ಮನೋಗತಗಳನ್ನು ಪರಾಮರಿಕೆ ಮಾಡಿಕೊಂಡು ಸಿದ್ಧಪಡಿಸಿದ್ದ ಹಾವನೂರು ಆಯೋಗದ ವರದಿ ಪ್ರಣೀತ ಮೀಸಲಾತಿ ಕೊನೆಗೊಳ್ಳುತ್ತದೆ.

 ಹಾವನೂರು ಆಯೋಗ ರಚನೆಯಾಗಿ,50 ವರ್ಷವೇ ಕಳೆದಿದ್ದರೂ,ಅದರ ವರದಿ ಉಂಟು ಮಾಡಿದ ಸಂಚಲನ ಹಾಗೂ ಪರಿಣಾಮದ ಕಾರಣ,ಅದು ಕರ್ನಾಟಕದ ಜನಮಾನಸದಲ್ಲಿ ಇಂದಿಗೂ ಉಳಿದಿದೆ!

 ( ಲೇಖಕರು: ಮಾಜಿ ಸದಸ್ಯ, ಕರ್ನಾಟಕ ರಾಜ್ಯ)

 ಹಿಂದುಳಿದ ವರ್ಗಗಳ ಆಯೋಗ)

Writer - ಕೆ.ಎನ್.ಲಿಂಗಪ್ಪ

contributor

Editor - ಕೆ.ಎನ್.ಲಿಂಗಪ್ಪ

contributor

Similar News