ಉಡುಪಿ ಜಿಲ್ಲೆಯ 2,58,920 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ: ಡಿಸಿ ಕೂರ್ಮಾರಾವ್

Update: 2022-08-08 15:04 GMT

ಉಡುಪಿ, ಆ.8: ಜಿಲ್ಲೆಯಲ್ಲಿ ಆ.10ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸಲಾಗುತ್ತಿದ್ದು, ಅಂದು ಜಿಲ್ಲೆಯ ೧ರಿಂದ ೧೯ವರ್ಷ ದೊಳಗಿನ ಒಟ್ಟು ೨,೫೮,೯೨೦ ಮಕ್ಕಳಿಗೆ ಅಲ್ ಬೆಂಡಾಜೋಲ್ ಮಾತ್ರೆಯನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

ಸರಕಾರಿ, ಅನುದಾನಿತ, ಖಾಸಗಿ ಶಾಲೆ, ಅಂಗನವಾಡಿ, ರೆಸಿಡೆನ್ಶಿಯಲ್ ಸ್ಕೂಲ್, ಐಟಿಐ, ನರ್ಸಿಂಗ್ ಕಾಲೇಜು, ಪ್ರಥಮ ವರ್ಷದ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಶಾಲಾ- ಕಾಲೇಜು ಗಳಲ್ಲಿ ಮಾತ್ರೆಗಳನ್ನು ನೀಡಲಾಗುವುದು. ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲೆ ಯಿಂದ ಹೊರಗುಳಿದ ೧೯ ವರ್ಷ ದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಅಲ್ ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲು ಆಶಾ ಕಾರ್ಯಕರ್ತೆಯರು ಕ್ರಮ ವಹಿಸಲಿದ್ದಾರೆ ಎಂದರು.

೧ರಿಂದ ೨ ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ ೨ರಿಂದ ೧೯ ವರ್ಷದೊಳಗಿನವರಿಗೆ ಇಡೀ ಮಾತ್ರೆಯನ್ನು ನೀಡಲಾಗುವುದು. ಚಿಕ್ಕ ಮಕ್ಕಳಿಗೆ ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆ ಬೆರೆಸಿ ಅಥವಾ ಚೀಪಿ ಸೇವಿಸಲು ನೀಡಲಾಗುವುದು. ಆ.೧೦ರಂದು ಬಿಟ್ಟು ಹೋದ ಮಕ್ಕಳಿಗೆ ಹಾಗೂ ಸೌಖ್ಯ ವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರ ಆ.೧೭ರ ಮಾಪ್‌ಅಪ್ ದಿನದಂದು ಮಾತ್ರೆಗಳನ್ನು ನೀಡಲಾಗುವುದು. ಇತರೆ ಔಷಧಿ ಸೇವಿಸುತ್ತಿರುವ ಮಕ್ಕಳು ವೈದ್ಯರ ಸಲಹೆ ಪಡೆದು ಅಲ್‌ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸಬೇಕು.

ಜಂತುಹುಳು ಬಾಧೆಯಿಂದ ರಕ್ತ ಹೀನತೆ, ಪೌಷ್ಠಿಕ ಆಹಾರದ ಕೊರತೆ ಮತ್ತು ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ತೊಂದರೆ ಉಂಟಾಗುತ್ತದೆ. ಅಲ್ ಬೆಂಡಾಜೋಲ್ ಮಾತ್ರೆಗಳನ್ನು ನೀಡುವುದರಿಂದ ಹೊಟ್ಟೆಹುಳುಗಳು ನಾಶವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ನೈರ್ಮಲ್ಯತೆಯ ಕೊರತೆ, ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಈ ರೋಗವು ಬಾಧಿಸಲಿದ್ದು, ಹೊಟ್ಟೆ ನೋವು, ಬೇಧಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಈ ರೋಗದ ಮುಖ್ಯ ಲಕ್ಷಣಗಳಾಗಿವೆ. 

ಉಗುರುಗಳ ಸ್ವಚ್ಛತೆ, ಆಹಾರ ಸೇವನೆಗೆ ಮೊದಲು ಹಾಗೂ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವುದರಿಂದ, ಶುದ್ಧೀ ಕರಿಸಿದ ನೀರಿನ ಸೇವನೆ, ಆಹಾರ ಪದಾರ್ಥಗಳನ್ನು ಮುಚ್ಚಿಡುವುದರಿಂದ, ಹಣ್ಣು ಹಾಗೂ ತರಕಾರಿಗಳನ್ನು ಉಪಯೋಗಿಸುವ ಮೊದಲು ಶುದ್ಧ ನೀರಿನಿಂದ ತೊಳೆಯುವುದರಿಂದ, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದರಿಂದ, ಮಲ ವಿಸರ್ಜನೆಗೆ ಶೌಚಾಲಯ ಬಳಸುವುದರಿಂದ ಹಾಗೂ ನಡೆಯುವಾಗ ಪಾದರಕ್ಷೆ ಗಳನ್ನು ಬಳಸುವುದರಿಂದ ಜಂತುಹುಳುಗಳ ಬಾಧೆಯಿಂದ  ನಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News