ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸುತ್ತೇವೆ: ಝಮೀರ್ ಅಹ್ಮದ್ ಖಾನ್

Update: 2022-08-08 15:36 GMT

ಬೆಂಗಳೂರು, ಆ.8: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶವಿಲ್ಲ. ದಯವಿಟ್ಟು ಮಾಧ್ಯಮದವರು ಗೊಂದಲ ಸೃಷ್ಟಿ ಮಾಡಬೇಡಿ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವದಂದು ಧ್ವಜ ಹಾರಿಸುತ್ತೇವೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ತಿಳಿಸಿದರು.

ಸೋಮವಾರ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಸುವ ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರೊಂದಿಗೆ ಸ್ಥಳ ಪರಿಶೀಲನೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಬಿಎಂಪಿಯವರು ಇದು ನಮ್ಮ ಜಾಗವಲ್ಲ, ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿದ್ದಾರೆ. 1999ಕ್ಕಿಂತ ಮುಂಚೆ ವಕ್ಫ್ ಆಸ್ತಿಗಳು, ಮುಜುರಾಯಿ ಆಸ್ತಿಗಳು ಕಂದಾಯ ಇಲಾಖೆಯ ಅಧೀನದಲ್ಲಿದ್ದವು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದ ಬಳಿಕ ವಕ್ಫ್ ಎಂದು ಪ್ರತ್ಯೇಕ ಮಾಡಿದರು. ಈ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್‍ನವರು ಇದ್ದಾರೆ ಅವರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಈ ಬಾರಿ ನಮ್ಮ ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ಉದ್ದೇಶ ನಮ್ಮದು. ಇದೇ ಮೊದಲ ಬಾರಿ ಚಾಮರಾಜಪೇಟೆ ಆಟದ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದೇವೆ. ಇವತ್ತು ಇಲ್ಲಿ ಭೇಟಿ ನೀಡಿ, ರಾಷ್ಟ್ರಧ್ವಜವನ್ನು ಎಲ್ಲಿ ಹಾರಿಸಬೇಕು ಎಂಬುದರ ಕುರಿತು ಸ್ಥಳಪರಿಶೀಲನೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಬಿ.ವಿ.ಗಣೇಶ್, ಬಿಬಿಎಂಪಿ ಹಾಲಿ ಸದಸ್ಯರಾದ ಕೋಕಿಲ ಚಂದ್ರಶೇಖರ್ ಹಾಗೂ ಮತ್ತಿತರ ದೇವಸ್ಥಾನಗಳ ಸದಸ್ಯರು, ಮುಖಂಡರನ್ನು ಕರೆಸಿ, ಅವರೊಂದಿಗೆ ಆ.10ರ ಬಳಿಕ ಕೂತು ಚರ್ಚಿಸಿ, ಕಾರ್ಯಕ್ರಮ ಯಾವ ರೀತಿ ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಇಲ್ಲಿ ವಿವಾದ ಏನು ಇಲ್ಲ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜ ಹಾರಿಸಬೇಕು ಎಂಬುದು ಅವರ ಬಯಕೆ, ನಮ್ಮ ಬಯಕೆಯೂ ಅದೇ ಆಗಿದೆ. ಈ ವರ್ಷದಿಂದ ನಾವು ರಾಷ್ಟ್ರಧ್ವಜ ಹಾರಿಸುತ್ತೇವೆ. ಎಲ್ಲರೂ ಸೇರಿ ಕಾರ್ಯಕ್ರಮ ಮಾಡೋಣ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News