ಸಂಧಾನ ಮಾತುಕತೆ ಯಶಸ್ವಿ: ಗಾಝಾದಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ

Update: 2022-08-08 16:33 GMT

ಜೆರುಸಲೇಂ, ಆ.8: ಗಾಝಾ ಪಟ್ಟಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಸಂಷರ್ಘಕ್ಕೆ ಅಂತ್ಯಹಾಡಲು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಪೆಲೆಸ್ತೀನ್ ಹೋರಾಟಗಾರರು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ ಗಾಝಾ ಗಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ತಲೆದೋರಿದ ಅತ್ಯಂತ ಗಂಭೀರವಾದ ಉದ್ವಿಗ್ನತೆ ಶಮನಗೊಳ್ಳುವ ಎಲ್ಲಾ ಸಾಧ್ಯತೆಗಳೂ ಗೋಚರಿಸಿವೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಗಾಝಾ ಗಡಿಭಾಗದಲ್ಲಿ ಸುಮಾರು 3 ದಿನ ನಡೆದ ಘರ್ಷಣೆ, ಹಿಂಸಾಚಾರದಲ್ಲಿ ಪೆಲೆಸ್ತೀನ್ನ ಕನಿಷ್ಟ 44 ಮಂದಿ(ಇದರಲ್ಲಿ ಅರ್ಧದಷ್ಟು ನಾಗರಿಕರು ಮತ್ತು ಮಕ್ಕಳು) ಮೃತಪಟ್ಟಿದ್ದು 311 ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್ಗೂ ವ್ಯಾಪಕ ನಾಶ-ನಷ್ಟವಾಗಿದ್ದು ಗಾಝಾ ಪ್ರದೇಶದಿಂದ ಹಾರಿಬಂದ ಕ್ಷಿಪಣಿಗಳು ಇಸ್ರೇಲ್ನ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದು ಟೆಲ್ಅವೀವ್ ಮತ್ತು ಅಶ್ಕೆಲಾನ್ ಸೇರಿದಂತೆ ಹಲವು ನಗರಗಳಲ್ಲಿನ ನಿವಾಸಿಗಳನ್ನು ಆಶ್ರಯತಾಣಕ್ಕೆ ರವಾನಿಸಲಾಗಿದೆ ಎಂದು ಗಾಝಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರೇಲ್ ಮತ್ತು ಪೆಲೆಸ್ತೀನ್ ಹೋರಾಟಗಾರರು ಪ್ರತ್ಯೇಕ ಹೇಳಿಕೆಗಳಲ್ಲಿ ಕದನ ವಿರಾಮವನ್ನು ಘೋಷಿಸಿದ್ದು ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಈಜಿಪ್ಟ್ ಧನ್ಯವಾದ ಅರ್ಪಿಸಿದ್ದಾರೆ. ರವಿವಾರ ರಾತ್ರಿಯಿಂದ ಕದನ ವಿರಾಮ ಜಾರಿಗೆ ಬಂದಿರುವುದಾಗಿ ಹೇಳಿಕೆ ತಿಳಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಮುಖಂಡ ಝಿಯಾದ್ ಅಲ್-ನಖಾಲ, ಇಸ್ರೇಲ್ ವಶದಲ್ಲಿರುವ ಅಲ್ಸಾದಿಯ ಸುರಕ್ಷಿತ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಈಜಿಪ್ಟ್ ವಾಗ್ದಾನ ನೀಡಿದೆ ಎಂದು ಹೇಳಿದ್ದಾರೆ.

 ಮೂರು ದಿನ ನಡೆದಿದ್ದ ಘರ್ಷಣೆ, ಈ ಹಿಂದಿನಂತೆ ಗಾಝಾ ಯುದ್ಧಕ್ಕೆ ಮುನ್ನುಡಿ ಬರೆಯಲಿದೆ ಎಂಬ ಆತಂಕವಿತ್ತು. ಆದರೆ ಈ ಬಾರಿಯ ಸಂಘರ್ಷದಲ್ಲಿ ಪೆಲೆಸ್ತೀನ್ ಹೋರಾಟಗಾರರು ಮಾತ್ರ ಪಾಲ್ಗೊಂಡಿದ್ದು, ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಸಂಘಟನೆ ಇದರಿಂದ ದೂರ ಉಳಿದಿತ್ತು. ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಮುಖ್ಯಸ್ಥ ಬಸಾಮ್ ಅಲ್ಸಾದಿಯನ್ನು ಇಸ್ರೇಲ್ ಸೇನೆ ಬಂಧಿಸಿದ ಬಳಿಕ ಸಂಘಟನೆ ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಕಾರಣಕ್ಕೆ ಇಸ್ರೇಲ್ ಸೇನೆ ಆ ಪ್ರದೇಶದಲ್ಲಿ ಪೂರ್ವಭಾವಿಯಾಗಿ ಕಾರ್ಯಾಚರಣೆ ಆರಂಭಿಸಿತ್ತು.

ಇದನ್ನು ವಿರೋಧಿಸಿದ್ದ ಸಂಘಟನೆ ಇಸ್ರೇಲ್ ನತ್ತ ಕ್ಷಿಪಣಿಗಳ ಸುರಿಮಳೆ ನಡೆಸಿತ್ತು. ಬಳಿಕ ಇಸ್ರೇಲ್ನಿಂದ ತೀವ್ರ ವಾಯುದಾಳಿ ಆರಂಭವಾಗಿತ್ತು. ಈ ಮಧ್ಯೆ, ಇಸ್ರೇಲ್- ಪೆಲೆಸ್ತೀನ್ ಹೋರಾಟಗಾರರ ಮಧ್ಯೆ ಕದನ ವಿರಾಮಕ್ಕಾಗಿ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿರುವಂತೆಯೇ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ರವಿವಾರ ಮತ್ತೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 5 ಮಂದಿ ಮೃತಪಟ್ಟಿರುವುದಾಗಿ ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.

ಕದನವಿರಾಮಕ್ಕೆ ಸ್ವಾಗತ: ಬೈಡನ್

 ಇಸ್ರೇಲ್ ಹಾಗೂ ಪೆಲೆಸ್ತೀನ್ ಹೋರಾಟಗಾರರ ಮಧ್ಯೆ ಗಾಝಾದಲ್ಲಿ ಕದನ ವಿರಾಮ ಏರ್ಪಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಬಿಕ್ಕಟ್ಟು ಪರಿಹಾರಗೊಂಡು ಶಾಂತಿ ನೆಲೆಸುವಂತಾಗಲು ಅಮೆರಿಕವು ಇಸ್ರೇಲ್ ಸರಕಾರ, ಪೆಲೆಸ್ತೀನ್ ಅಥಾರಿಟಿ(ಪಿಎ) ಹಾಗೂ ಈ ವಲಯದ ವಿವಿಧ ದೇಶಗಳೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸಿದೆ.

ಇದೀಗ ಕದನವಿರಾಮವನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸಬೇಕಾಗಿದೆ. ಸಂಘರ್ಷ ಕಡಿಮೆಯಾಗುತ್ತಿದ್ದಂತೆ ಆ ಪ್ರದೇಶಕ್ಕೆ ಇಂಧನ ಹಾಗೂ ಇತರ ಮಾನವೀಯ ನೆರವಿನ ಉಪಕ್ರಮಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಬೇಕಿದೆ . ಜತೆಗೆ, ಸಂಘರ್ಷದಲ್ಲಿ ಆಗಿರುವ ನಾಗರಿಕ ಸಾವುನೋವುಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಬೈಡನ್ ಹೇಳಿದ್ದಾರೆ. ಈ ಮಧ್ಯೆ, ಒಂದು ವೇಳೆ ಪೆಲೆಸ್ತೀನ್ ಕಡೆಯಿಂದ ಕದನ ವಿರಾಮದ ಉಲ್ಲಂಘನೆಯಾದರೆ ಅತ್ಯಂತ ಕಠಿಣ ಪ್ರತ್ಯುತ್ತರ ನೀಡಲಾಗುವುದು ಎಂದು ಇಸ್ರೇಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News