ರಾಹುಲ್‌ಗಾಂಧಿ ಲಿಂಗ ದೀಕ್ಷೆಗೆ ರಿನೀವಲ್ ಆದ ಯಡಿಯೂರಪ್ಪರ ವರ್ಚಸ್ಸು

Update: 2022-08-09 05:00 GMT

ದಾವಣಗೆರೆ ಜನೋತ್ಸವದ ಬೆನ್ನಲ್ಲೇ, ಯಡಿಯೂರಪ್ಪನವರಿಗೆ 75 ತುಂಬಿದಾಗ ಬಿಜೆಪಿ ಅವರನ್ನು ಹೇಗೆ ನಡೆಸಿಕೊಂಡಿತು, ಅದೇ ಸಿದ್ದರಾಮಯ್ಯನವರಿಗೆ 75 ತುಂಬಿದಾಗ ಇಡೀ ಕಾಂಗ್ರೆಸ್ ಹೇಗೆ ಸಂಭ್ರಮಿಸಿತು ಎನ್ನುವ ಚರ್ಚೆ ಎರಡೂ ಪಕ್ಷಗಳ ಅಂಗಳದಲ್ಲಿ ನಡೆಯುತ್ತಿದೆ. ದಾವಣಗೆರೆಗೆ ಸ್ವತಃ ರಾಹುಲ್ ಗಾಂಧಿಯೇ ಬಂದರು. ಆದರೆ, ಬಿಜೆಪಿ, ಯಡಿಯೂರಪ್ಪಅವರನ್ನು ನಿರ್ಲಕ್ಷಿಸಿತು ಎನ್ನುವ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ರಭಸ ಪಡೆದುಕೊಳ್ಳುತ್ತಿದೆ. ಯಡಿಯೂರಪ್ಪಅವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ ಐಟಿ, ಈ.ಡಿ., ಸಿಬಿಐ ಎನ್ನುವ ಅನಸ್ತೇಷಿಯಾವನ್ನು ಚುಚ್ಚಿ ಆ ಅಸಮಾಧಾನವನ್ನು ನಿಸ್ತೇಜಗೊಳಿಸಬಹುದು ಎನ್ನುವ ನಂಬಿಕೆಯಲ್ಲಿದ್ದ ಬಿಜೆಪಿ ವರಿಷ್ಠರ ಮೆದುಳಿಗೆ ದಾವಣಗೆರೆಯ ಕಾಂಗ್ರೆಸ್ ಜನೋತ್ಸವ ಶಾಕ್ ಟ್ರೀಟ್‌ಮೆಂಟ್ ನೀಡಿದೆ.


* 2015 ಆಗಸ್ಟ್ 30ರಂದು ಹತ್ಯೆಯಾದ ಸಂಶೋಧಕ ಎಂ.ಎಂ. ಕಲಬುರ್ಗಿ ಲಿಂಗಾಯತರು. 2017 ಸೆಪ್ಟಂಬರ್ 5ರಂದು ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಲಿಂಗಾಯತರು. ಲಿಂಗಾಯತ ಸ್ಕಾಲರ್‌ಗಳನ್ನೇ ಹುಡುಕಿಕೊಂಡು ಬಂದು ಹತ್ಯೆ ಮಾಡಿದ್ದು ಏಕೆ ಎನ್ನುವ ಸಿಟ್ಟು,

* ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಎಂಟ್ರಿ ಕೊಡಿಸಿ ಮೊದಲ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರಿಗೆ 75 ವರ್ಷ ತುಂಬಿತು ಎನ್ನುವ ನೆಪದಲ್ಲಿ ನಿವೃತ್ತ ಗುಮಾಸ್ತನ ರೀತಿ ನಡೆಸಿಕೊಂಡರು ಎನ್ನುವ ಸಿಟ್ಟು
* ಪಠ್ಯ ಪರಿಷ್ಕರಣೆ ನೆಪದಲ್ಲಿ ಬಸವಾದಿ ಶರಣರು ಮತ್ತು ವಚನಕಾರರನ್ನು ಸರಕಾರ ಕೆಟ್ಟದಾಗಿ ಬಿಂಬಿಸಿ ಅವಮಾನಿಸಿತು ಎನ್ನುವ ಸಿಟ್ಟು.
* ಲಿಂಗಾಯತ ಧರ್ಮದ ಎಲ್ಲಾ ಸ್ವಾಮೀಜಿಗಳು ಒಕ್ಕೊರಲಿನಿಂದ ಪಠ್ಯ ಪರಿಷ್ಕರಣೆ ವಿರುದ್ಧ ಧ್ವನಿ ಎತ್ತಿದರೂ ಅದಕ್ಕೆ ಸರಕಾರ ಸಮರ್ಪಕ ಸ್ಪಂದನೆ ತೋರಿಸಲಿಲ್ಲ ಎನ್ನುವ ಸಿಟ್ಟು.
* 2ಎ ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ಯಾರೇ ಎನ್ನುತ್ತಿಲ್ಲ ಎನ್ನುವ ಸಿಟ್ಟು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 16ರಷ್ಟು ಇದ್ದಾರೆಂದು ಹೇಳಲಾಗುವ ಲಿಂಗಾಯತ ಮತ್ತು ವೀರಶೈವ ಸಮುದಾಯಗಳ ಒಳಗೆ ಇಷ್ಟೆಲ್ಲಾ ಅಸಹನೆಗಳು ಹೆಪ್ಪುಗಟ್ಟಿರುವ ಹೊತ್ತಿನಲ್ಲೇ...
* ಯಡಿಯೂರಪ್ಪನವರು ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದಂತೆ ಮಗ ವಿಜಯೇಂದ್ರರ ಹೆಸರನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಘೋಷಿಸಿದ್ದು.
* ಶಾಮನೂರು ಶಿವಶಂಕರಪ್ಪಅವರು ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರ್ಜರಿ ಸುವರ್ಣ ಮಹೋತ್ಸವಕ್ಕೆ ಅಗತ್ಯ ಸವಲತ್ತುಗಳನ್ನೆಲ್ಲಾ ಒದಗಿಸಿ ವ್ಯವಸ್ಥೆಯಲ್ಲಿ ಎಲ್ಲೂ ಲೋಪ ಆಗದಂತೆ ನೋಡಿಕೊಂಡಿದ್ದು.
* ಲಿಂಗಾಯತ ಸ್ವಾಮೀಜಿಗಳು ರಾಹುಲ್ ಗಾಂಧಿ ಜತೆಗೆ ನಡೆಸಿದ ಚರ್ಚೆ ಮತ್ತು ಈ ವೇಳೆ ರಾಹುಲ್ ಬಗೆಗೆ ಸ್ವಾಮೀಜಿಗಳು ಅಪಾರ ಉತ್ಸಾಹ ಮತ್ತು ಗೌರವ ತೋರಿಸಿದ್ದು.
* ಮುರುಘಾ ಶರಣರು ರಾಹುಲ್ ಗಾಂಧಿ ಅವರಿಗೆ ಲಿಂಗ ದೀಕ್ಷೆ ನೀಡಿದ್ದು.

ಇವೆಲ್ಲದರ ಒಟ್ಟು ಪರಿಣಾಮ ಎಂಬಂತೆ ರಾಜ್ಯ ಲಿಂಗಾಯತ ಸಮುದಾಯದ ಬೇಷರತ್ ನಾಯಕ ಯಡಿಯೂರಪ್ಪನವರ ವರ್ಚಸ್ಸಿನ ಕಾರ್ಡ್ ರಿನೀವಲ್ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧಾವಂತದಲ್ಲಿ ರಾಜ್ಯಕ್ಕೆ ದೌಡಾಯಿಸಿ ಯಡಿಯೂರಪ್ಪಅವರ ಜತೆ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ ಸುವರ್ಣ ಮಹೋತ್ಸವಕ್ಕೆ ವ್ಯಕ್ತವಾಗುತ್ತಿದ್ದ ಅಪಾರ ಬೆಂಬಲ ಮತ್ತು ಇದರ ಪರಿಣಾಮವನ್ನು ಸರಿಯಾಗಿ ಅಂದಾಜಿಸಿದ್ದರಿಂದಲೇ ಅಮಿತ್ ಶಾ ಅವರ ರಾಜ್ಯ ಭೇಟಿ ಕೇವಲ ಎರಡು ದಿನ ಮುಂಚಿತವಾಗಿ ನಿಗದಿಯಾಗುತ್ತದೆ. ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರ ಕಾರ್ಯಕ್ರಮಗಳು ಇಷ್ಟು ತರಾತುರಿಯಲ್ಲಿ ನಿಗದಿಯಾದ ಉದಾಹರಣೆಗಳೇ ಇಲ್ಲ.

ಈ ಧಾವಂತದ ಭೇಟಿ ಏಕಕಾಲಕ್ಕೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ, ಬಿಜೆಪಿಯಲ್ಲಿ ಯಡಿಯೂರಪ್ಪನವರ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸದ್ಯದ ರಾಜ್ಯ ರಾಜಕಾರಣದ ಕೌತುಕ ಎಂದರೆ ಇದೇ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಪ್ರಬಲರಾದಂತೆ ಬಿಜೆಪಿಯಲ್ಲಿ ಯಡಿಯೂರಪ್ಪನವರ ಮಹತ್ವ, ಬಿಜೆಪಿಯಲ್ಲಿ ಯಡಿಯೂರಪ್ಪನವರು ಪ್ರಬಲರಾದಂತೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಮಹತ್ವ ಹೆಚ್ಚುತ್ತಾ ಹೋಗುತ್ತದೆ.
 
ದಾವಣಗೆರೆ ಜನೋತ್ಸವದ ಬೆನ್ನಲ್ಲೇ, ಯಡಿಯೂರಪ್ಪನವರಿಗೆ 75 ತುಂಬಿದಾಗ ಬಿಜೆಪಿ ಅವರನ್ನು ಹೇಗೆ ನಡೆಸಿಕೊಂಡಿತು, ಅದೇ ಸಿದ್ದರಾಮಯ್ಯನವರಿಗೆ 75 ತುಂಬಿದಾಗ ಇಡೀ ಕಾಂಗ್ರೆಸ್ ಹೇಗೆ ಸಂಭ್ರಮಿಸಿತು ಎನ್ನುವ ಚರ್ಚೆ ಎರಡೂ ಪಕ್ಷಗಳ ಅಂಗಳದಲ್ಲಿ ನಡೆಯುತ್ತಿದೆ. ದಾವಣಗೆರೆಗೆ ಸ್ವತಃ ರಾಹುಲ್ ಗಾಂಧಿಯೇ ಬಂದರು. ಆದರೆ, ಬಿಜೆಪಿ, ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿತು ಎನ್ನುವ ಚರ್ಚೆ ಸಾಮಾಜಿಕ ಜಾಲ ತಾಣಗಳಲ್ಲಿ ರಭಸ ಪಡೆದುಕೊಳ್ಳುತ್ತಿದೆ. ಯಡಿಯೂರಪ್ಪ ಅವರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ ಐಟಿ, ಈಡಿ, ಸಿಬಿಐ ಎನ್ನುವ ಅನಸ್ತೇಷಿಯಾವನ್ನು ಚುಚ್ಚಿ ಆ ಅಸಮಾಧಾನವನ್ನು ನಿಸ್ತೇಜಗೊಳಿಸಬಹುದು ಎನ್ನುವ ನಂಬಿಕೆಯಲ್ಲಿದ್ದ ಬಿಜೆಪಿ ವರಿಷ್ಠರ ಮೆದುಳಿಗೆ ದಾವಣಗೆರೆಯ ಕಾಂಗ್ರೆಸ್ ಜನೋತ್ಸವ ಶಾಕ್ ಟ್ರೀಟ್‌ಮೆಂಟ್ ನೀಡಿದೆ. ಮತ್ತೊಂದು ಕಡೆ ಕರಾವಳಿಯಲ್ಲಿ ನಡೆಯುತ್ತಿರುವ ಕೋಮುಕೊಲೆಗಳು ಈಗ ಸೀದಾ ಬಿಜೆಪಿ ಕಾರ್ಯಕರ್ತರ ಮನೆಬಾಗಿಲಿಗೇ ಬಂದು ನಿಂತಿವೆ. ಎಲ್ಲೋ ನಡೆಯುತ್ತಿದ್ದ ಕೊಲೆಗಳಿಂದ ಲಾಭ ಮಾಡಿಕೊಳ್ಳುತ್ತಿದ್ದವರಿಗೆ ಆ ಕೊಲೆಗಳು ತಮ್ಮ ಮನೆ ಹೊಸ್ತಿಲಿಗೇ ಬಂದುಬಿಟ್ಟಿರುವುದು ಸಹಜವಾಗಿ ಗಾಬರಿ ಹುಟ್ಟಿಸಿವೆ. ಈ ಕಾರಣಕ್ಕೇ, ಕಾರ್ಯಕರ್ತರ ಹೆಣದ ಮೇಲೆ ಬಿಜೆಪಿ ಸರಕಾರ ನಡೆಯುತ್ತಿದೆ ಎನ್ನುವ ಆಕ್ರೋಶದ ಮಾತುಗಳು ಬಿಜೆಪಿ ಕಾರ್ಯಕರ್ತರ ಬಾಯಲ್ಲೇ ಬಂದು ಅದೀಗ ಸಾಮೂಹಿಕ ರಾಜೀನಾಮೆಯ ಹಂತ ತಲುಪಿದೆ. ಇದನ್ನು ಹೇಗೆ ನಿರ್ವಹಿಸಬೇಕೆಂದು ಗೊತ್ತಾಗದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕಕ್ಕಾಬಿಕ್ಕಿಯಾಗಿರುವಾಗಲೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು, ರಾಜೀನಾಮೆ ಕೊಡುವವರು ಹೇಡಿಗಳು ಎನ್ನುವ ಮೂಲಕ ತಮ್ಮದೇ ಕಾರ್ಯಕರ್ತರ ಅಸಹನೆಗೆ ತುಪ್ಪಸುರಿದರು.

ಹೀಗಾಗಿ ಯಡಿಯೂರಪ್ಪನವರನ್ನು ಮನೆಗೆ ಕಳುಹಿಸಿ ಬೊಮ್ಮಾಯಿ ಅವರನ್ನು ಪ್ರತಿಷ್ಠಾಪಿಸುವಾಗ ಇದ್ದ ನಿರೀಕ್ಷೆಗಳು ತಲೆಕೆಳಗಾಗಿವೆ. ಹಿಜಾಬ್‌ನಿಂದ ಹಿಡಿದು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರದವರೆಗೂ ಸಾಲು ಸಾಲು ಜಾತಿ ಶ್ರೇಷ್ಠತೆಯ ವ್ಯಸನಗಳನ್ನೇ ಬಿಂಬಿಸುವ ಅವಘಡಗಳು ನಡೆದವು. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ನಾಡಿನ ಎಲ್ಲಾ ಜನ ಸಮುದಾಯದ ಸಾಂಸ್ಕೃತಿಕ ಸಂಕೇತಗಳಿಗೆ ಅವಮಾನವಾದರೂ ಇದನ್ನು ನಿರ್ವಹಿಸುವಲ್ಲಿ ಸಂಪೂರ್ಣ ಸೋತ ಮುಖ್ಯಮಂತ್ರಿ ಬೊಮ್ಮಾಯಿಯವರು, ಪಿಎಸ್ಸೈ ನೇಮಕಾತಿ ಹಗರಣ ಸೇರಿದಂತೆ ತಮ್ಮ ಸರಕಾರದ ವಿರುದ್ಧ ಬೀಸುತ್ತಲೇ ಇರುವ ಭ್ರಷ್ಟಾಚಾರದ ಬಿಸಿಗಾಳಿಯನ್ನು ತಡೆಯಲು ಸಾಧ್ಯವೇ ಆಗುತ್ತಿಲ್ಲ. ಸ್ವತಃ ಬಿಜೆಪಿ ನಾಯಕರೇ ತಮ್ಮ ಸರಕಾರದ ಭ್ರಷ್ಟಾಚಾರಗಳ ವಿರುದ್ಧ ಬೇಸತ್ತು ಬಹಿರಂಗವಾಗಿ ಬಯ್ಯುತ್ತಿರುವ ಸಂಕಷ್ಟಕ್ಕೆ ಬೊಮ್ಮಾಯಿ ಸರಕಾರ ಜೋತು ಬಿದ್ದಿದೆ.
ಚುನಾವಣಾ ವರ್ಷದಲ್ಲಿ ಈ ಎಲ್ಲದರ ಪರಿಣಾಮಗಳು-ಅಡ್ಡ ಪರಿಣಾಮಗಳು ಏನಾಗುತ್ತವೆ ಎನ್ನುವುದು ಅಮಿತ್ ಶಾ ಅವರ ಅಂದಾಜಿಗೆ ಸಿಕ್ಕಿದೆ. 2018ರಲ್ಲಿ ಯಡಿಯೂರಪ್ಪಅವರ ನೇತೃತ್ವವಿತ್ತು. ಜತೆಗೆ ಪ್ರಧಾನಿ ಮೋದಿ ಅವರ ವರ್ಚಸ್ಸು ಈಗಿನಷ್ಟು ಪತನಗೊಂಡಿರಲಿಲ್ಲ ಆಗ ನಡೆದ ಚುನಾವಣೆಯಲ್ಲೇ ಬಿಜೆಪಿ 105 ಸೀಟು ತಲುಪಲು ಏದುಸಿರುಬಿಟ್ಟಿತ್ತು.
 
ಈಗ ರೂಪಾಯಿ ಮೌಲ್ಯ ಡಾಲರ್ ಎದುರು ಅತ್ಯಂತ ಅಸಹ್ಯವಾಗಿ ಕುಸಿಯುತ್ತಿದೆ. ಆರ್ಥಿಕತೆ ಐಸಿಯುನಲ್ಲಿದೆ. ಭಾರತದ ಮಾರುಕಟ್ಟೆಯ ಜುಟ್ಟು ಚೀನಾ ಕೈಗೆ ಸೇರಿ ಮೋದಿಯವರ ಪ್ರಭಾವ ಮರಳಿನ ಗೋಡೆಯಂತಾಗಿದೆ. ಈ ಹೊತ್ತಲ್ಲಿ ಯಡಿಯೂರಪ್ಪಇಲ್ಲದೆ ಕೇವಲ ತಮ್ಮ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಆತ್ಮಹತ್ಯೆ ಮಾಡಿಕೊಂಡಂತೆ ಎನ್ನುವುದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಗೊತ್ತಿದೆ. ಸಾಲದ್ದಕ್ಕೆ ಇತ್ತೀಚೆಗೆ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಅವರು, ‘‘ಕೇವಲ ಮೋದಿ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ’’ ಎಂದು ಬಹಿರಂಗವಾಗಿಯೇ ಹೇಳಿದ್ದು ವರದಿಯಾಗಿತ್ತು. ಈ ವರದಿಗಳನ್ನು ಹೈಕಮಾಂಡ್ ಮುಂದಿಟ್ಟು ಸಂತೋಷ್ ಅವರ ಬೇರುಗಳನ್ನು ಕತ್ತರಿಸಿ ಅವರನ್ನು ರಾಜ್ಯದ ಮಟ್ಟಿಗೆ ಬರಡಾಗಿಸಿದ್ದ ಬೊಮ್ಮಾಯಿ ಅವರಿಗೂ ಸಂತೋಷ್‌ಜಿ ಮಾತು ಸತ್ಯ ಎನ್ನುವುದು ಗೊತ್ತಿದೆ. ಜತೆಗೆ ತಮ್ಮ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಏನಾಗಬಹುದು ಎನ್ನುವುದೂ ಗೊತ್ತಿದೆ. ಹೀಗಾಗಿ ಯಡಿಯೂರಪ್ಪ ನಮ್ಮ ಜತೆಗೇ ಇದ್ದಾರೆ, ಹೈ ಕಮಾಂಡ್ ಯಡಿಯೂರಪ್ಪ ಅವರನ್ನು ಗುಜರಿಗೆ ತಳ್ಳುವ ಹಳೆ ಗಾಡಿಯಂತೆ ನಡೆಸಿಕೊಳ್ಳುತ್ತಿಲ್ಲ ಎನ್ನುವ ಸಂದೇಶವನ್ನು ನೀಡಬೇಕಿದ್ದರಿಂದಲೇ ದಾವಣಗೆರೆ ಕಾಂಗ್ರೆಸ್ ಜನೋತ್ಸವ ಮತ್ತು ರಾಹುಲ್‌ಗಾಂಧಿ ಲಿಂಗ ದೀಕ್ಷೆಯ ಬೆನ್ನಲ್ಲೇ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ಭೇಟಿಗೆ ಬೊಮ್ಮಾಯಿಯವರೇ ಸ್ಕೆಚ್ ಹಾಕಿರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುವುದು ಬೊಮ್ಮಾಯಿ ಅವರನ್ನು ಎರಡು ದಶಕಗಳಿಂದ ಹತ್ತಿರದಿಂದ ಗಮನಿಸುತ್ತಿರುವವರ ಅಭಿಪ್ರಾಯ. ಒಟ್ಟಿನಲ್ಲಿ, ಯಡಿಯೂರಪ್ಪಮತ್ತು ಅಮಿತ್ ಶಾ ಭೇಟಿಯಿಂದ ಬೇರೇನೂ ಪ್ರಯೋಜನ ಆಗದಿದ್ದರೂ ಕಟೀಲು ಅವರ ನಾಯಕತ್ವಕ್ಕೆ ಕಂಟಕ ಆಗುವುದಂತೂ ಖಚಿತ. ಬೀದಿ ಹೆಣಗಳಾಗಲು ನಾವೇನು ಬಿಟ್ಟಿ ಬಿದ್ದಿದ್ದೀವಾ ಎನ್ನುವ ಕರಾವಳಿ ಬಿಲ್ಲವ ಕಾರ್ಯಕರ್ತರ ಆಕ್ರೋಶವನ್ನು ಸ್ವಲ್ಪಮಟ್ಟಿಗೆ ತಣ್ಣಗೆ ಮಾಡಲು ಕಟೀಲು ಅವರ ಬದಲಾವಣೆ ನೆರವಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಬಿಲ್ಲವ ಸಮುದಾಯದ ಸಚಿವ ಸುನೀಲ್‌ಕುಮಾರ್ ಹೆಗಲಿಗೆ ಹೋಗಬಹುದು. ಇವುಗಳ ಜತೆಗೆ ದಾವಣಗೆರೆ ಜನೋತ್ಸವದಿಂದ ರಿನೀವಲ್ ಆದ ಯಡಿಯೂರಪ್ಪಅವರ ವರ್ಚಸ್ಸಿನ ವ್ಯಾಲಿಡಿಟಿ ಎಷ್ಟು ದಿನ ಎನ್ನುವುದು ಬಿಜೆಪಿ ಹೈಕಮಾಂಡ್‌ನ ಮುಂದಿನ ಹೆಜ್ಜೆಗಳಲ್ಲಿ ಅಡಗಿದೆ.

Writer - ಗಿರೀಶ್ ಕೋಟೆ

contributor

Editor - ಗಿರೀಶ್ ಕೋಟೆ

contributor

Similar News