ಎ.ಕೆ. ಸುಬ್ಬಯ್ಯ ಇವತ್ತಿಗೆ ಏಕೆ ಮುಖ್ಯ?

Update: 2022-08-09 06:01 GMT

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ನಾರಾಯಣಗುರು, ಕನಕದಾಸ, ಕುವೆಂಪು ಅವರ ಮಾನವೀಯ ಪಠ್ಯಕ್ರಮವನ್ನು ಅಧಿಕಾರದ ಬಲದಿಂದ ಮೂಲೆಗೆ ಸರಿಸಿ, ಮನುಸ್ಮತಿಯನ್ನು ಮುನ್ನೆಲೆಗೆ ತರುವ ಆರೆಸ್ಸೆೆಸ್‌ನ ಹುನ್ನಾರವನ್ನು ದೇವನೂರ ಮಹಾದೇವ ಅವರು ವಿರೋಧಿಸಿದರು. ಸರಕಾರದ ಕ್ರಮ ಖಂಡಿಸಿ ತಮ್ಮ ಪಠ್ಯವನ್ನು ಬೋಧಿಸದಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಾಲದು ಎಂದು ‘ಆರೆಸ್ಸೆಸ್ ಆಳ ಮತ್ತು ಅಗಲ’ ಎಂಬ ಪುಟ್ಟ ಪುಸ್ತಿಕೆಯನ್ನು ಹೊರತಂದು, ಆರೆಸ್ಸೆಸ್ ಅಜೆಂಡಾವನ್ನು ಬಿಚ್ಚಿಟ್ಟರು. ಅವಾಂತರಕಾರಿ ಆರೆಸ್ಸೆಸ್‌ನ ಹಿಕ್ಮತ್ತುಗಳನ್ನು ನಾಡಿನ ಜನರ ಮಸ್ತಕಕ್ಕಿಳಿಸಿದರು. ಜಾಗೃತರನ್ನಾಗಿಸಿದರು. ಭಾರತದ ಬಹುತ್ವವನ್ನು ಬಲಹೀನಗೊಳಿಸುವ, ಸಂವಿಧಾನವನ್ನು ಸೈಡಿಗೆ ಸರಿಸುವ ಆರೆಸ್ಸೆಸ್‌ನ ಈ ವರಸೆ ಹೊಸದೇನು ಅಲ್ಲ. ಅವರಿಗೆ ಅವಕಾಶ ಸಿಕ್ಕಾಗಲೆಲ್ಲ, ಮನುಸ್ಮತಿಯನ್ನು ಮುನ್ನಲೆಗೆ ತರುವ ಕೆಲಸದಲ್ಲಿ ಅವರು ಸಾಂವಿಧಾನಿಕ ರೀತಿ ನೀತಿಗಳನ್ನೇ ಸಡಿಲಗೊಳಿಸುತ್ತಾರೆ. ಹಾಗೆಯೇ ಅದಕ್ಕೆ ಪ್ರತ್ಯುತ್ತರವಾಗಿ ನಾಡಿನ ಪ್ರಜ್ಞಾವಂತರೂ ಕೂಡ ಆರೆಸ್ಸೆಸ್‌ನ ಕುತಂತ್ರಗಳನ್ನು, ಮನುಷ್ಯವಿರೋಧಿ ಮಸಲತ್ತುಗಳನ್ನು ಕಾಲಕಾಲಕ್ಕೆ ಖಂಡಿಸುತ್ತ, ಜನರನ್ನು ಜಾಗೃತರನ್ನಾಗಿ ಮಾಡುತ್ತಲೇ ಬಂದಿದ್ದಾರೆ. ಈ ದಿಸೆಯಲ್ಲಿ ದಾಖಲಾದ ನಾಡಿನ ಬಹುಮುಖ್ಯ ಮೊದಲ ದನಿ ಎ.ಕೆ. ಸುಬ್ಬಯ್ಯನವರು. 1934 ಆ.9ರಂದು ಜನಿಸಿದ ಅವರು ಮೂಲತಃ ಕೊಡಗಿನ ಕೃಷಿಕರು. ಕಾನೂನುಶಾಸ್ತ್ರ ಓದಿಕೊಂಡ ಪ್ರಸಿದ್ಧ ವಕೀಲರು. ಲೋಹಿಯಾವಾದಿ ರಾಜಕೀಯ ಹೋರಾಟಗಾರರು. 1963ರಲ್ಲಿ ವಕೀಲ ವೃತ್ತಿ ಆರಂಭಿಸಿ, ಜನಸಂಪರ್ಕ ಸಾಧಿಸಿದ ನಂತರ, 1966ರಲ್ಲಿ ಜನಸಂಘದ ಮೂಲಕ ರಾಜಕಾರಣಕ್ಕೆ ಕಾಲಿಟ್ಟರು. ಜನಸಂಘದಿಂದಲೇ 1968 ಮತ್ತು 1974ರಲ್ಲಿ ಮೈಸೂರು, ಕೊಡಗು ಮತ್ತು ಮಂಗಳೂರು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿ, ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ತರ್ಕಬದ್ಧವಾಗಿ ವಿಚಾರ ಮಂಡಿಸಬಲ್ಲ ಉತ್ತಮ ಸಂಸದೀಯ ಪಟುವಾಗಿ ಸುದ್ದಿಯಾಗುತ್ತಿದ್ದ ದಿನಗಳಲ್ಲಿಯೇ, 1975ರಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ಕರ್ನಾಟಕದಲ್ಲಿ ಮೊದಲು ವಿರೋಧಿಸಿದ್ದು ಎ.ಕೆ.ಸುಬ್ಬಯ್ಯನವರು. ದಿಟ್ಟ ಮಾತಿನ, ಗಟ್ಟಿ ನಿಲುವುಗಳ ಸುಬ್ಬಯ್ಯನವರು ಪ್ರಭುತ್ವದ ವಿರುದ್ಧ ಸೆಟೆದು ನಿಂತರು. ಬಂಧನಕ್ಕೊಳಗಾದರು. ರಾಜಕೀಯ ಕೈದಿಯಾಗಿ 18 ತಿಂಗಳ ಕಾಲ ಸೆರೆವಾಸ ಅನುಭವಿಸಿದರು. ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರಿಂದಾಗಿ, ಕಾಂಗ್ರೆಸೇತರ ಪಕ್ಷಗಳು ಒಂದಾದವು. ಜನತಾ ಪಕ್ಷ ಅಸ್ತಿತ್ವಕ್ಕೆ ಬಂದು, ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಅಧಿಕಾರಕ್ಕೇರುತ್ತಿದ್ದಂತೆಯೇ ಒಡೆದು ಹೋಳಾಯಿತು. ಜನಸಂಘ ಭಾರತೀಯ ಜನತಾ ಪಕ್ಷವಾಗಿ ಅವತರಿಸಿತು. ಕರ್ನಾಟಕದಲ್ಲಿ 1980ರಲ್ಲಿ, ಎ.ಕೆ.ಸುಬ್ಬಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು ಹಾಗೂ ಮೂರನೇ ಬಾರಿಗೆ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾದರು. ಆ ನಂತರ ಬಿಜೆಪಿಯ ಮುಂಚೂಣಿ ನಾಯಕರಾಗಿ, ಬಿಜೆಪಿ ಎಂದರೆ ಸುಬ್ಬಯ್ಯ ಎಂಬಂತಾಗಿ ಇಡೀ ಕರ್ನಾಟಕವನ್ನು ಸುತ್ತಿ, ಕಾರ್ಯಕರ್ತರನ್ನು ಸಂಘಟಿಸಿ, ಯುವಕರನ್ನು ಗುರುತಿಸಿ ಪಕ್ಷಕ್ಕೊಂದು ಸುಭದ್ರ ನೆಲೆ ಸೃಷ್ಟಿಸಿದರು. ಸುಬ್ಬಯ್ಯನವರ ನಾಯಕತ್ವದಲ್ಲಿ 1983ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 110 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 18 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ನೆಲೆ-ಬೆಲೆ ತಂದುಕೊಟ್ಟರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ರಚನೆಯಾಗುವಾಗ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗುವಾಗ, ಸುಬ್ಬಯ್ಯನವರ ಬಿಜೆಪಿ ಹೊರಗಿನಿಂದ ಬೆಂಬಲಿಸಿ, ಸರಕಾರ ರಚಿಸುವ ಮಹತ್ವದ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿದರು. ಆದರೆ ಬಿಜೆಪಿ ಬೆಳವಣಿಗೆಗಾಗಿ ಇಷ್ಟೆಲ್ಲ ಮಾಡಿದ ಸುಬ್ಬಯ್ಯನವರು, ಆರೆಸ್ಸೆಸ್‌ನ ಹಳೆತಲೆಗಳ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪುತ್ತಿರಲಿಲ್ಲ. ಅವರು ಹೇಳಿದ್ದನ್ನು ಪಾಲಿಸುತ್ತಲೂ ಇರಲಿಲ್ಲ.

ಬಿಜೆಪಿಯನ್ನು ಮೇಲ್ಜಾತಿಗಳ ಹಿಡಿತದಿಂದ ಬಿಡಿಸುವ, ಭ್ರಷ್ಟಾಚಾರ ವಿರೋಧಿ ಪಕ್ಷವನ್ನಾಗಿ ಬೆಳೆಸುವ ಮಹತ್ವಾಕಾಂಕ್ಷೆ ಸುಬ್ಬಯ್ಯನವರದ್ದಾಗಿತ್ತು. ಆದರೆ ಬಿಜೆಪಿಯ ಮಾಸ್ಟರ್‌ಮೈಂಡ್ ಆರೆಸ್ಸೆಸ್‌ಗೆ ಇದು ಬೇಡವಾಗಿತ್ತು. ಇದು ಆರೆಸ್ಸೆಸ್ ಮತ್ತು ಸುಬ್ಬಯ್ಯನವರ ನಡುವಿನ ಸೈದ್ಧಾಂತಿಕ ತಿಕ್ಕಾಟಕ್ಕೆ ಕಾರಣವಾಯಿತು. ಮುಂದುವರಿದು, ಬಹಿರಂಗ ಬಡಿದಾಟಗಳ ಮಟ್ಟಕ್ಕೆ ಹೋಗಿ, ಪಕ್ಷದ ಅಧ್ಯಕ್ಷರಿಗೆ ಪಕ್ಷದ ಕಚೇರಿಯ ಟೆಲಿಫೋನ್, ಟೈಪ್‌ರೈಟರ್‌ಗಳನ್ನು ಬಳಸಲು ಕೂಡ ಸಿಗದಂತೆ ಆರೆಸ್ಸೆಸ್ ಸಣ್ಣತನ ತೋರಿತು. ಬಾಲ್ಯಾವಸ್ಥೆಯಲ್ಲಿದ್ದ ಬಿಜೆಪಿಗೆ ಸುಬ್ಬಯ್ಯ ಹೊರತಾದ ಇನ್ನೊಬ್ಬ ಗಟ್ಟಿ ನಾಯಕ ಇಲ್ಲ ಎಂಬ ಪರಿಸ್ಥಿತಿ ಇತ್ತು. ಆದರೂ ಆರೆಸ್ಸೆಸ್ ಅಜೆಂಡಾಕ್ಕೆ ವಿರುದ್ಧವಾಗಿ ಸೆಟೆದುನಿಂತ ಸುಬ್ಬಯ್ಯನವರನ್ನು ಸದೆಬಡಿಯಲು ಹವಣಿಸಿತು. ಅವಮಾನಿಸಿ ಹೊರಗಟ್ಟಲು ತಂತ್ರಗಳನ್ನು ಹೆಣೆಯಿತು. ಅನ್ಯಾಯ ಕಂಡಾಕ್ಷಣ ಉರಿದು ಬೀಳುವ ಸುಬ್ಬಯ್ಯನವರು, ನೇರ, ನಿಖರ, ಪ್ರಖರ, ನಿಷ್ಠುರ ಗುಣಗಳಿಂದಾಗಿಯೇ ಅವಕಾಶಗಳಿಂದ ವಂಚಿತರಾದರೂ ಲೆಕ್ಕಿಸದೆ ಆರೆಸ್ಸೆಸ್ ವಿರುದ್ಧ ಸ್ಫೋಟಗೊಂಡರು. ಆರೆಸ್ಸೆಸ್‌ನ ಕುತಂತ್ರವನ್ನು ಎಳೆಎಳೆಯಾಗಿ ಇಂಗ್ಲಿಷ್ ದೈನಿಕವೊಂದರಲ್ಲಿ ಬಿಡಿಸಿಟ್ಟು ಬಯಲು ಮಾಡುವ ಲೇಖನ ಬರೆದರು. ಆ ಲೇಖನದಲ್ಲಿ ಆರೆಸ್ಸೆಸ್‌ನ ಅಂತರಂಗದ ಕೊಳಕೆಲ್ಲ ಹೊರಬಿದ್ದು, ಮನುಸ್ಮತಿ ವ್ಯಾಪಕ ಚರ್ಚೆಗೊಳಗಾಯಿತು. ಆಘಾತಕ್ಕೊಳಗಾದ ಆರೆಸ್ಸೆಸ್ ಅದನ್ನೇ ನೆಪವಾಗಿಟ್ಟುಕೊಂಡು 1985ರಲ್ಲಿ ಸುಬ್ಬಯ್ಯರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿತು. ಆಗ ಸುಬ್ಬಯ್ಯನವರು, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ವಾಜಪೇಯಿಗೆ ದೀರ್ಘ ಪತ್ರ ಬರೆದರು. ಆ ಪತ್ರವನ್ನೇ ಇನ್ನಷ್ಟು ವಿಸ್ತರಿಸಿ ‘ಆರೆಸ್ಸೆಸ್ ದಿ ವ್ಹಿಪ್ ಹ್ಯಾಂಡ್ ಆಫ್ ಬಿಜೆಪಿ’ ಎಂಬ ಪುಸ್ತಕವಾಗಿ ಪ್ರಕಟಿಸಿದರು.

ಸುಬ್ಬಯ್ಯನವರು ಜನಸಂಘ-ಬಿಜೆಪಿಯಲ್ಲಿದ್ದು, ಆರೆಸ್ಸೆಸ್‌ನ ಅಂತರಂಗವನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದರು. ಆರೆಸ್ಸೆಸ್‌ನ ಅಜೆಂಡಾ ಏನೆಂದರೆ, ಭಾರತ ಸಂವಿಧಾನದ ಸ್ಥಾನದಲ್ಲಿ ಮನುಸ್ಮತಿ, ಮನುಸಂಹಿತೆ ಅಥವಾ ಮನು ಧರ್ಮಶಾಸ್ತ್ರವಿರಬೇಕೆಂಬುದು. ಶೂದ್ರರು, ದಲಿತರು ಮತ್ತು ಮಹಿಳೆಯರನ್ನು ಕೀಳಾಗಿ ಕಾಣುವ ಮನುಸ್ಮತಿ ಅವರ ಅಪೇಕ್ಷೆಯ ಸಂವಿಧಾನವಾಗಬೇಕೆಂಬುದು. ಇಲ್ಲೇ ಹುಟ್ಟಿ ಬೆಳೆದ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಂಡು, ಅವರನ್ನು ದೇಶದಿಂದ ಹೊರಗಟ್ಟಬೇಕೆಂಬುದು. ಹಾಗಾಗಿಯೇ ಅವರಿಗೆ ಬಹುತ್ವವನ್ನು ಬೋಧಿಸುವ, ವೈವಿಧ್ಯತೆಯೇ ಸೊಗಸು ಎಂದು ಸಾರುವ ಸಂವಿಧಾನ ಕಂಡರಾಗದು. ಆ ಕಾರಣಕ್ಕಾಗಿಯೇ ಸಂವಿಧಾನ ರಚನೆ ಮತ್ತು ಮಂಡನೆಯಾಗುವ ಕಾಲಕ್ಕೇ ಆರೆಸ್ಸೆಸ್ ಬಹಿರಂಗವಾಗಿಯೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಇದೆಲ್ಲವನ್ನೂ ಅರಿತಿದ್ದ ಸುಬ್ಬಯ್ಯನವರು ಆರೆಸ್ಸೆಸ್‌ನ ಕಾರ್ಯವೈಖರಿ, ಚಿಂತನಾಕ್ರಮ, ಯೋಚನೆ-ಯೋಜನೆಗಳನ್ನು ಆ ಪುಸ್ತಕದಲ್ಲಿ ಸವಿಸ್ತಾರವಾಗಿ ದಾಖಲಿಸಿದರು. ಆ 80 ಪುಟಗಳ ಪುಸ್ತಕವನ್ನು ಕೇವಲ ರೂ. 10 ಬೆಲೆಗೆ ‘ಸುದ್ದಿ ಸಂಗಾತಿ’ ಪತ್ರಿಕೆ 1988ರಲ್ಲಿ ‘ಆರೆಸ್ಸೆಸ್ ಅಂತರಂಗ’ ಎಂಬ ಹೆಸರಲ್ಲಿ ಪ್ರಕಟಿಸಿತು. ಜನಸಂಘದಲ್ಲಿದ್ದ ಸುಬ್ಬಯ್ಯನವರೇ ಆರೆಸ್ಸೆಸ್ ಕುತಂತ್ರ ಕುರಿತು ಬರೆದಾಗ, ಅದು ಪುಸ್ತಕವಾಗಿ ಹೊರಬಂದಾಗ, ಆರೆಸೆಸ್ಸನ್ನು ತರ್ಕಬದ್ಧವಾಗಿ ಟೀಕಿಸುತ್ತಿದ್ದ, ಚೆಡ್ಡಿ ಚೆಡ್ಡಿ ಎಂದು ಛೇಡಿಸುತ್ತಿದ್ದ ಲಂಕೇಶರು, ತಮ್ಮ ‘ಲಂಕೇಶ್ ಪತ್ರಿಕೆಯಲ್ಲಿ ಪ್ರತಿವಾರ ಕಂತುಗಳ ರೀತಿ ‘ಆರೆಸ್ಸೆಸ್ ಅಂತರಂಗ’ವನ್ನು ಪ್ರಕಟಿಸಿ, ನಾಡಿನ ಜನರಲ್ಲಿ ಜಾಗೃತಿಯನ್ನುಂಟುಮಾಡಿದರು. ಕರ್ನಾಟಕದ ಮಾಧ್ಯಮಗಳು ನೀಡಿದ ನೈತಿಕ ಬೆಂಬಲದಿಂದಾಗಿ ಸುಬ್ಬಯ್ಯನವರಿಗೆ ಆನೆ ಬಲ ಬಂದಂತಾಯಿತು.

ತಮ್ಮದೇ ಸ್ವಂತ ‘ಕನ್ನಡನಾಡು’ ಪಕ್ಷ ಕಟ್ಟಿದರು. ಅದು ಕೈಗೂಡದಿದ್ದಾಗ ಕಾಂಗ್ರೆಸ್ ಪಕ್ಷ ಸೇರಿ, ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ವಿಧಾನಮಂಡಲದಲ್ಲಿ ಪ್ರತಿನಿತ್ಯ ಸುದ್ದಿ ಸಬ್ಬಯ್ಯರಾಗಿ ಮಿಂಚತೊಡಗಿದರು. ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಸುಬ್ಬಯ್ಯನವರು, ಅನಿಷ್ಟ ಆಚರಣೆಗಳು, ಗೊಡ್ಡು ಸಂಪ್ರದಾಯಗಳ ಕಟ್ಟಾ ವಿರೋಧಿಯಾಗಿ ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೆ ಗುರಿಯಾದರೂ ಬಿಡದೆ, ನಾಡಿನ ಜನರನ್ನು ಎಚ್ಚರಿಸುತ್ತಲೇ ಸಾಗಿದರು. ಜಾತ್ಯತೀತ, ವರ್ಗರಹಿತ ಸಮಾಜ ನಿರ್ಮಾಣದ ಆಶಯಗಳನ್ನಿಟ್ಟುಕೊಂಡಿದ್ದ ಸುಬ್ಬಯ್ಯನವರು, ಮಾನವ ಹಕ್ಕುಗಳ ಹೋರಾಟಗಳಿಗೆ ನಿರಂತರ ದನಿಯಾದರು. ಬಡವರು, ಅಸಹಾಯಕರು, ಮಹಿಳೆಯರ ಸಮಸ್ಯೆ-ಸಂಕಟಗಳಿಗೆ ಸ್ಪಂದಿಸುತ್ತಾ, ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾದರು. ಸುಬ್ಬಯ್ಯನವರು ಎಂದೂ ಅಧಿಕಾರಕ್ಕಾಗಿ ಆಸೆಪಡದವರು. ಆಳುವವರನ್ನು ಸದಾ ಎಚ್ಚರಿಕೆಯ ಸ್ಥಿತಿಯಲ್ಲಿಟ್ಟಿದ್ದರು.

ಸಾಮಾಜಿಕ-ರಾಜಕೀಯ ಹೋರಾಟಗಳನ್ನು ಕಟ್ಟುತ್ತಲೇ, ಕೋಮುವಾದದ ವಿರುದ್ಧದ ಗಟ್ಟಿ ದನಿಯಾಗಿದ್ದರು. ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಜನಪರ ಹೋರಾಟಗಳೊಂದಿಗೆ ಕೊನೆಯವರೆಗೂ ಗುರುತಿಸಿಕೊಂಡಿದ್ದರು. ಆರೆಸ್ಸೆಸ್, ಬಿಜೆಪಿಯ ಅಪಾಯಗಳನ್ನು ಜನರಿಗೆ ತಲುಪಿಸುತ್ತಾ, ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದವರ ಬೆನ್ನಿಗೆ ನಿಲ್ಲುತ್ತಿದ್ದರು. ಆರೆಸ್ಸೆಸ್‌ನಲ್ಲಿದ್ದು, ಅದರ ಕರಾಳ ಮುಖಗಳನ್ನು ಕಂಡು ಹೊರಬಂದಿದ್ದ ಮಹೇಂದ್ರ ಕುಮಾರ್ ಅವರೊಂದಿಗಿನ ಕೊನೆಯ ಸಂದರ್ಶನದಲ್ಲಿ ‘‘ಗಾಂಧಿ ಹಿಂದೂ, ಗೋಡ್ಸೆ ಹಿಂದುತ್ವ’’ ಎಂದು ಖಡಕ್ಕಾಗಿ ಹೇಳುವ ಮೂಲಕ ಸಮಾಜಕ್ಕೆ ಸಂದೇಶ ರವಾನಿಸಿದ್ದರು. ಇಂತಹ ಫೈರ್ ಬ್ರ್ಯಾಂಡ್ ಸುಬ್ಬಯ್ಯನವರು ಈಗಿಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ಮಾರ್ಗವಿದೆ, ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡ ಮನಸ್ಸುಗಳಿವೆ, ಸಂಘಟನೆಗಳ ಮೂಲಕ ಹೊರಹೊಮ್ಮಿದ ಹೋರಾಟಗಾರರಿದ್ದಾರೆ. ಅದರ ಮುಂದುವರಿದ ಭಾಗವಾಗಿ, 2018ರಲ್ಲಿ ಲಡಾಯಿ ಪ್ರಕಾಶನದಿಂದ ಎ.ಕೆ.ಸುಬ್ಬಯ್ಯನವರ ‘ಆರೆಸ್ಸೆಸ್ ಅಂತರಂಗ ಮತ್ತು ಇತರ ಲೇಖನ’ಗಳು ಮರುಮುದ್ರಣಗೊಂಡಿದೆ. ಇತ್ತೀಚೆಗೆ ದೇವನೂರ ಮಹಾದೇವರಿಂದ ‘ಆರೆಸ್ಸೆಸ್ ಆಳ ಮತ್ತು ಅಗಲ’ವೂ ಹೊರಬಂದಿದೆ. ಬೇರೆ ಭಾಷೆಗಳಿಗೂ ಭಾಷಾಂತರವಾಗಿ ದೇಶದ ಜನರನ್ನು ಎಚ್ಚರದ ಸ್ಥಿತಿಯಲ್ಲಿಡುತ್ತಿದೆ. ಆದರೆ ಕೋಮುವಾದಿಗಳ ಅತಿಯಾದ ಅಟ್ಟಹಾಸವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನಾವು ಇಷ್ಟಕ್ಕೇ ತೃಪ್ತರಾಗದೆ, ವಿರಮಿಸದೆ; ಸುಬ್ಬಯ್ಯನವರ ದಿಟ್ಟ-ಸ್ಪಷ್ಟ ಚಿಂತನೆಯನ್ನು ವಿಸ್ತರಿಸುವ ತುರ್ತಿನ ಕಡೆ ಕಾರ್ಯಮಗ್ನವಾಗಬೇಕಿದೆ.

Full View

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News