ಹಾವನೂರು ಆಯೋಗಕ್ಕೀಗ ಸ್ವರ್ಣ ಸಂಭ್ರಮ

Update: 2022-08-09 08:55 GMT

1975 ನವೆಂಬರ್ 19ರಂದು ಹಾವನೂರು ಆಯೋಗವು ತನ್ನ ವರದಿಯನ್ನು ಮುಖ್ಯಮಂತ್ರಿ ದೇವರಾಜ ಅರಸುಗೆ ಸಲ್ಲಿಸಿತು. ಇದು ‘ಹಿಂದುಳಿದ ವರ್ಗಗಳ ಬೈಬಲ್’ ಎಂಬುದಾಗಿ ದೇವರಾಜ ಅರಸು ಈ ವರದಿಯನ್ನು ಬಣ್ಣಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಬಳಿಕ, ಎರಡನೆಯವರಾಗಿ ಹಾವನೂರು ನಿಲ್ಲುತ್ತಾರೆ ಎಂಬುದಾಗಿ ಅಂದಿನ ಸಮಾಜ ಕಲ್ಯಾಣ ಸಚಿವರು ಹೇಳಿದರು. ಇದು ಕರ್ನಾಟಕದ ಇತಿಹಾಸದಲ್ಲಿ ‘ಕೆಂಪು ಅಕ್ಷರದಲ್ಲಿ ಬರೆದಿಡಬೇಕಾದ ದಿನ’ ಎಂಬುದಾಗಿ ಕೇಂದ್ರ ಸಚಿವ ಚಂದ್ರಜಿತ್ ಯಾದವ್ ಹೇಳಿದ್ದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಉದ್ದೇಶಕ್ಕಾಗಿ ಭಾರತೀಯ ಸಂವಿಧಾನದ 15(4) ಮತ್ತು 16(4) ವಿಧಿಗಳ ಅಡಿಯಲ್ಲಿ ರಾಜ್ಯವಾರು ಹಿಂದುಳಿದ ವರ್ಗಗಳ ಪಟ್ಟಿಗಳನ್ನು ರಚಿಸಲಾಗಿತ್ತು. ರಾಜ್ಯಗಳ ಪುನರ್ವಿಂಗಡಣೆಯ ಬಳಿಕ, ರಾಜ್ಯಗಳಿಗೆ ಹೊಸ ವಲಯಗಳು ಸೇರ್ಪಡೆಯಾದವು. ಹಾಗಾಗಿ, ಒಂದೇ ರಾಜ್ಯದ ವಿವಿಧ ವಲಯಗಳಿಗೆ ಸಂಬಂಧಿಸಿ ಒಂದಕ್ಕಿಂತ ಹೆಚ್ಚಿನ ಹಿಂದುಳಿದ ವರ್ಗಗಳ ಪಟ್ಟಿಗಳು ಚಾಲ್ತಿಯಲ್ಲಿರುವುದನ್ನು ಗಮನಿಸಲಾಯಿತು. ಹಿಂದುಳಿದ ವರ್ಗಗಳ ಪಟ್ಟಿಗಳಿಗೆ ಏಕರೂಪತೆ ತರಲು ಹಾಗೂ ಇಡೀ ರಾಜ್ಯಕ್ಕೆ ಹಿಂದುಳಿದ ವರ್ಗಗಳ ಒಂದೇ ಪಟ್ಟಿ ಅನ್ವಯಿಸುವಂತೆ ಮಾಡಲು ಡಾ. ನಾಗಪ್ಪಗೌಡ ಸಮಿತಿಯನ್ನು ರಚಿಸಲಾಯಿತು. ಸಮಿತಿಯು ತನ್ನ ವರದಿಯನ್ನು 1961ರಲ್ಲಿ ಸಲ್ಲಿಸಿತು. ಅದು ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿರಲಿಲ್ಲ. ಆದರೆ, ಇದಕ್ಕೆ ಸಂಬಂಧಿಸಿದ ಸರಕಾರಿ ಆದೇಶವನ್ನು ಹೊರಡಿಸುವಾಗ, ಅಂದಿನ ಸರಕಾರವು ಅತ್ಯಂತ ಚಾಣಾಕ್ಷತೆಯಿಂದ ಈ ಸಮುದಾಯವನ್ನೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿತು. 1962 ಸೆಪ್ಟಂಬರ್ 23ರಂದು ಸುಪ್ರೀಂ ಕೋರ್ಟ್ ಈ ಸರಕಾರಿ ಆದೇಶವನ್ನು ರದ್ದುಗೊಳಿಸಿತು ಹಾಗೂ ಇದು ಸಂವಿಧಾನದ ಮೇಲೆ ನಡೆಸಲಾದ ವಂಚನೆ ಎಂದು ಬಣ್ಣಿಸಿತು. ಸರಕಾರಿ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದುದರ ಅನುಚಿತ ಪ್ರಯೋಜನವನ್ನು ಪಡೆದುಕೊಂಡ ಅಂದಿನ ಸರಕಾರ, ನಾಗಪ್ಪ ಗೌಡ ಸಮಿತಿ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ ಎಲ್ಲ ಜಾತಿಗಳು ಮತ್ತು ಪಂಗಡಗಳಿಗೂ ಮೀಸಲಾತಿಯನ್ನು ನಿರಾಕರಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಮೀಸಲಾತಿಯ ಉದ್ದೇಶಕ್ಕಾಗಿ ಆರ್ಥಿಕ ಹಿಂದುಳಿಯುವಿಕೆಯ ಮಾನದಂಡವನ್ನು ಜಾರಿಗೊಳಿಸಲು ಮುಂದಾಯಿತು. ಇದು ಕೂಡ ಸಂವಿಧಾನದ ಮೇಲೆ ಎಸಗಿದ ದ್ರೋಹವಾಗಿದೆ.

ಈ ತಥಾಕಥಿತ ಆರ್ಥಿಕ ಹಿಂದುಳಿಯುವಿಕೆಯ ಕಲ್ಪನೆಯನ್ನು ಮೇಲ್ಜಾತಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಪರಿಚಯಿಸಲಾಗಿದೆ ಎಂಬುದಾಗಿ ಅಮೆರಿಕದ ಪ್ರಸಿದ್ಧ ಸಮಾಜ ವಿಜ್ಞಾನಿ ಮಾರ್ಕ್ ಗ್ಯಾಲಂಟರ್ ನಡೆಸಿದ ಸ್ವತಂತ್ರ ಸಮೀಕ್ಷೆಯೊಂದು ತೋರಿಸಿತು. ಶೇ. 4.28ರಷ್ಟಿರುವ ಬ್ರಾಹ್ಮಣರು ಈಗಾಗಲೇ ಮೆರಿಟ್ ವಿಭಾಗದಲ್ಲಿ ಶೇ. 35.9 ಸ್ಥಾನಗಳನ್ನು ಗಳಿಸಿದ್ದಾರೆ ಹಾಗೂ ಮೀಸಲಾತಿ ಕೋಟಾದಲ್ಲೂ ಶೇ. 15.5 ಸ್ಥಾನಗಳನ್ನು ಪಡೆಯುವಲ್ಲಿ ಅವರು ಯಶಸ್ವಿಯಾದರು. ಶೇ. 15.57ರಷ್ಟಿರುವ ಲಿಂಗಾಯತ ಸಮುದಾಯವು ಅದಾಗಲೇ ಮೆರಿಟ್ ವಿಭಾಗದಲ್ಲಿ 13.9ರಷ್ಟು ಸ್ಥಾನಗಳನ್ನು ಪಡೆದಿತ್ತು ಹಾಗೂ ಮೀಸಲಾತಿ ಕೋಟಾದಲ್ಲೂ ಶೇ. 29.6 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಅದೇ ರೀತಿ, ಶೇ. 12.98ರಷ್ಟಿರುವ ಒಕ್ಕಲಿಗರಿಗೆ ಮೆರಿಟ್ ವಿಭಾಗದಲ್ಲಿ ಕೇವಲ ಶೇ. 4 ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿತ್ತು, ಆದರೆ, ಮೀಸಲಾತಿ ಕೋಟಾದಲ್ಲಿ ಅವರು ಶೇ. 35 ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ವಾಸ್ತವವಾಗಿ, ಆರ್ಥಿಕ ಹಿಂದುಳಿದಿರುವಿಕೆ ಎಂಬ ಮಾನದಂಡವು, ಈಗಾಗಲೇ ಮುಂದುವರಿದ ಸಮುದಾಯಗಳಿಗೆ ಮೀಸಲಾತಿ ಕೋಟಾದಲ್ಲೂ ಹೆಚ್ಚಿನ ಹುದ್ದೆಗಳು ಮತ್ತು ಅವಕಾಶಗಳನ್ನು ಪಡೆಯಲು ಸಹಾಯ ಮಾಡಿತು.

ಜನಸಂಖ್ಯೆಯ ಸುಮಾರು ಶೇ. 50ರಷ್ಟಿರುವ ಹಾಗೂ 200ಕ್ಕೂ ಅಧಿಕ ಜಾತಿಗಳು ಮತ್ತು ಪಂಗಡಗಳಿಗೆ ಸೇರಿದ ಜನರನ್ನು ಇದಕ್ಕೂ ಮೊದಲು ಹಿಂದುಳಿದ ಜಾತಿ ಅಥವಾ ಹಿಂದುಳಿದ ಪಂಗಡಗಳು ಅಥವಾ ಹಿಂದುಳಿದ ವರ್ಗಗಳು ಎಂಬುದಾಗಿ ವರ್ಗೀಕರಿಸಲಾಗಿತ್ತು. ಆದರೆ, ಈಗ ಭಾರತೀಯ ಸಂವಿಧಾನದ ಅಡಿಯಲ್ಲಿ ಅವರಿಗಾಗಿ ಖಾತರಿಪಡಿಸಲಾಗಿರುವ ಅವಕಾಶಗಳನ್ನು ಪಡೆಯುವ ಅವರ ಕಾನೂನುಬದ್ಧ ಹಕ್ಕುಗಳನ್ನು ಆರ್ಥಿಕ ಹಿಂದುಳಿಯುವಿಕೆ ಎಂಬ ಹೊಸ ಮಾನದಂಡವನ್ನು ಮುಂದಿಟ್ಟುಕೊಂಡು ನಿರಾಕರಿಸಲಾಗಿತ್ತು. ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಹಾಗೂ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ವಕೀಲರಾಗುವ ಅವಕಾಶಗಳನ್ನು ಒಂದರ ನಂತರ ಒಂದರಂತೆ ಅವರ ತಲೆಮಾರುಗಳು ಕಳೆದುಕೊಂಡಿದ್ದವು. ಸರಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಸೇವೆಗಳಲ್ಲಿನ ಅವರ ಕಾನೂನುಬದ್ಧ ಪಾಲನ್ನು ನಿರಾಕರಿಸಲಾಗಿತ್ತು. ಇನ್ನೊಂದು ಕಡೆ, ಆಳುವ ಮೇಲ್ವರ್ಗಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅವಕಾಶಗಳನ್ನು ಬಾಚಿಕೊಂಡಿದ್ದವು ಹಾಗೂ ಈ ಅವಕಾಶಗಳಿಂದ ಹಿಂದುಳಿದ ಜಾತಿಗಳು ಮತ್ತು ಪಂಗಡಗಳನ್ನು ವಂಚಿತಗೊಳಿಸಿದ್ದವು. ಇದು ಜನಸಂಖ್ಯೆಯ ಸುಮಾರು ಶೇ. 50ರಷ್ಟಿರುವ ಹಿಂದುಳಿದ ಜಾತಿಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ದೇವರಾಜ ಅರಸು-ಹಾವನೂರು ಯುಗ

ಕಾಂಗ್ರೆಸ್ ಪಕ್ಷ ವಿಭಜನೆಗೊಂಡಾಗ, ಡಿ. ದೇವರಾಜ ಅರಸು ನೇತೃತ್ವದ ಬಣವು ಹಿಂದುಳಿದ ವರ್ಗಗಳ ನೇತೃತ್ವವನ್ನು ವಹಿಸಿತು. ಭಾರತೀಯ ಸಂವಿಧಾನದಡಿಯಲ್ಲಿ ಹಿಂದುಳಿದ ವರ್ಗಗಳಿಗೆ ಕಾನೂನುಬದ್ಧವಾಗಿ ಸಲ್ಲಬೇಕಿರುವ, ಆದರೆ 1962ರಿಂದ ನಿರಾಕರಿಸಲ್ಪಟ್ಟಿರುವ ಕೋಟಾವನ್ನು ನೀಡುವ ಭರವಸೆಯನ್ನು ಅದು ನೀಡಿತು.

ಅದರ ಪರಿಣಾಮವಾಗಿ, ಶೀಘ್ರವೇ ದೇವರಾಜ ಅರಸು ಪಕ್ಷವು ಅಧಿಕಾರಕ್ಕೆ ಬಂತು ಮತ್ತು ಅವರು ಕರ್ನಾಟಕದ ಮುಖ್ಯಮಂತ್ರಿಯೂ ಆದರು. ನೂತನ ಹಿಂದುಳಿದ ವರ್ಗಗಳ ಆಯೋಗವೊಂದನ್ನು ರಚಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ದೇವರಾಜ ಅರಸು ಭರವಸೆ ನೀಡಿದ್ದರು. ಅದರಂತೆ, ನೂತನ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವುದಾಗಿ ಅವರು 17-7-1972ರಂದು ಘೋಷಿಸಿದರು. 8-8-1972ರಂದು, ಹಾವನೂರು ಆಯೋಗವನ್ನು ರಚಿಸಲಾಯಿತು. ಆಯೋಗದ ಮುಖ್ಯಸ್ಥರಾಗಿ ಎಲ್.ಜಿ. ಹಾವನೂರು ಅವರನ್ನು ನೇಮಿಸಲಾಯಿತು. ಧರಂಸಿಂಗ್, ವೈ. ರಾಮಚಂದ್ರ, ಕೆ.ಆರ್. ಶ್ರೀನಿವಾಸುಲು ನಾಯ್ಡು, ಕೆ.ಎಂ. ನಾಗಣ್ಣ, ಎ. ಮಾಸನ ಚೆಟ್ಟಿ ಮತ್ತು ಪಿ.ಟಿ. ಹಬೀಬ್ ಆಯೋಗದ ಸದಸ್ಯರಾದರು.

ಹಿಂದುಳಿದ ವರ್ಗಗಳ ಕುರಿತ ಎಲ್.ಜಿ. ಹಾವನೂರು ಸಮಿತಿಯು, ಮೊದಲ ಹಿಂದುಳಿದ ವರ್ಗಗಳ ಆಯೋಗ ಎಂದೇ ಪ್ರಸಿದ್ಧವಾಗಿದೆ. ಅದು ಸುಮಾರು ಮೂರು ವರ್ಷ ಕೆಲಸ ಮಾಡಿತು. ವಿವರವಾದ ಅಧ್ಯಯನಗಳನ್ನು ನಡೆಸಿದ ಬಳಿಕ ಅದು ಅಗಾಧ ಪ್ರಮಾಣದಲ್ಲಿ ಪ್ರಮಾಣಿತ ಅಂಕಿಅಂಶಗಳನ್ನು ಕಲೆ ಹಾಕಿತು. ಆಯೋಗದಿಂದ ನಿಯೋಜಿತರಾದ ನೂರಾರು ಸಂಶೋಧಕರು ವಿಶಾಲ ವ್ಯಾಪ್ತಿಯ ಸಾಮಾಜಿಕ ಆರ್ಥಿಕ ಸಮೀಕ್ಷೆಗಳನ್ನು ನಡೆಸಿದರು. 200ಕ್ಕೂ ಅಧಿಕ ಜಾತಿಗಳ ಜನಸಂಖ್ಯಾ ಸಂಬಂಧಿ ಅಂಕಿಅಂಶಗಳು ಮತ್ತು ಸುಮಾರು 10 ಲಕ್ಷ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಶೈಕ್ಷಣಿಕ ಮತ್ತು ಸೇವಾ ವಿವರಗಳನ್ನು ಪಡೆದರು.

ಅಂತಿಮವಾಗಿ, 1975 ನವೆಂಬರ್ 19ರಂದು ಹಾವನೂರು ಆಯೋಗವು ತನ್ನ ವರದಿಯನ್ನು ಮುಖ್ಯಮಂತ್ರಿ ದೇವರಾಜ ಅರಸುಗೆ ಸಲ್ಲಿಸಿತು. ಇದು ‘ಹಿಂದುಳಿದ ವರ್ಗಗಳ ಬೈಬಲ್’ ಎಂಬುದಾಗಿ ದೇವರಾಜ ಅರಸು ಈ ವರದಿಯನ್ನು ಬಣ್ಣಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಬಳಿಕ, ಎರಡನೆಯವರಾಗಿ ಹಾವನೂರು ನಿಲ್ಲುತ್ತಾರೆ ಎಂಬುದಾಗಿ ಅಂದಿನ ಸಮಾಜ ಕಲ್ಯಾಣ ಸಚಿವರು ಹೇಳಿದರು. ಇದು ಕರ್ನಾಟಕದ ಇತಿಹಾಸದಲ್ಲಿ ‘ಕೆಂಪು ಅಕ್ಷರದಲ್ಲಿ ಬರೆದಿಡಬೇಕಾದ ದಿನ’ ಎಂಬುದಾಗಿ ಕೇಂದ್ರ ಸಚಿವ ಚಂದ್ರಜಿತ್ ಯಾದವ್ ಹೇಳಿದ್ದರು.

ಹಿಂದುಳಿದ ವರ್ಗಗಳಿಗೆ ಶೇ.32 ಮೀಸಲಾತಿ ನೀಡುವಂತೆ ಹಾವನೂರು ಆಯೋಗವು ಶಿಫಾರಸು ಮಾಡಿತು. ಭಾರತೀಯ ಸಂವಿಧಾನದ 15(4) ವಿಧಿಯಡಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು 16(4) ವಿಧಿಯ ಅಡಿಯಲ್ಲಿ ಸರಕಾರಿ ಸೇವೆಗಳಲ್ಲಿ ಮೀಸಲಾತಿಗಾಗಿ 15 ಹಿಂದುಳಿದ ಸಮುದಾಯಗಳು, 128 ಹಿಂದುಳಿದ ಜಾತಿಗಳು ಮತ್ತು 62 ಹಿಂದುಳಿದ ಪಂಗಡಗಳನ್ನು ಹಿಂದುಳಿದ ವರ್ಗಗಳು ಎಂಬುದಾಗಿ ವರ್ಗೀಕರಿಸಲಾಯಿತು. ಈ ವರ್ಗಗಳ ಜನಸಂಖ್ಯೆಯು, ಒಟ್ಟು ಜನಸಂಖ್ಯೆಯ ಸುಮಾರು ಶೇ. 45 ಆಗುತ್ತದೆ.

ಹಾವನೂರು ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಆದರೆ, ನ್ಯಾಯಾಲಯವು ಅದನ್ನು ಮಾದರಿ ವರದಿ ಎಂಬುದಾಗಿ ಪ್ರಶಂಸಿಸಿತು. ಅದ್ಭುತ ಕೆಲಸಕ್ಕಾಗಿ ಹಾಗೂ ಹಿಂದುಳಿದ ವರ್ಗಗಳ ಸ್ಥಿತಿಗತಿಯನ್ನು ಅರಿಯಲು ಮಾಡಿದ ವಿಶಾಲ ವ್ಯಾಪ್ತಿಯ ಸಂಶೋಧನೆಗಾಗಿ ಸುಪ್ರೀಂ ಕೋರ್ಟ್ ಹಾವನೂರು ಆಯೋಗವನ್ನು ಅಭಿನಂದಿಸಿತು. ಇಂಥ ಅಧ್ಯಯನವು ರಾಜ್ಯದ ಇತಿಹಾಸದಲ್ಲೇ ಮೊದಲನೆಯದಾಗಿತ್ತು ಹಾಗೂ ಬಹುಷಃ ಇಷ್ಟೊಂದು ವಿವರಗಳೊಂದಿಗೆ ಇಷ್ಟೊಂದು ವ್ಯಾಪಕ ಸಂಶೋಧನೆಯನ್ನು ಭಾರತದ ಯಾವುದೇ ಭಾಗದಲ್ಲಿ ಆವರೆಗೆ ಮಾಡಲಾಗಿರಲಿಲ್ಲ.

ಹಾವನೂರು ಆಯೋಗದ ಅವಿಸ್ಮರಣೀಯ ಕೆಲಸವನ್ನು ಜಗತ್ತಿನಾದ್ಯಂತದ ಸಮಾಜ ವಿಜ್ಞಾನಿಗಳು ಕೊಂಡಾಡಿದರು. ಅಮೆರಿಕದ ವಿಸ್ಕೋನ್ಸಿನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮಾರ್ಕ್ ಗ್ಯಾಲಂಟರ್, ಅಮೆರಿಕದ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಲೆಲಾ ಡಶ್ಕಿನ್ ಮತ್ತು ಅಮೆರಿಕದ ಶಿಕಾಗೊ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗ್ರೆಗರಿ ಸ್ಟ್ಯಾಂಟನ್ ಸೇರಿದಂತೆ ಹಲವು ವಿದ್ವಾಂಸರು ಈ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾವನೂರು ವರದಿ ಜಾರಿ

1977 ಜುಲೈ 22ರಂದು ಹಾವನೂರು ಆಯೋಗದ ವರದಿಯನ್ನು ಜಾರಿಗೊಳಿಸಲಾಯಿತು. ಬಳಿಕ, ಸ್ವತಃ ಹಾವನೂರು ಅವರನ್ನೇ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆಯ ಸಂಪುಟ ದರ್ಜೆಯ ಸಚಿವರಾಗಿ ನೇಮಿಸಲಾಯಿತು.

ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಹಾವನೂರು, ತನ್ನ ವರದಿಯನ್ನು ಅಕ್ಷರಶಃ ಮತ್ತು ಆಶಯಕ್ಕೆ ಅನುಗುಣವಾಗಿ ಜಾರಿಗೊಳಿಸಿದರು. ಈ ಮಾದರಿಯ ಅನುಷ್ಠಾನದ ಪರಿಣಾಮವಾಗಿ, ಕರ್ನಾಟಕ ರಾಜ್ಯಾದ್ಯಂತ ಇರುವ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಇಂದು ಲಕ್ಷಾಂತರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ವರದಿಯು ಪ್ರತೀ ವರ್ಷ ಸಾವಿರಾರು ವೈದ್ಯರು ಮತ್ತು ಲಕ್ಷಾಂತರ ಇಂಜಿನಿಯರ್‌ಗಳನ್ನು ಸೃಷ್ಟಿಸುತ್ತಿದೆ. ಅದು ಇಂದು ಸಮಾಜದಲ್ಲಿ ಸರಣಿ ಪರಿಣಾಮಗಳನ್ನು ಬೀರುತ್ತಿದೆ ಹಾಗೂ ಜಡ್ಡುಗಟ್ಟಿದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ಸಿಇಟಿ ಪರೀಕ್ಷಾ ವ್ಯವಸ್ಥೆಯು ಈ ಪ್ರಾತಿನಿಧ್ಯವನ್ನು ಇನ್ನಷ್ಟು ಬಲಪಡಿಸಿವೆ. ಅದು ಮೀಸಲಾತಿಯನ್ನು ಖಾಸಗಿ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಿಸಿದೆ. ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳ ಬಾಗಿಲುಗಳಿಗೆ ಕಾಲಿಡಲು ಒಮ್ಮೆ ಅವಕಾಶ ಸಿಕ್ಕಿದ್ದೇ ತಡ, 200ಕ್ಕೂ ಅಧಿಕ ಜಾತಿಗಳು ಮತ್ತು ಪಂಗಡಗಳು ದಾಪುಗಾಲಿಡುತ್ತಾ ಮುಂದಕ್ಕೆ ಸಾಗಿವೆ ಹಾಗೂ ಕರ್ನಾಟಕವನ್ನು ಶಿಕ್ಷಣ, ಕೈಗಾರಿಕೆ, ಐಟಿ ಮತ್ತು ಬಿಟಿಗಳಲ್ಲಿ ದೇಶದಲ್ಲೇ ಅಗ್ರ ಸ್ಥಾನಕ್ಕೆ ಏರಿಸಿವೆ. ಇದರಿಂದಾಗಿಯೇ ಬೆಂಗಳೂರು ಪೂರ್ವದ ‘ಸಿಲಿಕಾನ್ ಕಣಿವೆ’ಯಾಗಿದೆ.

ಹಾವನೂರು ಮಾದರಿಯನ್ನು ಅನುಸರಿಸಿದ ಮಂಡಲ್ ಆಯೋಗ

ಮಂಡಲ್ ಆಯೋಗವು ಭಾರತದಾದ್ಯಂತ ಹಿಂದುಳಿದ ವರ್ಗಗಳನ್ನು ವರ್ಗೀಕರಿಸುವುದಕ್ಕಾಗಿ ಹಾವನೂರು ಆಯೋಗದ ಮಾನದಂಡಗಳು ಮತ್ತು ವಿಧಾನವನ್ನು ಅನುಸರಿಸಿತು. ಈ ಮೂಲಕ ಹಾವನೂರು ಮಾದರಿಯು ಕಾಲದ ಪರೀಕ್ಷೆ ಮತ್ತು ನ್ಯಾಯಾಂಗ ಪರಿಶೀಲನೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಮಂಡಲ ವರದಿಯ ಮೂಲಕ ಇಡೀ ದೇಶದ ಹಿಂದುಳಿದ ವರ್ಗಗಳಿಗೆ ಶೇ. 27 ಮೀಸಲಾತಿಯನ್ನು ನೀಡಿತು.

ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮೀಸಲಾತಿಗಳ ಮೂಲಕ ಐಐಟಿಎಸ್, ಐಐಎಮ್‌ಎಸ್ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಮಹತ್ವದ ಸಂಗತಿಯೆಂದರೆ, ಐಎಎಸ್, ಐಪಿಎಸ್ ಮತ್ತು ಇತರ ಅಖಿಲ ಭಾರತ ಸೇವೆಗಳೂ ಹಿಂದುಳಿದ ಜಾತಿಗಳು ಮತ್ತು ಪಂಗಡಗಳಿಗೆ ಶೇ. 27 ಮೀಸಲಾತಿಗಳನ್ನು ನೀಡುತ್ತಿವೆ. ಈ ಮೂಲಕ, ಹಿಂದುಳಿದ ವರ್ಗಗಳನ್ನು ಗುರುತಿಸುವ ಹಾವನೂರು ಮಾದರಿಯು ಈಗ ರಾಷ್ಟ್ರೀಯ ಮಾದರಿಯಾಗಿ ಮಾರ್ಪಟ್ಟಿದೆ.

ಪುಳಕಗೊಂಡ ದಕ್ಷಿಣ ಆಫ್ರಿಕ

ದಕ್ಷಿಣ ಆಫ್ರಿಕದಲ್ಲಿ, ವರ್ಣಭೇದ ನೀತಿ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲಾ ಜೈಲಿನಿಂದ ಬಿಡುಗಡೆಗೊಂಡ ಬಳಿಕ, ಅವರ ಪಕ್ಷ ಆಫ್ರಿಕನ್ ನ್ಯಾನಶಲ್ ಕಾಂಗ್ರೆಸ್, ಹಾವನೂರು ಆಯೋಗದ ಅದ್ಭುತ ಕೆಲಸವನ್ನು ಗಮನಿಸಿತು. ಬಹುತ್ವ ಸಮಾಜವೊಂದರಲ್ಲಿ ಶಾಂತಿಯುತ ಕ್ರಾಂತಿಯನ್ನು ತರುವ ಆಯೋಗದ ವರದಿಯಿಂದ ಅದು ಪ್ರಭಾವಿತಗೊಂಡಿತು. ದಕ್ಷಿಣ ಆಫ್ರಿಕಕ್ಕೆ ನೂತನ ಸಂವಿಧಾನವನ್ನು ಸಿದ್ಧಪಡಿಸುವ ಹಂತದಲ್ಲಿ ಹಾವನೂರು ಅವರ ಮಾರ್ಗದರ್ಶನವನ್ನು ಪಡೆಯಲು ಅದು ಯೋಚಿಸಿತು. ಸಮಾಜದಲ್ಲಿ ಶತಮಾನಗಳಿಂದ ಶೋಷಣೆಗೊಳಗಾದ ವರ್ಗಗಳಿಗೆ ಸಾಮಾಜಿಕ ಮತ್ತು ಜನಾಂಗೀಯ ನ್ಯಾಯವನ್ನು ನೀಡುವ ದೃಷ್ಟಿಯಿಂದ, ಸಂವಿಧಾನದಲ್ಲಿ ಮೀಸಲಾತಿಯ ತತ್ವಗಳನ್ನು ಸೇರ್ಪಡೆಗೊಳಿಸಲು ಅದು ಮುಂದಾಯಿತು. ಈ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ಪಡೆಯಲು ಅದು ಹಾವನೂರು ಅವರನ್ನು ದಕ್ಷಿಣ ಆಫ್ರಿಕಕ್ಕೆ ಆಹ್ವಾನಿಸಿತು.

ಎಲ್.ಜಿ. ಹಾವನೂರು ಅವರ ಸಲಹೆಗಳನ್ನು ದಕ್ಷಿಣ ಆಫ್ರಿಕದ ಸಂವಿಧಾನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಯಿತು ಎನ್ನುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ದಕ್ಷಿಣ ಆಫ್ರಿಕದ ಸಾಂವಿಧಾನಿಕ ನ್ಯಾಯಾಲಯ ಸೇರಿದಂತೆ ದೇಶವೊಂದರ ಅತ್ಯುನ್ನತ ಹಂತದವರೆಗೂ ಜನಾಂಗೀಯ ನ್ಯಾಯವನ್ನು ಅತ್ಯಂತ ಸಮರ್ಪಕವಾಗಿ ಖಾತರಿಪಡಿಸಲಾಯಿತು. ಹಾಗಾಗಿ, ಸಾಮಾಜಿಕ ನ್ಯಾಯದ ಹಾವನೂರು ಕಲ್ಪನೆಯು ಕೇವಲ ರಾಷ್ಟ್ರೀಯ ಮಾದರಿಯಾಗಿ ಉಳಿದಿಲ್ಲ, ಅದು ಅಂತರ್‌ರಾಷ್ಟ್ರೀಯ ತತ್ವವಾಗಿ ವಿಕಾಸಗೊಂಡಿದೆ ಎನ್ನಬಹುದು. ದಕ್ಷಿಣ ಆಫ್ರಿಕದ ಅತ್ಯಂತ ಆಧುನಿಕ ಸಂವಿಧಾನದಲ್ಲಿ ಅವರ ವಿಚಾರಗಳು ಸೇರ್ಪಡೆಗೊಂಡಿರುವುದೇ ಇದಕ್ಕೆ ಸಾಕ್ಷಿ.

Writer - ಪ್ರೊ. ರವಿವರ್ಮ ಕುಮಾರ್

contributor

Editor - ಪ್ರೊ. ರವಿವರ್ಮ ಕುಮಾರ್

contributor

Similar News