ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆಗೆ ಅವಕಾಶವು ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ: ಯು.ಟಿ.ಖಾದರ್ ಆಕ್ರೋಶ

Update: 2022-08-09 06:24 GMT

ಮಂಗಳೂರು, ಆ.9: ಭಾರತದ ರಾಷ್ಟ್ರಧ್ವಜ ಕಾಯ್ದೆಗೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಧ್ವಜ ಬಳಕೆಗೆ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿಂದ ಮಾತನಾಡಿದ ಅವರು, ರಾಷ್ಟ್ರಧ್ವಜ ಖಾಲಿ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶಗಳಿಂದ ಪಾಲಿಸ್ಟರ್ ತಂದು ಗುಡ್ಡೆ ಹಾಕುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖಾದಿ ನೇಯುವ ಚರಕ ಖಾಲಿ ಚಿಹ್ನೆಯಲ್ಲ, ಅದು ರಾಜಾಡಳಿತ ಕಿತ್ತೆಸೆದ ಸಂಕೇತ. ಖಾದಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸಂಕೇತವಾಗಿದೆ. ಈ ದೇಶದಲ್ಲಿ ಯಾವುದೇ ಸರಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ದತಿ ಇತ್ತು. ಖಾದಿ ತೊಡುವ ಸಂದೇಶವನ್ನು ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಸಾರಬೇಕಿತ್ತು. ಆದರೆ ಕೇಂದ್ರ ಸರಕಾರ ಮಾತಿನಲ್ಲಿ ಸ್ವದೇಶಿ, ಕೆಲಸದ ಅನುಷ್ಠಾನದಲ್ಲಿ ವಿದೇಶಿ ತಂತ್ರ ಅನುಸರಿಸುತ್ತಿದೆ ಎಂದು  ಆರೋಪಿಸಿದರು.

ಪಾಲಿಸ್ಟರ್ ವಿದೇಶದಿಂದ ಆಮದಿಗೆ ಅವಕಾಶ ನೀಡಲಾಗಿದೆ, ಇದರಿಂದ ಚೀನಾಗೆ ಲಾಭ. ಸರಕಾರದ ಸ್ಪಷ್ಟತೆ ಇಲ್ಲದ ಗೊಂದಲಕಾರಿಯಾದ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನ ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಬೇಕು ಅಂದು ಖಾದರ್ ಆಗ್ರಹಿಸಿದರು.

ಇದನ್ನೂ ಓದಿ: ಹೈದರಾಬಾದ್‌: ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬಿಜೆಪಿ ಮುಖಂಡ; ಆತ್ಮಹತ್ಯೆ ಶಂಕೆ

ಸ್ವಾತಂತ್ರ್ಯದ 75ನೇ ವರ್ಷದ ಹೆಸರಲ್ಲಿ ಹರ್ ಘರ್ ತಿರಂಗ ತೀರ್ಮಾನ ಆಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ  ಹೊಡಿಸಬೇಕಿದೆ. ಈಗ ವಿತರಿಸಲಾಗುತ್ತಿರುವ ರಾಷ್ಟ್ರಧ್ವಜಗಳಲ್ಲೂ ಹಲವಾರು ಲೋಪಗಳು ಬಂದಿದ್ದರೆ, ವಿವಿಧ ದರಗಳಲ್ಲಿ ಧ್ವಜವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಹರ್ ಘರ್ ತಿರಂಗಾ ಘೋಷಣೆ ಮತ್ತು ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ. ಇನ್ನೂ ಹಲವರಿಗೆ ಮನೆಯೇ ಇಲ್ಲ, ಅವರು ಬಾವುಟ ಹಾರಿಸುವುದು ಎಲ್ಲಿ? ಅಂದರೆ ಮನೆಯಿಲ್ಲದವರು ಇದನ್ನ ಆಚರಣೆ ಮಾಡೋದು ಬೇಡವೇ ಎಂದು ಖಾದರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಹಮ್ಮದ್ ಮೋನು, ಈಶ್ವರ ಉಳ್ಳಾಲ್ , ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News