ಕಂಕನಾಡಿ ಬಳಿ ಕೊಲೆ ಯತ್ನ, ಹಲ್ಲೆ ನಡೆದಿಲ್ಲ: ಪೊಲೀಸ್ ಆಯುಕ್ತ ಶಶಿಕುಮಾರ್‌

Update: 2022-08-09 09:29 GMT
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

ಮಂಗಳೂರು, ಆ.9: ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಕೊಲೆ ಯತ್ನ ನಡೆಸಿದ್ದಾರೆಂಬ ಸುದ್ದಿ ಸುಳ್ಳಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ವ್ಯಕ್ತಿಯೊಬ್ಬರು ಕಂಕನಾಡಿ ಠಾಣೆಗೆ ಆಗಮಿಸಿ ತನಗೆ ಇಂಟರ್ನೆಟ್ ಮೂಲಕ ಬೆದರಿಕೆ ಕರೆ ಬಂದಿರುವುದಾಗಿ ಹಾಗೂ ತನ್ನನ್ನು ಯಾರೋ ಎರಡು ಮೂರು ಬೈಕ್‌ ಗಳಲ್ಲಿ ಹಿಂಬಾಲಿಸುತ್ತಿರುವುದಾಗಿ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಇಂಟರ್‌ನೆಟ್ ಮೂಲಕ ಆ ವ್ಯಕ್ತಿಗೆ ಮೂರ್ನಾಲ್ಕು ಬಾರಿ ಕರೆ ಬಂದಿರುವುದು ಸಾಬೀತಾಗಿದೆ. ಕರೆಯ ಮೂಲಕ ತನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಾಗಿ ಆ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿಯನ್ನು ಅಂತ್ಯಗೊಳಿಸಿದ ನಿತೀಶ್‌ ಕುಮಾರ್‌

 ಆ ವ್ಯಕ್ತಿಯು ದೂರಿನಲ್ಲಿ ತಿಳಿಸಿರುವಂತೆ ಯಾರೋ ಹಿಂಬಾಲಿಸಿಕೊಂಡು ಬಂದ ಬಗ್ಗೆ ಸಿಸಿಟಿ ಕ್ಯಾಮರಾ ಫೂಟೇಜ್  ಪರಿಶೀಲಿಸಲಾಗಿದೆ. ಅದು ಫುಡ್ ಡೆಲಿವರಿಯ ವಾಹನವಾಗಿದ್ದು, ಅದು ದೂರು ನೀಡಿರುವ ವ್ಯಕ್ತಿಯ ಪಕ್ಕದ ಮನೆಗೆ ಆರ್ಡರ್ ಪೂರೈಕಾಗಿ ಬಂದಿದ್ದಾಗಿದೆ. ಈ ಬಗ್ಗೆ ದೂರುದಾರರಿಗೂ ಮನವರಿಕೆಯಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಕುರಿತಂತೆ ಕೊಲೆ ಯತ್ನ ನಡೆದಿದೆ. ಬೈಕ್‌ಗಳಲ್ಲಿ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿಕೊಂಡು ಬರಲಾಗಿದೆ. ವ್ಯಕ್ತಿ ಅದೆಲ್ಲದರಿಂದ ತಪ್ಪಿಸಿಕೊಂಡು ಮನೆ ತಲುಪಿದ್ದಾರೆ ಎಂದೆಲ್ಲಾ ತಪ್ಪಾಗಿ ಸುದ್ದಿಯಾಗಿತ್ತು. ಅಂತಹದ್ದೇನೂ ಆಗಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುದ್ದಿಗಳನ್ನು ಯಾವುದೇ ಆಧಾರವಿಲ್ಲದೆ ಹರಿಯಬಿಡಬಾರದು. ಸೋಮವಾರ ಇಂತಹ ಘಟನೆ ಆಗಿದೆ ಎಂದಾಗ ನಾನೇ ಕಂಕನಾಡಿ ಠಾಣೆಗೆ ತೆರಳಿ, ದೂರು ನೀಡಿರುವ ವ್ಯಕ್ತಿ ಜತೆ ಮಾತನಾಡಿ, ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಅರ್ಧ ಗಂಟೆಯಲ್ಲೇ ಈ ಪ್ರಕರಣವನ್ನು ಸ್ಪಷ್ಟಪಡಿಸಲಾಗಿದೆ. ದೂರುದಾರನಿಗೆ ಇಂಟರ್‌ನೆಟ್ ಕರೆ ಬಂದಿರುವುದಕ್ಕೂ ಆ ವ್ಯಕ್ತಿ ಪಂಪ್‌ವೆಲ್‌ನಿಂದ ಹೋಗುವ ಸಂದರ್ಭ ಗಾಡಿಗಳಲ್ಲಿ ತನ್ನನ್ನು ಯಾರೋ ಹಿಂಬಾಲಿಸುತ್ತಿರುವುದಾಗಿ ಅನಿಸಿತ್ತು ಎಂದು ಹೇಳಿಕೊಂಡಿದ್ದಾರೆ. ಅಂತಹ ಭಾವನೆ ಮೂಡುವುದು ಸಹಜ. ಇಂತಹ ಸಂದರ್ಭಗಳಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಇಂತಹ ಸುದ್ದಿಗಳನ್ನು ಬ್ರೇಕಿಂಗ್ ಆಗಿ ಹರಿಯಬಿಡುವುದರಿಂದ ಸಾಮಾಜಿಕ ಶಾಂತಿಗೆ ತೊಂದರೆಯಾಗುತ್ತದೆ ಎಂದು ಕಮಿಷನರ್ ಹೇಳಿದರು.

ಕೆಲದಿನಗಳ ಹಿಂದೆ ಉಳ್ಳಾಲದಲ್ಲೂ ಈ ರೀತಿ ವ್ಯಕ್ತಿಯೊಬ್ಬರ ಮೇಲೆ ಮಚ್ಚು ಲಾಂಗ್‌ನಿಂದ ಹಲ್ಲೆಗೆ ಯತ್ನ ನಡೆಸಿರುವುದಾಗಿ ಸುದ್ದಿ ಹರಡಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪರಿಶೀಲನೆ ಬಳಿಕ ಅಂತಹದ್ದೇನೂ ಆಗಿಲ್ಲವೆಂದು ಸ್ಪಷ್ಟವಾಗಿತ್ತು. ಅದು ಸುಳ್ಳು ಮಾಹಿತಿಯನ್ನು ಹರಡಿರುವ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಇಂಟರ್‌ನೆಟ್ ಕರೆ ಬಂದಿರುವುದು ಸ್ಪಷ್ಟ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಕಮಿಷನರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News