ಆ.7ರಿಂದ 30ವರೆಗೆ ಕಾಪು ತಾಲೂಕಿನಲ್ಲಿ ಮಾದಕ ವಿರೋಧಿ ಜಾಗೃತಿ ಅಭಿಯಾನ: ಪಿ.ವಿ. ಭಂಡಾರಿ

Update: 2022-08-09 13:36 GMT

ಕಾಪು: ಇಂದಿನ ಯುವಪೀಳಿಗೆ ದಿನೇ ದಿನೇ ಮಾದಕದ್ರವ್ಯಗಳ ವ್ಯಸನಕ್ಕೀಡಾಗಿ ದಾಸರಾಗುತ್ತಿದ್ದಾರೆ. ಸಾರ್ವಜನಿಕರಲ್ಲಿ ವಿಶೇಷವಾಗಿ ಯುವಪೀಳಿಗೆಯಲ್ಲಿ  ಅರಿವು ಮೂಡಿಸುವ ನಿಟ್ಟಿನಲ್ಲಿ ಆಗಸ್ಟ್ 7ರಿಂದ 30ವರೆಗೆ ಕಾಪು ತಾಲೂಕಿನಲ್ಲಿ ಮಾದಕ ವಿರೋಧಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎವಿ. ಬಾಳಿಗ ಮೇಮೊರಿಯಲ್ ಆಸ್ಪತ್ರೆಯ ಡಾ. ಪಿ.ವಿ.ಭಂಡಾರಿ ಹೇಳಿದರು. 

ಕಾಪು ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

2019ರ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 2.21% (2.26ಕೋಟಿ) ಮಾದಕ ವಸ್ತುಗಳ ದಾಸರಾಗಿದ್ದಾರೆ. ಇದರಲ್ಲಿ 18 ಲಕ್ಷ ವಯಸ್ಕರು 4.6ಲಕ್ಷ ಮಕ್ಕಳು ತೀವ ವ್ಯಸನಿಗಳಾಗಿದ್ದಾರೆ. ಸರಕಾರ ಸಂಘ ಸಂಸ್ಥೆಗಳು ಜನರು ಒಂದಾಗಿ ಇದರ ವಿರುದ್ಧ ಸಮರ ಸಾರಬೇಕು. ಅನಕ್ಷರಸ್ಕರಿಗಿಂತ ಹೆಚ್ಚಾಗಿ ವಿದ್ಯಾವಂತರು ಮಾದಕ ವ್ಯಸನಿಗಳಾಗಿ ಮಾರ್ಪಡುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದ ಪಿ.ವಿ.ಭಂಡಾರಿ, ಯುವಕರು ಇದರ ವಿರುದ್ಧ ಧ್ವನಿ ಎತ್ತರಿಸಬೇಕಾಗಿದೆ ಎಂದರು.

ನ್ಯಾಯವಾದಿ ಅಶೀದುಲ್ಲಾ ಕಟಪಾಡಿ ಮಾತನಾಡಿ, ಮಾದಕ ವ್ಯಸನದಿಂದ ಇಂದು ಅಪರಾಧ ಕೃತ್ಯಗಳು ಹೆಚ್ಚಾಗುತಿದೆ. ಕಾನೂನು ಈ ನಿಟ್ಟಿನಲ್ಲಿ ಬಲಪಡಿಸಬೇಕಾಗಿದೆ. ವ್ಯಸನಗಾರರನ್ನು, ಪೆಡ್ಲರ್‍ಗಳನ್ನು ಸೆರೆ ಹಿಡಿದಾಗ ಸೂಕ್ತ ಕಾನೂನು ಕ್ರಮ ಅಗತ್ಯವಾಗಿದೆ. ಮಾದಕ ವ್ಯಸನಿಗಳನ್ನು ದಂಡ ವಸೂಲಿ ಮಾಡಿ ಬಿಡುವ ಬದಲು ಅವರನ್ನು ವ್ಯಸನ ಮುಕ್ತರಾಗಲು ಪುನರ್ವಸತಿ ಕಲ್ಪಿಸಿ ಅವರಿಗೆ ತರಬೇತಿ ಶಿಬಿರ ನೀಡಬೇಕಾಗಿದೆ ಎಂದರು. 

ಸಾಲಿಡಾರಿಟಿ ಯೂತ್-ಮೂವೆಂಟ್  ಉಡುಪಿ ಜಿಲ್ಲಾ ಸಂಚಾಲಕರು ಯಾಸೀನ್ ಕೋಡಿಬೇಂಗ್ರೆ ಮಾತನಾಡಿ, ಸಾಲಿಡಾರಿಟಿ ಯೂತ್-ಮೂವೆಂಟ್, ಉಡುಪಿ, ಡಾ.ಎವಿ ಬಾಳಿಗ ಮೆಮೊರಿಯಲ್ ಆಸ್ಪತ್ರೆ ದೊಡ್ಡಣಗುಡ್ಡೆ ಇವರ ಸಂಯುಕ್ತ ಆಶ್ರಯದಲ್ಲಿ ನಶಾ ಮುಕ್ತ ಅಭಿಯಾನ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಕಾಪು ತಾಲ್ಲೂಕಿನಾದ್ಯಂತ ಮಾದಕ ವಿರೋಧಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಜಿಲ್ಲೆಯ ಪ್ರತೀ ತಾಲೂಕಿನಲ್ಲೂ ಅಭಿಯಾನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಕಾಪುವಿನಿಂದ ಈ ಜಾಗೃತಿ ಅಭಿಯಾನ ಆರಂಭಿಸಲಾಗುವುದು. ಆಗಸ್ಟ್ 7ರಿಂದ 30ರವರೆಗೆ ಈ ಅಭಿಯಾನ ನಡೆಯಲಿದೆ. ಅಭಿಯಾನದಲ್ಲಿ ಸಾರ್ವಜನಿಕ ಸಭೆ, ಜಾಗೃತಿ ಜಾಥಾ, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ, ಸಮಾಲೋಚನಾ ಕಾರ್ಯಕ್ರಮ, ಭಿತ್ತಿಪತ್ರ ಹಂಚುವಿಕೆ, ಕಾರ್ನರ್ ಮೀಟಿಂಗ್, ಶಿಕ್ಷಕರ-ಪೋಷಕರ ಸಭೆ, ವಿದ್ಯಾರ್ಥಿಗಳ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು. 

ಸಾಮಾಜಿಕ ಕಾರ್ಯಕರ್ತ ಅನ್ವರ್ ಆಲಿ ಕಾಪು, ತಾಲೂಕು ಸಂಚಾಲಕ ರಂಜಾನ್ ಕಾಪು, ಜಿಲ್ಲಾ ಕಾರ್ಯದರ್ಶಿ ನಬೀಲ್ ಗುಜ್ಜರಬೆಟ್ಟು, ಬದ್ರುದ್ದೀನ್, ಫರ್ವೇಝ್ ಉಡುಪಿ, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News