ಉಡುಪಿ ಜಿಲ್ಲಾ ರಜತ ಮಹೋತ್ಸವ ವಿಜೃಂಭಣೆಯಿಂದ ಆಚರಣೆ: ಕೆ. ಜಯಪ್ರಕಾಶ್ ಹೆಗ್ಡೆ

Update: 2022-08-09 13:57 GMT

ಉಡುಪಿ, ಆ.9: ಉಡುಪಿ ಜಿಲ್ಲೆ ಅಸ್ಥಿತ್ವಕ್ಕೆ ಬಂದು ಇದೇ ಆಗಸ್ಟ್ 25ಕ್ಕೆ 25 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಜಿಲ್ಲೆ ಸಾಗಿ ಬಂದ ಅಭಿವೃದ್ಧಿ ಕಾರ್ಯಗಳ ಪುನಾರವಲೋಕನದ ರಜತ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಜತ ಮಹೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಡುತಿದ್ದರು.

ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದು, ಜನರು ತಮ್ಮ ಕೆಲಸ ಕಾರ್ಯಗಳಿಗೆ ದೂರದ ಜಿಲ್ಲಾ ಕೇಂದ್ರವಾದ ಮಂಗಳೂರಿಗೆ ಹೋಗಿ ಬರುವುದು ಕಷ್ಟದ ಕೆಲಸವಾಗಿತ್ತು. ಪ್ರತ್ಯೇಕ ಉಡುಪಿ ಜಿಲ್ಲೆಯನ್ನು ರಚಿಸಬೇಕೆಂಬ ಜನರ ಆಶೋತ್ತರ ಹಾಗೂ ಜನಪ್ರತಿನಿಧಿಗಳ ಸತತ ಪ್ರಯತ್ನ ಮತ್ತು ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿಗಳಾದ ಜೆ.ಹೆಚ್.ಪಟೇಲ್ 1997ರ ಆಗಸ್ಟ್ 25ರಂದು ಉಡುಪಿ ಜಿಲ್ಲೆಗೆ ಚಾಲನೆ ನೀಡುವ ಮೂಲಕ ಜಿಲ್ಲೆ ಅಸ್ಥಿತ್ವಕ್ಕೆ ಬಂದಿತ್ತು ಎಂದು ಅಂದು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಹೆಗ್ಡೆ ನೆನಪಿಸಿಕೊಂಡರು.

ಜಿಲ್ಲೆ ರಚನೆಯ ಆರಂಭಿಕ ವರ್ಷಗಳಲ್ಲಿ ಅಭಿವೃದ್ದಿ ಕಾರ್ಯಗಳು ಅಮೆಗತಿಯಲ್ಲಿದ್ದು, ನಂತರದ ದಿನಗಳಲ್ಲಿ ಅಭಿವೃದ್ಧಿ ಪರ್ವದತ್ತ ಸಾಗಿ ರಾಜ್ಯದ ಇತರೇ ಜಿಲ್ಲೆಗಳಿಗಿಂತಲೂ ಹೆಚ್ಚಿನ ಅಭಿವೃಧಿ ಕಾರ್ಯಗಳು ಆಗಿವೆ. ಇವು ಕೇವಲ ಸರಕಾರದ ಕಾರ್ಯಗಳಲ್ಲದೇ ಖಾಸಗಿಯೂ ಸೇರಿದಂತೆ ಇತರೇ ಎಲ್ಲಾ ಕ್ಷೇತ್ರಗಳಯೂ ಅಭಿವೃದ್ದಿಯತ್ತ ಸಾಗಿ ಮುನ್ನಡೆಯುತ್ತಿದೆ ಎಂದರು.

ರಜತ ಮಹೋತ್ಸವ ಕಾರ್ಯಕ್ರಮವನ್ನು ಹಿಂದಿನ ದಿನಗಳ ನೆನಪಿನೊಂದಿಗೆ ಮುಂದೆ ಹೋಗಬೇಕೆಂಬ ಕಲ್ಪನೆಯೊಂದಿಗೆ, ಇದೇ ಆಗಸ್ಟ್ 25ರಿಂದ 2023ರ ಜನವರಿವರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ರಜತ ಮಹೋತ್ಸವ ಕಾರ್ಯಕ್ರಮಗಳೆಲ್ಲವೂ ಜಿಲ್ಲೆಯ ಸಮಸ್ತ ಜನರ ಸಹಭಾಗಿತ್ವದಲ್ಲಿ ನಡೆಯಬೇಕು. ಅಂದಿನ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳನ್ನು ಸನ್ಮಾನಿಸಬೇಕು, ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ರಜತ ಮಹೋತ್ಸವ ಅಂಗವಾಗಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದ ಸಿದ್ದತೆಗಳಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News