ಆಕ್ರಮಣಕ್ಕೆ ಚೀನಾ ಸಿದ್ಧತೆ; ಸ್ವರಕ್ಷಣೆಗೆ ಸಮರಾಭ್ಯಾಸ ಆರಂಭ: ತೈವಾನ್

Update: 2022-08-09 16:42 GMT

ತೈಪೆ, ಆ.9: ದ್ವೀಪರಾಷ್ಟ್ರದ ಮೇಲೆ ಆಕ್ರಮಣ ನಡೆಸಲು ಚೀನಾ ಸನ್ನದ್ಧಗೊಂಡಿರುವುದರಿಂದ ಸ್ವರಕ್ಷಣೆಗಾಗಿ ‘ಲೈವ್ ಫೈರ್’ ಫಿರಂಗಿ ಸಮರಾಭ್ಯಾಸ ಆರಂಭಿಸಲಾಗಿದೆ ಎಂದು ತೈವಾನ್ ಸೇನೆ ಮಂಗಳವಾರ ಹೇಳಿದೆ.

 ಪಿಂಗ್ಟುಂಗ್ ನಗರದಲ್ಲಿ ಮಂಗಳವಾರ ಬೆಳಿಗ್ಗೆ 6:10ಕ್ಕೆ (ಭಾರತೀಯ ಕಾಲಮಾನ) ಲೈವ್ ಫೈರ್ ಡ್ರಿಲ್ ಅಥವಾ ಸಜೀವ ಮದ್ದುಗುಂಡುಗಳನ್ನು ಬಳಸಿ ನಡೆಸುವ ಸಮರಾಭ್ಯಾಸಕ್ಕೆ ಚಾಲನೆ ನೀಡಲಾಗಿದೆ ಎಂದು ತೈವಾನ್ನ 8ನೇ ಆರ್ಮಿ ಕಾರ್ಪ್ಸ್ನ ವಕ್ತಾರ ಲೂವ್ ವೊಯ್ಜ್ಯೆ ಹೇಳಿದ್ದಾರೆ. ಚೀನಾದ ಬೆದರಿಕೆ, ಆಕ್ಷೇಪದ ಮಧ್ಯೆಯೂ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದ್ದರಿಂದ ಆಕ್ರೋಶಗೊಂಡಿರುವ ಚೀನಾ ಆಗಸ್ಟ್ 3ರಂದು ತೈವಾನ್ ಸುತ್ತಮುತ್ತ ಸೇನಾ ಸಮರಾಭ್ಯಾಸಕ್ಕೆ ಚಾಲನೆ ನೀಡಿತ್ತು.

ಈ ಮಧ್ಯೆ, ಚೀನಾವು ಸಮರಾಭ್ಯಾಸದ ನೆಪದಲ್ಲಿ ತೈವಾನ್ ಮೇಲೆ ಆಕ್ರಮಣಕ್ಕೆ ಸರ್ವ ಸಿದ್ಧತೆ ನಡೆಸುತ್ತಿದೆ ಎಂದು ತೈವಾನ್ನ ವಿದೇಶಾಂಗ ಸಚಿವ ಜೋಸೆಫ್ ವೂ ಆರೋಪಿಸಿದ್ದಾರೆ. ಚೀನಾವು ಭಾರೀ ಪ್ರಮಾಣದ ಸಮರಾಭ್ಯಾಸ, ಕ್ಷಿಪಣಿ ಉಡಾವಣೆಯ ಜತೆ ಸೈಬರ್ ದಾಳಿಯನ್ನೂ ನಡೆಸುತ್ತಿದೆ. ತೈವಾನ್ನ ಆತ್ಮಸ್ಥೈರ್ಯವನ್ನು ದುರ್ಬಲಗೊಳಿಸುವ ತಪ್ಪು ಮಾಹಿತಿ ಪ್ರಚಾರ ಮತ್ತು ಆರ್ಥಿಕ ದಬ್ಬಾಳಿಕೆ ಎಸಗುತ್ತಿದೆ ಎಂದವರು ಪ್ರತಿಪಾದಿಸಿದ್ದಾರೆ.

ರಕ್ಷಣಾ ವಿಷಯದ ಸಭೆ, ಹವಾಮಾನ ಸಹಕಾರ ಒಪ್ಪಂದ ಸಭೆ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಅಮೆರಿಕದೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿರುವುದಾಗಿ ಶುಕ್ರವಾರ ಚೀನಾ ಘೋಷಿಸಿತ್ತು. ತೈವಾನ್ ಜಲಸಂಧಿಯಲ್ಲಿನ ಈಗಿನ ಉದ್ವಿಗ್ನ ಪರಿಸ್ಥಿತಿಯು ಸಂಪೂರ್ಣವಾಗಿ ಪ್ರಚೋದನಕಾರಿಯಾಗಿದ್ದು ಇದಕ್ಕೆ ಅಮೆರಿಕವೇ ಹೊಣೆಯಾಗಿದೆ ಮತ್ತು ಇದರ ಗಂಭೀರ ಪರಿಣಾಮವನ್ನು ಆ ದೇಶವೇ ಎದುರಿಸಬೇಕು. ಎರಡೂ ದೇಶಗಳು ಮತ್ತು ಮಿಲಿಟರಿಗಳ ನಡುವಿನ ಸಂಬಂಧ, ತೈವಾನ್ ಸಮಸ್ಯೆ ಇತ್ಯಾದಿ ವಿಷಯಗಳ ಬಗ್ಗೆ ಚೀನಾದ ಸ್ಪಷ್ಟ ಮತ್ತು ದೃಢ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಲಾಗಿದೆ ಎಂದು ಚೀನಾದ ರಕ್ಷಣಾ ಇಲಾಖೆಯ ವಕ್ತಾರ ವು ಕ್ವಿಯಾನ್ರನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News