ಚೀನಾದ ಹಡಗಿನ ಭೇಟಿ ಮುಂದೂಡಿದ ಶ್ರೀಲಂಕಾ

Update: 2022-08-09 16:32 GMT

ಕೊಲಂಬೊ, ಆ.9: ಶ್ರೀಲಂಕಾದ ಆಯಕಟ್ಟಿನ ಹಂಬನ್ತೋಟ ಬಂದರಿಗೆ ಚೀನಾದ ಸಂಶೋಧನೆ ಮತ್ತು ಸರ್ವೆ ಹಡಗಿನ ಭೇಟಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿಕೆ ನೀಡಿದೆ. ಈ ಹಡಗಿನ ಭೇಟಿ ಬಗ್ಗೆ ಭಾರತ ತೀವ್ರ ಆತಂಕ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಶ್ರೀಲಂಕಾ ವಿದೇಶಾಂಗ ಇಲಾಖೆ ‘ತರುವಾಯ ಹೆಚ್ಚಿನ ಸಮಾಲೋಚನೆಗಳ ಅಗತ್ಯತೆಯ ಹಿನ್ನೆಲೆಯಲ್ಲಿ ಕೊಲಂಬೋದ ಹಂಬನ್ತೋಟ ಬಂದರಿಗೆ ಹಡಗಿನ ಭೇಟಿಯನ್ನು ಮುಂದೂಡುವಂತೆ ಶ್ರೀಲಂಕಾದಲ್ಲಿನ ಚೀನಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದೆ’ ಎಂದಿದೆ.

 ಭಾರತದ ಆಕ್ಷೇಪದ ಬಳಿಕ, ಭೇಟಿಯನ್ನು ವಿಳಂಬಿಸುವಂತೆ ಕಳೆದ ಶುಕ್ರವಾರ ಶ್ರೀಲಂಕಾ ಸರಕಾರ ಚೀನಾಕ್ಕೆ ಬಾಯ್ಮೆತಿನ ಸೂಚನೆ ರವಾನಿಸಿತ್ತು. ಶ್ರೀಲಂಕಾದ ಸೂಚನೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಚೀನಾ , ಭದ್ರತೆಯ ನೆಪ ಹೇಳಿ ಇತರ ದೇಶಗಳು ಶ್ರೀಲಂಕಾದ ಮೇಲೆ ಒತ್ತಡ ವಿಧಿಸುವುದು ಮತ್ತು ಆ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದು ನ್ಯಾಯಸಮ್ಮತವಲ್ಲ ಎಂದಿದೆ.

ತನ್ನ ಅಭಿವೃದ್ಧಿ ಹಿತಾಸಕ್ತಿಯ ಆಧಾರದಲ್ಲಿ ಇತರ ದೇಶಗಳೊಂದಿಗೆ ಸಂಬಂಧ ಸ್ಥಾಪಿಸುವ ಹಕ್ಕು ಶ್ರೀಲಂಕಾಕ್ಕೆ ಇದೆ. ಸಾಮಾನ್ಯ ಸಹಕಾರವನ್ನು ಹೊಂದುವುದು ನಮ್ಮ ಎರಡು ದೇಶಗಳ ಸ್ವತಂತ್ರ ಆಯ್ಕೆಯಾಗಿದ್ದು ಇದು ಉಭಯ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ ಮತ್ತು ಯಾವುದೇ ಮೂರನೇ ಪಕ್ಷವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್ ವೆನ್ಬಿನ್ ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News