ನಾ ಕಂಡ ಕ್ರಿಯಾಶೀಲ ಅರಣ್ಯ ಸಚಿವ ಬಿ. ರಾಚಯ್ಯ

Update: 2022-08-10 07:45 GMT

ಅವರು ಕಾಂಗ್ರೆಸ್ ಪಕ್ಷದಲ್ಲಿದ್ದ ಪರಿಶುದ್ಧ ಗಾಂಧಿ ತತ್ವಗಳ ಅನುಯಾಯಿ. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಬದ್ಧತೆಯಿಂದ ಶ್ರಮಿಸುತ್ತಿದ್ದ ನಾಯಕ. ಅವರು ಎಷ್ಟು ಆದರ್ಶಗಳನ್ನು ಇಟ್ಟುಕೊಂಡಿದ್ದರೋ ಅಷ್ಟೇ ವಾಸ್ತವ ಜಗತ್ತಿನ ಅರಿವನ್ನೂ ಪಡೆದವರಾಗಿದ್ದರು. ಆದರ್ಶ ಮತ್ತು ವಾಸ್ತವ ಪರಿಸ್ಥಿತಿಗಳನ್ನು ಸಮತೋಲನ ಮಾಡುತ್ತಲೇ ಕ್ರಿಯಾತ್ಮಕ ಮತ್ತು ಗುಣಮಟ್ಟದ ಸೇವೆಯನ್ನು ಮಾಡಲು ಅವರಿಗೆ ಸಾಧ್ಯವಾಯಿತು.

ಡೆಹ್ರಾಡೂನ್‌ನ ಇಂಡಿಯನ್ ಫಾರೆಸ್ಟ್ ಕಾಲೇಜಿನಲ್ಲಿ ಎರಡು ವರ್ಷಗಳ ಕಠಿಣ ತರಬೇತಿಯನ್ನು ಮುಗಿಸಿ 1962ರಲ್ಲಿ ಮೈಸೂರಿನಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಹುದ್ದೆಯನ್ನು ವಹಿಸಿಕೊಂಡಾಗ ನಾನಿನ್ನೂ 23ರ ತರುಣ. ಹೊಸದನ್ನು ಕಲಿಯುವ ಕುತೂಹಲವನ್ನು ಮತ್ತು ಆಸಕ್ತಿಯನ್ನು ಬತ್ತದಂತೆ ಕಾಪಾಡಿಕೊಂಡು ಉತ್ಸಾಹದಿಂದಿದ್ದ ನನಗೆ ದಿನನಿತ್ಯ ಅನೇಕ ಜನರನ್ನು ಭೇಟಿಮಾಡುವ, ಒಡನಾಡುವ ಮತ್ತು ಆ ಮೂಲಕ ಕಲಿಯುವ ಅವಕಾಶಗಳು ಒದಗಿಬಂದವು. ನನ್ನ ಮೇಲಧಿಕಾರಿಯವರು ಅರಣ್ಯ ನಿರ್ವಹಣೆಯಲ್ಲಿ ಅನುಭವಶಾಲಿಯಾದ, ಎಲ್ಲರ ಗೌರವಕ್ಕೆ ಪಾತ್ರರಾದ, ವಿನಯವೇ ಮೂರ್ತಿವೆತ್ತಂತಿದ್ದ ಬಿ. ಬಾಲಯ್ಯನವರಿದ್ದರು. ಅವರು ಖೆಡ್ಡಾ ಬಾಲಯ್ಯ ಎಂದೇ ಇಲಾಖೆಯಲ್ಲಿ ಪ್ರಸಿದ್ಧರಾಗಿದ್ದರು. ಅಂದು ಅರಣ್ಯ ಸಚಿವರಾಗಿದ್ದ ಬಿ.ರಾಚಯ್ಯನವರು ನಮ್ಮ ಹಿರಿಯ ಅಧಿಕಾರಿ ಬಾಲಯ್ಯನವರನ್ನು ಅವರ ವಿದ್ಯಾರ್ಥಿ ದಿನಗಳಿಂದಲೇ ಬಲ್ಲವರಾಗಿದ್ದರು. ಅವರ ನಡುವೆ ಅತ್ಯುತ್ತಮ ಸೌಹಾರ್ದ ಸಂಬಂಧವಿತ್ತು. ಹಾಗಾಗಿ ಬಾಲಯ್ಯನವರ ಕಾರ್ಯಚಟುವಟಿಕೆ ಮತ್ತು ಕರ್ತವ್ಯ ನಿರ್ವಹಣೆಯ ಬಗ್ಗೆ ಅಪಾರವಾದ ವಿಶ್ವಾಸವಿತ್ತು.

ರಾಚಯ್ಯನವರು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಮೈಸೂರು ಅಥವಾ ಚಾಮರಾಜನಗರಕ್ಕೆ ಭೇಟಿ ನೀಡಿದಾಗ ಬಾಲಯ್ಯನವರು ಸಚಿವರನ್ನು ತಪ್ಪದೇ ಭೇಟಿಯಾಗುತ್ತಿದ್ದರು. ಆಗ ಮೈಸೂರಿನಲ್ಲಿ ಅಧೀನ ಅಧಿಕಾರಿಯಾಗಿ ನಾನು ಬಾಲಯ್ಯನವರ ಹಿಂದೆ ವಿಧೇಯ ವಿದ್ಯಾರ್ಥಿಯಂತೆ ಅನುಸರಿಸುತ್ತಿದ್ದೆ. ಸಚಿವರೊಡನೆ ನನ್ನ ಭೇಟಿ ಯಾವಾಗಲೂ ಸಂಕ್ಷಿಪ್ತವಾಗಿರುತ್ತಿತ್ತು. ಪ್ರಾಯಶಃ ಸಚಿವರು ನನ್ನ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಬಾಲಯ್ಯನವರಿಂದ ಕೇಳಿ ತಿಳಿದುಕೊಂಡಿದ್ದಿರಬಹುದು. ಹಾಗಾಗಿ ಚಾಮರಾಜನಗರದ ಸಬ್ ಡಿ.ಎಫ್.ಒ. ನಿವೃತ್ತರಾದಾಗ ತೆರವಾದ ಹುದ್ದೆಗೆ ಕಿರಿಯನಾಗಿದ್ದರೂ ರಾಚಯ್ಯನವರು ನನ್ನನ್ನು ಆಯ್ಕೆ ಮಾಡಿ ವರ್ಗಾಯಿಸಿದರು.

ಆಗಿನ್ನೂ ಪ್ರೊಬೇಷನರಾಗಿ ಅರಣ್ಯನಿರ್ವಹಣೆ ಮತ್ತು ಆಡಳಿತವನ್ನು ಕಲಿಯುತ್ತಿದ್ದ ನಾನು ಅಷ್ಟೊಂದು ದೊಡ್ಡ ಜವಾಬ್ದಾರಿಯ ಹುದ್ದೆಯನ್ನು ವಹಿಸಿಕೊಳ್ಳಲು ಹಿಂಜರಿದೆ. ಬಾಲಯ್ಯನವರ ಸಲಹೆಯ ಮೇರೆಗೆ ನಾನು ಅರಣ್ಯ ಸಚಿವರಾಗಿದ್ದ ರಾಚಯ್ಯನವರನ್ನು ಭೇಟಿ ಮಾಡಿದೆ. ನನ್ನ ಸ್ಥಿತಿಯನ್ನು ಅವರಿಗೆ ತಿಳಿಸಿ ಯಾರಾದರೂ ಅನುಭವಿ ಮತ್ತು ಹಿರಿಯರಾದವರನ್ನು ಆ ಹುದ್ದೆಗೆ ನೇಮಿಸಲು ಅರಿಕೆ ಮಾಡಿಕೊಂಡೆ. ಆದರೆ ತಾವು ಈಗಾಗಲೇ ಎಲ್ಲ ದೃಷ್ಟಿಯಿಂದಲೂ ಪರಿಶೀಲಿಸಿಯೇ ಈ ಹುದ್ದೆಗೆ ನೇಮಿಸಿರುವುದಾಗಿ ತಿಳಿಸಿ ಹೆದರದೆ ಕರ್ತವ್ಯಕ್ಕೆ ಹಾಜರಾಗಿ ನಿರ್ವಹಿಸುವಂತೆ ಪ್ರೋತ್ಸಾಹದ ನುಡಿಗಳನ್ನಾಡಿದರು. ಸ್ವತಃ ಅರಣ್ಯ ಸಚಿವರು ಅಭಯ ನೀಡಿ, ಪ್ರೋತ್ಸಾಹಿಸಿದ್ದರಿಂದ ಅವರ ಸಲಹೆಯಂತೆ ಅಮಿತ ವಿಶ್ವಾಸದಿಂದ ನಾನು ಕರ್ತವ್ಯಕ್ಕೆ ಹಾಜರಾದೆ. ಅವರ ಸಲಹೆಯನ್ನು ಒಪ್ಪಿಕೊಂಡು ಉತ್ತಮ ಕೆಲಸ ಮಾಡಿದೆನೆಂದು ಕಾಲ ಸರಿದಂತೆ ನನಗೆ ವೇದ್ಯವಾಯಿತು.

ಚಾಮರಾಜನಗರ ಉಪವಿಭಾಗದಂತಹ ಅರಣ್ಯ ವಿಭಾಗದಲ್ಲಿ ಕೆಲಸ ಮಾಡುವುದೆಂದರೆ ಒಬ್ಬ ಪ್ರೊಬೇಷನರ್ ಹಂತದ ಅಧಿಕಾರಿಗೆ ಸಿಕ್ಕ ದೊಡ್ಡ ಗೌರವ ಎಂದೇ ಹೇಳಬೇಕು. ಕರ್ತವ್ಯ ನಿರ್ವಹಿಸುವುದು ಅರಣ್ಯಾಧಿಕಾರಿಯಾಗಿರುವ ಎಲ್ಲರ ಕನಸು. ಯಾಕೆಂದರೆ ಚಾಮರಾಜನಗರ ಉಪವಲಯವು ವೈವಿಧ್ಯ ಅರಣ್ಯಗಳಿರುವ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ನಂಜನಗೂಡು ತಾಲೂಕುಗಳನ್ನು ಒಳಗೊಂಡಿತ್ತು. ಅರಣ್ಯ, ವನ್ಯಜೀವಿಗಳೆಂದರೆ ನನಗೂ ದೊಡ್ಡ ಆಕರ್ಷಣೆ. ಜೊತೆಗೆ ಜನರ ಮತ್ತು ಸಮಾಜದ ಸೇವೆ ಮಾಡುವ ಆಸೆ ಸಹ. ಹಾಗಾಗಿ ಇವೆಲ್ಲವುಗಳ ಸೇವೆ ಸಲ್ಲಿಸುವ ಸುಯೋಗ ಅನಾಯಾಸವಾಗಿಯೇ ದೊರಕಿತ್ತು.

ಮೈಸೂರಿನ ಅಠಾರ ಕಚೇರಿಯಲ್ಲಿದ್ದ ಅರಣ್ಯ ಆಡಳಿತದಲ್ಲಿ ಅಂಬೆಗಾಲು ಇಡುತ್ತಿರುವಾಗಲೇ ನನಗೆ ವೈವಿಧ್ಯ ಅರಣ್ಯಗಳಿಂದ ಸಮೃದ್ಧವಾಗಿದ್ದ ಚಾಮರಾಜನಗರ ವಿಭಾಗವು ಸಂಪೂರ್ಣ ಭಿನ್ನವಾದ ಜಗತ್ತನ್ನು ತೋರಿಸಿತು. ಆವರೆಗೂ ನನ್ನ ಜಗತ್ತು ನಾನು ಓದಿದ ಮತ್ತು ತರಬೇತಿ ಪಡೆದ ಸಂಸ್ಥೆಗಳು ಹಾಗೂ ನನ್ನ ಕುಟುಂಬದ ಸೀಮಿತ ಜಗತ್ತಿನಲ್ಲಿ ಬದುಕುತ್ತಿದ್ದ ನನಗೆ ಚಾಮರಾಜನಗರವು ಅನೇಕ ಅನುಭವಗಳ ಜಗತ್ತನ್ನು ವಿಸ್ತರಿಸಲು ಅಡಿಪಾಯ ಹಾಕಿತು. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಡಿದ್ದ ಚಾಮರಾಜನಗರ ಅರಣ್ಯ ವಲಯವು ನನ್ನ ಕರ್ಮಭೂಮಿಯಾಯಿತು.

ನಾನು ವೃತ್ತಿ ಬದುಕು ಆರಂಭಿಸಿದಾಗ ಬಿ. ರಾಚಯ್ಯ ನವರು ಕ್ರಿಯಾಶೀಲ ಯುವ ರಾಜಕಾರಣಿ. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದ ಪರಿಶುದ್ಧ ಗಾಂಧಿ ತತ್ವಗಳ ಅನುಯಾಯಿ. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಬದ್ಧತೆಯಿಂದ ಶ್ರಮಿಸುತ್ತಿದ್ದ ನಾಯಕರು. ಅವರು ಎಷ್ಟು ಆದರ್ಶಗಳನ್ನು ಇಟ್ಟುಕೊಂಡಿದ್ದರೋ ಅಷ್ಟೇ ವಾಸ್ತವ ಜಗತ್ತಿನ ಅರಿವನ್ನೂ ಪಡೆದವರಾಗಿದ್ದರು. ಆದರ್ಶ ಮತ್ತು ವಾಸ್ತವ ಪರಿಸ್ಥಿತಿಗಳನ್ನು ಸಮತೋಲನ ಮಾಡುತ್ತಲೇ ಕ್ರಿಯಾತ್ಮಕ ಮತ್ತು ಗುಣಮಟ್ಟದ ಸೇವೆಯನ್ನು ಮಾಡಲು ಅವರಿಗೆ ಸಾಧ್ಯವಾಯಿತು. ಅತ್ಯಂತ ಶಿಸ್ತು ಮತ್ತು ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಅವರು ತಮ್ಮ ಕಾರ್ಯವನ್ನು ಲೋಪಗಳಿಗೆ ಎಡೆಯಿಲ್ಲದಂತೆ ಅನುಷ್ಠಾನಗೊಳಿಸಲು ಕ್ರಮಬದ್ಧ ಯೋಜನೆಗಳನ್ನು ರೂಪಿಸುತ್ತಿದ್ದರು. ಯಾವುದೇ ಪ್ರಕರಣವನ್ನು ಅದಕ್ಕೆ ಸಂಬಂಧಪಟ್ಟ ಎಲ್ಲರ ಅಭಿಪ್ರಾಯವನ್ನು ಶಾಂತವಾಗಿ ಆಲಿಸಿ, ಮನನ ಮಾಡಿಕೊಂಡು, ಎಲ್ಲ ದೃಷ್ಟಿಯಿಂದಲೂ ಅಳೆದು ತೂಗಿ, ನಂತರ ಸರ್ವರಿಗೂ ಸಮ್ಮತವೆನಿಸುವ ರೀತಿಯಲ್ಲಿ ನ್ಯಾಯಬದ್ಧವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ರಾಚಯ್ಯನವರು ಅತ್ಯಂತ ಸಮರ್ಥ ಸಚಿವರಾಗಿದ್ದರು. ಅಭಿವೃದ್ಧಿ ಕಾರ್ಯದಲ್ಲಿ ಅಪಾರ ಆಸಕ್ತಿಯಿದ್ದ ಅವರಿಗೆ ರಾಜ್ಯವನ್ನು ಅಭಿವೃದ್ಧಿಪಡಿಸುವ ಕನಸಿತ್ತು. ವಿಶೇಷವಾಗಿ ತಾವು ಪ್ರತಿನಿಧಿಸಿದ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕೆಂಬ ಕನಸಿತ್ತು. ಪ್ರತೀ ತಿಂಗಳೂ ಅವರು ಯಾರಾದರೊಬ್ಬ ಸಚಿವರನ್ನು ತಮ್ಮ ಕ್ಷೇತ್ರಕ್ಕೆ ಕರೆತಂದು ಅವರ ಇಲಾಖೆಯಿಂದ ಕ್ಷೇತ್ರಕ್ಕೆ ಆಗಬಹುದಾದ ನೆರವನ್ನು ನೀಡಲು ಪ್ರಯತ್ನಿಸುತ್ತಿದ್ದರು. ಹಾಗೆ ತಮ್ಮ ಕ್ಷೇತ್ರಕ್ಕೆ ಕರೆತಂದ ಮುಖ್ಯರಲ್ಲಿ ಪದ್ಮವಿಭೂಷಣ ಶ್ರೀಮತಿ ಯಶೋಧರ ದಾಸಪ್ಪಅವರೂ ಒಬ್ಬರು. ಶ್ರೀಮತಿ ದಾಸಪ್ಪನವರು ಕೆಚ್ಚೆದೆಯ ಸ್ವಾತಂತ್ರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ನಾಯಕರೆಲ್ಲರೂ ಧ್ವಜ ಹಾರಿಸಿ ಬಂಧನಕ್ಕೊಳಗಾದಾಗ ಮಹಿಳಾಪಡೆಯನ್ನು ಸಂಘಟಿಸಿ ಧ್ವಜಹಾರಿಸಿ ಬಂಧನಕ್ಕೊಳಗಾದವರು. ರಾಚಯ್ಯನವರು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ರಾಚಯ್ಯನವರ ನಿಕಟವರ್ತಿ ಡಿ. ದೇವರಾಜ ಅರಸರು ಸಾರಿಗೆ ಸಚಿವರಾಗಿದ್ದರು. ಬಿ.ಡಿ. ಜತ್ತಿ ಅವರು ಅರ್ಥಸಚಿವರಾಗಿದ್ದರು. ಒಮ್ಮೆ ಮುಖ್ಯಮಂತ್ರಿ ನಿಜಲಿಂಗಪ್ಪಅವರನ್ನೂ ಕರೆತಂದಿದ್ದರು. ಇವರೆಲ್ಲರ ಸಹಕಾರದಿಂದ ರಾಚಯ್ಯ ನವರ ಅವಧಿಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಸಂತೆಮರಹಳ್ಳಿ ವಿಧಾನಸಭಾ ಕ್ಷೇತ್ರವು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿತು. ಅನೇಕ ರಸ್ತೆ, ಸೇತುವೆ, ಸರಕಾರದ ಕಟ್ಟಡಗಳು ನಿರ್ಮಾಣಗೊಂಡವು. ಯಳಂದೂರು ಮತ್ತು ಚಾಮರಾಜನಗರ ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ರೇಷ್ಮೆ ಹುಳ ಸಾಕಣೆ ಕಸುಬಿಗೆ ಹೆಚ್ಚಿನ ಆದ್ಯತೆ ದೊರೆತು, ರೇಷ್ಮೆ ಕೃಷಿ ಉದ್ಯಮವಾಗಿ ಬೆಳೆಯಿತು. ನೀರಾವರಿ ಯೋಜನೆಗಳೂ ಜಾರಿಯಾದವು. ಭೂರಹಿತ ಕೃಷಿಕರಿಗೆ ಭೂಮಿ ಹಂಚಿಕೆಯಾಯಿತು. ಅರಣ್ಯಾಭಿವೃದ್ಧಿಗೂ ಬೆಂಬಲ ದೊರೆಯಿತು. ಇಲಾಖೆಯ ಎಲ್ಲ ಅಧಿಕಾರಿ ಮುಖ್ಯಸ್ಥರು ಚಾಮರಾಜನಗರಕ್ಕೆ ಭೇಟಿ ನೀಡಿ ಯೋಜನೆಗಳು ಸರಿಯಾಗಿ ಜಾರಿಯಾಗುವುದನ್ನು ಉಸ್ತುವಾರಿ ಮಾಡುವಂತಹ ವಾತಾವರಣವನ್ನು ರಾಚಯ್ಯನವರು ಸೃಷ್ಟಿಸಿದ್ದರು.

ರಾಚಯ್ಯನವರು ತಮ್ಮ ಕ್ಷೇತ್ರದಲ್ಲಿ ಸಾಧಿಸಿದ ಅಭಿವೃದ್ಧಿಯ ವೇಗ ನನ್ನಲ್ಲಿ ಅಚ್ಚರಿ ಮೂಡಿಸಿತು. ಅವರಿಗೆ ತಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವಿತ್ತು. ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರಿಗೆ ಮೆಚ್ಚಿನವರಾಗಿದ್ದರು. ಗುಂಡ್ಲುಪೇಟೆ ಶಾಸಕ ಶ್ರೀಮತಿ ನಾಗರತ್ನಮ್ಮ ಮತ್ತು ಯಳಂದೂರು ಶಾಸಕ ಬಸಪ್ಪ ಅವರೂ ಸಚಿವರಿಗೆ ಉತ್ತಮ ಸಹಕಾರ ನೀಡಿದರು.

ನನಗೆ ಚಾಮರಾಜನಗರದಲ್ಲಿದ್ದ ಅವಧಿಯು ನನ್ನ ಕಲಿಕೆಗೆ ಗಟ್ಟಿಯಾದ ಅಸ್ತಿಭಾರ ಹಾಕಿತು. ಒಂದೆಡೆ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ ಸಚಿವರು, ಮತ್ತೊಂದೆಡೆ ಅರಣ್ಯ ಅಭಿವೃದ್ಧಿಗೆ ಸಮರ್ಪಿಸಿಕೊಂಡಿದ್ದ ಬಿ. ಬಾಲಯ್ಯ ಮತ್ತು ಜಿ.ಆರ್. ಮಾವಿನಕುರ್ವೆ ಸಾಹೇಬರ ಮಾರ್ಗದರ್ಶನ. ರಾಚಯ್ಯನವರು ಕ್ಷಿಪ್ರವಾಗಿ ತೆಗೆದುಕೊಳ್ಳುತ್ತಿದ್ದ ಜನಪರ ತೀರ್ಮಾನಗಳು ನನಗೆ ಆಡಳಿತ ನಿರ್ವಹಣೆಯ ಪಾಠಗಳಾದವು. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ನನ್ನ ಕರ್ತವ್ಯ ನಿರ್ವಹಣೆಗೆ ಸಾಣೆಹಿಡಿಯಿತು.

ಚಾಮರಾಜನಗರ ಉಪವಿಭಾಗವು ನನಗೆ ವಿಸ್ತಾರವಾದ ಅರಣ್ಯಗಳನ್ನು ಮತ್ತು ವನ್ಯಜೀವಿಗಳನ್ನು ನಿರ್ವಹಿಸುವ ಅನೇಕ ಸವಾಲುಗಳನ್ನು ಒಡ್ಡಿತು. ಯಾವುದೇ ವಿಶ್ವವಿದ್ಯಾನಿಲಯದ ದೀರ್ಘ ವ್ಯಾಸಂಗವು ಕಲಿಸಲಾರದಷ್ಟು ಜ್ಞಾನವನ್ನು ನಾನು ಈ ಪ್ರದೇಶದಲ್ಲಿ ಗಳಿಸಲು ಸಾಧ್ಯವಾಯಿತು. ಅದು ಕಿರಿಯ ವಯಸ್ಸಿಗೆ ಆಡಳಿತದ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಯಿತು. ಅರಣ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಎಲ್ಲ ಅರಣ್ಯಾಧಿಕಾರಿಗಳು ಗಳಿಸಿಕೊಳ್ಳಲೇಬೇಕಾದ ಜ್ಞಾನವನ್ನು ಇಲ್ಲಿನ ಸೋಲಿಗ ಸಮುದಾಯದ ಹಾವದಾಸ ಮತ್ತು ಅವರಂತಹ ಅನೇಕ ಬುಡಕಟ್ಟು ಸಮುದಾಯದ ಜನರು ಧಾರೆಯೆರೆದರು.

ದಾರ್ಶನಿಕ ಅರಣ್ಯ ಸಚಿವ ಬಿ. ರಾಚಯ್ಯನವರು ನನ್ನನ್ನು ಚಾಮರಾಜನಗರಕ್ಕೆ ವರ್ಗಮಾಡಿದ ಕಾರಣಕ್ಕಾಗಿಯೇ ನನ್ನ ಕಲಿಕೆಗೆ ಸುವರ್ಣಾವಕಾಶ ದೊರೆಯಿತೆಂದು ಹೇಳಲು ನನಗೆ ಹರ್ಷವಾಗುತ್ತದೆ. ಅಂದು 24 ವರ್ಷದ, ಉತ್ಸಾಹಿ ಯುವಕನಾದ ನನಗೆ ಕೊಟ್ಟ ಅವಕಾಶಕ್ಕಾಗಿ ರಾಚಯ್ಯನವರನ್ನು ಸ್ಮರಿಸುತ್ತೇನೆ.

ಬಿ. ರಾಚಯ್ಯನವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಜಗತ್ತನ್ನು ಸುಂದರಗೊಳಿಸಲು ಮತ್ತು ಸೌಹಾರ್ದದ ವಾತಾವರಣ ನಿರ್ಮಿಸಲು ಅವರಲ್ಲಿದ್ದ ಧ್ಯೇಯ, ಗುರಿ, ಆದರ್ಶ, ಕನಸು, ದಕ್ಷತೆ, ಉತ್ಸಾಹ, ಪ್ರೀತಿಸುವ ಔದಾರ್ಯ ಮತ್ತು ಪಟ್ಟ ಶ್ರಮ, ತ್ಯಾಗ, ಸೇವೆಗಳನ್ನು ನೆನೆಯುವುದರ ಜೊತೆಗೆ ಈ ಅವರ ಜೀವನ ಸಂದೇಶವನ್ನು ಮುಂದಿನ ತಲೆಮಾರಿಗೆ ದಾಟಿಸುವಂತಹ ಕಾರ್ಯಕ್ರಮಗಳು ಜಾರಿಯಾಗಬೇಕು.

ರಾಚಯ್ಯನವರ ವ್ಯಕ್ತಿತ್ವ ನಮ್ಮಲ್ಲಿ ಸದಾ ಹಸಿರಾಗಿರುವುದನ್ನು ನೆನಪಿಸಲು ಇಲ್ಲಿ ನಾನೊಂದು ವಿಷಯವನ್ನು ಪ್ರಸ್ತಾಪಿಸುತ್ತೇನೆ. ಮೈಸೂರಿನ ಮೃಗಾಲಯದಲ್ಲಿ ಪ್ರಾಯೋಜಕರಿಂದ ಆರ್ಥಿಕ ನೆರವು ಪಡೆದು ಒಂದು ಸುಸಜ್ಜಿತ ಮತ್ತು ಆಧುನಿಕ ಗ್ರಂಥಾಲಯ ನಿರ್ಮಾಣಕ್ಕೆ ನಾನು ಶ್ರಮಿಸಿದ್ದೇನೆ. ಕಳೆದ ಜನವರಿ ತಿಂಗಳಿನಲ್ಲಿ ಮೈಸೂರಿಗೆ ಆಗಮಿಸಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರೊಡನೆ ಚರ್ಚಿಸಿ ರಾಚಯ್ಯನವರ ನಾಮಕರಣವನ್ನು ಅಧಿಕೃತವಾಗಿ ನೆರವೇರಿಸಲು ತಿಳಿಸಿದ್ದೇನೆ. ಆ ಕಾರ್ಯವನ್ನು ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಈ ಕಾರ್ಯ ನೆರವೇರಿದಾಗ ಜ್ಞಾನವನ್ನು ಹಂಚುವ ಗ್ರಂಥಾಲಯಕ್ಕೆ ಬಿ. ರಾಚಯ್ಯ ಅವರ ಹೆಸರಿಡುವ ಮೂಲಕ ತಮ್ಮ ಪ್ರಯತ್ನ, ಕ್ರಿಯಾಶೀಲತೆ, ತ್ಯಾಗ, ಪ್ರೀತಿ, ಔದಾರ್ಯಗಳಿಂದ ಸುಖಿಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಚೇತನಕ್ಕೆ ಅರ್ಹ ಗೌರವ ಸಲ್ಲಿಸಿದಂತಾಗುತ್ತದೆ.

(ಲೇಖಕರು ನಿವೃತ್ತ ಐಎಫ್‌ಎಸ್ ಅಧಿಕಾರಿ, ಅರಣ್ಯ ಕಾರ್ಯದರ್ಶಿ, ಕರ್ನಾಟಕ ಸರಕಾರ)

Writer - ಎ.ಸಿ. ಲಕ್ಷ್ಮಣ್

contributor

Editor - ಎ.ಸಿ. ಲಕ್ಷ್ಮಣ್

contributor

Similar News