ವಿದ್ಯಾರ್ಥಿಯ ತಂದೆಯ ದೂರಿನ ನಂತರ ಈಜುಡುಗೆ ಫೋಟೋ ಪೋಸ್ಟ್ ಮಾಡಿದ್ದ ಪ್ರಾಧ್ಯಾಪಕಿಯಿಂದ ರಾಜೀನಾಮೆ ಪಡೆದ ವಿವಿ

Update: 2022-08-10 08:15 GMT
 Credit: https://sxuk.edu.in

ಹೊಸದಿಲ್ಲಿ: ಕೊಲ್ಕತ್ತಾದ ಸೈಂಟ್ ಕ್ಸೇವಿಯರ್ಸ್ ವಿಶ್ವವಿದ್ಯಾಲಯದ (St. Xaviers University) ಪ್ರೊಫೆಸರ್ ಒಬ್ಬರು ತಾವು ಈಜುಡುಗೆ ಧರಿಸಿದ್ದ ವೇಳೆ ತೆಗೆದ ಫೋಟೋವನ್ನು ಇನ್‍ಸ್ಟಾಗ್ರಾಂಗೆ(instagram post) ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಅವರ ರಾಜೀನಾಮೆಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಸಂಸ್ಥೆಯ ಪದವಿ ವಿದ್ಯಾರ್ಥಿಯ ತಂದೆಯೊಬ್ಬರು ವಿವಿಗೆ ದೂರು ಸಲ್ಲಿಸಿ ತನ್ನ ಪುತ್ರ ಇನ್‍ಸ್ಟಾಗ್ರಾಂನಲ್ಲಿ ಪ್ರೊಫೆಸರ್ ಫೋಟೋ ನೋಡುತ್ತಿರುವುದನ್ನು ಕಂಡು ತಾವು ದಂಗಾಗಿದ್ದಾಗಿ ಹೇಳಿದ್ದರು. ಪ್ರೊಫೆಸರ್‍ಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿರುವ ವಿವಿ, ಜೊತೆಗೆ ತನ್ನ ಪ್ರತಿಷ್ಠೆಗೆ ಹಾನಿಯೆಸಗಿದ್ದಕ್ಕಾಗಿ ರೂ 99 ಕೋಟಿ ಪರಿಹಾರ ನೀಡುವಂತೆಯೂ ಸೂಚಿಸಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ(social media) ಖಾಸಗಿತನದ ಪ್ರಶ್ನೆಯ ಬಗ್ಗೆ ಚರ್ಚೆಗೂ ಕಾರಣವಾಗಿದೆ. ಪ್ರೊಫೆಸರ್ ಅವರ ಇನ್‍ಸ್ಟಾಗ್ರಾಂ ಪ್ರೊಫೈಲ್ ಪ್ರೈವೇಟ್ ಆಗಿದ್ದರೂ ಪದವಿ ವಿದ್ಯಾರ್ಥಿಯೊಬ್ಬನಿಗೆ ಈ ಪ್ರೈವೇಟ್ ಖಾತೆಯ ಲಾಕ್ ಮಾಡಲ್ಪಟ್ಟ ಪ್ರೊಫೈಲ್ ಚಿತ್ರ ದೊರೆಯಿತು ಎಂಬ  ಪ್ರಶ್ನೆಯೂ ಎದುರಾಗಿದೆ. ಒಂದೋ ಆಕೆಯ ಖಾತೆ ಹ್ಯಾಕ್ ಆಗಿರಬೇಕು ಅಥವಾ ಆಕೆಯ ಪ್ರೊಫೈಲ್‍ಗೆ ಪ್ರವೇಶವಿರುವ ಯಾರೋ ಅದರ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿರಬಹುದೆಂದು ಅಂದಾಜಿಸಲಾಗಿದೆ.

"ಒಳಉಡುಪಿನಲ್ಲಿರುವ ಶಿಕ್ಷಕಿಯೊಬ್ಬರು ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವುದು ಹೆತ್ತವನಾಗಿ ನನಗೆ ನಾಚಿಕೆ ತಂದಿದೆ. ಕನಿಷ್ಠ ಬಟ್ಟೆ ಧರಿಸಿ ತನ್ನ ದೇಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿರುವ ಪ್ರೊಫೆಸರ್ ಚಿತ್ರವನ್ನು 18 ವರ್ಷದ ವಿದ್ಯಾರ್ಥಿಯೊಬ್ಬ ನೋಡುವುದು ಸರಿಯಲ್ಲ," ಎಂದು ವಿದ್ಯಾರ್ಥಿಯ ತಂದೆ ವಿವಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಈ ನಡುವೆ ತನ್ನನ್ನು ಕೆಲಸದಿಂದ ವಜಾಗೊಳಿಸಿದ ವಿವಿ ಕ್ರಮವನ್ನು ಪ್ರೊಫೆಸರ್ ಕೊಲ್ಕತ್ತಾ ಹೈಕೋರ್ಟಿನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಆಕೆ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. "ನಾನು ಕಳೆದ ವರ್ಷ ವಿವಿ ಸೇವೆಗೆ ಸೇರುವುದಕ್ಕಿಂತ ಅನೇಕ ತಿಂಗಳುಗಳ ಹಿಂದೆ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ  ನನ್ನ ಕೊಠಡಿಯಲ್ಲಿ ನೀಲಿ ಸ್ವಿಮ್ ಸೂಟ್ ಧರಿಸಿ ತೆಗೆದ ಫೋಟೋ ಪೋಸ್ಟ್ ಮಾಡಿದ್ದೆ. ಒಂದು ಇನ್‍ಸ್ಟಾಗ್ರಾಂ ಸ್ಟೋರಿ ಡೀಫಾಲ್ಟ್(instagram story) ಆಗಿ ಕೇವಲ 24 ಗಂಟೆಗಳ ಕಾಲ ಇರುವುದರಿಂದ ಆ ಫೋಟೋಗಳು ಯಾರ ಕೈಗೂ ಹೋಗುವುದು ಸಾಧ್ಯವಿಲ್ಲ. ನನ್ನ ಪ್ರೊಫೈಲ್ ಪ್ರೈವೇಟ್ ಆಗಿದೆ. ಹಲವು ವಾರಗಳ ನಂತರ ಅದು ಹೇಗೆ ಬೇರೊಬ್ಬರಿಗೆ ದೊರೆಯಿತೆಂದು ತಿಳಿದಿಲ್ಲ. ನನ್ನ ಖಾಸಗಿ ಚಿತ್ರಗಳು ನನ್ನ ಅನುಮತಿಯಿಲ್ಲದೆ ನಾನು ಸಭೆಯೊಂದರಲ್ಲಿರುವಾಗ  ಅನೇಕರ ಕೈ ಸೇರಿದೆ. ಒಂದೋ ಖಾತೆಯನ್ನು ಹ್ಯಾಕ್ ಮಾಡಿರಬೇಕು ಅಥವಾ ಯಾರೋ ಅದರ ಸ್ಕ್ರೀನ್‍ಶಾಟ್ ತೆಗೆದಿರಬೇಕು," ಎಂದು ಪ್ರೊಫೆಸರ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News