ಚೀನಾದಲ್ಲಿ ಪ್ರಾಣಿಗಳಿಂದ ಮಾನವರಿಗೆ ಹರಡುವ ಲಾಂಗ್ಯಾ ವೈರಸ್ ಪತ್ತೆ: 35 ಮಂದಿಗೆ ಸೋಂಕು

Update: 2022-08-10 16:23 GMT

ಬೀಜಿಂಗ್,ಆ.10: ಚೀನಾದಲ್ಲಿ ಪ್ರಾಣಿಜನ್ಯ ಹೊಸ ವೈರಸ್ ಲಾಂಗ್ಯಾ ಪತ್ತೆಯಾಗಿದ್ದು ಈವರೆಗೆ 35 ಮಂದಿಗೆ ಸೋಂಕು ತಗಲಿರುವುದಾಗಿ ತೈಪೆ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಹೆನಿಪಾವೈರಸ್ ನ ಹೊಸ ಪ್ರಭೇದವಾದ ಲಾಂಗ್ಯಾವು ಚೀನಾದ ಶಾನ್ಡೊಂಗ್ ಹಾಗೂ ಹೆನಾನ್ ಪ್ರಾಂತಗಳಲ್ಲಿ ಕಂಡುಬಂದಿದೆಯೆಂದು ಅದು ತಿಳಿಸಿದೆ.

  

ಈ ವೈರಸ್ ಪ್ರಾಣಿಗಳಿಂದ ಮಾನವರಿಗೆ ಹರಡುವ ಸಾಧ್ಯತೆ ಅಧಿಕವಾಗಿದೆ ಎಂದು ತೈವಾನ್ನ ವಿಜ್ಞಾನಿಗಳ ಹೇಳಿಕೆಯನ್ನು ಉಲ್ಲೇಖಿಸಿ ಗಾರ್ಡಿಯನ್ ಪತ್ರಿಕೆ ವರದಿಯೊಂದರಲ್ಲಿ ತಿಳಿಸಿದೆ. ಈ ಸೋಂಕು ರೋಗದ ಹರಡುವಿಕೆಯ ಕುರಿತು ಚೀನಾದ ಆರೋಗ್ಯ ಇಲಾಖೆಯು ನಿಗಾವಿರಿಸಿದೆಯೆಂದು ವರದಿಯು ತಿಳಿಸಿದೆ.

ಲಾಂಗ್ಯಾ ಸೋಕುಪೀಡಿತ 35 ಮಂದಿಯ ಪೈಕಿ 26 ಮಂದಿಯಲ್ಲಿ ಜ್ವರ, ಬಳಲಿಕೆ, ಕಫ, ಹಸಿವಾಗದಿರುವುದು, ಸ್ನಾಯುನೋವು, ವಾಕರಿಕೆ ಹಾಗೂ ತಲೆನೋವಿನ ಲಕ್ಷಣಗಳು ಕಂಡುಬಂದಿರುವುದಾಗಿ ತೈವಾನ್ನ ರೋಗ ನಿಯಂತ್ರಣ ಕೇಂದ್ರಗಳ ಉಪನಿರ್ದೇಶಕ ಚುವಾಂಗ್ ಜೆನ್ ಹಿಸಿಯಾಂಗ್ ತಿಳಿಸಿದ್ದಾರೆ. ಸೋಂಕಿತರ್ಲಿ ಬಿಳಿ ರಕ್ತ ಕಣಗಳ ಇಳಿಕೆ,ಪ್ಲೆಟೆಲೆಟ್ ಕಣಗಳ ಕಡಿಮೆಯಾಗುವಿಕೆ, ಪಿತ್ತಜನಕಾಂಗ ಹಾಗೂ ಮೂತ್ರಕೋಶದ ವೈಫಲ್ಯದ ಲಕ್ಷಣಗಳು ಕೂಡಾ ಬಂದಿವೆಯೆಂದುಅವರು ತಿಳಿಸಿದ್ದಾರೆ.

ಆದಾಗ್ಯೂ ಈ ವೈರಸ್ನಿಂದ ಯಾವುದೇ ಮಾನವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲವೆಂದು ವರದಿಗಳು ತಿಳಿಸಿವೆ. ಈವರೆಗೆ ಲಾಂಗ್ಯಾ ಸೋಂಕಿನ ಪ್ರಕರಣಗಳು ಮಾನವರಿಗೆ ಅಪಾಯಕಾರಿಯಾಗಿ ಪರಿಣಮಿಸಿಲ್ಲವೆಂದು ಡ್ಯೂಕ್-ಎನ್ಯುಎಸ್ ಮೆಡಿಕಲ್ ಸ್ಕೂಲ್ನ ಪ್ರೊಫೆಸರ್ ವಾಂಗ್ ಲಿನ್ಫಾ ಅವರು ಗ್ಲೋಬಲ್ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News