ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ನ ಕೆಲವು ನಾಯಕರಿಗೆ ಕೋವಿಡ್ ಸೋಂಕು: ರಾಹುಲ್ ರಾಜಸ್ಥಾನ ಪ್ರವಾಸ ರದ್ದು

Update: 2022-08-10 17:51 GMT

ಹೊಸದಿಲ್ಲಿ, ಆ. 10: ತನಗೆ ಮತ್ತೆ ಕೋವಿಡ್ ಸೋಂಕು ತಗಲಿರುವುದಾಗಿ ಹಾಗೂ ಎಲ್ಲ ಶಿಷ್ಟಾಚಾರಕ್ಕೆ ಅನುಗುಣವಾಗಿ ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಿರುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ತಿಳಿಸಿದ್ದಾರೆ. 

ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಇತರ ಕೆಲವು ನಾಯಕರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ರಾಜಸ್ಥಾನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಟಿಜಾರಾದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ತರಬೇತಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಬೇಕಿತ್ತು. ಆದರೆ, ಅದು ಅವರಿಗೆ ಸಾಧ್ಯವಾಗಿಲ್ಲ. 

‘‘ಇಂದು ಮತ್ತೆ ಕೋವಿಡ್ ಸೋಂಕು ತಗುಲಿದೆ. ಎಲ್ಲ ಶಿಷ್ಟಾಚಾರಗಳಿಗೆ ಅನುಗುಣವಾಗಿ ಮನೆಯಲ್ಲಿ ಐಸೋಲೇಷನ್‌ಗೆ ಒಳಗಾಗಿದ್ದೇನೆ’’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. 
ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹಾಗೂ ಪಕ್ಷದ ಸಂಸದ ಅಭಿಷೇಕ್ ಮನು ಸಿಂಘ್ವಿಯಂತಹ ಕಾಂಗ್ರೆಸ್‌ನ ಕೆಲವು ನಾಯಕರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ವರ್ಷ ಜೂನ್ ಆರಂಭದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸಂಜೆ, ತನಗೆ ಕೋವಿಡ್ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.  

‘‘ನನಗೆ ಕೋವಿಡ್ ಸೋಂಕು ತಗುಲಿದೆ. ಇತ್ತೀಚೆಗೆ ನನ್ನನ್ನು ಭೇಟಿಯಾದವರು ಮುಂಜಾಗರೂಕತೆ ವಹಿಸಬೇಕೆಂದು ಮನವಿ ಮಾಡುತ್ತೇನೆ’’ ಎಂದು ಖರ್ಗೆ ಅವರು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News