ಕುಂದಾಪುರ; ತೀರ್ಥಯಾತ್ರೆಗೆ ಹೋದವರ ಮನೆಯಲ್ಲಿ ಕಳವು ಪ್ರಕರಣ: ಸೊತ್ತು ಸಹಿತ ಆರೋಪಿ ಸೆರೆ

Update: 2022-08-11 15:30 GMT

ಕುಂದಾಪುರ: ಮನೆಮಂದಿ ಕುಟುಂಬ ಸಮೇತ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭ ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವುಗೈದ ಘಟನೆ ಕುಂಭಾಶಿ ಗ್ರಾಮದ ವಿನಾಯಕ ನಗರದಲ್ಲಿ ಆ.5ರಂದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಲತಃ ಮರವಂತೆ ನಿವಾಸಿ, ಪ್ರಸ್ತುತ ಕುಂಭಾಶಿ ವಿನಾಯಕ ನಗರಲ್ಲಿರುವ ಸುಭಾಶ್ಚಂದ್ರ ಆಚಾರ್ಯ (40) ಬಂಧಿತ ಆರೋಪಿ.

ಈತನಿಂದ 8 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್, 4 ಗ್ರಾಂ, 3 ಗ್ರಾಂ ತೂಕದ ಚಿನ್ನದ ಉಂಗುರ,  1610 ರೂ. ನಗದು  ಸ್ವಾಧೀನಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ..

ಕುಂಭಾಶಿ ವಿನಾಯಕ ನಗರದ ನಿವಾಸಿ ಮಂಜುನಾಥ ಜೋಗಿ ಎಂಬವರು ಜುಲೈ 29ರಂದು ಕುಟುಂಬ ಸಮೇತರಾಗಿ ಪಂಡರಾಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೀರ್ಥಯಾತ್ರೆ ತೆರಳಿದ್ದು ಆ.5ರಂದು ವಾಪಸ್ಸಾದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿಯ ಬಾಗಿಲು, ಅಡುಗೆ ಮನೆಯ ಬಾಗಿಲನ್ನು ಒಡೆದು ಮನೆಯ ಕಪಾಟಿನಲ್ಲಿರಿಸಿದ್ದ 1 ಲಕ್ಷದ 20 ಸಾವಿರ ರೂ. ಮೌಲ್ಯದ ಒಟ್ಟು 27 ಗ್ರಾಂ ಚಿನ್ನಾಭರಣ ಮತ್ತು 13,500 ರೂ. ನಗದು ಹಣವನ್ನು ಕಳವು ಮಾಡಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣವರ್ಧನ್ ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ. ನಿರ್ದೇಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಪ್ರಸಾದ್ ಕುಮಾರ್ ಕೆ ಹಾಗೂ ಕಾನೂನು‌ ಸುವ್ಯವಸ್ಥೆ ಪಿಎಸ್ಐ ಸದಾಶಿವ ಆರ್ ಗವರೋಜಿ ನೇತೃತ್ವದಲ್ಲಿ ಅಪರಾಧ ಪತ್ತೆ ದಳ ತಂಡದ ಸಿಬ್ಬಂದಿ ಸಂತೋಷ ಕುಮಾರ್ ಕೆ.ಯು, ಸಂತೋಷ ಕುಮಾರ್, ರಾಘವೇಂದ್ರ ಬೈಂದೂರು, ಅವಿನಾಶ, ರಾಮ ಪೂಜಾರಿ ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು  ಆ.10 ರಂದು ಗೋಪಾಡಿ ಸಮೀಪದಲ್ಲಿ ಬಂಧಿಸಿದ್ದಾರೆ.

ಮನೆ ನಿರ್ಮಾಣಕ್ಕಾಗಿ ಕಳ್ಳತನ ಮಾಡಿದ್ದ!

ಆರೋಪಿ ಸುಭಾಶ್ಚಂದ್ರ ಆಚಾರ್ ಹೊಸ ಮನೆ ನಿರ್ಮಿಸುತ್ತಿದ್ದು, ಇದಕ್ಕಾಗಿ ತನ್ನ ಮನೆಯ ಸಮೀಪದ ಮನೆಯ ಕಳ್ಳತನ ನಡೆಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕಳವು ನಡೆಸಿದ ಮನೆಯಲ್ಲಿ ಈತ ಪಕ್ಕದ ಮನೆಯೊಂದರಲ್ಲಿದ್ದ ಯುವಕನ ಚಪ್ಪಲಿಯಿಟ್ಟು ಅವರ ಮೇಲೆ ಸಂಶಯ ಬರುವಂತೆ ಸಂಚು ಮಾಡಿದ್ದನು.  ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ, ಕಳವು ಕೃತ್ಯದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ಈ ಮಧ್ಯೆ ಈತನ ಬ್ಯಾಂಕ್ ಖಾತೆಗೆ 20 ಸಾವಿರ ರೂ. ಹಣ ವರ್ಗಾವಣೆ ಕೂಡ ಆಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಈತನ ಮೇಲೆ ಸಂಶಯ ಮೂಡಿದ್ದು ನಿಗಾ ವಹಿಸಿ ತಾಂತ್ರಿಕ ಸಹಾಯದ ಮೂಲಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News