ಉಡುಪಿ; ಮಹಿಳೆಗೆ ಹಲ್ಲೆ ನಡೆಸಿ ಸುಲಿಗೆ ಪ್ರಕರಣ: ಆರೋಪಿ ಬಂಧನ, ಸೊತ್ತು ವಶ

Update: 2022-08-11 15:31 GMT

ಉಡುಪಿ, ಆ.11: ವಾರದ ಹಿಂದೆ ಕೊರ್ಗಿ ಗ್ರಾಮದ ಕಾಡಿನಬೆಟ್ಟು ಎಂಬಲ್ಲಿ ಶಾಲಾ ಬಸ್ಸಿನಲ್ಲಿ ಬರುವ ಮಗನಿಗಾಗಿ ಕಾಯುತ್ತಿದ್ದ ಮಹಿಳೆಗೆ ಕಬ್ಬಿಣದ ರಾಡಿ ನಿಂದ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ತ್ರಾಸಿ ಹೊಸಾಡು ಗ್ರಾಮದ ಭಾರತ್‌ ನಗರದ ನಿವಾಸಿ ಪ್ರವೀಣ್ (24) ಬಂಧಿತ ಆರೋಪಿ.

ಆ.5ರಂದು ಸಂಜೆ ಶಾಲಾ ಬಸ್ಸಿನಲ್ಲಿ ಬರುವ ತನ್ನ  ಮಗನನ್ನು  ಕರೆದುಕೊಂಡು ಹೋಗಲು  ರಸ್ತೆಯ  ಬದಿಯಲ್ಲಿ ನಿಂತಿದ್ದ ಕಾಡಿನಬೆಟ್ಟು ನಿವಾಸಿ ಅಶೋಕ್ ಪೂಜಾರಿ ಎಂಬವರ ಪತ್ನಿ ದೇವಕಿ ಪೂಜಾರ್ತಿ (32) ಎಂಬ ವರಿಗೆ ಅಪರಿಚಿತ  ವ್ಯಕ್ತಿ ಅವರ  ತಲೆಗೆ  ಕಬ್ಬಿಣದ  ರಾಡ್‌ನಿಂದ   ಗಂಭೀರ ವಾಗಿ ಹಲ್ಲೆ ಮಾಡಿ 1.60ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ, ಬಳೆ ಮತ್ತು ಉಂಗುರ ಕಳವು ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದನು.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಲಾಡಿ ರಸ್ತೆ ಹಾಗೂ ಕುಂದಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಾವಳಿಯಲ್ಲಿ  ಕಂಡು ಬಂದಿರುವ ಸಂಶಯಿತ ಬೈಕ್ ಮತ್ತು ಆರೋಪಿಯ ಚಹರೆಯ ಮೇರೆಗೆ ತನಿಖೆ ಮುಂದುವರಿಸಿದ ವಿಶೇಷ ಪೊಲೀಸ್ ತಂಡವು, ಆ.10ರಂದು ರಾತ್ರಿ ಗಂಗೊಳ್ಳಿ ತ್ರಾಸಿ ಎಂಬಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತನಿಂದ ಕೃತ್ಯಕ್ಕೆ ಬಳಸಿರುವ ಬೈಕ್, ಸುಲಿಗೆ ಮಾಡಿರುವ ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ ನಗದು ಹಣ ಒಟ್ಟು 41000ರೂ.ವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ,  ಕುಂದಾಪುರ ಗ್ರಾಮಾಂತರ ಠಾಣಾ ಎಸ್ಸೈ ನಿರಂಜನ್ ಗೌಡ ಹಾಗೂ ಸಿಬ್ಬಂದಿ ರಾಜು ಬಿ., ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆ ದಳದ ರಾಮು ಹೆಗಡೆ ಮತ್ತು  ರಾಘವೇಂದ್ರ ಉಪ್ಪುಂದ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲವೂ ಬೇರೆಯವರ ಹೆಸರಲ್ಲಿ!

ಆರೋಪಿ ಕೃತ್ಯಕ್ಕೆ ಮುಂಬದಿ ನಂಬರ್ ಪ್ಲೇಟ್ ಇಲ್ಲದ ಮಾರ್ಪಾಡು ಮಾಡಿದ ಬೈಕ್ ಬಳಸಿದ್ದನು. ಇದು ಕೂಡ ಬೇರೆಯವರದ್ದಾಗಿದೆ. ಕೀಲಿ ಇಲ್ಲದ ಈ ಬೈಕನ್ನು ಈತ ಆಗಾಗ್ಗೆ ಉಪಯೋಗಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಕದ್ದ ಚಿನ್ನಾಭರಣವನ್ನು ಬೇರೆಯವರ ಹೆಸರಲ್ಲಿ ಸೊಸೈಟಿಯಲ್ಲಿ ಅಡಮಾನ ಇಟ್ಟು ಬಂದ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News