ಹರ್‌ಘರ್ ತಿರಂಗಾ ಯಶಸ್ವಿಗೊಳಿಸಲು ದ.ಕ. ಜಿಲ್ಲಾಧಿಕಾರಿ ಕರೆ

Update: 2022-08-11 15:43 GMT
ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು : ಪ್ರತಿಯೊಂದು ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ಮೇಲೆ ಆ.13ರಿಂದ 15ರವರೆಗೆ ಹರ್‌ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ದೇಶಪ್ರೇಮ ಮೆರೆಯಲು ಅನುಕೂಲವಾಗುವಂತೆ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾಷ್ಟ್ರಧ್ವಜಗಳನ್ನು ಸಮರ್ಪಕವಾಗಿ ವಿತರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಹರ್‌ಘರ್ ತಿರಂಗಾ ಅಭಿಯಾನದಡಿ ಧ್ವಜಗಳ ವಿತರಣೆ ಸುಸೂತ್ರವಾಗಿ ಆಗಬೇಕು. ನಾಗರಿಕರಿಗೆ ಧ್ವಜಗಳು ದೊರೆಯಲು ಅನುಕೂಲವಾಗುವಂತೆ ಜನಸಂಪರ್ಕ ಹೆಚ್ಚಿರುವ ಸ್ಥಳಗಳಲ್ಲಿ ಮಾರಾಟ ಕೇಂದ್ರಗಳನ್ನು ತೆರೆಯಬೇಕು ಎಂದರು.

ಈಗಾಗಲೇ ಕೇಂದ್ರದಿಂದ ಬಂದಿದ್ದ ೧.೭೫ ಲಕ್ಷ ದ್ವಜಗಳನ್ನು ಜಿಪಂ ಸಿಇಒ ಮೂಲಕ ಜಿಲ್ಲೆಯ ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ. ಜಿಲ್ಲೆಯ ಸ್ತ್ರೀ-ಶಕ್ತಿ ಸಂಘಗಳು ಸಿದ್ಧಪಡಿಸಿಕೊಟ್ಟಿದ್ದ ೧.೭೫ ಲಕ್ಷ ಧ್ವಜಗಳ ವಿತರಣೆಯಾಗಿದೆ. ಗ್ರಾಪಂ ಮಟ್ಟದಲ್ಲಿ ಪ್ರತಿಯೊಂದು ಮನೆಗೂ ರಾಷ್ಟ್ರಧ್ವಜವನ್ನು ಒದಗಿಸಬೇಕು, ಎಲ್ಲಾ ಗ್ರಾಪಂಗಳಲ್ಲಿ ವಾರ್ಡ್‌ವಾರು ಅಥವಾ ಜನರು ಹೆಚ್ಚು ಸೇರುವ ಸ್ಥಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಡಿಸಿ ಹೇಳಿದರು.

*ಜಿಲ್ಲೆಯ ಎಲ್ಲಾ ಸರಕಾರಿ ಕಟ್ಟಡಗಳು, ಶಾಲೆ, ಕಾಲೇಜು ಹಾಗೂ ಜಿಲ್ಲಾ, ತಾಲೂಕು, ಗ್ರಾಪಂ ಕಟ್ಟಡಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಗಲಿನಲ್ಲಿ ಮಾತ್ರ ಹಾರಿಸಲು ಅನುಮತಿಸಲಾಗಿದೆ. ಆ.೧೩ರಿಂದ ೧೫ರವರೆಗೆ ಪ್ರತಿದಿನ ಸೂರ್ಯೋದಯದ ನಂತರ ಬೆಳಗ್ಗೆ ೮ರೊಳಗೆ ಧ್ವಜಾರೋಹಣ ಮಾಡಬೇಕು. ಹಾಗೆಯೇ ಸೂರ್ಯಾಸ್ತದ ವೇಳೆಗೆ ಇಳಿಸಬೇಕು.

ಜಿಲ್ಲೆಯ ಎಲ್ಲಾ ಮನೆಗಳ ಮೇಲೆ ಆ.೧೩ರಂದು ಸೂರ್ಯೋದಯದ ನಂತರ ಬೆಳಗ್ಗೆ ೮ರೊಳಗೆ ಧ್ವಜಾರೋಹಣ ಮಾಡಿ ಹಾಗೂ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆ.೧೫ರ ಸೂರ್ಯಾಸ್ತದ ವೇಳೆಗೆ ಇಳಿಸುವಂತೆ ಸೂಚಿಸಿದೆ.

ತ್ರಿವರ್ಣ ಧ್ವಜವನ್ನು ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸುತ್ತಾ, ಧ್ವಜವನ್ನು ಯಾವಾಗಲೂ ಪೂರ್ಣ ಗೌರವ ಮತ್ತು ಉತ್ಸಾಹದಿಂದ ಶೀಘ್ರಗತಿಯಲ್ಲಿ ಏರಿಸಿ, ನಿಧಾನವಾಗಿ ಕೆಳಕ್ಕೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಸಭೆಯಲ್ಲಿ ಜಿಪಂ ಸಿಇಒ ಡಾ.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News