ಅಮೆರಿಕದ ಮಾಜಿ ಉನ್ನತ ಅಧಿಕಾರಿ ಬೋಲ್ಟನ್ ಹತ್ಯೆಗೆ ಇರಾನ್ ಸಂಚು: ಆರೋಪ

Update: 2022-08-11 16:15 GMT

ವಾಷಿಂಗ್ಟನ್, ಆ.11: ಶ್ವೇತಭವನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹತ್ಯೆಗೆ ನಡೆದಿದ್ದ ಇರಾನ್ ನ ಸಂಚನ್ನು ಪತ್ತೆಹಚ್ಚಲಾಗಿದೆ. ಇರಾನ್ನ ರೆವೊಲ್ಯೂಷನರಿ ಗಾರ್ಡ್ಸ್ ನ ಸದಸ್ಯರು ಇದರ ಹಿಂದಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಬುಧವಾರ ಹೇಳಿದೆ.

ಬೋಲ್ಟನ್ ಹತ್ಯೆ ಮಾಡಿದರೆ 3 ಲಕ್ಷ ಡಾಲರ್ ಹಣ ನೀಡುವುದಾಗಿ 45 ವರ್ಷದ ಶಹ್ರಾಮ್ ಪೋರ್ಸಫಿ ಎಂಬಾತ ಅಮೆರಿಕದ ಪ್ರಜೆಯೊಬ್ಬನಿಗೆ ಸುಪಾರಿ ನೀಡಿದ್ದ ಎಂದು ನ್ಯಾಯಾಂಗ ಇಲಾಖೆ ಹೇಳಿದೆ. 2020ರ ಜನವರಿಯಲ್ಲಿ ಅಮೆರಿಕವು ರೆವೊಲ್ಯುಷನರಿ ಗಾರ್ಡ್ಸ್ ನ ಉನ್ನತ ಕಮಾಂಡರ್ ಖಾಸಿಂ ಸುಲೇಮಾನಿಯನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಬೋಲ್ಟನ್ ಹತ್ಯೆಯ ಸಂಚು ಹೂಡಿರುವ ಸಾಧ್ಯತೆಯಿದೆ.

ಇರಾನ್ನಲ್ಲಿ ಕಾರ್ಯನಿರ್ವಹಿಸುವ ಶಹ್ರಾಮ್, ಕಳೆದ ಅಕ್ಟೋಬರ್ನಲ್ಲಿ ಅಮೆರಿಕದ ಗುರುತಿಸಲಾಗದ ವ್ಯಕ್ತಿಯೊಬ್ಬನ ಜತೆ ಸಂಪರ್ಕ ಸಾಧಿಸಿ ಬೋಲ್ಟನ್ರವರ ಛಾಯಾಚಿತ್ರಗಳನ್ನು ಒದಗಿಸುವಂತೆ ಕೋರಿದ್ದ. ಆ ವ್ಯಕ್ತಿ ಶಹ್ರಾಮ್ನನ್ನು ಮತ್ತೊಂದು ವ್ಯಕ್ತಿಯ ಜತೆ ಸಂಪರ್ಕಸಿದ್ದು ಆತನಿಗೆ ಬೋಲ್ಟನ್ ಹತ್ಯೆಯ ಸುಪಾರಿ ವಹಿಸಲಾಗಿತ್ತು. ಹಂತಕನಿಗೆ ಮತ್ತೊಂದು ಹತ್ಯೆಯ ಸುಪಾರಿ ನೀಡುವ ಭರವಸೆ( 1 ಮಿಲಿಯನ್ ಡಾಲರ್ ಪುರಸ್ಕಾರ)ಯನ್ನೂ ಶಹ್ರಾಮ್ ನೀಡಿದ್ದ ಎಂದು ನ್ಯಾಯಾಂಗ ಇಲಾಖೆ ವರದಿ ಮಾಡಿದೆ. ಎರಡನೆ ಗುರಿಯ ಬಗ್ಗೆ ನ್ಯಾಯಾಲಯದ ದಾಖಲೆಪತ್ರದಲ್ಲಿ ವಿವರಿಸಿಲ್ಲ, ಆದರೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಸಿಐಎ ನಿರ್ದೇಶಕ ಮೈಕ್ ಪಾಂಪಿಯೊ 2ನೇ ಗುರಿ ಎಂದು ಅಮೆರಿಕದ ಆಕ್ಸಿಯಾಸ್ ಮಾಧ್ಯಮ ವರದಿ ಮಾಡಿದೆ.

ಶಹ್ರಾಮ್ ವ್ಯವಹರಿಸುತ್ತಿದ್ದ ವ್ಯಕ್ತಿಯು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ)ನ ಮಾಹಿತಿದಾರನಾಗಿದ್ದ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 3 ತಿಂಗಳ ಕಾಲ ಇವರಿಬ್ಬರು ಸಂಪರ್ಕದಲ್ಲಿದ್ದು ಆಗ ಮಾಹಿತಿದಾರನು ಶಹ್ರಾಮ್ನ ಸಂಘಟನೆ, ಆತನ ಮೇಲಧಿಕಾರಿಗಳು, ಆತ ಅಮೆರಿಕದಲ್ಲಿ ಹೊಂದಿರುವ ಸಂಪರ್ಕ ಜಾಲದ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿದ್ದಾನೆ.

ಈಗ ಶಹ್ರಾಮ್ ವಿರುದ್ಧ ಅಂತರ್ದೇಶೀಯ ವಾಣಿಜ್ಯ ಸಂಸ್ಥೆಗಳನ್ನು ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳಲು ಬಳಸಿಕೊಂಡ ಆರೋಪ ದಾಖಲಿಸಲಾಗಿದ್ದು ಅಪರಾಧ ಸಾಬೀತಾದರೆ 10 ವರ್ಷ ಜೈಲುಶಿಕ್ಷೆ, ಅಂತರಾಷ್ಟ್ರೀಯ ಕೊಲೆಗೆ ಭೌತಿಕ ಬೆಂಬಲ ಒದಗಿಸಿದ ಅಪರಾಧಕ್ಕೆ 15 ವರ್ಷ ಜೈಲುಶಿಕ್ಷೆಯಾಗಲಿದೆ. ನಮ್ಮ ಯಾವುದೇ ಪ್ರಜೆಯ ಮೇಲೆ , ಅವರು ಹಾಲಿ ಅಧಿಕಾರಿಯಾಗಿರಲಿ ಅಥವಾ ಮಾಜಿಯಾಗಿರಲಿ, ಇರಾನ್ ದಾಳಿ ನಡೆಸಿದರೆ ಅದು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಾಲಿ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News