ಅರಣ್ಯ ಕಾಯ್ದೆಗಳ ತಿದ್ದುಪಡಿಗಳ ಹಿಂದಿನ ಮಸಲತ್ತುಗಳು

Update: 2022-08-11 19:30 GMT
ಸಾಂದರ್ಭಿಕ ಚಿತ್ರ (source: PTI)

ಎಲ್ಲಾ ತಿದ್ದುಪಡಿಗಳನ್ನು ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅರಣ್ಯ ಪ್ರದೇಶಗಳನ್ನು ಹಸ್ತಾಂತರಿಸುವ ಸ್ಪಷ್ಟ ಉದ್ದೇಶದಿಂದಲೇ ಮಾಡಲಾಗುತ್ತಿದೆ ಎನ್ನುವುದನ್ನು ಗ್ರಹಿಸಲು ಪ್ರಾಮಾಣಿಕ ಕಾಳಜಿಯುತ ಮನಸ್ಸುಗಳಿಗೆ ಕಷ್ಟವೇನಲ್ಲ. ಹಾಗೆಯೇ ಈ ತಿದ್ದುಪಡಿಗಳ ಮೂಲಕ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಆದಿವಾಸಿ ಬುಡಕಟ್ಟುಗಳು ಇನ್ನಿತರ ಜನಸಮುದಾಯಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಬಿಸುಡುವ ಪ್ರಕ್ರಿಯೆಗಳು ಬಿರುಸುಗೊಳ್ಳುತ್ತವೆ ಎನ್ನುವುದನ್ನೂ ಕೂಡ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.


ಭಾರತವು ಹೇರಳವಾಗಿರುವ ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವುದು ಬಹು ಜನರಿಗೆ ತಿಳಿದಿರುವ ವಿಚಾರವಾಗಿದೆ. ಹದಿನೈದನೇ ಶತಮಾನದಲ್ಲಿ ವಿದೇಶಿ ವ್ಯಾಪಾರಿ ಹಿತಾಸಕ್ತಿಗಳು ಹೊಸ ಭೂಪ್ರದೇಶಗಳ ಹುಡುಕುವಿಕೆಯ ಭಾಗವಾಗಿ ಭಾರತವನ್ನೂ ಕೂಡ ಕಂಡು ಹಿಡಿದರು. ಇದಕ್ಕೂ ಹಿಂದೆ ಆರ್ಯರು, ಗ್ರೀಕರು, ಪರ್ಶಿಯನ್ನರು, ಅರಬರು, ಟರ್ಕರು, ಕೂಡ ಈಗಿನ ಭಾರತದ ಭೂ ಪ್ರದೇಶಗಳನ್ನು ಆಕ್ರಮಿಸಿದ್ದರು. ಅವರು ಇಲ್ಲಿನ ಹುಲ್ಲುಗಾವಲುಗಳನ್ನು, ಅರಣ್ಯ ಪ್ರದೇಶಗಳನ್ನು ಆಕ್ರಮಿಸಿಟ್ಟುಕೊಂಡಿದ್ದರು. 1498ರ ಸುಮಾರಿಗೆ ಪೋರ್ಚುಗೀಸ್‌ನ ವಾಸ್ಕೋಡಗಾಮ ಕ್ಯಾಲಿಕಟ್ (ಈಗಿನ ಕೇರಳದ ಕೋಝಿಕ್ಕೋಡ್)ಗೆ ಸಮುದ್ರಮಾರ್ಗವಾಗಿ ಬಂದು ಇಂಡಿಯಾವನ್ನು ಕಂಡುಹಿಡಿದನು. ನಂತರ ಪೋರ್ಚುಗೀಸರು ಈಗಿನ ಇಂಡಿಯಾದ ಹಲವು ಪ್ರದೇಶಗಳನ್ನು ತಮ್ಮ ನೇರ ವಸಾಹತು ಆಡಳಿತಕ್ಕೆ ಒಳಪಡಿಸಿ ಇಲ್ಲಿನ ಪ್ರಾಕೃತಿಕ ಸಂಪತ್ತನ್ನು, ಕೃಷಿ ಸಂಪತ್ತನ್ನು ಲೂಟಿ ಹೊಡೆದರು. ಅದಕ್ಕೆ ಬಲವಾದ ಪ್ರತಿರೋಧಗಳನ್ನು ಎದುರಿಸಿದರು. ಪ್ರತಿರೋಧ ತೋರಿದವರಲ್ಲಿ ಸ್ಥಳೀಯ ವ್ಯಾಪಾರಿಗಳು ಮುಂಚೂಣಿಯಲ್ಲಿದ್ದರು.

ಆದರೆ ಬ್ರಿಟಿಷ್ ವಸಾಹತುಶಾಹಿಗಳು ಇಂಡಿಯಾವನ್ನು ಸುಮಾರು ಇನ್ನೂರು ವರ್ಷಗಳ ಕಾಲ ಲೂಟಿ ಮಾಡಿದ್ದು ಬಹು ದೊಡ್ಡ ಪ್ರಾಕೃತಿಕ ಸಂಪತ್ತು ನಾಶವಾಗಲು ಕಾರಣವಾಗಿತ್ತು. ಅವರು ವ್ಯಾಪಾರಿ ಹಿತಾಸಕ್ತಿಯಿಂದ ಆರಂಭಿಸಿದ ಕಾಫಿ, ಟೀ, ಕೋಕೋ, ಗೇರು ಮೊದಲಾದ ಪ್ಲಾಂಟೇಶನ್ ಬೆಳೆಗಳಿಗಾಗಿ ಹಾಗೂ ಅವರ ದೇಶದ ರೈಲ್ವೇಹಳಿ ನಿರ್ಮಾಣಕ್ಕೆ ಸ್ಲೀಪರ್ ಗಳಿಗಾಗಿ ಇಲ್ಲಿನ ಬೆಲೆಬಾಳುವ ಅರಣ್ಯ ಪ್ರದೇಶಗಳನ್ನು ಬರಿದು ಮಾಡಿದ್ದರು. ನಮ್ಮ ದೇಶದ ಪಶ್ಚಿಮ ಹಾಗೂ ಪೂರ್ವ ಘಟ್ಟ ಪ್ರದೇಶಗಳು, ಮಧ್ಯ ಇಂಡಿಯಾದ ಭಾಗಗಳು ಬ್ರಿಟಿಷರ ಅರಣ್ಯ ಹಾಗೂ ಇಂಡಿಯಾದ ಪ್ರಾಕೃತಿಕ ಸಂಪತ್ತಿನ ಲೂಟಿಯ ದಾಳಿಗಳಿಗೆ ಒಳಗಾಗುತ್ತಿರಬೇಕಾಯಿತು. ಅಂತಹ ಲೂಟಿಗಳನ್ನು ವಿರೋಧಿಸಿ ಸ್ಥಳೀಯ ಆದಿವಾಸಿ ಬುಡಕಟ್ಟು ಜನರು ಭಾರೀ ಹೋರಾಟಗಳನ್ನು ಮಾಡಿದರು. ಅಂತಹ ನೂರಾರು ಸಶಸ್ತ್ರ ಆದಿವಾಸಿ ಪ್ರತಿರೋಧಗಳು ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಹೋದವು. ಪಶ್ಚಿಮ ಬಂಗಾಲದ ಮಿಡ್ನಾಪುರ ಚೌವಾರ್, ಚೋಟಾ ನಾಗಪುರದ ಹೋ ಹಾಗೂ ಬಿಹಾರಿನ ರಾಂಚಿ, ಸಿಂಗ್ ಭೂಮ್, ಹಜಾರಿಭಾಗ್, ಪಲಮುಗಳಲ್ಲಿನ ಕೋಲ್, ಕಾಲಹಂದಿ ಮತ್ತು ಪಾಟ್ನಾಗಳ ಕಂದ್, ರಾಜಮಹಲ್ ಬೆಟ್ಟಗಳ, ಸಂತಾಲ್, ಅಸ್ಸಾಮಿನ ಅಹೋಮ್, ಗಾರೋ ಮತ್ತು ಜೈಂತ ಬೆಟ್ಟಗಳ ಖಾಸಿ, ಮುಂಡ, ಭಿಲ್, ಕಚ್ಚ್, ಕೋಲಿ, ರಾಮೋಸಿ, ಆಂಧ್ರದ ರಾಂಪ, ಕರ್ನಾಟಕದ ಹಲಗಲಿಯ ಬೇಡ ಬುಡಕಟ್ಟು ಗಳಂತಹ ಕೆಲವೇ ಆದಿವಾಸಿ ಬುಡಕಟ್ಟು ಸಶಸ್ತ್ರ ಹೋರಾಟಗಳ ಬಗ್ಗೆ ಒಂದಷ್ಟು ಮಾಹಿತಿಗಳು ನಮ್ಮ ದೇಶದ ಲಿಖಿತ ಇತಿಹಾಸದ ಪುಟಗಳಲ್ಲಿ ಒಂದಷ್ಟು ಮಟ್ಟಕ್ಕೆ ದಾಖಲಾಗಿದ್ದು ಬಿಟ್ಟರೆ ಹೆಚ್ಚಿನವು ಲಿಖಿತವಾಗಿ ಇಲ್ಲ. ಆದರೆ ಜನಪದರ ಕತೆಗಳು, ಹಾಡುಗಳು ಹಾಗೂ ನಂಬಿಕೆಗಳ ಭಾಗವಾಗಿ ಮಾತ್ರ ಜೀವಂತವಾಗಿ ಹರಿದುಕೊಂಡು ಬರುತ್ತಿವೆ. ಆದರೆ ಬ್ರಿಟಿಷರ ಲೂಟಿಯಿಂದ ನಮ್ಮ ದೇಶದ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವಲ್ಲಿ ಮತ್ತು ದೇಶದ ಸ್ವಾತಂತ್ರ್ಯ ಸ್ವಾಯತ್ತತೆ, ಪ್ರಜಾತಾಂತ್ರಿಕ ಆಶೋತ್ತರಗಳನ್ನು ಹರಡುವಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದ ಧೀರೋದಾತ್ತವಾದ ಆದಿವಾಸಿ ಬುಡಕಟ್ಟು ಹೋರಾಟಗಳನ್ನು ಬ್ರಿಟಿಷರ ನೇರ ಆಡಳಿತದ ನಂತರದ ಎಪ್ಪತ್ತೈದನೇ ವರ್ಷದ ಈ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಗ್ರಹಿಸಬೇಕಾದ ಅಗತ್ಯ ಬಹಳವಿದೆ.

 ಬ್ರಿಟಿಷರ ನಂತರ ಆಳ್ವಿಕೆಯನ್ನು ತಮ್ಮ ನೇರ ತೆಕ್ಕೆಗೆ ತೆಗೆದುಕೊಂಡ ನಮ್ಮ ದೇಶದ ಬಲಾಢ್ಯ ಶಕ್ತಿಗಳು ಬ್ರಿಟಿಷರ ನೀತಿಗಳನ್ನೇ ಹೆಚ್ಚೂ ಕಡಿಮೆ ಪಾಲಿಸುತ್ತಾ ಬಂದವು. ಹಾಗಾಗಿ ದೇಶದ ಆದಿವಾಸಿ ಬುಡಕಟ್ಟುಗಳು ಹಾಗೂ ಇನ್ನಿತರ ಜನಸಾಮಾನ್ಯರು ತಮ್ಮ ಬದುಕು ಹಾಗೂ ದೇಶದ ಪ್ರಾಕೃತಿಕ ಸಂಪತ್ತಿನ ರಕ್ಷಣೆಗಾಗಿ ತಮ್ಮ ಹೋರಾಟಗಳನ್ನು ಇದುವರೆಗೂ ಮುಂದುವರಿಸಿಕೊಂಡು ಬರಬೇಕಾಯಿತು. ಅದರ ಪರಿಣಾಮವಾಗಿ ಈಶಾನ್ಯ ಇಂಡಿಯಾ, ಮಧ್ಯ ಇಂಡಿಯಾ, ಪಶ್ಚಿಮ ಹಾಗೂ ಪೂರ್ವ ಘಟ್ಟಗಳ ಆದಿವಾಸಿ ಬುಡಕಟ್ಟು ಸಮುದಾಯಗಳ ಬದುಕಿಗಾಗಿನ ಹೋರಾಟಗಳು ಸಾಗುತ್ತಿವೆ. ಹಲವು ಕಡೆಗಳಲ್ಲಿ ಅವು ಸಶಸ್ತ್ರ ಸಂಗ್ರಾಮದ ರೂಪದಲ್ಲಿ ಕೂಡ ಸಾಗುತ್ತಿವೆ. ಜಾಗತೀಕರಣದ ಭಾಗವಾಗಿ ದೇಶವನ್ನು ಸಂಪೂರ್ಣ ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಹಿತಾಸಕ್ತಿಗಳಿಗಾಗಿ ಮುಕ್ತಗೊಳಿಸಿ ತೆರೆದಿಡುವ ಉದ್ದೇಶಗಳಿಂದ ದೇಶದ ಜನಸಾಮಾನ್ಯರ ಬದುಕು ಹಾಗೂ ಭವಿಷ್ಯಗಳ ಮೇಲೆ, ಅವರ ಬದುಕಿನ ಮೂಲಗಳ ಮೇಲೆ ಭಾರೀ ದಾಳಿಗಳು ಆರಂಭವಾದವು. ಅದು ನೇರವಾಗಿಯೂ, ಬಹಳ ನಾಜೂಕಿನಿಂದಲೂ, ಪರೋಕ್ಷವಾಗಿಯೂ, ಅಭಿವೃದ್ಧಿಯ ಹುಸಿ ಮೋಡಿ ಬಿತ್ತುವ ಮೂಲಕವೂ, ದೇಶದ ಮಧ್ಯಮ ವರ್ಗವನ್ನೂ ತಮ್ಮ ತೆಕ್ಕೆಗೆ ಹಲವು ರೂಪಗಳಲ್ಲಿ ತೆಗೆದುಕೊಳ್ಳುವ ಮೂಲಕವೂ ನಡೆಯುತ್ತಾ ಬಂದವು.

ಅವೆಲ್ಲದರ ಪರಿಣಾಮವಾಗಿ ಹೊಸ ಹೊಸ ನೀತಿಗಳ ಹೆಸರಿನಲ್ಲಿ ಹಿಂದಿನಿಂದಲೂ ಇದ್ದ ಕಾನೂನು ಕಟ್ಟಳೆಗಳನ್ನು ಸಡಿಲಗೊಳಿಸುವುದು, ತಿದ್ದುಪಡಿ ಮಾಡುವುದು, ಹೊಸ ಅನುಕೂಲಿತ ಕಾಯ್ದೆಗಳನ್ನು ಹೇರುವುದು, ಆದಿವಾಸಿ, ದಲಿತ, ದಮನಿತ, ಹಿಂದುಳಿದ, ಕಾರ್ಮಿಕ, ಮಹಿಳಾಪರವೆಂದು ಹೇಳುತ್ತಾ ಬಂದ ಕಾನೂನುಗಳು ಹಾಗೂ ಸೌಲಭ್ಯಗಳು ಸಡಿಲವಾಗುವುದು, ಕಡಿತವಾಗುವುದು, ರದ್ದಾಗುವುದು ನಡೆಯತೊಡಗಿದವು. ಈಗ ಜನಸಾಮಾನ್ಯರಿಗೆ ಒಂದು ನಾಗರಿಕವೆಂದು ಹೇಳಿಕೊಳ್ಳುವ ಸರಕಾರ ವ್ಯವಸ್ಥೆ ಮಾಡಬೇಕಾದ ನೀರು, ವಿದ್ಯುತ್, ಹಣಕಾಸು, ಉದ್ಯೋಗ, ಶಿಕ್ಷಣ, ರಿಯಾಯಿತಿ, ವಸತಿ, ರಸ್ತೆ, ಆರೋಗ್ಯ, ವಿದ್ಯಾರ್ಥಿ ವೇತನ, ವಿಧವಾ ವೇತನ, ಪಡಿತರ ಹಂಚಿಕೆ, ಹಿರಿಯ ನಾಗರಿಕರ ಮಾಸಾಶನ ಇತ್ಯಾದಿ ಅತ್ಯಗತ್ಯ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು ದೇಶಕ್ಕೇ ಅಪಾಯಕಾರಿಯೆಂಬಂತೆ ಮಾಡಲಾಗುತ್ತಿದೆ. ಆ ರೀತಿ ಬಿಂಬಿಸಿ ಅಂತಹ ಮೂಲಭೂತ ಸೌಲಭ್ಯಗಳಿಂದ ಈ ದೇಶದ ಬಹುಸಂಖ್ಯಾತ ಜನಸಾಮಾನ್ಯರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ದೇಶದ ಪ್ರಧಾನಿ ಉಚಿತ ಸೌಲಭ್ಯಗಳನ್ನು ಬಯಸುವುದು ದೇಶಕ್ಕೇ ಮಾರಕವೆಂಬಂತೆ ಹೇಳಿಕೆ ನೀಡಿರುವುದು ವರದಿಯಾಗಿದೆ. ಹಾಗೇನೆ ನ್ಯಾಯಾಲಯಗಳಲ್ಲಿ ಆ ಬಗ್ಗೆ ದೂರು ದಾಖಲಿಸಿ ನ್ಯಾಯಾಲಯಗಳ ಮೂಲಕವೂ ಬಹಸುಸಂಖ್ಯಾತ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದರ ವಿರುದ್ಧವಾದ ತೀರ್ಪುಗಳು ಹೊರಬೀಳುವಂತೆ ಮಾಡುತ್ತಿವೆ. ಅಂತಹವುಗಳನ್ನೆಲ್ಲಾ ಉಚಿತ ಕೊಡುಗೆಗಳು ಎಂಬಂತೆ ಚಿತ್ರಿಸುವ ಕಾರ್ಯ ಬಿರುಸು ಪಡೆಯುತ್ತಿದೆ. ಆ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಬದಲಾಯಿಸುವ ಪ್ರಯತ್ನ ಸಾಗಿದೆ. ಮಧ್ಯಮ ವರ್ಗದ ಒಂದಷ್ಟು ಜನರು ಹಾಗೂ ಮಬ್ಬಕ್ತರು ಇದನ್ನು ಬೆಂಬಲಿಸತೊಡಗಿದ್ದಾರೆ. ಪತ್ರಿಕೆಗಳಲ್ಲಿ ಈ ಬಗೆಗಿನ ಲೇಖನಗಳು ಬರತೊಡಗಿವೆ. ಸಾಮಾಜಿಕ ಜಾಲತಾಣಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇದರ ವಿರುದ್ಧ ಪ್ರಚಾರ ಬಿರುಸು ಪಡೆಯತೊಡಗಿದೆ.

  ಈಗ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕಾಲಾವಧಿಯಲ್ಲಿ ರೂಪಿಸಿ ಅನುಮೋದಿಸಿದ 'ಅರಣ್ಯ ಹಕ್ಕು ಕಾಯ್ದೆ 2006'ಕ್ಕೆ ತಿದ್ದುಪಡಿಗಳನ್ನು ಮಾಡಲು ಮೋದಿ ಸರಕಾರ ಹೊರಟಿದೆ. ಒಂದು ಕಡೆ ದ್ರೌಪದಿ ಮುರ್ಮುರನ್ನು ರಾಷ್ಟ್ರಪತಿಯಾಗಿಸಿ ಆದಿವಾಸಿ ಬುಡಕಟ್ಟುಗಳನ್ನು ಯಾಮಾರಿಸುವ ಪ್ರಯತ್ನ ನಡೆಸುತ್ತಾ ಮತ್ತೊಂದೆಡೆ ಆದಿವಾಸಿ ಬುಡಕಟ್ಟುಗಳಿಗೆ ಶಾಸನಬದ್ಧವಾಗಿದ್ದ ಅರಣ್ಯದ ಮೇಲಿನ ಹಕ್ಕಿನ ಬಗೆಗಿನ ಮಸೂದೆಯನ್ನು ಬದಲಾಯಿಸುವ ತಿದ್ದುಪಡಿಗಳನ್ನು ಮಾಡಿ ಆ ಕಾಯ್ದೆಗೆ ಸಂಪೂರ್ಣವಾಗಿ ಯಾವುದೇ ಹುರುಳಿಲ್ಲದಂತೆ ಮಾಡಲು ಹೊರಟಿದೆ. 'ಅರಣ್ಯ ಹಕ್ಕು ಕಾಯ್ದೆ 2006' ಯುಪಿಎ ಸರಕಾರ ದೇಶದಲ್ಲಿ ಬಿರುಸುಗೊಳ್ಳುತ್ತಾ ಸಾಗುತ್ತಿದ್ದ ಆದಿವಾಸಿ ಬುಡಕಟ್ಟು ಸಮುದಾಯಗಳ ಸಮರಶೀಲ ಹೋರಾಟಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ರೂಪುಗೊಳಿಸಿ ಪ್ರಚಾರ ಮಾಡಿದ ಮಸೂದೆಯಾಗಿತ್ತು. ಯಾಕೆಂದರೆ ವಾಸ್ತವದಲ್ಲಿ ಅದರ ಶರತ್ತುಗಳು ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಎಟುಕುವಂತಹವುಗಳಾಗಿರಲಿಲ್ಲ. ಈಗ ಮೋದಿ ನೇತೃತ್ವದ ಬಿಜೆಪಿ ಸರಕಾರ ನಾಮ ಮಾತ್ರದಲ್ಲಿ ಇದ್ದ ಆ ಮಸೂದೆಯನ್ನು ಶಾಶ್ವತವಾಗಿ ಇಲ್ಲವಾಗಿಸುವ ಕಾರ್ಯ ಮಾಡುತ್ತಿದೆ.

ಭಾರತದ ಅರಣ್ಯ ಪ್ರದೇಶಗಳು ಸುಮಾರು ಮೂವತ್ತು ಕೋಟಿಗಳಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಸುಮಾರು ಇಪ್ಪತ್ತು ಕೋಟಿಯಷ್ಟು ಜನರು ನೇರವಾಗಿ ಅರಣ್ಯ ಪ್ರದೇಶಗಳನ್ನು ಮೂಲಭೂತವಾಗಿ ಅವಲಂಬಿಸಿ ತಮ್ಮ ಬದುಕು ಸಾಗಿಸುತ್ತಿದ್ದಾರೆ. ವಾಸ್ತವದಲ್ಲಿ ಭಾರತದ ಪ್ರದೇಶಗಳನ್ನು ಇದುವರೆಗೂ ರಕ್ಷಿಸಿಕೊಳ್ಳುತ್ತಾ ಬಂದಿರುವುದು ಈ ಜನಸಾಮಾನ್ಯರೇ ಆಗಿದ್ದಾರೆ. ಈಗ 'ಅರಣ್ಯ ಸಂರಕ್ಷಣಾ ಕಾಯ್ದೆ 2022'ಕ್ಕೆ ಪರಿಸರ ಸಚಿವಾಲಯವು ಸೂಚಿಸಿರುವ ತಿದ್ದುಪಡಿಗಳ ಪ್ರಕಾರ ಯಾವುದೇ ಅರಣ್ಯ ಪ್ರದೇಶವನ್ನು ಖಾಸಗಿ ಹಿತಾಸಕ್ತಿಗಳಿಗೆ ಪರಭಾರೆ ಮಾಡಬಹುದು. ಅದಕ್ಕೆ ಅರಣ್ಯ ಹಕ್ಕು ಕಾಯ್ದೆ ತಡೆಯಾಗುವುದಿಲ್ಲ. ಜಿಲ್ಲಾಧಿಕಾರಿ ಗ್ರಾಮಸಭೆಗಳ ನಿರ್ಣಯವನ್ನು ಅಸಿಂಧುಗೊಳಿಸಿ ಅರಣ್ಯ ಪ್ರದೇಶಗಳನ್ನು ಖಾಸಗಿ ಹಿತಾಸಕ್ತಿಗಳಿಗೆ ನಾಮ ಮಾತ್ರದ ಶುಲ್ಕ ವಿಧಿಸಿ ವಹಿಸಿಕೊಡಬಹುದಾಗಿರುತ್ತದೆ. ಆ ರೀತಿ ಪರಭಾರೆಯಾದ ಅರಣ್ಯ ಪ್ರದೇಶಗಳನ್ನು ಆಳ ಗಣಿಗಾರಿಕೆಯೂ ಸೇರಿದಂತೆ ಇನ್ನಿತರ ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬಳಸಬಹುದು. ಅಲ್ಲದೇ ಉದ್ದೇಶಿತ ಅರಣ್ಯ ಕಾಯ್ದೆ 2022ರ ಕಲಮು 6 (1ಎ ಮತ್ತು 1ಬಿ) ವಿಶ್ವ ಸಂಸ್ಥೆಯ ಜೈವಿಕ ವೈವಿಧ್ಯತೆ ಹಾಗೂ ನಾಗೋಯಾ ಪ್ರೋಟೋಕಾಲ್‌ಗಳ ನಿಯಮಗಳಿಗೆ ವಿರುದ್ಧವಾಗಿವೆ. ಭಾರತ ಇವುಗಳಿಗೆ ಸಹಿ ಹಾಕಿರುವ ದೇಶವಾಗಿದೆ.
ರಾಜ್ಯ ಸರಕಾರಗಳ, ಗ್ರಾಮ ಸಭೆಗಳ ಪಾತ್ರಗಳನ್ನು ಪಕ್ಕ ಸರಿಸಿ ಕೇಂದ್ರೀಯ ಮಟ್ಟದಲ್ಲಿ ಕೆಲವು ಅಧಿಕಾರಿಗಳ ಮತ್ತು ಕೆಲವು ವ್ಯಕ್ತಿಗಳ ಸಲಹಾ ಸಮಿತಿಗಳ ಮೂಲಕ ಒಟ್ಟಾರೆ ದೇಶದ ಅರಣ್ಯ ಪ್ರದೇಶಗಳ ಮೇಲೆ ನೇರ ನಿಯಂತ್ರಣವನ್ನು ಹೊಂದುವ ಸ್ಪಷ್ಟ ನಡೆಗಳು ಆರಂಭವಾಗಿವೆ. ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಇದ್ದ ಅರಣ್ಯ ಪ್ರದೇಶಗಳನ್ನು ಬೇರ ಯಾವುದೇ ಉದ್ದೇಶಗಳಿಗೆ ಬಳಸಬೇಕಿದ್ದರೂ ಗ್ರಾಮ ಸಭೆಗಳ ಒಪ್ಪಿಗೆ ಕಡ್ಡಾಯ ಎಂಬ ಕಾಯ್ದೆಬದ್ದ ಶರತ್ತನ್ನು ಈ ಪ್ರಸ್ತಾವನೆಗಳು ಉಲ್ಲಂಘಿಸುತ್ತವೆ.
ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದ ಜವಾಬ್ದಾರಿ ಇರುವ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಪರಿಸರ ಸಚಿವಾಲಯದ ಇಂತಹ ಪ್ರಸ್ತಾವನೆಗಳನ್ನು ವಿರೋಧಿಸಿದ್ದರೂ ಪ್ರಧಾನ ಮಂತ್ರಿಗಳ ಕಛೇರಿ ನೇರವಾಗಿ ಮಧ್ಯಪ್ರವೇಶ ಮಾಡಿ ಬುಡಕಟ್ಟು ಸಚಿವಾಲಯದ ವಿರೋಧವನ್ನು ತಳ್ಳಿ ಹಾಕಿ ಅರಣ್ಯ ಹಕ್ಕು ಕಾಯ್ದೆ 2006ಕ್ಕೆ ಪ್ರಸ್ತಾವಿತ ತಿದ್ದುಪಡಿಗಳ ಕರಡನ್ನು ತಯಾರಿಸಲು ಪರಿಸರ ಸಚಿವಾಲಯಕ್ಕೆ ವಹಿಸಲಾಗಿತ್ತು ಎನ್ನುವುದನ್ನೂ ಕೂಡ ಇಲ್ಲಿ ಗಮನಿಸಬೇಕಿದೆ.
ಈ ಎಲ್ಲಾ ತಿದ್ದುಪಡಿಗಳನ್ನು ಭಾರೀ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅರಣ್ಯ ಪ್ರದೇಶಗಳನ್ನು ಹಸ್ತಾಂತರಿಸುವ ಸ್ಪಷ್ಟ ಉದ್ದೇಶದಿಂದಲೇ ಮಾಡಲಾಗುತ್ತಿದೆ ಎನ್ನುವುದನ್ನು ಗ್ರಹಿಸಲು ಪ್ರಾಮಾಣಿಕ ಕಾಳಜಿಯುತ ಮನಸ್ಸುಗಳಿಗೆ ಕಷ್ಟವೇನಲ್ಲ. ಹಾಗೆಯೇ ಈ ತಿದ್ದುಪಡಿಗಳ ಮೂಲಕ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಆದಿವಾಸಿ ಬುಡಕಟ್ಟುಗಳು ಇನ್ನಿತರ ಜನಸಮುದಾಯಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಬಿಸುಡುವ ಪ್ರಕ್ರಿಯೆಗಳು ಬಿರುಸುಗೊಳ್ಳುತ್ತವೆ ಎನ್ನುವುದನ್ನೂ ಕೂಡ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಅಸ್ಸಾಮ್‌ನಲ್ಲಿ ಕಳೆದ ವರ್ಷ ಸರಕಾರಿ ಸಶಸ್ತ್ರ ಪಡೆಗಳ ಮೂಲಕ ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿ ಒಬ್ಬ ರೈತನನ್ನು ಗುಂಡಿಟ್ಟು ಕೊಂದು ಹಾಕಿ ಹಲವರಿಗೆ ಗುಂಡೇಟಿನ ಗಾಯಗಳಾಗಿ ನರಳುತ್ತಿರುವ ಸುದ್ದಿಗಳು ಜನರ ಮನಸಿನಿಂದ ಮರೆಯಾಗಿರಲಾರದು. ಸರಕಾರಿ ಛಾಯಾಗ್ರಾಹಕನೊಬ್ಬ ಗುಂಡೇಟು ತಿಂದು ಬಿದ್ದ ರೈತನ ದೇಹದ ಮೇಲೆ ಒದ್ದು ಕುಣಿದು ಕೇಕೇ ಹಾಕಿದ್ದನ್ನಂತೂ ಸಾವಿರಾರು ಜನರು ಮರೆತಿರಲಾರರು.

ಒಂದು ಕಡೆ ಅರಣ್ಯ ಹಕ್ಕು ಕಾಯ್ದೆ 2006, ಅರಣ್ಯ ಸಂರಕ್ಷಣಾ ಕಾಯ್ದೆಗಳನ್ನು ಇನ್ನಷ್ಟು ಸಡಿಲಗೊಳಿಸಿ, ತಿದ್ದುಪಡಿಗಳನ್ನು ಸೇರಿಸಿ ಭಾರೀ ಕಾರ್ಪೊರೇಟ್ ಸ್ನೇಹಿಯಾಗಿಸುವ ಪ್ರಕ್ರಿಯೆಗಳನ್ನು ಬಿರುಸುಗೊಳಿಸುತ್ತಿದ್ದರೆ ಮತ್ತೊಂದೆಡೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅರಣ್ಯ ಸಂರಕ್ಷಣೆಗಾಗಿ ಎಂಬ ನೆಪದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಅಧಿಸೂಚನೆಯನ್ನು ಯೂನಿಯನ್ ಸರಕಾರ ಹೊರಡಿಸಿದೆ. ಅದರಂತೆ ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ಎಂದು ಪರಿಗಣಿಸಿ ಜನಸಾಮಾನ್ಯರ ದೈನಂದಿನ ಕೃಷಿ ಇನ್ನಿತರ ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಗಳಿವೆ. ಆ ಮೂಲಕ ಸರಕಾರ ಪರಿಸರ ಸ್ನೇಹಿ, ರಕ್ಷಕ ಎಂದೆಲ್ಲಾ ಬಿಂಬಿಸಿಕೊಳ್ಳುವ ಕಾರ್ಯ ಮಾಡುತ್ತದೆ.

ಮೇಲ್ನೋಟದಲ್ಲಿ ಇವುಗಳು ಭಿನ್ನ ನಡೆಗಳ ರೀತಿ ಕಾಣಿಸುತ್ತಿದ್ದರೂ ಮೂಲಭೂತವಾಗಿ ಸರಕಾರ ನಡೆಸುತ್ತಿರುವ ಈ ಎಲ್ಲಾ ನಡೆಗಳೂ ಯೋಜಿತವಾಗಿವೆ. ಭಾರೀ ಕಾರ್ಪೊರೇಟ್‌ಗಳಿಗೆ ದೇಶದ ಅರಣ್ಯ ಪ್ರದೇಶಗಳನ್ನು ನೇರ ಸುಪರ್ದಿಗೆ ಕೊಡುವ ತಯಾರಿಗಳಾಗಿವೆ. ಕಸ್ತೂರಿ ರಂಗನ್ ವರದಿ ಕೂಡ ಖಾಸಗಿಯವರಿಗೆ ಅರಣ್ಯ ನಿರ್ವಹಣೆಗೆ ಕೊಡುವ, ಅರಣ್ಯ ಪ್ರದೇಶಗಳ ಖಾಸಗೀಕರಣಕ್ಕೆ ಅವಕಾಶ ನೀಡುವ ಸ್ಪಷ್ಟ ಶಿಫಾರಸ್ಸುಗಳನ್ನು ಹೊಂದಿವೆ. ಸ್ಥಳೀಯ ಜನರಿಗೆ ಅದರ ಲಾಭ ದೊರೆಯುವಂತಾಗಬೇಕೆಂಬಂತೆ ಹೇಳುವುದರ ಜೊತೆಗೆ ಬಹಳ ನಾಜೂಕಿನಿಂದ ಅರಣ್ಯ ಸಂರಕ್ಷಣೆಯ ಮುಸುಗನ್ನು ಹೊದಿಸಿ ಜನಸಾಮಾನ್ಯರಿಗೆ ಮಂಕುಬೂದಿ ಎರಚುವ ಕಾರ್ಯವನ್ನು ಕಸ್ತೂರಿ ರಂಗನ್ ವರದಿ ಮಾಡಿದೆ. ಇವೆಲ್ಲವನ್ನೂ ಒಟ್ಟಾಗಿ ನೋಡಿ ಸರಿಯಾಗಿ ಗ್ರಹಿಸದೆ ಹೋದರೆ ಭಾರೀ ಕಾರ್ಪೊರೇಟ್ ಹಾಗೂ ಸರಕಾರಗಳು ಸೇರಿ ತೋಡುತ್ತಿರುವ ಖೆಡ್ಡಕ್ಕೇ ಬೀಳಬೇಕಾಗುತ್ತದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News