ಲಂಪಿ ವೈರಸ್‌ನಿಂದ 12,000ಕ್ಕೂ ಅಧಿಕ ಜಾನುವಾರುಗಳು ಸಾವು: ಜಾನುವಾರು ಮೇಳಕ್ಕೆ ರಾಜಸ್ಥಾನ ಸರಕಾರ ನಿಷೇಧ

Update: 2022-08-11 18:24 GMT
ಸಾಂದರ್ಭಿಕ ಚಿತ್ರ

ಜೈಪುರ, ಆ. 11: ಲಂಪಿ ವೈರಸ್‌ನಿಂದ ಉಂಟಾಗುವ ಚರ್ಮ ಸೋಂಕಿನ ಕಾರಣದಿಂದ ರಾಜಸ್ಥಾನದಲ್ಲಿ 12,800ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿರುವುದರಿಂದ ಜಾನುವಾರು ಮೇಳಕ್ಕೆ ರಾಜ್ಯ ಸರಕಾರ ನಿಷೇಧ ವಿಧಿಸಿದೆ.

ಆಗಸ್ಟ್ 10ರ ವರೆಗೆ ರಾಜ್ಯದಲ್ಲಿ ವರದಿಯಾದ ಒಟ್ಟು ಜಾನುವಾರುಗಳ ಸಾವಿನಲ್ಲಿ ಶ್ರೀಗಂಗಾನಗರದಲ್ಲಿ ಗರಿಷ್ಠ 2,511 ಸಾವು ವರದಿಯಾಗಿದೆ. ಅನಂತರ  ಬಾರ್ಮೇರ್‌ನಲ್ಲಿ 1,619, ಜೋಧಪುರದಲ್ಲಿ 1,581, ಬಿಕಾನೆರ್‌ನಲ್ಲಿ 1,156, ಜಾಲೌರ್‌ನಲ್ಲಿ 1,150 ಜಾನುವಾರುಗಳ ಸಾವು ವರದಿಯಾಗಿದೆ. 

‘‘ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ರೋಗ ಹರಡುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಹೆಚ್ಚಿನ ಸಾವುಗಳು 5 ಜಿಲ್ಲೆಗಳಲ್ಲಿ ಸಂಭವಿಸಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ’’ ಎಂದು ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ ಪಿ.ಸಿ. ಕೃಷ್ಣನ್ ತಿಳಿಸಿದ್ದಾರೆ. 

ಇಲಾಖೆಯ ಪ್ರಕಾರ ಈ ರೋಗದಿಂದ ಒಟ್ಟು 2,81,484 ಜಾನುವಾರುಗಳು ಸೋಂಕಿಗೊಳಗಾಗಿವೆ. 2,41,682 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 
ರಾಜ್ಯದಲ್ಲಿ ರೋಗ ಹರಡುವುದನ್ನು ಪರಿಗಣಿಸಿ ರಾಜಸ್ಥಾನ ಸರಕಾರ ಜಾನುವಾರು ಮೇಳ ಆಯೋಜಿಸುವುದಕ್ಕೆ ನಿಷೇಧ ಹೇರಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಜಾನುವಾರುಗಳ ಮೃತದೇಹಗಳನ್ನು ಸುರಕ್ಷಿತ ವಿಲೇವಾರಿಗೆ ಕೂಡ ರಾಜ್ಯ ಸರಕಾರ ನಿರ್ದೇಶನಗಳನ್ನು ನೀಡಿದೆ.

ಪರಿಸ್ಥಿತಿ ನಿಯಂತ್ರಣದ ಭಾಗವಾಗಿ ಆದಷ್ಟು ಶೀಘ್ರ 500 ತಾತ್ಕಾಲಿಕ ಸಿಬ್ಬಂದಿಯನ್ನು ನೇಮಕಗೊಳಿಸಲು ರಾಜಸ್ಥಾನ ಸರಕಾರ ಅನುಮೋದನೆ ನೀಡಿದೆ. ಇದು 200 ಪಶು ವೈದ್ಯರು ಹಾಗೂ 300 ಜಾನುವಾರು ಸಹಾಯಕರನ್ನು ಒಳಗೊಂಡಿದೆ. ಪರಿಸ್ಥಿತಿ ಅವಲೋಕಿಸಲು ಸಂಬಂಧಿತ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಸೂಚಿಸಲಾಗಿದೆ ಎಂದು ಪಶು ಸಂಗೋಪನೆ ಖಾತೆಯ ಸಚಿವ ಲಾಲ್ ಚಂದ್ ಕಟರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News