ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಕುರಿತು ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ

Update: 2022-08-12 08:15 GMT
Photo:PTI

ಹೊಸದಿಲ್ಲಿ: ಬಿಹಾರದಲ್ಲಿ ಬಿಜೆಪಿ ಜೊತೆಗಿನ ತಮ್ಮ ಪಕ್ಷದ ಆಡಳಿತಾರೂಢ ಮೈತ್ರಿಕೂಟದಿಂದ ಹೊರ ನಡೆಯುವ ಮೂಲಕ ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್   ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆಗಳು ತಮ್ಮ ಮನಸ್ಸಿನಲ್ಲಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಇಂದು ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ನಾನು ಪ್ರಯತ್ನಿಸುತ್ತೇನೆ ಹಾಗೂ  ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಆಗಸ್ಟ್ 10 ರಂದು ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ನಿತೀಶ್ ಕುಮಾರ್ ಅವರು ಮುಂದಿನ ಲೋಕಸಭಾ ಚುನಾವಣೆ ಕುರಿತು ಮಾತನಾಡುತ್ತಾ  ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಿದ್ದರು.

 "ಅವರು 2014 ರಲ್ಲಿ ಗೆದ್ದಿದ್ದಾರೆ.  ಆದರೆ ಅವರು 2024 ರಲ್ಲಿ ಗೆಲ್ಲುತ್ತಾರೆಯೇ?"  ಎಂದು ನಿತೀಶ್ ಕುಮಾರ್ ಪ್ರಶ್ನಿಸಿದರು. ಆಗಲೂ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ‘ನೀವು ಪ್ರಧಾನಿ ಅಭ್ಯರ್ಥಿಯಾಗಲು ಬಯಸುತ್ತೀರಾ’ಎಂಬ ಪ್ರಶ್ನೆಗೆ ‘ತಾನೇನೂ ಪ್ರಧಾನಿ ಹುದ್ದೆಯ ಸ್ಪರ್ಧಿಯಲ್ಲ. 2014 ರಲ್ಲಿ ಬಂದವರು, 2024 ರಲ್ಲಿ ಗೆಲ್ಲುತ್ತಾರೆಯೇ ಎಂದು ಕೇಳಬೇಕಾದ ಪ್ರಶ್ನೆ" ಎಂದು ಅವರು ಹೇಳಿದರು.

ಶುಕ್ರವಾರ ಮತ್ತೆ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೈಮುಗಿದು ‘ಅದು ನನ್ನ ಮನಸಿನಲ್ಲಿಲ್ಲ.. ಜನ ಏನೇ ಹೇಳಲಿ, ಆಪ್ತರು ಏನೇ ಹೇಳಿದರೂ ಪರವಾಗಿಲ್ಲ. ಪ್ರತಿಪಕ್ಷಗಳೆಲ್ಲ ಒಟ್ಟಾಗಿ  ಕೆಲಸ ಮಾಡಿದರೆ ಉತ್ತಮ.  ಅದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುವುದು ತನ್ನ ಕೆಲಸ' ಎಂದು ನಿತೀಶ್  ಹೇಳಿದರು.

ನಾವೆಲ್ಲರೂ ಜನರ ಸಮಸ್ಯೆಗಳ ಬಗ್ಗೆ  ಹಾಗೂ  ಉತ್ತಮ ಸಾಮಾಜಿಕ ವಾತಾವರಣವನ್ನು ಹೇಗೆ ಹೊಂದಬಹುದು ಎಂಬ ಕುರಿತು ಮಾತನಾಡುತ್ತೇವೆ ಎನ್ನುವುದಾಗಿ  ನಿತೀಶ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News