ಸಲ್ಲಿ ಡೀಲ್ಸ್ ಪ್ರಕರಣ: ʼನಮ್ಮದೇ ಆದ ಸಂಶಯಗಳಿವೆʼ ಎಂದು ತನಿಖೆಗೆ ತಡೆ ಹೇರಲು ನಿರಾಕರಿಸಿದ ಸುಪ್ರೀಂಕೋರ್ಟ್

Update: 2022-08-12 10:51 GMT

 ಹೊಸದಿಲ್ಲಿ: ಸಲ್ಲಿ ಡೀಲ್ಸ್ (sulli deals) ಪ್ರಕರಣದ ತನಿಖೆಗೆ ತಡೆ ಹೇರಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರಮುಖ ಮಹಿಳೆಯರನ್ನು ಅವರ ತಿರುಚಿದ ಫೋಟೋ ಬಳಸಿ ಅವರಿಗೆ ಅರಿವಿಲ್ಲದಂತೆಯೇ ಹರಾಜಿಗೆ ಹಾಕಿದ ಈ ಆಪ್ ಅನ್ನು ರಚಿಸಿದ ಓಂಕಾರೇಶ್ವರ್ ಠಾಕುರ್ ಈಗಾಗಲೇ ಹಲವಾರು ಎಫ್‍ಐಆರ್ ಗಳು ದಾಖಲಾಗಿವೆ.

ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆತನ ವಿರುದ್ಧದ ಎಫ್‍ಐಆರ್ ಗಳನ್ನು ಕೈಬಿಡಲು ನಿರಾಕರಿಸಿತಲ್ಲದೆ ಎಲ್ಲಾ ಎಫ್‍ಐಆರ್ ಗಳನ್ನು ಒಟ್ಟಿಗೆ ವಿಚಾರಣೆ ನಡೆಸುವ ಕುರಿತಾದ ಮನವಿಯನ್ನೂ ತಿರಸ್ಕರಿಸಿದೆ.

ಎಫ್‍ಐಆರ್ ಗಳನ್ನು ಹಲವು ಸಂತ್ರಸ್ತ ಮಹಿಳೆಯರು ದಾಖಲಿಸಿರುವುದರಿಂದ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಅದೇ ಸಮಯ ದಿಲ್ಲಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರಕಾರಗಳಿಗೆ ನೋಟಿಸ್ ಕೂಡ ಜಾರಿಗೊಳಿಸಿತು.

"ಈಗ  ನೋಟಿಸ್ ಮಾತ್ರ, ನಮಗೆ ನಮ್ಮದೇ ಆದ ಸಂಶಯಗಳಿವೆ" ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆ ವೇಳೆ ನ್ಯಾಯಾಲಯವು ಸಲ್ಲಿ ಡೀಲ್ಸ್ ನಂತಹುದೇ ಬುಲ್ಲಿ ಬಾಯಿ ಆ್ಯಪ್  ಪ್ರಕರಣವನ್ನೂ ಉಲ್ಲೇಖಿಸಿದೆ.

ಸಲ್ಲಿ ಡೀಲ್ಸ್ ಪ್ರಕರಣ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸುದ್ದಿಯಾದ ನಂತರ ಎಫ್‍ಐಆರ್ ಗಳು ದಾಖಲಾಗಿದ್ದರೂ ನಂತರ ಬುಲ್ಲಿ ಬಾಯಿ ವಿಚಾರ ಬಹಿರಂಗಗೊಂಡು ಆಕ್ರೋಶ  ಸೃಷ್ಟಿಸುವ ತನಕ ಸಲ್ಲಿ ಡೀಲ್ಸ್ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿರಲಿಲ್ಲ.

ಬುಲ್ಲಿ ಬಾಯಿ ಪ್ರಕರಣದ ಆರೋಪಿ ನೀರಜ್ ಬಿಷ್ಣೋಯಿಯನ್ನು ಈ ವರ್ಷದ ಜನವರಿ 6ರಂದು ಬಂಧಿಸಲಾಗಿತ್ತು.  ಸಲ್ಲಿ ಡೀಲ್ಸ್ ಆರೋಪಿಯನ್ನು ಜನವರಿ 9ರಂದು ಬಂಧಿಸುವುದಕ್ಕಿಂತ ಕೇವಲ ಮೂರು ದಿನಗಳ ಹಿಂದೆಯಷ್ಟೇ ಬಿಷ್ಣೋಯಿ ಬಂಧನವಾಗಿತ್ತು.

ಇಬ್ಬರಿಗೂ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್(Patiala House Court) ಜಾಮೀನು ಮಂಜೂರುಗೊಳಿಸಿತ್ತು. ಆದರೆ ಪ್ರಕರಣಗಳು ಮುಂಬೈಯಲ್ಲೂ ದಾಖಲಾಗಿದ್ದರಿಂದ ಆಗ ಅವರನ್ನು ಬಿಡುಗಡೆಗೊಳಿಸಲಾಗಿರಲಿಲ್ಲ.

ಜೂನ್‍ನಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ಇಬ್ಬರಿಗೂ ಹಾಗೂ ಪ್ರಕರಣದ ಇನ್ನೋರ್ವ ಆರೋಪಿಗೆ ಜಾಮೀನು ಮಂಜೂರುಗೊಳಿಸಿತ್ತು. ನಂತರ ಇನ್ನೂ ಮೂವರಿಗೆ ಜಾಮೀನು ದೊರಕಿತ್ತು. ಈ ಪ್ರಕರಣಗಳ ಒಟ್ಟು ಆರು ಆರೋಪಿಗಳಿಗೂ ಇದರಿಂದ ಜಾಮೀನು ದೊರಕಿದಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News