ಶಾಸಕ ಹರೀಶ್ ಪೂಂಜಾ ಹಫ್ತಾ ವಸೂಲಿಗೆ ಮುಂದಾಗಿರುವುದು ಅಪಮಾನಕಾರಿ ವಿಚಾರ: ವಸಂತ ಬಂಗೇರ ಆರೋಪ

Update: 2022-08-12 15:01 GMT

ಬೆಳ್ತಂಗಡಿ: ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಖರ್ಚಿಗಾಗಿ ಮತ್ತು ಸರಕಾರದ ಯಾವುದೇ ಅನುದಾನ ಇಲ್ಲದೆ ತಾನು ಘೋಷಿಸಿದ ವಿವಿಧ ಸವಲತ್ತುಗಳ ವಿತರಣೆಗಾಗಿ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು, ಮದ್ಯ ವ್ಯಾಪಾರಿಗಳು, ಸರಕಾರಿ ಅಧಿಕಾರಿಗಳು, ವಿವಿಧ ಗುತ್ತಿಗೆದಾರರು ಇಂತಿಷ್ಟು ಹಣ ನೀಡಬೇಕೆಂಬ ಫರ್ಮಾನು ಹೊರಡಿಸುವ ಮೂಲಕ ಹಫ್ತಾ ವಸೂಲಿಗೆ ಮುಂದಾಗಿರುವುದು ಅಪಮಾನಕಾರಿ ವಿಚಾರವಾಗಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅವರು ಆರೋಪಿಸಿದ್ದಾರೆ.

ಇಂದು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಸಕರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೆಸರಿನಲ್ಲಿ ಈ ರೀತಿಯ ದಂಧೆಗೆ ಇಳಿಯುವ ಮೂಲಕ ಅವರು ತಾನೊಬ್ಬ ಕಡು ಭ್ರಷ್ಟ ಶಾಸಕ ಎಂಬುದನ್ನು ತೋರಿಸಿ ತಾಲೂಕಿನ ಜನತೆಯ ಮುಂದೆ ಬೆತ್ತಲಾಗಿದ್ದಾರೆ. ಈಗಾಗಲೇ ಕಾಮಗಾರಿಗಳಲ್ಲಿ 40% ಕಮಿಷನ್ ತಿಂದು ತೇಗುತ್ತಿರುವ ಶಾಸಕರ ಈ ಹಫ್ತಾ ವಸೂಲಿಗೆ ಯಾರೂ ಹೆದರಬಾರದು ಎಂದಿದ್ದಾರೆ.

ಇತ್ತೀಚೆಗೆ ಗುರುವಾಯನಕೆರೆಯ ಖಾಸಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವ ಮೂಲಕ ತನ್ನ ಬಾರ್ ಆ್ಯಂಡ್ ರೆಸ್ಟೋರೆಂಟ್ ನ್ನು ಅಧಿಕಾರಿಗಳಿಗೆ ಪರಿಚಯಿಸುವ ಕೆಲಸವನ್ನು ಶಾಸಕ ಹರೀಶ್ ಪೂಂಜರವರು ನಡೆಸಿದ್ದು ನಾಚಿಕೆಗೇಡಿನ ವಿಚಾರ. ತಾಲೂಕಿನ ಮುಕುಟದಂತಿರುವ ತಾಲೂಕು ಆಡಳಿತ ಸೌಧದಲ್ಲಿ ಸಭೆ ನಡೆಸದೆ ಪಟ್ಟಣದ ಹೊರಭಾಗದಲ್ಲಿರುವ ಒಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಈ ಸಭೆ ನಡೆಸಿದುದರ ಔಚಿತ್ಯವೇನು ಎಂಬುದನ್ನು ಶಾಸಕರು ಜನತೆಯ ಮುಂದಿಡಬೇಕೆಂದು  ಆಗ್ರಹಿಸಿದರು 

ಇನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಧರ್ಭದಲ್ಲಿ ಬೆಳ್ತಂಗಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವರಾದ ಗಂಗಾಧರ ಗೌಡ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಮತ್ತು ನನಗೆ ಸನ್ಮಾನ ಕಾರ್ಯಕ್ರಮ ಇದೆ ಎನ್ನುವ ವಿಚಾರ ಪತ್ರಿಕೆಗಳ ಮೂಲಕ ತಿಳಿಯಿತು. ಇಂದು ತಹಶಿಲ್ದಾರರು ಹಾಗೂ ಅಧಿಕಾರಿಗಳು ಬಂದು ಆಮಂತ್ರಣ ನೀಡಿದ್ದಾರೆ. ಶಾಸಕರು ಹಫ್ತಾ ವಸೂಲಿ ಮಾಡಿ ನೀಡುವ ಯಾವುದೇ ಸನ್ಮಾನವನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ಈ ಮೂಲಕ ಅವರಿಗೆ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.

ಜಿಲ್ಲೆಯ ಎಲ್ಲಾ ಕಡೆ ಆಕ್ರಮ ಸಕ್ರಮ ಬೈಠಕ್ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸುವ ಕೆಲಸಗಳಾಗುತ್ತಿದ್ದರೂ ಬೆಳ್ತಂಗಡಿಯಲ್ಲಿ ಕೇವಲ ಒಂದು ಸಿಟ್ಟಿಂಗ್ ನಡೆಸಿ ನಂತರ ಬೈಠಕ್ ಮೊಟಕುಗೊಳಿಸಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು ಶಾಸಕರು ಈಗ ಅಕ್ರಮ ಸಕ್ರಮ ಬೈಠಕ್ ನಡೆಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಈಗಾಗಲೇ ಗ್ರಾಮ ಗ್ರಾಮದಲ್ಲಿ ಬಿ.ಜೆ.ಪಿ ಪಕ್ಷದ ಕೆಲ ಮಧ್ಯವರ್ತಿಗಳು ಹಕ್ಕುಪತ್ರ ಮಾಡಿಸಿಕೊಡುವುದಾಗಿ ಜನರಿಂದ ಲಕ್ಷಗಟ್ಟಲೆ ಹಣ ಸಂಗ್ರಹಿಸಿದ್ದು ಇದರಲ್ಲಿ ಶಾಸಕರಿಗೂ ಕಮಿಷನ್ ಇರುವುದಾಗಿ ನನಗೆ ತಿಳಿದು ಬಂದಿರುತ್ತದೆ. ಶಾಸಕರು ಈ ವಿಚಾರಕ್ಕಾಗಿಯೇ ತಾಲೂಕು ಕಚೇರಿಯಲ್ಲಿ ತನ್ನದೇ ಆದ ಓರ್ವ ಖಾಸಾಗಿ ಸಿಬ್ಬಂದಿಯನ್ನು ನೇಮಿಸಿದ್ದು,  ಆತನನ್ನು ತಕ್ಷಣ ಬೆಳ್ತಂಗಡಿ ತಹಶೀಲ್ದಾರರು, ಕಚೇರಿಯಿಂದ ಹೊರ ಕಳುಹಿಸಬೇಕು. ಮುಂದಿನ ಹದನೈದು ದಿನಗಳಲ್ಲಿ ಅಕ್ರಮ ಸಕ್ರಮ ಬೈಠಕ್, ನಡೆಸದಿದ್ದಲ್ಲಿ ಸಾರ್ವಜನಿಕರೊಂದಿಗೆ ಬೆಳ್ತಂಗಡಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನಾದ್ಯಂತ ಶಾಸಕ ಹರೀಶ್‌ ಪೂಂಜಾರವರ ನೇತೃತ್ವದಲ್ಲಿ ವ್ಯಾಪಕ ಮರಳು ದಂಧೆ ಮತ್ತು ಮರಗಳ್ಳತನ ನಡೆಯುತ್ತಿದ್ದು, ಇದಕ್ಕೆ ಕೆಲ ಕಂದಾಯ, ಅರಣ್ಯ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿಯ ದಂಧೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯತುಗಳಲ್ಲಿ ರಾಷ್ಟ್ರ ಧ್ವಜವನ್ನು ಹಣಕ್ಕೆ ಮಾರಾಟ ಮಾಡಲಾಗುತ್ತಿದ್ದು ಇದೊಂದು ದುರಂತ ಹೀಗೆ ಮಾರುತ್ತಿರುವ ರಾಷ್ಟ್ರ ಧ್ವಜಗಳನ್ನು ತಮಗೆ ಮನ ಬಂದಂತೆ ರೂಪಿಸಲಾಗಿದ್ದು ಇದು ರಾಷ್ಟ್ರ ಧ್ವಜಕ್ಕೆ, ರಾಷ್ಟ್ರಕ್ಕೆ ಮಾಡುವ ಅಪಮಾನವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಬಿ.ಎಂ. ಭಟ್, ಸಿಪಿಐಎಂ ಮುಖಂಡ ಶೇಖರ ಲಾಯಿಲ, ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News