ಮೆಕ್ಸಿಕೋದಲ್ಲಿ ಹಿಂಸಾಚಾರ: ಕನಿಷ್ಟ ೮ ಮಂದಿ ಮೃತ್ಯು

Update: 2022-08-12 16:25 GMT

ಮೆಕ್ಸಿಕೋ ಸಿಟಿ, ಆ.೧೨: ಮೆಕ್ಸಿಕೋದ ಗಡಿಭಾಗದ ನಗರ ಜುವಾರೆಝ್ನಲ್ಲಿ ಗುರುವಾರ ಹಲವೆಡೆ ನಡೆದ ಹಿಂಸಾಚಾರದಲ್ಲಿ ಹಲವು ವ್ಯವಹಾರ ಸಂಸ್ಥೆಗಳು ಬೆಂಕಿಗೆ ಆಹುತಿಯಾಗಿದ್ದು ಕನಿಷ್ಟ ೮ ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಥಮ ಘಟನೆಯಲ್ಲಿ ಜೈಲಿನಲ್ಲಿ ಕೈದಿಗಳು ನಡೆಸಿದ ದೊಂಬಿಯಲ್ಲಿ  ಇಬ್ಬರು ಕೈದಿಗಳು ಮೃತಪಟ್ಟಿದ್ದು ೪ ಮಂದಿ ಗಾಯಗೊಂಡಿದ್ದಾರೆ ಎಂದು ಚಿಹುವಹುವಾ ರಾಜ್ಯದ ಜೈಲು ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಬಂಧಿಯಾಗಿರುವ ಸಿನಾಲೊವ ಸಂಘಟನೆಯ ಸದಸ್ಯರು ದೊಂಬಿ ನಡೆಸಿದ್ದಾರೆ. ಸಂಘಟನೆಯ ಮಾಜಿ ಮುಖಂಡ ಜೊವಾಕ್ವಿನ್ ಎಲ್ ಚಾಪೊ ಈಗ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನಂತರ  ನಗರದ ರೆಸ್ಟಾರೆಂಟ್ ಒಂದರಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಬಳಿಕ ಉದ್ರಿಕ್ತ ಗುಂಪು ಆ ಕಟ್ಟಡದಲ್ಲಿದ್ದ ೩ ಅಂಗಡಿಗಳಿಗೆ ಬೆಂಕಿ ಹಚ್ಚಿದೆ. ಸಂಜೆ ನಡೆದ ಮತ್ತೊಂದು ಘಟನೆಯಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ರೇಡಿಯೊ ಸ್ಟೇಷನ್ನ ಸಿಬಂದಿಗಳ ಮೇಲೆ ಬಂದೂಕುದಾರಿಗಳು ನಡೆಸಿದ ದಾಳಿಯಲ್ಲಿ ೪ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

ನಗರದಲ್ಲಿ ನಡೆದ ದೌರ್ಜನ್ಯದಲ್ಲಿ ನಾಗರಿಕರ ಜೀವಹಾನಿಗೆ ತೀವ್ರವಾಗಿ ವಿಷಾದಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ  ಎಂದು  ಚಿಹುವಹುವಾದ ಗವರ್ನರ್ ಮಾರು ಕ್ಯಾಂಪೋಸ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News