ಶಾಂಘೈ: ಕೋವಿಡ್ ಆರೋಗ್ಯ ಕೋಡ್ ಮೊಬೈಲ್ ಅಪ್ಲಿಕೇಶನ್ ಹ್ಯಾಕ್‌ !

Update: 2022-08-12 17:31 GMT

ಬೀಜಿಂಗ್, ಆ.12: ಚೀನಾದ ಶಾಂಘೈ ನಗರದ ಅಧಿಕಾರಿಗಳು ನಿರ್ವಹಿಸುವ ಕೋವಿಡ್ ಆರೋಗ್ಯ ಕೋಡ್ ಮೊಬೈಲ್ ಅಪ್ಲಿಕೇಶನ್(ಆ್ಯಪ್) ಹ್ಯಾಕ್ ಮಾಡಲಾಗಿದ್ದು 48.5 ಮಿಲಿಯನ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗಿದೆ. ಹ್ಯಾಕ್ ಮಾಡಿರುವ ವ್ಯಕ್ತಿ ಇದನ್ನು 4,000 ಡಾಲರ್ಗೆ ಮಾರಾಟ ಮಾಡಲು ಮುಂದಾಗಿದ್ದಾನೆ ಎಂದು ವರದಿಯಾಗಿದೆ. 

ಚೀನಾದ ವಾಣಿಜ್ಯ ಕೇಂದ್ರ ಶಾಂಘೈಯಲ್ಲಿ ಕಳೆದ 1 ತಿಂಗಳಲ್ಲಿ ಎರಡನೇ ಬಾರಿಗೆ ಇಂತಹ ಪ್ರಕರಣ ವರದಿಯಾಗಿದೆ. ತನ್ನನ್ನು ‘ಎಕ್ಸ್ಜೆಪಿ’ ಎಂದು ಗುರುತಿಸಿಕೊಂಡಿರುವ ಹ್ಯಾಕರ್, ಹ್ಯಾಕರ್ಗಳ ವೇದಿಕೆ ‘ಬ್ರೀಚ್ ಫೋರಂ’ನಲ್ಲಿ ಇವನ್ನು 4,000 ಡಾಲರ್ಗೆ ಮಾರಾಟಕ್ಕೆ ಇಟ್ಟಿದ್ದಾನೆ. ತನ್ನ ಹೇಳಿಕೆಗೆ ಪುರಾವೆಯಾಗಿ 47 ಜನರ ಫೋನ್ ನಂಬರ್, ಹೆಸರು ಮತ್ತು ಚೀನೀ ಗುರುತಿನ ಸಂಖ್ಯೆ ಮತ್ತು ಆರೋಗ್ಯ ಕೋಡ್ ಸಂಖ್ಯೆಯನ್ನು ಒದಗಿಸಿದ್ದಾನೆ.

 ಶಾಂಘೈ ಆರೋಗ್ಯ ಕೋಡ್ ಅಳವಡಿಸಿದ ಬಳಿಕ ಶಾಂಘೈಯಲ್ಲಿ ವಾಸಿಸುವ ಎಲ್ಲಾ ವ್ಯಕ್ತಿಗಳ ಮಾಹಿತಿಯೂ ಇದರಲ್ಲಿದೆ ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ . ಇವರಲ್ಲಿ 11 ಮಂದಿ ತಮ್ಮ ಮಾಹಿತಿ ಕಳವಾಗಿರುವುದನ್ನು ದೃಢಪಡಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. 2020ರಲ್ಲಿ ಕೋವಿಡ್ ಉಲ್ಬಣಗೊಂಡಿದ್ದ ಸಂದರ್ಭ ಶಾಂಘೈಯಲ್ಲಿ ಆರೋಗ್ಯ ಕೋಡ್ ವ್ಯವಸ್ಥೆ ಜಾರಿಗೆ ಬಂದಿದೆ.

 ಅಂಕಿಅಂಶವನ್ನು ನಗರದ ಆಡಳಿತ ನಿರ್ವಹಿಸುತ್ತಿದ್ದರೆ, ಆರೋಗ್ಯ ಕೋಡ್ ಅನ್ನು ಆಲಿಬಾಬಾ ಸಂಸ್ಥೆಗೆ ಸಂಯೋಜನೆಗೊಂಡಿರುವ ಆ್ಯಂಟ್ ಗ್ರೂಪ್ನ ಮಾಲಕತ್ವದ ಆಲಿಪೇ ಆ್ಯಪ್ ಮೂಲಕ ಪಡೆಯಬಹುದಾಗಿದೆ. ಕಳೆದ ತಿಂಗಳು ಹ್ಯಾಕರ್ ಒಬ್ಬ ಶಾಂಘೈ ಪೊಲೀಸ್ ವಿಭಾಗದ ವ್ಯಾಪ್ತಿಯ 1 ಮಿಲಿಯನ್ ಜನರ ವೈಯಕ್ತಿಕ ಅಂಕಿಅಂಶ ತನಗೆ ಲಭ್ಯವಾಗಿದೆ ಎಂದು ಘೋಷಿಸಿ ಇದನ್ನು ಬ್ರೀಚ್ ಫೋರಂನಲ್ಲಿ ಮಾರಾಟಕ್ಕೆ ಇಡುವುದಾಗಿ ಹೇಳಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News