ತಲಪಾಡಿ | ಓವರ್ ಸ್ಪೀಡ್ ಆರೋಪ: ದಂಡ ಕಟ್ಟದ ಬಸ್ ಚಾಲಕ ಪೊಲೀಸ್ ವಶಕ್ಕೆ

Update: 2022-08-13 08:20 GMT

ಉಳ್ಳಾಲ, ಆ.13: ಅತಿ ವೇಗದಿಂದ ಚಲಿಸಿದ ಆರೋಪದಲ್ಲಿ ಸಿಟಿ ಬಸ್ಸಿಗೆ ದಂಡ ವಿಧಿಸಿದ್ದನ್ನು ಪ್ರಶ್ನಿಸಿದ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ತಲಪಾಡಿ ರೂಟ್ ನ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತಗೊಳಿಸಿ ಬಸ್ ಸಿಬ್ಬಂದಿ ಮುಷ್ಕರ ನಡೆಸಿದ ಘಟನೆ ಶನಿವಾರ ನಡೆದಿದೆ.

ಮಂಗಳೂರಿನಿಂದ ಮೇಲಿನ ತಲಪಾಡಿಗೆ ತೆರಳಿ ಹಿಂದಿರುಗುತ್ತಿದ್ದ 42 ರೂಟ್ ಸಂಖ್ಯೆಯ ಖಾಸಗಿ ಬಸ್ಸೊಂದನ್ನು ತಲಪಾಡಿಯಲ್ಲಿ ಗಸ್ತಿನಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರ ಠಾಣಾ ಎಎಸ್ಸೈ ರಾಬರ್ಟ್ ಲಸ್ರಾದೊ ತಡೆದು ಓವರ್ ಸ್ಪೀಡ್ ಕಾರಣಕ್ಕೆ 1,000 ರೂ. ದಂಡ ವಿಧಿಸಿದ್ದರೆನ್ನಲಾಗಿದೆ. ಈ ವೇಳೆ ಬಸ್ ನಿರ್ವಾಹಕ ನಾವು ವೇಗವಾಗಿ ಬಂದಿಲ್ಲ, ಕಲೆಕ್ಷನ್ ಇಲ್ಲದ ಕಾರಣ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ದಂಡ ಕಟ್ಟಲು ಬಸ್ ನಿರ್ವಾಹಕ ನಿರಾಕರಿಸಿದ ಹಿನ್ನೆಲೆಯಲ್ಲಿ ಬಸ್ ಚಾಲಕ ಬಸವರಾಜ್ ರನ್ನು ಎಎಸ್ಸೈ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ವಿರೋಧಿಸಿ ಬಸ್ ದಿಢೀರ್ ಮುಷ್ಕರ ನಡೆಸಿದರು.

ಇದನ್ನೂ ಓದಿ: ಕಾವು | ಸುಳ್ಯ ವೃತ್ತ ನಿರೀಕ್ಷಕರ ಕಾರು ಅಪಘಾತ: ಅಪಾಯದಿಂದ ಪಾರು

ಮೇಲಿನ ತಲಪಾಡಿಯಲ್ಲಿ ಪೊಲೀಸರ ತಪಾಸಣೆಯ ಚೆಕ್ ಪೋಸ್ಟ್ ಇದೆ. ಹಾಗಿದ್ದರೂ ಬಸ್ಸನ್ನು ಹೇಗೆ ವೇಗವಾಗಿ ಚಲಾಯಿಸಲು ಸಾಧ್ಯ? ಈ ಬಗ್ಗೆ ಸಿಸಿಟಿವಿ ದಾಖಲೆ ಪರಿಶೀಲಿಸಲಿ. ಸಿಟಿ ಬಸ್ ಸಿಬ್ಬಂದಿಯ ಮೇಲೆ ದಿನ‌ನಿತ್ಯ ಟ್ರಾಫಿಕ್ ಪೊಲೀಸರು ಕೇಸು ಜಡಿದು ಅನ್ಯಾಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಸ್ ನೌಕರರು, ವಶಕ್ಕೆ ಪಡೆದಿರುವ ಬಸವರಾಜ್ ರನ್ನು ಬಿಡುಗಡೆಗೊಳಿಸದಿದ್ದಲ್ಲಿ ಬಸ್ ಮುಷ್ಕರ ಮುಂದುವರಿಸುವುದಾಗಿ ಹೇಳಿದ್ದಾರೆ.

ಸಿಟಿ ಬಸ್ ಮುಷ್ಕರದಿಂದ ಪ್ರಯಾಣಿಕರು ಕಂಗಾಲಾಗಿದ್ದು, ಸರಕಾರಿ ಬಸ್ಸುಗಳನ್ನು ಆಶ್ರಯಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News