ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪ: ಎನ್ ಸಿಬಿ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್

Update: 2022-08-13 15:00 GMT
Photo: PTI

ಮುಂಬೈ,ಆ.13: ಮುಂಬೈ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನೆ ಸಮಿತಿಯು ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದ ಆರೋಪದಿಂದ ಮುಕ್ತಗೊಳಿಸಿದೆ.

ವಾಂಖೆಡೆ ಪರಿಶಿಷ್ಟ ಜಾತಿ ವರ್ಗದಡಿ ಮಹಾರ್ ಜಾತಿಗೆ ಸೇರಿದವರು ಎನ್ನುವುದು ಸಾಬೀತಾಗಿದೆ ಎಂದು ಶುಕ್ರವಾರ ಸ್ಪಷ್ಟಪಡಿಸಿರುವ ಸಮಿತಿಯು,ಅವರೆಂದೂ ಮುಸ್ಲಿಂ ಆಗಿ ಜನಿಸಿರಲಿಲ್ಲ ಮತ್ತು ಹಿಂದು ಧರ್ಮವನ್ನು ತೊರೆದು ಇಸ್ಲಾಮ್‌ಗೆ ಮತಾಂತರಗೊಂಡಿರಲಿಲ್ಲ ಎಂದು ಎತ್ತಿ ಹಿಡಿದಿದೆ.

ವಾಂಖೆಡೆಯವರ ತಂದೆ ಜ್ಞಾನದೇವ ವಾಂಖೆಡೆ ಅವರು ಇಸ್ಲಾಮ್‌ಗೆ ಮತಾಂತರಗೊಂಡಿದ್ದರು ಎನ್ನುವುದು ಸಾಬೀತಾಗಿಲ್ಲ ಎಂದೂ ಸಮಿತಿಯು ಹೇಳಿದೆ.
ಪ್ರಕರಣದ ವಿರುದ್ಧ ಹೋರಾಟದ ಸಮಯದಲ್ಲಿ ತನ್ನ ಕುಟುಂಬವು ಬಹಳಷ್ಟು ಯಾತನೆಯನ್ನು ಅನುಭವಿಸಿತ್ತು ಎಂದು ಸಮಿತಿಯ ಆದೇಶದ ಬಳಿಕ ಹೇಳಿದ ವಾಂಖೆಡೆ,ಸತ್ಯಮೇವ ಜಯತೇ ಎಂದಷ್ಟೇ ಹೇಳಲು ತಾನು ಬಯಸುತ್ತೇನೆ ಎಂದರು.

ವಾಂಖೆಡೆ ಪ್ರಸ್ತುತ ಚೆನ್ನೈನಲ್ಲಿ ತೆರಿಗೆದಾತರ ಸೇವೆಗಳ ಮಹಾ ನಿರ್ದೇಶನಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಮುಂಬೈನಲ್ಲಿ ಮಾದಕದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ)ದ ವಲಯ ನಿರ್ದೇಶಕರಾಗಿದ್ದರು.

ಎನ್‌ಸಿಬಿಯಲ್ಲಿ ವಾಂಖೆಡೆ ಅಧಿಕಾರಾವಧಿ ಡಿ.31ರಂದು ಅಂತ್ಯಗೊಂಡಿತ್ತು. ನ.5ರವರೆಗೆ ಅವರು ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಒಳಗೊಂಡಿದ್ದ ಮುಂಬೈ ಐಷಾರಾಮಿ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದರು.

ಎನ್‌ಸಿಬಿ ಮೇ 27ರಂದು ಆರ್ಯನ್ ಖಾನ್‌ರನ್ನು ಪ್ರಕರಣದಿಂದ ಮುಕ್ತಗೊಳಿಸಿತ್ತು. ನ.3ರಂದು ದಲಿತ ಸಂಘಟನೆಗಳಾದ ಭೀಮ್ ಆರ್ಮಿ ಮತ್ತು ಸ್ವಾಭಿಮಾನಿ ರಿಪಬ್ಲಿಕನ್ ಪಕ್ಷ ಉದ್ಯೋಗವನ್ನು ಪಡೆಯಲು ನಕಲಿ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದ ಆರೋಪದಲ್ಲಿ ವಾಂಖೆಡೆ ವಿರುದ್ಧ ಜಾತಿ ಪ್ರಮಾಣಪತ್ರ ಪರಿಶೀಲನೆ ಸಮಿತಿಗೆ ದೂರು ಸಲ್ಲಿಸಿದ್ದವು.
 
ಇದಕ್ಕೂ ಮುನ್ನ ಅ.25ರಂದು,ವಾಂಖೆಡೆ ನಕಲಿ ಜಾತಿ ಪ್ರಮಾಣಪತ್ರವನ್ನು ಸಲ್ಲಿಸುವ ಮೂಲಕ ವಂಚಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಆರೋಪಿಸಿದ್ದ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು,ವಾಂಖೆಡೆ ಮುಸ್ಲಿಮರಾಗಿದ್ದಾರೆ. ಅವರ ತಂದೆ ದಲಿತ ಕುಟುಂಬದಲ್ಲಿ ಜನಿಸಿದ್ದರಾದರೂ ಮುಸ್ಲಿಮ್ ಮಹಿಳೆಯನ್ನು ಮದುವೆಯಾದ ಬಳಿಕ ಇಸ್ಲಾಮ್‌ಗೆ ಮತಾಂತರಗೊಂಡು ‘ದಾವೂದ್’ಎಂಬ ಹೆಸರನ್ನು ಪಡೆದಿದ್ದರು. ವಾಂಖೆಡೆ ಪರಿಶಿಷ್ಟ ಜಾತಿ ಮೀಸಲಾತಿಯಡಿ ಉದ್ಯೋಗ ಪಡೆಯಲು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಕಾನೂನಿನಂತೆ ಇಸ್ಲಾಮ್‌ಗೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ದೊರೆಯುವುದಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News