ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮಿಸೋಣ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

Update: 2022-08-13 12:22 GMT

ಉಡುಪಿ, ಆ.13: ನಮ್ಮ ದೇಶ ಭಾರತವು ಜನರೇ ಸಾರ್ವಭೌಮರು ಎಂದು ಘೋಷಿಸಿಕೊಂಡ ಸರ್ವತಂತ್ರ ಸ್ವತಂತ್ರ ಗಣರಾಜ್ಯ. ದೇಶವೆಂದರೆ ನಿಜಾರ್ಥದಲ್ಲಿ ಇಲ್ಲಿನ ಜನರು. ಇಷ್ಟೇಲ್ಲಾ ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕೆ 75 ವರ್ಷಗಳಾಗಿರುವುದು ದೇಶವಾಸಿಗಳಿಗೆ ಸಂಭ್ರಮ. ಈ ಸಂಭ್ರಮವನ್ನು ಆಚರಿಸುವುದು. ಅದರಿಂದ ಪ್ರೇರಣೆ ಪಡೆಯುವುದು, ಪ್ರಗತಿಯತ್ತ ಮುನ್ನಡೆಯುವುದು ನಮ್ಮ ಕರ್ತವ್ಯ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತಿಳಿಸಿದೆ.

ಈ ಸಂದರ್ಭದಲ್ಲಿ ಸರ್ವ ದೇಶವಾಸಿಗಳಿಗೆ ಶುಭಹಾರೈಸಿರುವ ಒಕ್ಕೂಟವು, ಈ ದೇಶ ಒಬ್ಬ ವ್ಯಕ್ತಿ, ಗುಂಪು, ನಿರ್ದಿಷ್ಟ ಸಂಕುಚಿತ ಸಿದ್ದಾಂತ ಅಥವಾ ಇನ್ನಾವುದೇ ಶಕ್ತಿಗಳ ಅಣತಿಗೆ ಶರಣು ಹೊಡೆದು ಅವುಗಳ ಅಧಿಕಾರಶಾಹಿ ಅದೇಶದಂತೆ ನಡೆಯದೆ ಪ್ರಜಾತಾಂತ್ರಿಕ ಮೌಲ್ಯಗಳು ಮತ್ತು  ಕಟ್ಟ ಕಡೆಯ ದೇಶವಾಸಿಗಳ ಉನ್ನತಿಯ ಉದ್ದೇಶ ಹೊಂದಿರುವ ಬಲವಾದ ತತ್ವಗಳ ಮೇಲೆ ಮುನ್ನಡೆಯುತ್ತಿರುವ ದೇಶ. ಇಲ್ಲಿ ಪ್ರತಿಯೊಬ್ಬನಿಗೂ ಇತರರ ಹಕ್ಕುಗಳನ್ನು ಕಬಳಿಸದೆ ತನ್ನ ನಂಬಿಕೆಗಳು, ವೈಚಾರಿಕತೆಗೆ ನಿಷ್ಠನಾಗಿ ಭೌತಿಕ ಪ್ರಗತಿ ಸಾಧಿಸುವ ಅವಕಾಶವಿದೆ ಎಂದು ಹೇಳಿದೆ.

ಇಂತಹ ಮಹಾನ್ ದೇಶದ ನಿವಾಸಿಗಳಾದ ನಮಗೆ ಇಷ್ಟೆಲ್ಲಾ ಅನುಕೂಲತೆ ಗಳು ಲಭಿಸಿರುವ ಹಿಂದೆ ನಮ್ಮ ಹಿರಿಯರು ವಸಾಹತುಶಾಹಿ ಬ್ರಿಟಿಷರ ವಿರುದ್ಧ ಅವರ ದೌರ್ಜನ್ಯವನ್ನು ಸಹಿಸಿ ಸೊತ್ತುವಿತ್ತಗಳ ತ್ಯಾಗ ಮಾಡಿ, ಸಹಸ್ರಾರು ಜೀವಗಳ ಬಲಿದಾನ ನೀಡಿ ನಮಗೆ ಸ್ವಾತಂತ್ರ್ಯ ಗಳಿಸಿ ಕೊಟ್ಟಿರುವುದಾಗಿದೆ. ಈ ಹೋರಾಟದಲ್ಲಿ ಸರ್ವಧರ್ಮಿಯರು, ವಿವಿಧ ವೈಚಾರಿಕ ಹಾಗೂ ಸೈದ್ದಾಂತಿಕ ಹಿನ್ನೆಲೆಯರು, ವಿವಿಧ ಜಾತಿ ಪಂಗಡಗಳು ಸೇರಿದ್ದಾರೆ ಮತ್ತು ಅವರ ಕೊಡುಗೆಗಳೂ ದೊಡ್ಡದಿದೆ.

ಮುಸ್ಲಿಮ್ ಸಮುದಾಯ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ೧೯೪೨ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ(ಕ್ವಿಟ್ ಇಂಡಿಯಾ ಮೂಮೆಂಟ್) ವರೆಗೆ ಮಾತ್ರವಲ್ಲ, ನಂತರ ೧೯೪೭ರ ಲಭಿಸುವವರೆಗೆ ಈ ಸ್ವಾತಂತ್ರ್ಯ ಹೋರಾಟಕ್ಕಾಗಿ ರಕ್ತತರ್ಪಣವನ್ನು ಮಾಡಿದೆ ಹಾಗೂ ಧನ ಸಂಪತ್ತನ್ನು ವಿನಿಯೋಗಿಸಿ ನಿರಂತರ ಶ್ರಮವಹಿಸಿದೆ. ಗಾಂಧಿ, ನೆಹರು, ಭೋಸ್ ಇನ್ನಿತರ ನಾಯಕರೊಂದಿಗೆ ಅಬುಲ್ ಕಲಾಮ್ ಆಝಾದ್, ಆಲಿ ಸಹೋದರರು, ಖಾನ್ ಅಬ್ದುಲ್ ಗಪ್ಫಾರ್ ಖಾನ್, ಫಝ್ಲುಲ್ ಹಕ್ ಖೈರಾಬಾದಿ ಇನ್ನಿತರ ನಾಯಕರು ಹೆಗಲಿಗೆ ಹೆಗಲು ಕೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಯೂ ಸ್ವಾತಂತ್ರ್ಯ ಹೋರಾಟಕ್ಕೆ ಸಮುದಾಯ ಧುಮುಕಿದ ಹೆಮ್ಮೆ ನಮಗಿದೆ. ಈ ಹೋರಾಟಕ್ಕೆ ಉಡುಪಿಯ ಕೊಡುಗೈ ದಾನಿ ಜನಸ್ನೇಹಿ ಹಾಜಿ ಅಬ್ದುಲ್ಲಾ ಸಾಹೇಬರು ಆರ್ಥಿಕ ಸಹಕಾರ ಮತ್ತು ಸರ್ವ ರೀತಿಯ ಬೆಂಬಲ ನೀಡಿದ್ದಲ್ಲದೆ ಮಹಾತ್ಮಗಾಂಧಿಯವರ ಉಡುಪಿಗೆ ಆಗಮನದ ಸಂದರ್ಭದಲ್ಲಿ ಸ್ವಾಗತ ಸಮಿತಿ ನಾಯಕತ್ವವನ್ನೂ ವಹಿಸಿದ್ದರು. ನಂತರ ಉಡುಪಿಯಲ್ಲಿ ಜನಾಬ್ ನಸ್ರುಲ್ಲಾ ಮನ್ನಾರವರು ದೊಡ್ಡ ಸಂಖ್ಯೆಯಲ್ಲಿ ಸಮುದಾಯ ಭಾಂದವರನ್ನು ಒಗ್ಗೂಡಿಸಿ ಇತರರೊಂದಿಗೆ ಸೇರಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದರು.

ಆ ಸ್ವಾತಂತ್ರ್ಯ ಸೇನಾನಿಗಳ ಋಣಭಾರ ನಮ್ಮ ಮೇಲಿದೆ. ಇಷ್ಟೆಲ್ಲಾ ಶ್ರಮದಿಂದ ಗಳಿಸಿದ ಸ್ವಾತಂತ್ರ್ಯವನ್ನು ಅದರ ರಜತ ಮಹೋತ್ಸವದ ಸಂದರ್ಭದಲ್ಲಿ ಸರ್ವರೂ ಸಂಭ್ರಮಿಸುವುದು ಅತ್ಯಂತ ಪ್ರಸ್ತುತ. ಈ ಸಂದರ್ಭದಲ್ಲಿ ಮುಸ್ಲಿಮರು ತಮ್ಮ ಸಂಘಸಂಸ್ಥೆಗಳಲ್ಲಿ ಧ್ವಜಾರೋಹಣ ಮಾಡುವುದಲ್ಲದೆ ಸ್ವಾತಂತ್ರ್ಯದ ಸ್ಪೂರ್ತಿಯನ್ನು ಸ್ಮರಿಸುವುದರ ಮೂಲಕ ದೇಶದ ರಚನಾತ್ಮಕ ಪ್ರಗತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಸ್ಲಿಮ್ ಒಕ್ಕೂಟ ತಿಳಿಸಿದೆ.

ಇದೇ ಸಂದರ್ಭದಲ್ಲಿ ಮಹಾನ್ ಹೋರಾಟದ ಮೂಲಕ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಯನ್ನು ಉಳಿಸಿ ಬೆಳೆಸುವ ಮಹತ್ವ ಪೂರ್ಣ ಜವಾಬ್ದಾರಿ ಮುಸ್ಲಿಮರೂ ಸೇರಿದಂತೆ ದೇಶದ ಎಲ್ಲಾ ನಾಗರಿಕರ ಮೇಲಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News