ಕೋಮು ಗಲಭೆಗೆ ಕಾರಣವಾಗಿದ್ದ ದೇವಾಲಯಕ್ಕೆ ಮಾಂಸ ಎಸೆದ ಪ್ರಕರಣಕ್ಕೆ ಟ್ವಿಸ್ಟ್: ಪ್ರಮುಖ ಆರೋಪಿ ಚಂಚಲ್‌ ತ್ರಿಪಾಠಿ ಬಂಧನ

Update: 2022-08-13 16:12 GMT

ಕನೌಜ್: ಕಳೆದ ತಿಂಗಳು ಕೋಮುಗಲಭೆಗೆ ಕಾರಣವಾಗಿದ್ದ ತಾಲ್ಗ್ರಾಮ್ ಪಟ್ಟಣದ ದೇವಸ್ಥಾನದಲ್ಲಿ ಮಾಂಸವನ್ನು ಎಸೆದಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಇಲ್ಲಿನ ಪೊಲೀಸರು ತಿಳಿಸಿರುವುದಾಗಿ TheNewIndiaExpress.com ವರದಿ ಮಾಡಿದೆ. 

ಸ್ಥಳೀಯ ಪ್ರದೇಶದ ಆಗಿನ ಠಾಣಾಧಿಕಾರಿಯೊಂದಿಗಿನ ವೈಷಮ್ಯವೇ ಘಟನೆಯ ಹಿಂದಿನ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಚಂಚಲ್ ತ್ರಿಪಾಠಿ ಎಂಬಾತನಿಗೆ ಆಗಿನ ಠಾಣಾಧಿಕಾರಿ ಹರಿ ಶ್ಯಾಮ್‌ ಸಿಂಗ್‌ ರೊಂದಿಗೆ ಮನಸ್ತಾಪವಿದ್ದು, ಅವರನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು 10,000 ರೂಪಾಯಿ ನೀಡಿ ಕಟುಕನ ಮೂಲಕ ಮಾಂಸವನ್ನು ಶಿವನ ದೇವಾಲಯಕ್ಕೆ ಎಸೆದಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷ ಅಂತ್ಯದ ವೇಳೆ ರಾಮಮಂದಿರ ನಿರ್ಮಾಣ ಪೂರ್ಣ: ಚಂಪತ್‌ ರೈ

ಜುಲೈ 16 ರಂದು ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ನಂತರ ಕೋಮು ಉದ್ವಿಗ್ನತೆ ಉಂಟಾಯಿತು. ಒಂದು ಸಮುದಾಯದ  ಸೇರಿದ ಹಲವು ಗೂಡಂಗಡಿಗಳನ್ನು ಸುಟ್ಟು ಭಸ್ಮಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 17 ಮಂದಿಯನ್ನು ಬಂಧಿಸಿದ್ದಾರೆ.

ಮನ್ಸೂರ್ ಕಸಾಯಿಯನ್ನು ಬಂಧಿಸಿದ ನಂತರ, ಘಟನೆಗಳ ಸಂಪೂರ್ಣ ಮಾಹಿತಿಯು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾನ್ವಾ ಗ್ರಾಮದ ನಿವಾಸಿ ಚಂಚಲ್ ತ್ರಿಪಾಠಿ ಅವರು ಮಾಂಸದ ತುಂಡುಗಳನ್ನು ದೇವಸ್ಥಾನದಲ್ಲಿ ಇಡುವಂತೆ ಕೇಳಿಕೊಂಡಿದ್ದರು ಎಂದು ಮನ್ಸೂರ್ ಪೊಲೀಸರಿಗೆ ತಿಳಿಸಿದ್ದಾರೆ. ಅದಕ್ಕಾಗಿ ಆತನಿಗೆ 10,000 ರೂ. ನೀಡಲಾಗಿತ್ತು ಎಂದೂ ಆತ ತಿಳಿಸಿದ್ದಾನೆ.

ಚಂಚಲ್ ತ್ರಿಪಾಠಿ ಅವರು ತಾಲ್ಗ್ರಾಮ್ ಠಾಣೆಯ ಉಸ್ತುವಾರಿ ಹರಿ ಶ್ಯಾಮ್ ಸಿಂಗ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಬಯಸಿದ್ದರು ಎಂದು ಮನ್ಸೂರ್ ಪೊಲೀಸರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News