ಹತ್ಯೆ ಪ್ರಕರಣ; ಪ್ರವೀಣ್ ನೆಟ್ಟಾರು ತಂದೆಯ ಹೇಳಿಕೆಯ ಬಗ್ಗೆ ತನಿಖೆಯಾಗಲಿ: ಎಸ್‌ಡಿಪಿಐ ಆಗ್ರಹ

Update: 2022-08-13 16:05 GMT

ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ನಡೆದಾಗಲೇ ಆತನ ತಂದೆ ಸ್ಥಳೀಯ ಕೆಲವು ವ್ಯಕ್ತಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು. ಕೆಲವು ದಿನದ ನಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು. ಆ ಬಳಿಕವೂ ಪ್ರವೀಣ್‌ನ ತಂದೆ ಕೊಲೆ ಪ್ರಕರಣದ ತನಿಖೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಹಾಗಾಗಿ ಪೊಲೀಸರು ಪ್ರವೀಣ್‌ನ ತಂದೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರ ಕಾರು ಚಾಲಕನಾಗಿದ್ದ ಪ್ರವೀಣ್‌ನ ಕೊಲೆಯ ಹಿಂದೆ ಬೇರೆಯೇ ಕಾರಣಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಫಾಝಿಲ್ ಹತ್ಯೆಯಲ್ಲಿ ಬಜ್ಪೆ, ಬಂಟ್ವಾಳ ಮೂಲದವರು ಭಾಗಿಯಾಗಿದ್ದರೂ ಸಮರ್ಪಕ ತನಿಖೆಯಾಗಿಲ್ಲ. ಮಸೂದ್ ಕೊಲೆಯನ್ನು ಕ್ಷುಲ್ಲಕ ಕಾರಣ ಎಂದು ಬಿಂಬಿಸಲಾಗಿದೆ. ಪ್ರವೀಣ್‌ನ ಮೃತದೇಹ ನೋಡಲು ಪರಿಸರದ ಕೆಲವು ವ್ಯಕ್ತಿಗಳು ಬಾರದಿರುವ ಬಗ್ಗೆ ಪ್ರವೀಣ್‌ನ ತಂದೆಯು ಬಹಿರಂಗವಾಗಿ ಹೇಳಿಕೆ ನೀಡಿ ಸಂಶಯ ವ್ಯಕ್ತಪಡಿಸಿದ್ದರೂ ಆ ಬಗ್ಗೆ ತನಿಖೆಯಾಗಿಲ್ಲ. ಪೊಲೀಸರು ಅಥವಾ ಎನ್‌ಐಎ ತಂಡ ಕೂಡ ಆ ಶಂಕಿತರ ಅವರ ಮನೆಗೆ ಹೋಗಿ ವಿಚಾರಿಸಿಲ್ಲ. ಯಾರನ್ನೋ ಸಮಾಧಾನಪಡಿಸಲು ಅಥವಾ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂದು ಜಲೀಲ್ ಕೃಷ್ಣಾಪುರ ಆಪಾದಿಸಿದ್ದಾರೆ.

ಸಂಘಟಿತ ಹತ್ಯೆ ನಡೆದಾಗ ಸಂಘಪರಿವಾರ ಮತ್ತು ಬಿಜೆಪಿ ನಾಯಕರು ಎಸ್‌ಡಿಪಿಐ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಬದಲು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಮಾತನಾಡಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ, ಚರಣ್‌ರಾಜ್, ಕಾರ್ತಿಕ್ ಸುವರ್ಣ, ರಾಜೇಶ್ ಕೊಲೆ ಪ್ರಕರಣಗಳ ಬಗ್ಗೆ ಸಾಕಷ್ಟು ಸಂಶಯ ವ್ಯಕ್ತವಾಗಿದ್ದರೂ ಕೂಡ ರಾಜ್ಯ ಬಿಜೆಪಿ ಸರಕಾರವು ಆರೋಪಿಗಳ ವಿರುದ್ಧ ಯುಎಪಿಎ ಕಾನೂನಿನಂತೆ ಕ್ರಮ ಜರಗಿಸಿಲ್ಲ. ಎನ್‌ಐಎಯಿಂದಲೂ ತನಿಖೆ ನಡೆಸಿಲ್ಲ. ಜಿಲ್ಲೆಯ ಆಶಾಂತಿಗೆ ಕಾರಣವಾದ ಮಸೂದ್, ಪ್ರವೀಣ್, ಫಾಝಿಲ್ ಸರಣಿ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತಾರತಮ್ಯ ಎಸಗಿದೆ. ಮಸೂದ್ ಮತ್ತು ಫಾಝಿಲ್‌ರ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿದೆ. ಇದು ಯಾವ ನ್ಯಾಯ? ಸರಕಾರ ಮೂರೂ ಕೊಲೆ ಪ್ರಕರಣವನ್ನು ಯಾಕೆ ಸಮಾನವಾಗಿ ಕಾಣುತ್ತಿಲ್ಲ. ಮಸೂದ್, ಫಾಝಿಲ್‌ರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.

ಶಾಸಕರೊಬ್ಬರು ಪ್ರವೀಣ್ ಹತ್ಯೆ ಆರೋಪಿಗಳಿಗೆ ಮಸೀದಿಯಿಂದ ಸಹಕಾರ ಸಿಗುತ್ತದೆ ಎಂದು ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಫಾಝಿಲ್ ಹತ್ಯೆ ನಡೆಸಿದ ಬಳಿಕ ಆರೋಪಿಗಳು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾರೆ. ಆರೋಪಿಗಳಿಗೂ ಧಾರ್ಮಿಕ ಕೇಂದ್ರಗಳಿಗೂ ತಳಕು ಹಾಕುವುದು ಎಷ್ಟು ಸರಿ? ಶಾಸಕರಿಗೆ ಅಷ್ಟೂ ಜ್ಞಾನವಿಲ್ಲದಾಯಿತೇ? ಇಂತಹ ಸೂಕ್ಷ್ಮ ಪ್ರಕರಣಗಳ ಬಗ್ಗೆ ಧರ್ಮ ಅಥವಾ ಧಾರ್ಮಿಕ ಕೇಂದ್ರಗಳನ್ನು ಎಳೆದು ತರುವುದು ಸರಿಯೇ? ಎಂದು ಜಲೀಲ್ ಕೃಷ್ಣಾಪುರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಸಮಿತಿಯ ಸದಸ್ಯ ಅಶ್ರಫ್ ಕೆ.ಸಿ.ರೋಡು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News