ರಕ್ಷಾ ಬಂಧನಕ್ಕೆ ಸಹೋದರಿಯನ್ನು ಭೇಟಿಯಾಗಲು ಹೊರಟಿದ್ದ ವ್ಯಕ್ತಿಯ ಕತ್ತು ಸೀಳಿದ ಗಾಳಿಪಟದ ದಾರ !

Update: 2022-08-13 16:09 GMT
photo :NDTV

ಹೊಸದಿಲ್ಲಿ: ರಕ್ಷಾ ಬಂಧನಕ್ಕೆ ತನ್ನ ಸಹೋದರಿಯನ್ನು ಭೇಟಿಯಾಗಲು ಹೊರಟಿದ್ದ ವ್ಯಕ್ತಿಯೊಬ್ಬರ ಕತ್ತಿಗೆ ಗಾಳಿಪಟದ ದಾರ ಸಿಲುಕಿ ಮೃತಪಟ್ಟ ದಾರುಣ ಘಟನೆ ದಿಲ್ಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ವರದಿಯಾಗಿದೆ

ಮೃತರನ್ನು ವಿಪಿನ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಮೋಟಾರ್ ಸೈಕಲ್‌ನಲ್ಲಿ ತೆರಳಿದ್ದರು. ವಿಪಿನ್ ಕುಮಾರ್ ತನ್ನ ಸಹೋದರಿಯೊಂದಿಗೆ ಲೋನಿಯಲ್ಲಿ ರಕ್ಷಾ ಬಂಧನವನ್ನು ಆಚರಿಸಲು ಹೊರಟಿದ್ದರು.

ವರದಿಗಳ ಪ್ರಕಾರ, ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಬೈಕ್‌ನಲ್ಲಿ ಹಾದು ಹೋಗುವಾಗ ಗಾಳಿಪಟದ ದಾರ ಕುತ್ತಿಗೆಗೆ ಸಿಕ್ಕಿ ರಕ್ತ ಹರಿಯಲಾರಂಭಿಸಿತು. ವಿಪಿನ್ ತನ್ನ ಕೈಗಳಿಂದ ದಾರವನ್ನು ತೆಗೆಯಲು ಪ್ರಯತ್ನಿಸಿದಾಗ ಕೈಯ ಮೇಲೂ ಗಾಯವಾಗಿದೆ.ನಂತರ ಬೈಕ್ ನಿಲ್ಲಿಸಿ ಪತ್ನಿ ಹಾಗೂ ಮಗಳನ್ನು ಬೈಕ್ ನಿಂದ ಕೆಳಗಿಳಿಸಿದ್ದಾರೆ. ಅದರ ಬಳಿಕ ಅವರು ಬಿದ್ದು ಹೆಲ್ಮೆಟ್ ತೆಗೆದಾಗ ತೀವ್ರವಾಗಿ ರಕ್ತಸ್ರಾವವಾಗತೊಡಗಿದೆ.

ಅಲ್ಲಿಯೇ ಇದ್ದ ದಾರಿಹೋಕರ ಸಹಾಯದಿಂದ, ಅವರನ್ನು ಸ್ಥಳೀಯ ಅಪಘಾತ ಕೇಂದ್ರಕ್ಕೆ ಕೊಂಡೊಯ್ಯಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಈ ಸಂಬಂಧ ಪೊಲೀಸರು ಕೊಲೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಪಿನ್ ಅವರು ಕುಟುಂಬದೊಂದಿಗೆ ನಂಗ್ಲೋಯ್‌ನ ರಾಜಧಾನಿ ಪಾರ್ಕ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಬ್ರೆಡ್ ಸರಬರಾಜು ಮಾಡುತ್ತಿದ್ದ ವಿಪಿನ್ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದಿಲ್ಲಿಯಲ್ಲಿ ಚೈನೀಸ್ ಮಾಂಜಾ ಎಂದು ಕರೆಯಲ್ಪಡುವ ಗಾಳಿಪಟದ ದಾರದಿಂದ ಅನೇಕ ಸಾವುಗಳು ಸಂಭವಿಸಿವೆ. ಜುಲೈ 25 ರಿಂದ, ಎರಡು ಸಾವುಗಳು ವರದಿಯಾಗಿವೆ. ಚೈನೀಸ್ ಮಾಂಜಾದಿಂದಾಗಿ ಕುತ್ತಿಗೆ ಸೀಳಿದ ಘಟನೆಗಳ ಬಗ್ಗೆ ಹತ್ತಾರು ಪ್ರಕರಣಗಳು ದಾಖಲಾಗಿವೆ. ಆಗಸ್ಟ್ 7 ರಂದು, ಬದರ್‌ಪುರ ಪ್ರದೇಶದಲ್ಲಿ ಇಂತಹದ್ದೇ ಪ್ರಕರಣವೊಂದರಲ್ಲಿ ಡೆಲಿವರಿ ಬಾಯ್ ಒಬ್ಬರು ಪ್ರಾಣ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News