ಹಿಮಾಚಲಪ್ರದೇಶ: ಸಾಮೂಹಿಕ ಮತಾಂತರ ನಿಷೇಧ, ಬಲವಂತದ ಮತಾಂತರಕ್ಕೆ 10 ವರ್ಷ ಜೈಲು

Update: 2022-08-13 16:29 GMT

ಶಿಮ್ಲಾ,ಆ.13: ಸಾಮೂಹಿಕ ಮತಾಂತರವನ್ನು ನಿಷೇಧಿಸುವ ಮಸೂದೆಯನ್ನು ಶನಿವಾರ ಅಂಗೀಕರಿಸಿರುವ ಹಿಮಾಚಲ ಪ್ರದೇಶ ವಿಧಾನಸಭೆಯು,ಬಲವಂತ ಅಥವಾ ಆಮಿಷದ ಮೂಲಕ ಮತಾಂತರದ ವಿರುದ್ಧ ತನ್ನ 2019ರ ಕಾಯ್ದೆಯಲ್ಲಿ ಗರಿಷ್ಠ ದಂಡನೆಯನ್ನು ಹತ್ತು ವರ್ಷಗಳ ಜೈಲು ಶಿಕ್ಷೆಗೇರಿಸಿದೆ. ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ಇದೇ ವರ್ಷ ನಡೆಯಲಿವೆ.

ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ (ತಿದ್ದುಪಡಿ) ಮಸೂದೆ, 2022ನ್ನು ಸದನವು ಧ್ವನಿಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಿತು.

ಮಸೂದೆಯಲ್ಲಿ ಸಾಮೂಹಿಕ ಮತಾಂತರವನ್ನು ಏಕಕಾಲದಲ್ಲಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಮತಾಂತರ ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ಬಲವಂತದ ಮತಾಂತರಕ್ಕೆ ಶಿಕ್ಷೆಯನ್ನು ಏಳು ವರ್ಷಗಳಿಂದ ಗರಿಷ್ಠ 10 ವರ್ಷಗಳಿಗೆ ಹೆಚ್ಚಿಸಲು ಅದು ಉದ್ದೇಶಿಸಿದೆ.

 ಜೈರಾಮ ಠಾಕೂರ್ ನೇತೃತ್ವದ ಸರಕಾರವು ಶುಕ್ರವಾರ ಮಸೂದೆಯನ್ನು ಸದನದಲ್ಲಿ ಮಂಡಿಸಿತ್ತು. ಇದು ಕೇವಲ 18 ತಿಂಗಳ ಹಿಂದೆ ಜಾರಿಗೊಂಡಿದ್ದ ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ ಕಾಯ್ದೆ, 2019ರ ಹೆಚ್ಚು ಕಠಿಣ ಆವೃತ್ತಿಯಾಗಿದೆ.

ಬಿಜೆಪಿ ಮತಾಂತರ ನಿಗ್ರಹ ಕಾನೂನುಗಳ ಕಟ್ಟಾ ಬೆಂಬಲಿಗನಾಗಿದ್ದು, ಪಕ್ಷದ ಆಡಳಿತವಿರುವ ಹಲವಾರು ರಾಜ್ಯಗಳು ಈ ಕಾನೂನುಗಳನ್ನು ತಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News