ಗಾಝಾ ಸಂಷರ್ಘ: ಮೃತರ ಸಂಖ್ಯೆ 49ಕ್ಕೆ ಏರಿಕೆ

Update: 2022-08-13 16:34 GMT

ಗಾಝಾ, ಆ.13: ಆಕ್ರಮಿತ ಪಶ್ಚಿಮ ದಂಡೆಯ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಪಡೆ ನಡೆಸಿದ ವಾಯುದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ 11 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಇದರೊಂದಿಗೆ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿದೆ ಎಂದು ಪೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ಮೃತರಲ್ಲಿ 17 ಮಕ್ಕಳೂ ಸೇರಿದ್ದಾರೆ. 

ಇಬ್ಬರು ಮಕ್ಕಳು ಜೆರುಸಲೇಂನ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ಲಾಮಿಕ್ ಜಿಹಾದ್ ಮುಖಂಡನನ್ನು ಇಸ್ರೇಲ್ ಬಂಧಿಸಿದ ಬಳಿಕ ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ಸರಣಿ ವಾಯುದಾಳಿ ನಡೆಸಿತ್ತು.

 ಇದಕ್ಕೆ ಪ್ರತಿಯಾಗಿ ಇಸ್ಲಾಮಿಕ್ ಜಿಹಾದ್ ಸಂಘಟನೆ ಇಸ್ರೇಲ್ನತ್ತ ರಾಕೆಟ್ಗಳನ್ನು ಉಡಾಯಿಸಿದೆ. 3 ದಿನದ ಸಂಘರ್ಷದಲ್ಲಿ ಇಸ್ಲಾಮಿಕ್ ಜಿಹಾದ್ ನ ಗಾಝಾದ ಕಮಾಂಡರ್ ಸೇರಿದಂತೆ ಇಬ್ಬರು ಉನ್ನತ ಮುಖಂಡರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಕಳೆದ ರವಿವಾರ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದಿದೆ. 

2008ರಿಂದ ಫೆಲೆಸ್ತೀನಿಯನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 4,000 ಮಂದಿ ಹತರಾಗಿದ್ದು ಇವರಲ್ಲಿ 25%ದಷ್ಟು ಮಕ್ಕಳು. 2000ನೇ ಇಸವಿಯಿಂದ ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಸೇನೆ ಮತ್ತು ಇಸ್ರೇಲ್ ವಸಾಹತುಗಾರರಿಂದ ಕನಿಷ್ಟ 2,200 ಮಕ್ಕಳು ಹತರಾಗಿದ್ದಾರೆ ಎಂದು ‘ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್ನ್ಯಾಷನಲ್’ನ ಅಂಕಿಅಂಶ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News