ಮಂಗಳೂರು: ರೆಡ್‌ಕ್ರಾಸ್‌ನಿಂದ ವಿಶ್ವ ಅಂಗಾಂಗ ದಿನಾಚರಣೆ

Update: 2022-08-13 17:07 GMT

ಮಂಗಳೂರು : ಅಂಗಾಂಗ ದಾನ ಮಾಡಿ ಅಗತ್ಯ ಇರುವ ವ್ಯಕ್ತಿಯ ದೇಹಕ್ಕೆ ಕಸಿ ಮಾಡುವುದರಿಂದ ಜೀವದಾನ ನೀಡಿದಂತಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್‌ಟೆಂಟ್ಸ್ ಮತ್ತು ಜೀವ ಸಾರ್ಥಕತೆ ವತಿಯಿಂದ ನಗರದ  ನಗರದ ಐಎಂಎ ಭವನದಲ್ಲಿ ಶನಿವಾರ ನಡೆದ ವಿಶ್ವ ಅಂಗಾಂಗ ದಾನ ದಿನಾಚರಣೆ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತ್ಯಂತ ದುಃಖದ ಸಮಯದಲ್ಲಿ ಪ್ರೀತಿಪಾತ್ರರ ಅಂಗಾಂಗ ದಾನ ಮಾಡುವ ಕಠಿಣ ನಿರ್ಧಾರ ಕೈಗೊಳ್ಳುವ ದಾನಿಗಳ ಕುಟುಂಬದ ತ್ಯಾಗವನ್ನು ನಾವು ಸದಾ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ ‘ಒಬ್ಬ ವ್ಯಕ್ತಿಯ ದೇಹದಾನದಿಂದ 8 ಮಂದಿಯ ಜೀವ ಉಳಿಸಲು ಸಾಧ್ಯವಿದೆ.  ಭಾರತದಲ್ಲಿ ಅಂಗಾಗ ಕಸಿ ಮಾಡಿಸಿಕೊಳ್ಳಬೇಕಾದವರ ಸಂಖ್ಯೆ ಅತಿಯಾಗಿದೆ. ಆದರೆ ಆಂಗಾಗ ದಾನಿಗಳ ಸಂಖ್ಯೆ ಶೇ.01 ಮಾತ್ರ ಇದೆ. ಅಂಗಾಗ ದಾನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅವಶ್ಯ ಎಂದರು.

ರೆಡ್‌ಕ್ರಾಸ್ ಆರೋಗ್ಯ ಉಪಸಮಿತಿಯ ಚೇರ್ಮನ್ ಡಾ.ಬಿ.ಸಚ್ಚಿದಾನಂದ ರೈ ಮಾತನಾಡಿ ರೆಡ್‌ಕ್ರಾಸ್ ವತಿಯಿಂದ ಅಂಗಾಂಗ ದಾನ ಪ್ರೇರೇಪಿಸುವ ಉದ್ದೇಶದಿಂದ  ಘೋಷಣಾ ಪತ್ರ ಮುದ್ರಿಸಿ ವಿದ್ಯಾರ್ಥಿ ಸಮುದಾಯಕ್ಕೆ ವಿತರಿಸಲಾಗಿದೆ. ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆಯ ಆರೋಗ್ಯ ಉಪ ಸಮಿತಿ ಪ್ರಕಟಿಸಿರುವ ಅಂಗಾಂಗಗಳ ಮತ್ತು ದೇಹ ದಾನದ ಮಾಹಿತಿ ಕೈ ಪಿಡಿಯನ್ನು  ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ಸತ್ಯಮೂರ್ತಿ ಐತಾಳ್ ಮತ್ತು ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್‌ಟೆಂಟ್ಸ್ ನ ಅಧ್ಯಕ್ಷ ಡಾ.ತಾಜುದ್ದೀನ್ ಬಿಡುಗಡೆಗೊಳಿಸಿದರು.

ಅಂಗಾಂಗ ದಾನ ಮಾಡಿದ ದಿ.ಸತೀಶ್ ಕುಲಾಲ್ ಅವರ ತಂದೆ ಜಾರಪ್ಪ ಕುಲಾಲ್, ದಿ. ಕೆ.ವಿ.ರಮೇಶ್ ಅವರ ಸಹೋದರಿ ಪೂರ್ಣಿಮಾ, ದಿ.ಪ್ರೀತಿ ಮನೋಜ್ ಅವರ ಪತಿ ಮನೋಜ್ ಕಲ್ಯ ಹಾಗೂ ದಿ.ಲಿಂಡಾ ಅವರ ಸಹೋದರ ಪ್ರಕಾಶ್ ಡಿಸೋಜಾ ಇವರುಗಳನ್ನು ಗೌರವಿಸಲಾಯಿತು. ಅಂಗಾಂಗ ದಾನ ಪಡೆದ ಲಿಂಗಪ್ಪ ಕೋಡಿಕಲ್ ಮತ್ತು ಭುಜಂಗ ಪೂಜಾರಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಕುಸುಮಾಧರ ಬಿ.ಕೆ. ಆಡಳಿತ ಸಮಿತಿ ನಿರ್ದೇಶಕಿ ಸುಮನ.ಬಿ. ಕಾರ್ಯಕ್ರಮ ನಿರೂಪಿಸಿದರು.

ಅಂಗಾಗ ದಾನ ಘೋಷಿಸಿದ ಡಿ.ಸಿ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಅಂಗಾಂಗ ದಾನ ಮಾಡುವುದಾಗಿ ಸಭೆಯಲ್ಲಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News