ರಾಷ್ಟ್ರೀಯ ಲೋಕ್ ಅದಾಲತ್: ಉಡುಪಿ ಜಿಲ್ಲೆಯಲ್ಲಿ 20,444 ಪ್ರಕರಣ ಇತ್ಯರ್ಥ

Update: 2022-08-14 11:17 GMT

ಉಡುಪಿ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯ ಗಳಲ್ಲಿ ಆ.13ರಂದು ಆಯೋಜಿಸಲಾದ ಒಂದು ದಿನದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 20444 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿ 11,11,51,425 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ-೩೪, ಚೆಕ್ಕು ಅಮಾನ್ಯ ಪ್ರಕರಣ- ೨೨೬, ಬ್ಯಾಂಕ್/ಹಣ ವಸೂಲಾತಿ ಪ್ರಕರಣ-೨೪, ಎಂ.ವಿ.ಸಿ ಪ್ರಕರಣ-೯೦, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ-೧, ಎಂ.ಎಂಆರ್‌ಡಿ ಆಕ್ಟ್ ಪ್ರಕರಣ-೧೨, ವೈವಾಹಿಕ ಪ್ರಕರಣ-೨, ಭೂಸ್ವಾಧೀನ ಪ್ರಕರಣ-೧, ಸಿವಿಲ್ ಪ್ರಕರಣ-೧೧೫, ಇತರೇ ಕ್ರಿಮಿನಲ್ ಪ್ರಕರಣ-೧೫೦೧ ಹಾಗೂ ವ್ಯಾಜ್ಯ ಪೂರ್ವ ದಾವೆ-೧೮೪೩೮ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

ದೂರವಾಗಿದ್ದ ದಂಪತಿ ಮಿಲನ: ಸುಮಾರು 13 ವರ್ಷಗಳಿಂದ ಬೇರೆ ಬೇರೆಯಾಗಿದ್ದ ದಂಪತಿಗಳು ನ್ಯಾಯಾಧೀಶರು ಹಾಗೂ ವಕೀಲರ ಮಧ್ಯಸ್ಥಿಕೆ ಯಿಂದ ತಮ್ಮ ಮಗಳ ಭವಿಷ್ಯದ ದೃಷ್ಟಿಯಿಂದ ಅವರ ನಡುವೆ ಇದ್ದ ಮನಸ್ತಾಪವನ್ನು ದೂರ ಮಾಡಿ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ.

ಸುಮಾರು 16 ವರ್ಷ ಹಳೆಯದಾದ ಅಣ್ಣ ತಮ್ಮಂದಿರ ನಡುವೆ ಬಾಕಿ ಇದ್ದ ಅಮಲ್ಜಾರಿ ಸಂಖ್ಯೆ ೧೧/೧೭ರ ಪ್ರಕರಣದಲ್ಲಿ ೧೫,೦೦,೦೦೦ರೂ. ಇಬ್ಬರು ಪಕ್ಷಗಾರರು ರಾಜೀ ಸಂಧಾನ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಎರಡು ವೈವಾಹಿಕ ಪ್ರಕರಣದಲ್ಲಿ ದಂಪತಿಗಳು ತಮ್ಮ ವೈಮನಸ್ಸನ್ನು ಮರೆತು ಒಂದಾದರು.

35 ವರ್ಷಗಳ ವೈಷಮ್ಯ ಸುಖಾಂತ್ಯ: ಸಂಬಂಧಿಕರ ನಡುವೆ ಸುಮಾರು ೩೫ ವರ್ಷಗಳ ಹಿಂದಿನಿಂದ ಇದ್ದ ಹಳೆ ವೈಷಮ್ಯವು ಲೋಕಾ ಅದಾಲತ್‌ನಲ್ಲಿ ಇತ್ಯರ್ಥಗೊಳಿಸಲಾಯಿತು.

ಈ ಬಗ್ಗೆ ೨೦೧೭ರಲ್ಲಿ ಪಾಲು ವಿಭಾಗದ ದಾವೆ ಹೂಡಿದ್ದು ಉಭಯ ಪಕ್ಷಗಾರರ ವಿಚಾರಣೆ ನಡೆದು ಪ್ರಕರಣವನ್ನು ತೀರ್ಪಿಗಾಗಿ ೨೦೨ರ ಆ.೧೯ಕ್ಕೆ ಕಾಯ್ದಿರಿಸಲಾಗಿತ್ತು. ಈ ದಾವೆಯಲ್ಲಿ ಒಟ್ಟು ೨೫ ಜನ ಪಕ್ಷಗಾರರಿದ್ದು ನ್ಯಾಯಾ ಧೀಶರು, ವಕೀಲರು, ಹಾಗೂ ಹಿರಿಯರ ಸಲಹೆಯಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸಮಕ್ಷಮ ರಾಜೀ ಸಂಧಾನದ ಮೂಲಕ ಪಾಲು ವಿಭಾಗ ಮಾಡಿಕೊಂಡು ತಮ್ಮ ಭಾಗಕ್ಕೆ ಬಂದ ಪಾಲಿನಲ್ಲಿ ದಾರಿಗೆ ಸಮನಾದ ಜಾಗವನ್ನು ಬಿಟ್ಟುಕೊಡಲು ಒಪ್ಪಿಕೊಂಡು ಸೌಹಾರ್ದಯುತವಾಗಿ ಸಂಧಾನ ಮಾಡಿಕೊಳ್ಳ ಲಾಯಿತು.

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ,  ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಹಕಾರದೊಂದಿಗೆ ಲೋಕ್ ಅದಾಲತ್ ಯಶಸ್ವಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News