ನಾವು ಮರೆತ ಮಹನೀಯರು: ದೇಶಾದ್ಯಂತ ಸ್ವಾತಂತ್ರ್ಯ ಹೋರಾಟವನ್ನು ಜಾಗೃತಗೊಳಿಸಿದ ಅಬಾದಿ ಬಾನು

Update: 2022-08-14 11:33 GMT
ಅಬಾದಿ ಬಾನು ( Photo courtesy: prabhasakshi.com)

ಒಬ್ಬ ಅನಕ್ಷರಸ್ಥ ಮಹಿಳೆಯಾಗಿ, ಬುರ್ಖಾ ಧರಿಸಿಯೇ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟವನ್ನು ಜಾಗೃತಗೊಳಿಸಿದ ಅಬಾದಿ ಬಾನು ಎಂಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿಯ ಕಥೆ ಇದು. ನಮ್ಮ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಗಲು ಕೋಮು ಸಾಮರಸ್ಯ ಅತ್ಯಗತ್ಯ ಎಂದಿದ್ದ ಇವರು ಹಿಂದೂ ಮತ್ತು ಮುಸ್ಲಿಮರು ಭಾರತದ ಎರಡು ಕಣ್ಣುಗಳು ಎಂದು ಹೇಳುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂ ಒಗ್ಗಟ್ಟಿಗೆ ಮುನ್ನುಡಿ ಬರೆದರು. ಸಂಕಷ್ಟಗಳ ಸರಮಾಲೆಯ ನಡುವೆಯೂ ಸ್ವತಂತ್ರ ಭಾರತದ ಕನಸು ಕಂಡಿದ್ದ ಅಬಾದಿ ಬಾನು ಬೇಗಂ ಅವರದ್ದು ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಅಚ್ಚಳಿಯದ ಹೆಸರು. 

ಉತ್ತರ ಪ್ರದೇಶದ ಅಮ್ರೊಹಾದಲ್ಲಿ 1850ರಲ್ಲಿ ಅಬಾದಿ ಬಾನು ಜನಿಸಿದರು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರ ಕುಟುಂಬ ಸಕ್ರಿಯವಾಗಿ ಭಾಗವಹಿಸಿತ್ತು. ಇದೇ ಕಾರಣಕ್ಕೆ ಅಬಾದಿ ಬಾನು ಅವರ ಕುಟುಂಬ 1857ರ ನಂತರ ಬ್ರಿಟಿಷರಿಂದ ಚಿತ್ರಹಿಂಸೆಗೊಳಗಾಗಿತ್ತು. ಈ ಎಲ್ಲಾ ಸಂಕಷ್ಟಗಳ ಹೊರತಾಗಿಯೂ ಅಬಾದಿ ಬಾನು ದೇಶ ಸ್ವತಂತ್ರಗೊಳ್ಳಬೇಕು ಎನ್ನುವ ತನ್ನ ನಿರ್ಧಾರದಲ್ಲಿ ಅಚಲವಾಗಿದ್ದರು. ರಾಂಪುರದ ಸರಕಾರಿ ಅಧಿಕಾರಿ ಅಬ್ದುಲ್‌ ಅಲಿ ಖಾನ್‌ ಎಂಬವರನ್ನು ವಿವಾಹವಾದ ಅಬಾದಿ ಬಾನು ಅವರಿಗೆ ಆರು ಮಕ್ಕಳು. ಈ ಮಕ್ಕಳಲ್ಲಿ ಇಬ್ಬರಾದ ಮೌಲಾನ ಶೌಕತ್‌ ಅಲಿ ಮತ್ತು ಮೌಲಾನ ಮುಹಮ್ಮದ್‌ ಅಲಿ ಜೌಹರ್‌ ಯಾರು ಗೊತ್ತಾ?.. ದೇಶದಲ್ಲಿ ಬ್ರಿಟಿಷರ ವಿರುದ್ಧದ ಪ್ರಬಲ ಹೋರಾಟವಾಗಿ ಇತಿಹಾಸದಲ್ಲಿ ದಾಖಲಾಗಿರುವ ಖಿಲಾಫತ್‌ ಚಳವಳಿಯನ್ನು ಆರಂಭಿಸಿದವರು. 

ಮದುವೆಯಾದ ಕೆಲ ವರ್ಷಗಳಲ್ಲೇ ಅಬಾದಿ ಬಾನು ಅವರ ಪತಿ ಮೃತಪಟ್ಟಿದ್ದರು. ಪತಿಯನ್ನು ಕಳೆದುಕೊಂಡು, ಬಡತನದಲ್ಲಿ ಬದುಕುತ್ತಿದ್ದರೂ ಎದೆಗುಂದದ ಅಬಾದಿ ಬಾನು ತಾನು ಅನಕ್ಷರಸ್ಥಳಾಗಿದ್ದರೂ ಮಕ್ಕಳು ಅತ್ಯುತ್ತಮ ಶಿಕ್ಷಣ ಪಡೆಯಬೇಕು ಎನ್ನುವ ಕನಸು ಕಂಡಿದ್ದರು. ಇದಕ್ಕಾಗಿ ಸರಳವಾಗಿ ಬದುಕಿದರು. ಪ್ರವಾದಿ ಮುಹಮ್ಮದರ ಬೋಧನೆಗಳ ಬೆಳಕಿನಲ್ಲಿ ಮಕ್ಕಳನ್ನು ಬೆಳೆಸಿದರು. ಆ ಸಂದರ್ಭದಲ್ಲಾಗಲೇ ಬ್ರಿಟಿಷರ ವಿರುದ್ಧದ ಹೋರಾಟ ತೀವ್ರವಾಗುತ್ತಿತ್ತು. ಅಬಾದಿ ಬಾನು ಬುರ್ಖಾ ಧರಿಸಿಯೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ರಾಜಕೀಯ ಸಮಾವೇಶವೊಂದರಲ್ಲಿ ಬುರ್ಖಾ ಧರಿಸಿ ಮಾತನಾಡಿದ ಮೊತ್ತ ಮೊದಲ ಮುಸ್ಲಿಂ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. 

ಮತ್ತೊಂದೆಡೆ ಮಕ್ಕಳಾದ ಮುಹಮ್ಮದ್‌ ಅಲಿ ಮತ್ತು ಶೌಕತ್‌ ಅಲಿ ಕೂಡ ಖಿಲಾಫತ್‌ ಮತ್ತು ಅಸಹಕಾರ ಚಳುವಳಿಗಳ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. 1917ರಲ್ಲಿ ಈ ಇಬ್ಬರು ಸಹೋದರರನ್ನು ಬ್ರಿಟಿಷ್‌ ಸರಕಾರ ಬಂಧಿಸಿತು. ಈ ದುಷ್ಟ ನೀತಿಯ ವಿರುದ್ಧದ ಹೋರಾಟಕ್ಕೆ ಸ್ವತಃ ಅಬಾದಿ ಬಾನು ಕಣಕ್ಕಿಳಿದರು. ಈ ಹೋರಾಟದ ಸಂದರ್ಭ ಅಬಾದಿ ಬಾನು ಅವರನ್ನು ಮಹಾತ್ಮಾ ಗಾಂಧೀಜಿಯವರು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಮಹಿಳೆಯರ ಬೆಂಬಲ ಕೋರಿದರು. 

ಅದೇ ವರ್ಷ ಕಲ್ಕತ್ತಾದಲ್ಲಿ ನಡೆದ ಇಂಡಿಯನ್‌ ನ್ಯಾಶನಲ್‌ ಕಾಂಗ್ರೆಸ್‌ ಮತ್ತು ಆಲ್‌ ಇಂಡಿಯಾ ಮುಸ್ಲಿಮ್‌ ಲೀಗ್‌ ಸಮಾವೇಶಗಳಲ್ಲಿ ಭಾಗಿಯಾದ ಅಬಾದಿ ಬಾನು ದೇಶದಲ್ಲಿರುವ ಎಲ್ಲಾ ಧರ್ಮಗಳ ಜನರು ಒಂದಾದರೆ ಮಾತ್ರ ಸ್ವಾತಂತ್ರ್ಯ  ಎನ್ನುವುದನ್ನು ಒತ್ತಿ ಹೇಳಿದರು. 1919ರ ಖಿಲಾಫತ್‌ ಮತ್ತು ಅಸಹಕಾರ ಚಳವಳಿಗಳಲ್ಲಿ ನಿರಂತರವಾಗಿ ಭಾಗಿಯಾದ ಇವರು ನನ್ನ ದೇಶದಲ್ಲಿರುವ ನಾಯಿಗಳು ಅಥವಾ ಬೆಕ್ಕುಗಳು ಕೂಡ ಬ್ರಿಟಿಷರ ಗುಲಾಮಗಿರಿಯಲ್ಲಿ ಬದುಕುವುದನ್ನು ನಾನು ಇಚ್ಛಿಸುವುದಿಲ್ಲ ಎಂದು ಘಂಟಾಘೋಷವಾಗಿ ಘೋಷಿಸಿದರು. 

ಅಸಹಕಾರ ಚಳುವಳಿಯ ಸಂದರ್ಭ ಮಹಾತ್ಮಾ ಗಾಂಧೀಜಿ, ಮುಹಮ್ಮದ್‌ ಅಲಿ, ಶೌಕತ್‌ ಅಲಿಯವರನ್ನು ಬ್ರಿಟಿಷರು ಬಂಧಿಸಿದಾಗ ಅಬಾದಿ ಬಾನು ಇಡೀ ದೇಶಾದ್ಯಂತ ತಿರುಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದರು. ಸಮಾವೇಶಗಳನ್ನು ನಡೆಸಿದರು. ಜನಜಾಗೃತಿ ನಡೆಸಿದರು. ಸರೋಜಿನಿ ನಾಯ್ಡು, ಸರಳಾ ದೇವಿ ಚೌಧುರಾನಿ, ಬಸಂತಿ ದೇವಿ ಮತ್ತು ಬೇಗಂ ಹಝ್ರತ್‌ ಮೊಹಾನಿಯವರ ಮಾರ್ಗದರ್ಶನದಲ್ಲಿ ಅಬಾದಿ ಬಾನು ಹಣ ಸಂಗ್ರಹಿಸಿ, ಮಹಿಳೆಯರ ಸಭೆಗಳನ್ನು ಆಯೋಜಿಸಿ, ವಿದೇಶಿ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದರು ಮತ್ತು ದೇಸಿ ಉತ್ಪನ್ನಗಳ ಖರೀದಿಗೆ ಒತ್ತು ನೀಡಿದರು. ಬಾಲ ಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸ್ಥಾಪಿಸಿದ ತಿಲಕ್‌ ಸ್ವರಾಜ್‌ ಫಂಡ್‌ ಗೆ ಧನ ಸಹಾಯ ನೀಡಲು ಭಾರತೀಯರಿಗೆ ಕರೆ ನೀಡಿ, ಹುರಿದುಂಬಿಸಿದರು. 

ಆದರೆ ಈ ಎಲ್ಲಾ ಹೋರಾಟಗಳ ನಡುವೆಯೇ 1924ರಲ್ಲಿ ದೇಶ ಸ್ವತಂತ್ರಗೊಳ್ಳುವ ಮೊದಲೇ ಅಬಾದಿ ಬಾನು ಕೊನೆಯುಸಿರೆಳೆದರು. ಅವರ ಸ್ಮರಣಾರ್ಥ 2012ರ ಸೆಪ್ಟಂಬರ್‌ 28ರಂದು ಹೊಸದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ ಗೆ ಅಬಾದಿ ಬಾನು ಅವರ ಹೆಸರನ್ನಿಡಲಾಯಿತು. ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅನಕ್ಷರಸ್ಥ ಮಹಿಳೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ದೇಶಾದ್ಯಂತ ತನ್ನ ಮಾತಿನ ಮೂಲಕ ಸ್ವತಂತ್ರದ ಪರಿಕಲ್ಪನೆಯನ್ನು ಜಾಗೃತಗೊಳಿಸಿ, ತನ್ನ ಮಕ್ಕಳನ್ನೂ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿ, ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ದೇಶ ಸ್ವತಂತ್ರಗೊಳ್ಳುವ ಮೊದಲೇ ಕೊನೆಯುಸಿರೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News