ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ ತಿರಂಗಾ ಕಲಾಕೃತಿ

Update: 2022-08-14 13:32 GMT

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣದಲ್ಲಿ ಧವಸಧಾನ್ಯ ಹಾಗೂ ಪುಷ್ಪಗಳಿಂದ ತಿರಂಗಾ ಕಲಾಕೃತಿಯು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಈ ಕಲಾಕೃತಿಗೆ ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ರವಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಎಲ್ಲಾ ಕಡೆಯೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಕಾಣಿಸುತ್ತಿವೆ. ಇದಕ್ಕೆ ಪೂರಕವಾಗಿ ಕುದ್ರೋಳಿ ಕ್ಷೇತ್ರದಲ್ಲಿ ಕೂಡ ವಿಶೇಷವಾದ ತಿರಂಗಾ ರಚಿಸಲಾಗಿದೆ.  ಆಕರ್ಷಕವಾದ ಈ ತಿರಂಗಾ ಕಲಾಕೃತಿಯು ಸಾರ್ವಜನಿಕರ ಗಮನ ಸೆಳೆಯುತ್ತಿದೆ ಎಂದರು.

ಗುರು ಬೆಳದಿಂಗಳು ಫೌಂಡೇಷನ್‌ನ ಅಧ್ಯಕ್ಷ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ‘ಧವಸಧಾನ್ಯ ಹಾಗೂ ತರಕಾರಿ ಬಳಸಿ ರಾಷ್ಟ್ರಧ್ವಜದ ಚಿತ್ರಾಕೃತಿ ಮಾಡಲಾಗಿದೆ. ಕೇಸರಿ ಬಣ್ಣಕ್ಕಾಗಿ ೩೦೦ ಕಿಲೋ ಕೆಂಪು ತೊಗರಿ, ಬಿಳಿ ಬಣ್ಣಕ್ಕಾಗಿ ೩೦೦ ಕಿಲೋ ಸಾಗು, ಹಸಿರು ಬಣ್ಣಕ್ಕಾಗಿ ೩೦೦ ಕಿಲೋ ಹೆಸರುಕಾಳು ಬಳಸಲಾಗಿದೆ. ಬೆಂಡೆಕಾಯಿ, ಮೂಲಂಗಿ, ಕ್ಯಾರೆಟ್ ಮುಂತಾದ ೧೦೦ ಕಿಲೋ ತರಕಾರಿ ಜೋಡಿಸಲಾಗಿದೆ ಎಂದರು.

ಕಲಾವಿದ ಹಾಗೂ ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ ೩೦ ಸದಸ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗವು ೧೮ ಗಂಟೆಯ ಅವಧಿಯೊಳಗೆ ಈ ಕಲಾಕೃತಿಯನ್ನು ರಚಿಸಿದ್ದಾರೆ. ೩೮ ಅಡಿಯ ವೃತ್ತದಲ್ಲಿ ೫೪ ಕಳಶವಿಟ್ಟು, ೧೦೮ ಬಾಲೆಎಲೆ, ೫೦೦ ವೀಳ್ಯದೆಲೆ, ೧೦೦ ಕೆಜಿ ಬೆಳ್ತಿಗೆ ಅಕ್ಕಿ ಬಳಸಲಾಗಿದೆ. ಸೀಮಿತ ದಿನದವರೆಗೆ ಈ ಪ್ರದರ್ಶನದ ಬಳಿಕ ಧವಸಧಾನ್ಯವನ್ನು ಬಡವರಿಗೆ ಹಂಚಲಾಗುವುದು ಎಂದು ಪದ್ಮರಾಜ್ ಆರ್.  ತಿಳಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷ ಉರ್ಮೀಳಾ ರಮೇಶ್, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಮೊಂತೇರೋ, ಕಾರ್ಪೊರೇಟರ್ ಅನಿಲ್, ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಕ್ಷೇತ್ರದ ಆಡಳಿತ ಸಮಿತಿ ಸದಸ್ಯೆ ಗೌರವಿ ಪಿ.ಕೆ, ಗುರುಬೆಳದಿಂಗಳು ಸದಸ್ಯರಾದ ಗಜೇಂದ್ರ ಪೂಜಾರಿ, ಅನುಸೂಯ ಸಚಿನ್, ಪ್ರವೀಣ್ ಅಂಚನ್, ಪ್ರಮೋದ್ ಕೋಟ್ಯಾನ್, ಉಪಾಧ್ಯಕ್ಷ ಡಾ. ಬಿ.ಜಿ.ಸುವರ್ಣ, ಚಿತ್ತರಂಜನ್ ಕಂಕನಾಡಿ ಗರೋಡಿ, ಶೈಲೇಂದ್ರ ವೈ. ಸುವರ್ಣ, ರವಿ ಪೂಜಾರಿ ಚಿಲಿಂಬಿ, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್, ಜಯರಾಮ ಕಾರಂದೂರು, ಕೃತಿನ್ ಧೀರಜ್ ಅಮೀನ್, ರಾಜೇಂದ್ರ ಚಿಲಿಂಬಿ, ನವೀನ್ ಸುವರ್ಣ, ಜಯಾನಂದ ಪೂಜಾರಿ, ಮ್ಯಾನೇಜರ್ ವಿನೀತ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News