ರಸ್ತೆ ದುರಂತದಲ್ಲಿ ಮರಾಠ ನಾಯಕ ವಿನಾಯಕ ಮೇಟೆ ಸಾವು‌

Update: 2022-08-14 18:32 GMT

ಮುಂಬೈ:  ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಮರಾಠ ಸಮುದಾಯದ ನಾಯಕ ವಿನಾಯಕ ಮೇಟೆ ಅವರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ವಿನಾಯಕ ಮೇಟೆ ಅವರಿದ್ದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದಾಗಿ ತಿಳಿದುಬಂದಿದೆ.

ವಿನಾಯಕ್ ಮೇಟೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮಾಡಪ್ ಸುರಂಗ ಮಾರ್ಗದ ಸಮೀಪ   ವಾಹನವೊಂದು ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು  ನವಿ ಮುಂಬೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾದರೂ , ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ವಿನಾಯಕ್ ಮೇಟೆ ಅವರು ಬಿಜೆಪಿಯ ಮಿತ್ರಪಕ್ಷವಾದ ಶಿವಸಂಗ್ರಾಮ್‌ನ ಮುಖ್ಯಸ್ಥರೂ ಆಗಿದ್ದಾರೆ.

ಮೇಟೆ ಅವರ ಭದ್ರತೆಗಾಗಿ ನಿಯೋಜಿತರಾಗಿದ್ದ  ಓರ್ವ ಪೊಲೀಸ್‌ಗೂ  ಅಪಘಾತದಲ್ಲಿ ಗಂಭೀರವಾದ ಗಾಯಗಳಾಗಿವೆ. ಗಾಯಾಳು ಪೊಲೀಸ್ ರಾಮ್ ದೊಬ್ಲೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ವಿನಾಯಕ್ ಮೇಟೆ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ, ಮಹಾರಾಷ್ಟ್ರ  ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಬಿಜೆಪಿಯ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೂಡಾ ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ಧಾವಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಪರಿಷತ್‌ನ ಮಾಜಿ ಸದಸ್ಯರೂ ಆದ ಮೇಟೆ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News