ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನೆಹರು, ಸಾವರ್ಕರ್, ಲೋಹಿಯಾರನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ

Update: 2022-08-15 05:39 GMT
Photo:ANI

ಹೊಸದಿಲ್ಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ವೀರ್ ಸಾವರ್ಕರ್, ರಾಮ್ ಮನೋಹರ್ ಲೋಹಿಯಾ (Jawaharlal Nehru, Veer Savarkar, Ram Manohar Lohia) ಹಾಗೂ  ಇತರರಿಗೆ ಸ್ವಾತಂತ್ರ್ಯ ಹೋರಾಟ ಹಾಗೂ  ರಾಷ್ಟ್ರ ನಿರ್ಮಾಣದಲ್ಲಿ ನೀಡಿದ  ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ( Prime Minister Narendra Modi) ಸೋಮವಾರ ನಮನ ಸಲ್ಲಿಸಿದರು. 

75ನೇ ಸ್ವಾತಂತ್ರ್ಯೋತ್ಸವದ (75th Independence Day) ಅಂಗವಾಗಿ ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಜೀವನವನ್ನು ದೇಶದ ಕರ್ತವ್ಯಕ್ಕೆ ಮೀಸಲಿಟ್ಟ ಬಾಪು (ಮಹಾತ್ಮಾ ಗಾಂಧಿ), ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ  ವೀರ್ ಸಾವರ್ಕರ್  ಅವರಿಗೆ ದೇಶದ ಜನರು ಆಭಾರಿಯಾಗಿದ್ದಾರೆ ಎಂದರು.

ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಝಾದ್, ಅಶ್ಫಾಖುಲ್ಲಾ ಖಾನ್ ಹಾಗೂ  ರಾಮ್ ಪ್ರಸಾದ್ ಬಿಸ್ಮಿಲ್ ಅವರಿಗೂ ರಾಷ್ಟ್ರವು ಕೃತಜ್ಞವಾಗಿದೆ. ಇಂತಹ ಅಸಂಖ್ಯಾತ ಕ್ರಾಂತಿಕಾರಿಗಳು ಬ್ರಿಟಿಷರ ಆಳ್ವಿಕೆಯ ಬುನಾದಿಯನ್ನು ಅಲ್ಲಾಡಿಸಿದರು ಎಂದು ಮೋದಿ ಹೇಳಿದರು.

ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಝರತ್ ಮಹಲ್ ಅವರಂತಹ ಭಾರತದ ಮಹಿಳೆಯರ ಶಕ್ತಿಯ ಬಗ್ಗೆ ನಾಗರಿಕರು ಹೆಮ್ಮೆಪಡುತ್ತಾರೆ.  ಭಾರತೀಯ ಮಹಿಳೆಯರು ತ್ಯಾಗ ಹಾಗೂ  ಹೋರಾಟವನ್ನು ಸಂಕೇತಿಸುತ್ತಾರೆ ಎಂದು ಮೋದಿ ಹೇಳಿದರು.

 ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ, ಸ್ವಾತಂತ್ರ್ಯದ ನಂತರ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಿದ ಜವಾಹರಲಾಲ್ ನೆಹರು, ರಾಮ್ ಮನೋಹರ್ ಲೋಹಿಯಾ ಹಾಗೂ  ಸರ್ದಾರ್ ವಲ್ಲಭಾಯಿ ಪಟೇಲ್ ಸೇರಿದಂತೆ ಇತರರನ್ನು  ದೇಶ ಗೌರವಿಸುತ್ತದೆ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News