ಕ್ಲೀನ್ ಚಿಟ್ ಬೆನ್ನಲ್ಲೇ ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ ಸಮೀರ್ ವಾಂಖೆಡೆ

Update: 2022-08-15 10:21 GMT

ಮುಂಬೈ: IRS ಅಧಿಕಾರಿ ಹಾಗೂ ಮುಂಬೈ ನಾರ್ಕಾಟಿಕ್ಸ್ ಕಂಟ್ರೋಲ್ ಬ್ಯುರೋದ ಮಾಜಿ ವಲಯ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ಅವರು  ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ವಾಂಖೆಡೆ ಅವರು ಪರಿಶಿಷ್ಟ ಜಾತಿ ವಿಭಾಗದ ಮೀಸಲಾತಿಯಡಿ ಸರಕಾರಿ ಹುದ್ದೆ ಪಡೆಯಲು ನಕಲಿ ಜಾತಿ ಪ್ರಮಾಣ ಬಳಸಿದ್ದರೆಂದು ಆರೋಪಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ದೊರೆತ ಬೆನ್ನಲ್ಲೇ ಪ್ರಕರಣ ದಾಖಲಿಸಲಾಗಿದೆ.

 ಎನ್‍ಸಿಪಿ ಪಕ್ಷದವರಾಗಿರುವ ಮಲಿಕ್ ಅವರು ಅಕ್ಟೋಬರ್‍ನಲ್ಲಿ ವಾಂಖೆಡೆ ವಿರುದ್ಧ ಆರೋಪ ಹೊರಿಸಿದ್ದರು. ವಾಂಖೆಡೆ ಅವರದ್ದೆಂದು ಹೇಳಲಾದ ಜನನ ಪ್ರಮಾಣ ಪತ್ರದ ಪ್ರತಿಯೊಂದನ್ನೂ ಮಲಿಕ್ ಟ್ವೀಟ್ ಮಾಡಿದ್ದರಲ್ಲದೆ ಅದರಲ್ಲಿ ಅವರ ಧರ್ಮ ಮುಸ್ಲಿಂ ಎಂದು ನಮೂದಿಸಲಾಗಿತ್ತು.

ಇದರ ಬೆನ್ನಲ್ಲೇ ಭೀಮ್ ಆರ್ಮಿ ಮತ್ತು ಸ್ವಾಭಿಮಾನಿ ರಿಪಬ್ಲಿಕನ್ ಪಕ್ಷ್ ವಾಂಖೆಡೆ ವಿರುದ್ಧ ಮುಂಬೈ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ದೂರಿದ್ದರಲ್ಲದೆ ಅಧಿಕಾರಿಯ ದಾಖಲೆಗಳನ್ನು ಪರಿಶೀಲಿಸುವಂತೆಯೂ ಕೋರಿದ್ದರು.

ವಾಂಖೆಡೆಗೆ ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಪ್ರಕರಣದಲ್ಲಿ ಸಮಿತಿ ಶುಕ್ರವಾರ ಕ್ಲೀನ್ ಚಿಟ್ ನೀಡಿದೆಯಲ್ಲದೆ ಪರಿಶಿಷ್ಟ ಜಾತಿ ವಿಭಾಗದಡಿ ಬರುವ ಮಹರ್ ಜಾತಿಗೆ ಸೇರಿದವರು ಎಂದು ಹೇಳಿತ್ತು. ಅವರು ಮುಸ್ಲಿಮರಾಗಿ ಹುಟ್ಟಿಲ್ಲ ಹಾಗೂ ಹಿಂದು ಧರ್ಮ ತ್ಯಜಿಸಿ ಇಸ್ಲಾಂ ಸೇರಿಲ್ಲ ಎಂದೂ ಸಮಿತಿ ಹೇಳಿದೆ.

ಇದರ ಬೆನ್ನಲ್ಲೇ ವಾಂಖೇಡೆ ಅವರು ಮಲಿಕ್ ವಿರುದ್ಧ ದೂರು ನಿಡಿದ್ದು ಎಫ್‍ಐಆರ್ ಅನ್ನು ಸೆಕ್ಷನ್ 500 (ಮಾನನಷ್ಟ) ಹಾಗೂ 501 (ಮಾನನಷ್ಟ ಉಂಟು ಮಾಡುವ ವಿಚಾರವನ್ನು ಪ್ರಕಟಿಸುವುದು) ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ಗೋರೆಗಾಂವ್ ವಿಭಾಗದ ಎಸಿಪಿಯೊಬ್ಬರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

ಮಲಿಕ್ ಅವರು ಪ್ರಸ್ತುತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News